ಸಹಬಾಳ್ವೆಯನ್ನು ನಿರಾಕರಿಸುವುದೆಂದರೆ ನಮ್ಮ ಅಸ್ತಿತ್ವವನ್ನೇ ನಿರಾಕರಿಸಿದಂತೆ

Vasudhaiva-Kutumbakam

ಪ್ರಜ್ಞಾವಂತರಿಗೆಲ್ಲಾ ಸಹಬಾಳ್ವೆಯೆಂಬುದು ದೈನಿಕಧರ್ಮವೂ, ಅಪ್ಪಟ ಮಾನವೀಯ ಧರ್ಮವೂ ಆಗಿರುವುದು ಸುಳ್ಳಲ್ಲ. ಈ ಕಾರಣ ಸಹಬಾಳ್ವೆಯನ್ನು ನಿರಾಕರಿಸುವುದೆಂದರೆ ತಂತಮ್ಮ ಅಸ್ತಿತ್ವವನ್ನೇ ನಿರಾಕರಿಸಿದಂತೆ; ತಂತಮ್ಮ ಜೀವಂತಿಕೆಗೆ ಎರವಾದಂತೆ. ಸ್ವಯಂನಾಶ ಸಾಮಾಜಿಕ ಕೇಡುಗಳೆರಡೂ ಸಹಬಾಳ್ವೆಯ ನಿರಾಕರಣೆಯಲ್ಲಿ ಘಟಿಸುತ್ತದೆ.

ಸಹಬಾಳ್ವೆ ಎನ್ನುವುದು ದೈನಿಕಧರ್ಮ; ಅಪ್ಪಟ ಮಾನವೀಯ ಧರ್ಮ. ಅಷ್ಟೇ ಅಲ್ಲದೆ, ನೈಸರ್ಗಿಕ ಧರ್ಮವೂ ಕೂಡ. ಸಹಬಾಳ್ವೆಯನ್ನು ಮತ್ತೇ ‘ಧರ್ಮ’ದ ಪರಿಭಾಷೆಯಲ್ಲಿಯೇ ಹೇಳಬೇಕಿರುವುದು ಮುಜಗರವೂ, ವ್ಯಂಗ್ಯವೂ ಹೌದು. ಆದರೆ, ಹಾಗೇ ಹೇಳಬೇಕಾದ ಅನಿವಾರ್ಯತೆ ಇದೆಯೆನಿಸುತ್ತದೆ. ಯಾಕೆಂದರೆ ಭಾರತೀಯರಿಗೆ ದೇವರು ಧರ್ಮವೆಂಬುದು ಏನೂ ಅರ್ಥವಾದಂತೆ ಆವೇಶವಾಗುತ್ತದೆ, ಭಾಸವಾಗುತ್ತದೆ; ಹೀಗೆ ಆವೇಶವೂ ಭಾಸವೂ ಆಗುವಂತೆ ತಲೆತಲಾಂತರದಿಂದ ಇಲ್ಲಿನವರ ಮನಸ್ಸನ್ನು ಪಳಗಿಸಲಾಗಿದೆ ಅಥವಾ ರೂಢಿಸಲಾಗಿದೆ.

ಇಂತಹ ಪಳಗಿದ ಇಲ್ಲವೇ ರೂಢಿಗೆ ಬಿದ್ದ ಮನಸ್ಸುಗಳನ್ನು ಅಧಿಕಾರದ ಏಣಿಯಾಗಿಸಿಕೊಳ್ಳುವುದು ಸುಲಭವಾದ್ದರಿಂದ, ಧರ್ಮವೆಂಬುದು ಅಧಿಕಾರಕ್ಕೆ ಹಸಿದವರಿಗೆ ಸದಾ ಹಸಿರಾಗಿರುವ ಶಬ್ದವಾಗಿದೆ. ಇದರಿಂದಲೇ ಧರ್ಮ ಅತ್ಯಂತ ಮಲೀನವಾದ ಪದವಾಗಿದೆ. ಯಾವುದನ್ನು ಧರ್ಮವೆಂದು ಹೇಳುತ್ತಾ, ಅದನ್ನು ಅಧಿಕಾರದ ಹತಾರವಾಗಿಸಿ ಝಳಪಿಸುತ್ತಿರುವರೋ, ನಿರ್ಲಜ್ಜವಾಗಿ ಮಾನವೀಯತೆಯನ್ನು ಕೊಲ್ಲುತ್ತಿರುವರೋ, ಅಂತಹವರ ಮುಖಕ್ಕೆ ಮುಖಕೊಟ್ಟು, ‘ನೀವು ಹೇಳುತ್ತಿರುವ ಧರ್ಮ ಇದಲ್ಲ, ನಿಮ್ಮ ಧರ್ಮವು ಸಹಬಾಳ್ವೆಯನ್ನು ಕೊಲ್ಲುತ್ತಿರುವ ಆಯುಧವಾಗಿದೆ’ ಎಂದು ಹೇಳಲೇಬೇಕಾದ ಜರೂರು ಇವತ್ತು ಇದೆ. ಈ ಕಾರಣ ಧರ್ಮದ ನಿರ್ವಚನವನ್ನು ಸಾಂಸ್ಥಿಕ ನೆಲೆಯಿಂದ ನಿರಾಕರಿಸಿ, ಜನರ ದಿನನಿತ್ಯದ ಬದುಕಿನ ನೆಲೆಯಿಂದ ಮಾಡಬೇಕಾದ್ದರಿಂದ, ಧರ್ಮದ ಪರಿಭಾಷೆಯಲ್ಲಿಯೇ ಸಹಬಾಳ್ವೆಯನ್ನು ಕುರಿತು ಮಾತನಾಡಬೇಕಿದೆ ಎನಿಸುತ್ತದೆ.

