ಹಾವೇರಿ | ಮುಸ್ಲಿಂ ಬಾಂಧವರಿಂದ ಗಣೇಶ ಮೂರ್ತಿ ಪ್ರತಿಷ್ಠಾಪನೆ

  • ಸೌಹಾರ್ದತೆಗೆ ಸಾಕ್ಷಿಯಾದ ಮುಸ್ಲಿಮರ ಗಣೇಶ ಚತುರ್ಥಿ
  • ಮೂರು ತಲೆಮಾರಿನಿಂದ ನಡೆದು ಬಂದಿರುವ ಪದ್ಧತಿ

ಉತ್ತರ ಕರ್ನಾಟಕವು ಕೋಮು ಸೌಹಾರ್ದತೆಗೆ ಹೆಸರಾಗಿದ್ದು, ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್‌ ಸೇರಿದಂತೆ ಸರ್ವಜನಾಂಗದ ಸಮುದಾಯವರು ಕೂಡ ಇಲ್ಲಿ ಶಾಂತಿ ಮತ್ತು ಸೌಹಾರ್ದತೆಯಿಂದ ಶತಮಾನಗಳಿಂದಲೂ ಬದುಕುತ್ತಾ ಬಂದಿದ್ದಾರೆ.

ಇದಕ್ಕೆ ಸರಳ ಉದಾಯರಣೆಯೆಂದರೆ ಮುಸ್ಲಿಮರಿಂದಲೇ ಆಚರಿಸಲ್ಪಡುತ್ತಿರುವ ಗಣೇಶೋತ್ಸವ. ಹಾವೇರಿ ಜಿಲ್ಲೆ ರಟ್ಟಿಹಳ್ಳಿ ತಾಲೂಕಿನ ಕುಡಪಲಿ ಗ್ರಾಮದಲ್ಲಿ ಮೂರು ತಲೆಮಾರುಗಳಿಂದ ಮುಸ್ಲಿಂ ಸಮುದಾಯದವರು ‘ಗಜಾನನ ಯುವಕ ಸಂಘ’ ಎಂಬ ಹೆಸರಿನಿಂದ ಗಣೇಶ ಉತ್ಸವವನ್ನು ಆಚರಿಸಿಕೊಂಡು ಬಂದಿದ್ದಾರೆ.

ಕುಡಪಲಿ ಗ್ರಾಮದ ಮುಸ್ಲಿಂ ಬಾಂಧವರು ತಮ್ಮಲ್ಲೇ ಒಂದು ತಂಡ ಮಾಡಿಕೊಂಡು ಬಾಜಾ ಭಜಂತ್ರಿಗಳಿಂದ ಗಣೇಶ ಮೂರ್ತಿಯನ್ನು ಮೆರವಣಿಗೆ ಮಾಡಿಕೊಂಡು ಮಸೀದಿ ಸಮೀಪವಿರುವ ಸಾರ್ವಜನಿಕ ಸ್ಥಳದಲ್ಲಿ ಪ್ರತಿಷ್ಠಾಪನೆ ಮಾಡುತ್ತಾರೆ.

ಗ್ರಾಮದ ಹಿರಿಯರೊಬ್ಬರು ಇದರ ಬಗ್ಗೆ ಮಾತನಾಡುತ್ತಾ, ʼಗಣೇಶ ಮೂರ್ತಿಯನ್ನು ನಾಲ್ಕು ದಿನ ಪ್ರತಿಷ್ಠಾಪಿಸಿ, ಐದನೇ ದಿನ ಅನ್ನಸಂತರ್ಪಣೆಯೊಂದಿಗೆ ವಿಸರ್ಜಿನೆ ಮಾಡುತ್ತೇವೆ. ಈ ಐದು ದಿನಗಳ ಅವಧಿಯಲ್ಲಿ ಗ್ರಾಮದ ಪ್ರತಿಯೊಂದು ಮನೆಯವರು ಗಣೇಶನಿಗೆ ಪೂಜೆ ಸಲ್ಲಿಸಲು ಆಗಮಿಸುತ್ತಾರೆ. ಪ್ರತಿದಿನ ಒಂದೊಂದು ರೀತಿಯ ವಿಶೇಷ ಕಾರ್ಯಕ್ರಮ ಏರ್ಪಡಿಸಲಾಗಿರುತ್ತದೆʼ ಎಂದರು.

ಈ ಸುದ್ದಿ ಓದಿದ್ದೀರಾ? : ಸೌಹಾರ್ದಯುತ ಗಣೇಶೋತ್ಸವಕ್ಕೆ ಸಾಕ್ಷಿಯಾದ ಯಶವಂತಪುರದ ಬಿ ಕೆ ನಗರ ನಿವಾಸಿಗಳು

ʼನಮ್ಮ ತಾತಾ ಮುತ್ತಾತನ ಕಾಲದಿಂದಲೂ ಗಣೇಶೋತ್ಸವವನ್ನು ಆಚರಿಸಲಾಗುತ್ತಿದ್ದು, ನಮಗೆಲ್ಲರಿಗೂ ಗಣೇಶ ಒಳ್ಳೆಯದನ್ನು ಮಾಡಿದ್ದು, ಮುಂದಿನ ಪೀಳಿಗೆಯವರು ಈ ಆಚರಣೆಯನ್ನು ಮುಂದುವರೆಸಿಕೊಂಡು ಹೋಗಲಿ ಎನ್ನುವುದು ನಮ್ಮ ಆಶಯವಾಗಿದೆʼ ಎಂದು ಹೇಳಿದರು.

ಒಟ್ಟಿನಲ್ಲಿ ಹಿಂದೂಗಳಿಂದ ಮೊಹರಂ ಆಚರಣೆ ಹಾಗೂ ಮುಸ್ಲಿಮರಿಂದ ಗಣೇಶನ ಪ್ರತಿಷ್ಠಾಪನೆಯಂತಹ ಸುದ್ದಿಗಳು ಕೋಮು ಸೌಹಾರ್ದತೆಯನ್ನು ಕದಡುವ ವ್ಯಕ್ತಿಗಳ ನಡುವೆ ಜನಸಾಮಾನ್ಯರಿಗೆ ಸೌಹಾರ್ದ ಮೂಡಿಸಲು ಸಹಾಯವಾಗುತ್ತಿವೆ.

ನಿಮಗೆ ಏನು ಅನ್ನಿಸ್ತು?
0 ವೋಟ್