ಸಹಬಾಳ್ವೆ ಯಾಕೆ ದೈನಿಕ ಧರ್ಮ, ಹೇಗೆ ಅಪ್ಪಟ ಮಾನವೀಯ ಧರ್ಮವೆಂಬುದು ಮುಖ್ಯವಾದ ಪ್ರಶ್ನೆ. ಅದನ್ನು ನಿರ್ವಚಿಸಿ, ಅರ್ಥೈಸಿಕೊಳ್ಳಬೇಕಿರುವುದು ಆವಶ್ಯಕವಾಗಿದೆ. ಸಹನೆಯೆನ್ನುವುದು ದಾಂಪತ್ಯದ ಜೀವಾಳ, ಕೌಟುಂಬಿಕತೆಯ ಸೂತ್ರವೆಂದು ಹೇಳುವುದನ್ನು ಸವಕಲಾಗಿ ಕೇಳಿದ್ದೇವೆ, ಕಂಡಿದ್ದೇವೆ. ಆದರೂ ಇದು ಸವಕಲಾಗದೆ ನಿತ್ಯದ ನಿಜಸಂಗತಿಯಾಗಿರುವುದು ಅನುಭವ ವೇದ್ಯವಲ್ಲವೇ? ಹಾಗೆ ಸಹಿಷ್ಣುತೆಯಿಲ್ಲದೆ ಹೋದರೆ, ದಾಂಪತ್ಯವೂ ಮುರಿಯುತ್ತದೆ, ಕುಟುಂಬವೂ ಒಡೆಯುತ್ತದೆ. ಇಲ್ಲಿ ಮುರಿಯುವುದು ಒಡೆಯುವುದು ಮನಸ್ಸುಗಳು ಎಂಬುದು ಬಹಳ ಮುಖ್ಯ. ಇದರ ಪರಿಣಾಮ ಮನೋ ಅಸ್ವಸ್ಥತೆ; ನಿರಾಳತೆಯ ಛಿದ್ರತೆ; ಅಪರಾಧದ ಹುಟ್ಟು; ನೋವು ನರಳಿಕೆಯಿಂದ ಜೀವನಪ್ರೀತಿಯ ನಾಶ. ಇಂತಹದ್ದು ಸಮಾಜದಲ್ಲಿಯೂ ಪ್ರತಿಫಲಿಸುವುದು ಸಹಬಾಳ್ವೆಯ ಬದುಕು ಭಗ್ನವಾದಾಗ. ಒಂದರ್ಥದಲ್ಲಿ ಸಹಬಾಳ್ವೆ ಮತ್ತು ಸಮಾಜ ಪರ್ಯಾಯ ಶಬ್ದಗಳೆನ್ನುವುದು ಉಸಿರಿನಷ್ಟೇ ನಿಜವಾದುದ್ದೆಂದು ಕೊಂಚ ವಿವೇಚಿಸಿದರೆ ತಿಳಿಯುತ್ತದೆ. ಬಿಡಿಯಾದಾಗ ವ್ಯಕ್ತಿ, ಇಡಿಯಾದಾಗ ಸಮಾಜವೆಂಬುದು ಗೊತ್ತಿರುವ ಪ್ರಾಥಮಿಕ ತಿಳುವಳಿಕೆ. ವ್ಯಕ್ತಿಯ ಬದುಕಿನಲ್ಲಾಗಲೀ, ಸಮಾಜದಲ್ಲಾಗಲೀ ಏನೇ ರಚನಾತ್ಮಕವಾದುದ್ದು ಕಂಡರೂ, ಅದೆಲ್ಲಾ ಸಹಬಾಳ್ವೆಯ ಫಲಶೃತಿಯೇ ಆಗಿದೆಯೆಂಬುದು ಅತ್ಯಂತ ಸ್ಪಷ್ಟವಾಗಿದೆ. ಇದರಲ್ಲಿ ಎಳ್ಳಷ್ಟೂ ಉತ್ಪ್ರೇಕ್ಷೆ ಏನಿಲ್ಲ.

‘ಸಹ’ ಎನ್ನುವುದಕ್ಕೆ ಕೂಡು, ಜೊತೆ, ಸೇರು, ಇತ್ಯಾದಿ ಅರ್ಥಗಳಿವೆ. ವಾಸ್ತವದಲ್ಲಿ ಯಾರೊಬ್ಬರೂ ಯಾವ ಸಮುದಾಯವೂ ಒಬ್ಬಂಟಿಯಾಗಿ ಬಾಳಲು ಸಾಧ್ಯವಿಲ್ಲ; ಸಖ-ಸಖಿಯಾಗಿ, ಸ್ನೇಹಿತರಾಗಿ, ಸಂಬಂಧವಾಗಿ, ಸಹೋದ್ಯೋಗಿ, ಸಹವಾಸಿಯಾಗಿ, ಸಮುದಾಯವಾಗಿ, ಅನೇಕ ಸಮುದಾಯಗಳ ಮೊತ್ತದ ಸಮಾಜವಾಗಿ ಬದುಕಬೇಕಿದೆ. ಸಮಾಜದ ಸಂಕ್ಷೀಪ್ತ ರೂಪವೇ ‘ಸಹ’ವಾಗಿದೆ; ಈ ‘ಸಹ’ದ ವಿಸ್ತೃತ ರೂಪವೇ ಸಮಾಜವಾಗಿದೆ. ಭಾರತದಂತಹದ ಸಮಾಜವು ಏಕಶಿಲಾಕೃತಿಯಲ್ಲ. ಚಿಂತಕ ರಾಜೇಂದ್ರ ಚೆನ್ನಿಯವರ ನುಡಿಗಟ್ಟಿನಲ್ಲಿ ಹೇಳುವುದಾದರೆ, ಹಲವು ಸಮುದಾಯಗಳ ಕುಲಾವಿ. ವ್ಯಕ್ತಿಯಿಂದ ಹಿಡಿದು ದೇಶದ ತನಕ ಯಾರೂ ಯಾವುದೂ ದ್ವೀಪವಾಗಿ ಬಾಳಲು ಸಾಧ್ಯವಿಲ್ಲ; ಒಬ್ಬರು ಮತ್ತೊಬ್ಬರನ್ನು, ಒಂದು ಊರು ಇನ್ನೊಂದು ಊರನ್ನು, ಒಂದು ಸಮುದಾಯ ಮತ್ತೊಂದು ಸಮುದಾಯವನ್ನು, ದೇಶವೊಂದು ಇತರೆ ದೇಶಗಳನ್ನು ಅವಲಂಬಿಸಿಕೊಂಡೇ ಬಾಳಬೇಕಿದೆ. ಈ ರೀತಿಯ ಬಾಳು ಜಾಗತೀಕರಣದ ಜಾಲದ ಇವತ್ತು ಮತ್ತೂ ಅನಿರ್ವಾಯತೆಯನ್ನು ಹುಟ್ಟುಹಾಕಿದೆ.

ಸಹಬಾಳ್ವೆಯಿಲ್ಲದೆ ವ್ಯಕ್ತಿಯ ಬದುಕಾಗಲೀ ಅಥವಾ ಸಮಾಜದ ಬದುಕಾಗಲೀ ದಿನನಿತ್ಯದಲ್ಲಿ ಸಾಧ್ಯವಾಗಬಹುದೆ? ಸಾಧ್ಯವಾಗುವುದಾದರೆ ಯಾವ ಸ್ವರೂಪದ ಬದುಕು ಅದಾಗಿರುತ್ತದೆ? ಸಾಧ್ಯವಿಲ್ಲದಿದ್ದರೆ ಯಾಕಾಗಿ? ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳವಲ್ಲಿಯೇ ಸಹಬಾಳ್ವೆಯ ಮಹತ್ವ ಮನದಟ್ಟಾಗುತ್ತದೆ. ಸಮಾಜದ ಬಿಡಿರೂಪವಾಗಿರುವ ವ್ಯಕ್ತಿಯ ನೆಲೆಯಿಂದಲೇ ನೋಡುವುದಾದರೆ ಯಾರೊಬ್ಬರೂ ಬಾಳುವುದು ಬೆಳೆಯುವುದು ಸಾಮಾಹಿಕ ಶ್ರಮದ ಮೇಲೆಯೇ, ಸಹಬಾಳ್ವೆಯ ನೆಲಗಟ್ಟಿನ ಮೇಲೆಯೇ ಎಂಬುದು ದೃಢಗೊಳ್ಳುತ್ತದೆ.

Image
Sahabalve

ವ್ಯಕ್ತಿಯಾಗಿ ನನ್ನನ್ನೇ ನನ್ನ ಬದುಕನ್ನೇ ಒಂದು ಉದಾಹರಣೆಯಾಗಿ ಭಾವಿಸುವುದಾದರೆ, ನಾನು ದಿನನಿತ್ಯ ಬಳಸುವ ವಸ್ತುಗಳು ಯಾವುದೇ ಇರಲಿ: ಊಟ ಬಟ್ಟೆಬರೆ ಚಪ್ಪಲಿ ಪುಸ್ತಕ-ಪೆನ್ನು ಸ್ಕೂಟರ್ ಮೊಬೈಲ್ ಇತ್ಯಾದಿ. ಈ ಯಾವ ಪದಾರ್ಥವನ್ನೂ ನಾನೇ ಉತ್ಪಾದಿಸಿಕೊಳ್ಳಲಾರೆ. ಅಥವಾ ನನ್ನ ದಿನದ ಅಗತ್ಯದ ಸರಕು ಸೇವೆಗಳನ್ನು ನನ್ನ ಜಾತಿಯವರು ಮಾತ್ರವೇ ಉತ್ಪಾದಿಸುವರೇ? ನನ್ನ ಧರ್ಮದವರೇ ಉತ್ಪಾದಿಸಿರಲು ಸಾಧ್ಯವೇ? ನನ್ನ ದೇಶದವರಿಂದಲೇ ಸೃಷ್ಟಿಗೊಂಡಿರುವುದೇ? ಈ ಬಗೆಯ ಸರಳ ಪ್ರಶ್ನೆಗಳಿಗೆ ಉತ್ತರವೇನು, ‘ಇಲ್ಲ’ವೆಂಬುದು ತಾನೆ? ಹಾಗಾದರೆ ದಿನಬಳಕೆಗೆ ಬೇಕಾಗುವ ಸರಕುಸೇವೆಗಳನ್ನು ಉತ್ಪಾದಿಸುತ್ತಿರುವವರು ಯಾರೆಲ್ಲಾ? ಅವರೆಲ್ಲಾ ಜಾತಿ, ಧರ್ಮ, ದೇಶ, ಭಾಷೆ ಇತ್ಯಾದಿ ಭೇದಗಳಿಲ್ಲದೆ ಎಲ್ಲರ ದೈನಿಕ ಬದುಕಿನ ಹಸನಿಗೆ ಪರಸ್ಪರ ದುಡಿಯುತ್ತಿದ್ದಾರೆಯಲ್ಲವೆ? ಪದಾರ್ಥಗಳು ಬೇಕು; ಆ ಪದಾರ್ಥಗಳ ಉತ್ಪಾದಕರು ಭಿನ್ನ ಜಾತಿಯರು, ಭಿನ್ನ ಧರ್ಮದವರೆಂದು ಯಾಕೆ ಬೇಡವಾಗಿದೆ? ಪದಾರ್ಥಗಳನ್ನು ಪಡೆಯುವಾಗ ತೋರುವ ಪ್ರೀತಿ ಕಾಳಜಿಯನ್ನು, ಅವುಗಳ ಉತ್ಪಾದಿಸುವವರಿಗೆ ಯಾಕೆ ತೋರುತ್ತಿಲ್ಲ? ಜಾತಿ ಧರ್ಮ ಭಾಷೆ ದೇಶಗಳನ್ನು ಮೀರಿದ ಮನುಷ್ಯರ ಶ್ರಮವನ್ನೇ ಎಲ್ಲರ ಬದುಕು ಆಧರಿಸಿಕೊಂಡಿರುವುದು ವಾಸ್ತವವಲ್ಲವೇ? ಪದಾರ್ಥಗಳ ಹಿನ್ನೆಲೆಯಲ್ಲಿ ನಮ್ಮ ಬದುಕಿನಲ್ಲಿ ಸಹಬಾಳ್ವೆ ಇಲ್ಲವೇ? ಕೇವಲ ಮೂರ್ತ ಪದಾರ್ಥಗಳು ಮಾತ್ರವಲ್ಲ; ಅಮೂರ್ತವಾಗಿರುವ ಪ್ರತಿಯೊಬ್ಬರ ಬೌದ್ಧಿಕ-ಭಾವನಾತ್ಮಕವಾದ ಮಾನಸಿಕತೆಯೂ ಅದರ ರಚನೆಯೂ ಬೆಳವಣಿಗೆಯೂ ಹೀಗೆಯೇ ಹಲವರ ಫಲಶ್ರುತಿಯಲ್ಲವೇ? ಯಾವುದೇ ಒಳ್ಳೆಯ ಚಿಂತನೆ ಭಾವನೆಗಳು ಜಾತಿ ಧರ್ಮ ಸಂಸ್ಕೃತಿ ದೇಶ ಭಾಷೆಗಳ ಭೇದವಿಲ್ಲದೆ ಸ್ವೀಕೃತವಾಗುತ್ತವೆಯಲ್ಲವೆ?

ಸಂಕರತೆಯೇ ಜೀವಂತಿಕೆ

ಹಾಗೇ ನೋಡುವುದಾದರೆ, ಎಲ್ಲರ ದೇಹ ಮತ್ತು ಮನಸ್ಸುಗಳು ದಿಟದಲ್ಲಿ ಸಂಕರಶೀಲತೆಯ ರೂಪಕಗಳು. ಸಂಕರತೆಯೇ ಜೀವಂತಿಕೆ; ಇದು ಏರ್ಪಡುವುದೇ ಸಹಬಾಳ್ವೆಯ ಪರಿಣಾಮವಾಗಿ. ಈ ಕಾರಣ ದೈನಿಕ ಬದುಕು ಸಹಬಾಳ್ವೆಯಲ್ಲಿಯೇ ನಡೆಯುತ್ತಿದೆ; ಸಹಬಾಳ್ವೆಯಿಲ್ಲದೆ ಒಂದು ಹೆಜ್ಜೆಯನ್ನೂ ಕಿತ್ತು ಮುಂದಡಿ ಇಡಲಾರದೆಂಬುದು ನಿಜವಲ್ಲವೇ? ಸೌಕರ್ಯದ ಜಗತ್ತು ಕಂಡು, ಅದರ ಉತ್ಪಾದಕರು ಕಾಣದಿರುವುದು ಪ್ರಜ್ಞೆಯ ಮೋಸವಲ್ಲವೇ? ಪ್ರಜ್ಞಾವಂತರಿಗೆಲ್ಲಾ ಸಹಬಾಳ್ವೆಯೆಂಬುದು ದೈನಿಕಧರ್ಮವೂ, ಅಪ್ಪಟ್ಟ ಮಾನವೀಯ ಧರ್ಮವೂ ಆಗಿರುವುದು ಸುಳ್ಳಲ್ಲ. ಈ ಕಾರಣ ಸಹಬಾಳ್ವೆಯನ್ನು ನಿರಾಕರಿಸುವುದೆಂದರೆ ತಂತಮ್ಮ ಅಸ್ತಿತ್ವವನ್ನೇ ನಿರಾಕರಿಸಿದಂತೆ; ತಂತಮ್ಮ ಜೀವಂತಿಕೆಗೆ ಎರವಾದಂತೆ. ಸ್ವಯಂನಾಶ ಸಮಾಜಿಕ ಕೇಡುಗಳೆರಡೂ ಸಹಬಾಳ್ವೆಯ ನಿರಾಕರಣೆಯಲ್ಲಿ ಘಟಿಸುತ್ತದೆ.

ಸಹಬಾಳ್ವೆಯು ದೈನಿಕಧರ್ಮ, ಮಾನವೀಯ ಧರ್ಮವೆಂಬುದು ಆದರ್ಶದ ಹಳಹಳಿಕೆಯೇ? ಜಾತಿ ಧರ್ಮದ ಕಾರಣಕ್ಕೆ ಕದಡು ಸಮಾಜದ ವಾಸ್ತವದ ಭೀಕರತೆಯನ್ನು ಮುಖಾಮುಖಿ ಮಾಡಲಾರದ ಪಲಾಯನದ ಸಿದ್ಧಾಂತವೇ ಅಥವಾ ಮನೋಲಹರಿಯ ಸಮಾಧಾನದ ಆವಾಸ್ತವ ಉಪಾಯವೇ? ಎಂಬ ಪ್ರಶ್ನೆಗಳು ಹುಟ್ಟುತ್ತವೆ. ಯಾಕೆಂದರೆ, ವ್ಯಕ್ತಿಯ ಬದುಕಾಗಲೀ ಸಮಾಜದ ಬದುಕಾಗಲೀ ಸಹಬಾಳ್ವೆಯಲ್ಲಿಯೇ ಜರುಗುತ್ತಿದೆ ಎಂದ ಮೇಲೆ, ಸೌಹಾರ್ದತೆಯನ್ನು ಕದಡುವಾಗ ಅದರ ತಾಳಿಕೆಯು ಯಾಕೆ ಕಾಣದು? ಸಮಾಜವು ಕಲಕಿದ ಕೆರೆಯಂತಾಗಿ, ದ್ವೇಷಾಸೂಯೆಗಳು ಕೆಸರಿನಂತೆ ಎದ್ದು ಬರುವುದೇಕೆ? ಬಗ್ಗಡವಾಗುವುದೇಕೆ? ವಿಧ್ವಂಸಕ ಕೃತ್ಯಗಳು, ಸಾವುನೋವುಗಳು ಸಂಭವಿಸುವುದೇಕೆ? ಎನ್ನುವ ಪ್ರಶ್ನೆಗಳೂ ಮೂಡುತ್ತವೆ. ನಿಜ, ಸಹಬಾಳ್ವೆಯಿದ್ದರೆ ಜಾತಿಯೇ ಇರುತ್ತಿರಲಿಲ್ಲ; ಕೋಮುವಾದವೇ ಹುಟ್ಟುತ್ತಿರಲಿಲ್ಲ ಎಂಬುದು. ಈ ಮೂಲಕ ದಲಿತರ ಮೇಲಿನ ಹಲ್ಲೆ, ಅತ್ಯಾಚಾರ, ಕೊಲೆ, ಮುಸಲ್ಮಾನರ ಮೇಲಿನ ದ್ವಿತೀಯ ದರ್ಜೆಯವರೆಂಬ ಕೀಳ್ಗಣ್ಣಿನ ದೌರ್ಜನ್ಯ, ‘ದೇಶಭಕ್ತಿ’ಯ ಅಗ್ನಿಪರೀಕ್ಷೆ, ದೇಶಬಿಟ್ಟು ಹೋಗುವ ಆದೇಶದ ಆಕ್ರೋಶದ ಕೂಗಾಟ-ಇತ್ಯಾದಿ ನಡೆಯುತ್ತಿರಲಿಲ್ಲ ಎಂಬುದೂ ಕೂಡ ನಿಜವೇ.

ಆದರೆ, ಭಾರತೀಯ ಸಮಾಜದಲ್ಲಿ ಜಾತಿಯಾಗಲೀ ಕೋಮುಭಾವನೆಯಾಗಲೀ ಭಾವರೂಪಿಯಾಗಿದೆ; ಸಾಂಸ್ಕೃತಿಕ ರಾಜಕಾರಣದ ಹುನ್ನಾರವಾಗಿದೆ ಹೊರತು, ದೈನಿಕ ಬದುಕಿಗೆ ಬೇಕಾದ ಅಗತ್ಯ ಪದಾರ್ಥಗಳನ್ನು, ಬೌದ್ಧಿಕತೆಯನ್ನು ನಿರಾಕರಿಸಿಯಲ್ಲ ಎಂಬುದು ಕೂಡ ಅಷ್ಟೇ ನಿಜವಲ್ಲವೆ? ಯಾಕೆಂದರೆ, ಸಹಬಾಳ್ವೆಯೆಂಬುದು ವರ್ತಮಾನಕ್ಕೆ ಮಹಾನಿಷ್ಠವಾದದ್ದು. ವರ್ತಮಾನವೆಂಬುದು ಎಲ್ಲರನ್ನೂ ಎಲ್ಲವನ್ನೂ ಒಳಗೊಳ್ಳುವುದಕ್ಕೆ ಸಂಬಂಧಿಸಿದ್ದೇ ಹೊರತು, ಯಾರನ್ನೂ ಯಾವುದನ್ನೂ ಹೊರಗಿಡದು. ಹಾಗೇ ಹೊರಗಿಟ್ಟರೆ ಸಾಮಾಜಿಕ ಚಲನಶೀಲತೆಯೇ ಕಾಲ್ಮುರಿದುಕೊಂಡು ಕುಕ್ಕರಿಸುತ್ತದೆ. ಇದು ಯಾರೊಬ್ಬರಿಗೂ ಬೇಡವಾದ ಆವಸ್ಥೆ. ಮತ್ತು ವರ್ತಮಾನ ಮಹೋಪಯೋಗಿ ಮುಖಿಯೂ ಕೂಡ. ಆದ್ದರಿಂದ ಅದು ಪಕ್ಕಾ ವ್ಯವಹಾರಿಕ ನಡೆಯಾಗಿದ್ದು, ಎಲ್ಲವನ್ನು ಸಹಿಸಿಕೊಳ್ಳುತ್ತದೆ; ಪರಸ್ಪರರಿಗೆ ಅನಿವಾರ್ಯವಾದ್ದರಿಂದ, ಸಹಬಾಳ್ವೆ ತಾನೇ ತಾನಾಗಿ ರೂಪಿತವಾಗುತ್ತದೆ. ಆದರೆ ಈ ವರ್ತಮಾನ ನಿಷ್ಠವಾದ ಸಹಬಾಳ್ವೆಯನ್ನು ಶಕ್ತಿರಾಜಕಾರಣ ಮತ್ತು ಸಾಂಸ್ಕೃತಿಕ ರಾಜಕಾರಣ, ಭೂತದ ಘಟನಾವಳಿಗಳ ದೊಣ್ಣೆಯಲ್ಲಿ, ಭವಿಷ್ಯತ್ತಿನ ಅಧಿಕಾರದ ಆಸೆಯ ದಂಡದಲ್ಲಿ ಬಡಿದು ನುಚ್ಚುನೂರು ಮಾಡುತ್ತದೆ. ಅಂದರೆ ಸಹಬಾಳ್ವೆಯನ್ನು ಕದಡುವ ಶಕ್ತಿಗಳು ಚರಿತ್ರೆಯನ್ನು ತಮಗೆ ಬೇಕಾದಂತೆ ವ್ಯಾಖ್ಯಾನಿಸಿಕೊಂಡು, ಭೂತದ ‘ಅನ್ಯಾಯ’ವನ್ನು ವರ್ತಮಾನದಲ್ಲಿ ಸರಿಪಡಿಸುವ ಆಟದಲ್ಲಿ, ಅನ್ಯಾಯವನ್ನೇ ಎಸಗುತ್ತವೆ; ಸಹಬಾಳ್ವೆಯ ಸಮಾಜ ಹೋಳುಗೊಂಡು ಸದಾ ಭಯ ದ್ವೇಷದಲ್ಲಿ ದಿಗಿಲು ದುಗುಡದಲ್ಲಿ ದಿನದೂಡುತ್ತಿವೆ.

ಇದನ್ನು ಓದಿದ್ದೀರಾ? ಸಾಯಿಬರು ಕ್ರೂರಿಗಳು, ಕಿರಿಸ್ತಾನರು ಮತಾಂತರಿಗಳು ಎಂದು ನಮ್ಮ ಹಿರಿಯರು ಹೇಳಿಲ್ಲ; ಈಗ್ಯಾಕೆ ಈ ಪ್ರಶ್ನೆ!

ಸಹಬಾಳ್ವೆಯನ್ನು ಕದಡುವ ಕೇಡಿಗ ಶಕ್ತಿಗಳಿಗೆ ಬೆಂಬಲವಾಗಿರುವುದು ಅಕ್ಷರಸ್ಥರೆಂಬ ಅರೆಶಿಕ್ಷಿತರು. ಈ ಅರೆಶಿಕ್ಷಿತ ಅಕ್ಷರಸ್ಥರು ಅಪರಾಧದ ಉಪಕರಣಗಳಾಗಿಬಿಟ್ಟಿರುವುದು ಶೈಕ್ಷಣಿಕ ವ್ಯಂಗ್ಯ ಹಾಗೂ ಅದರ ದುರಂತವೂ ಹೌದು. ಮಸಿಯಕ್ಷರದ ಶಿಕ್ಷಣವು ವ್ಯಕ್ತಿಯ ಹಾಗೂ ಸಮಾಜದ ಮಾನಸಿಕ ಮಲೀನತನವನ್ನು ಹೋಗಲಾಡಿಸುವಲ್ಲಿ ವಿಫಲವಾಗಿದೆ. ‘ಶಿಕ್ಷಣವೇ ಶಕ್ತಿ’ ಎಂಬ ನಂಬುಗೆಯು ಭ್ರಮನಿರಸನಕ್ಕೆ ಈಡುಮಾಡಿದೆ. ಯಾಕೆಂದರೆ ಯಾವ ಶಿಕ್ಷಣದಿಂದ ಜಾತಿ, ಧರ್ಮಮಾದಿ ದ್ವೇಷಾಸೂಯೆಗಳನ್ನು ನೀಗಬೇಕಿತ್ತೋ, ಹಾಗಾಗದೆ, ಜಾತಿ, ಕೋಮುಭಾವನೆ ಅಕ್ಷರಸ್ಥರಲ್ಲಿಯೇ ರೋಗದಂತೆ ಉಲ್ಬಣವಾಗುತ್ತಿರುವುದು ಕಂಡುಬರುತ್ತಿದೆ. ಆಲೋಚನೆಯಿಲ್ಲದ ಆದರೆ, ಆವೇಶದ ಸೇನಾಪಡೆಗಳಂತಿರುವ ಈ ಅರೆಶಿಕ್ಷಿತ ಅಕ್ಷರಸ್ಥರನ್ನು ಕೋಮುಶಕ್ತಿಗಳು ಆಯುಧೀಕರಿಸಿ, ಸಹಬಾಳ್ವೆಯ ಸಾಮಾಜಿಕ ಸೌಂದರ್ಯವನ್ನು ವಿರೂಪಗೊಳಿಸುತ್ತಿದ್ದಾರೆ.

ʼವಸುದೈವ ಕುಟುಂಬಕಂʼ ಎಂಬುದು ಭಾರತೀಯರ ಶ್ರೇಷ್ಠವಾದ ಮಹೋನ್ನತ ಕಲ್ಪನೆ. ಭೂಮಿಯೇ ಮನೆಯೆಂಬುದು ಇದರ ಸಾರ. ಮನೆಯೆಂಬುದು ಸಹಬಾಳ್ವೆಯ ರೂಪಕವಲ್ಲವೆ? ಭೂಮಿ ತುಂಬ ವಾಸಿಸುವ ಮನುಷ್ಯರೆಲ್ಲರನ್ನು ‘ಒಂದು ಮನೆಯ ವಾಸಿಗಳೆಂದು ಭಾವಿಸುವ ಕಲ್ಪನೆಯೇ ಈ ‘ವಸುದೈವ ಕುಂಟುಂಬಕಂ’ ಎಂಬುದು. ಈ ಕಲ್ಪನೆಯು ಹುಟ್ಟಿ ಕಲ್ಪಾಂತರಗಳೇ ಕಳೆದಿರಬಹುದು. ಆದರೆ, ಮತ್ತೆ ಮತ್ತೆ ಈ ಮಹೋನ್ನತ ಕಲ್ಪನೆಯು ಕಲ್ಪನೆಯಾಗಿಯೇ ಆವಿಯಾಗುತ್ತಿದೆಯೋ ಏನೋ. ವಾಸ್ತವದಲ್ಲಿ ಮಾತ್ರ ಈ ಕಲ್ಪನೆಯು ಸಾಕಾರಗೊಂಡು ಸಕಲರ ಪ್ರಜ್ಞೆಯಾಗುತ್ತಿಲ್ಲ. ಸಕಲರ ಪ್ರಜ್ಞೆಯಾಗಬೇಕೆಂದೇ ಮಾನವೀಯವಾದ ಬೌದ್ಧಿಕ ಕಟ್ಟಡವೂ ಆದ ಸಂವಿಧಾನವನ್ನು ರಚಿಸಲಾಗಿದೆ. ಬಹುತ್ವದ ಬೆಳಕಿನಲ್ಲಿ ವೈಚಾರಿಕ ಮನದಲ್ಲಿ ನಿತ್ಯದ ಪಾಠವನ್ನು ಕಲಿಯುವುದು ಸಾಧ್ಯವಾದರೆ, ಸಹಬಾಳ್ವೆಯೆಂಬುದು ಅಗತ್ಯದ ಪದಾರ್ಥಗಳ ಹಿನ್ನೆಲೆಯ ದೈನಿಕಧರ್ಮ ಮಾತ್ರವಲ್ಲ; ಬೌದ್ಧಿಕ ಧರ್ಮವೂ ಆಗುತ್ತದೆ. ಆಗ ಈ ಸಮಾಜವು ಸಂವೇದನಾಶೀಲತೆಯಿಂದ ಕೂಡಿದ ಆರೋಗ್ಯಕರವಾದ ಎಲ್ಲರ ಭಾರತವಾಗುತ್ತದೆ.

ನಿಮಗೆ ಏನು ಅನ್ನಿಸ್ತು?
1 ವೋಟ್