ಇದು ನಮ್ಮ ಸೌಹಾರ್ದ | ಗುಜರಾತ್‌ನ ಐತಿಹಾಸಿಕ ಹಿಂದೂ ದೇವಾಲಯದಲ್ಲಿ ಇಫ್ತಾರ್ ಕೂಟ

IFTAR
  • 1200ಕ್ಕೂ ವರ್ಷಗಳಿಗೂ ಹಳೆಯ ಪುರಾತನ ಮಂದಿರದಲ್ಲಿ ಇಫ್ತಾರ್‌ ಕೂಟ
  • ದೇವಾಲಯದ ಟ್ರಸ್ಟ್ ಮತ್ತು ಗ್ರಾಮ ಪಂಚಾಯತ್ ನೇತೃದಲ್ಲಿ ಸೌಹಾರ್ದ ಕಾರ್ಯಕ್ರಮ

ಗುಜರಾತ್‌ನ ಐತಿಹಾಸಿಕ ಹಿಂದೂ ದೇವಾಲಯವೊಂದು, ಗ್ರಾಮದ ಮುಸಲ್ಮಾನ ಬಾಂಧವರಿಗೆ ಇಫ್ತಾರ್ ಆಯೋಜಿಸುವ ಮೂಲಕ ಕೋಮು ಸೌಹಾರ್ದತೆಯ ಬಹು ದೊಡ್ಡ ಸಂದೇಶವನ್ನು ಸಾರಿದೆ.

ಕರ್ನಾಟಕ ಸೇರಿದಂತೆ ದೇಶದೆಲ್ಲೆಡೆ ಧಾರ್ಮಿಕ ಧ್ರುವೀಕರಣವು ಸಮಾಜದಲ್ಲಿ ದೊಡ್ಡ ಬಿರುಕನ್ನು ಮೂಡಿಸುತ್ತಿರುವ ಸಂದರ್ಭದಲ್ಲಿ ಇಫ್ತಾರ್ ಕೂಟವು ಸೌಹಾರ್ದತೆಯ ಪಾಠವನ್ನು ಹೇಳಿದೆ. 

ಗುಜರಾತ್‌ನ ಬನಸ್ಕಾಂತ ಜಿಲ್ಲೆಯ ದಲ್ವಾನಾ ಗ್ರಾಮದಲ್ಲಿರುವ 1,200ಕ್ಕೂ ಹೆಚ್ಚು ವರ್ಷಗಳ ಇತಿಹಾಸ ಹೊಂದಿರುವ ವರಂದ ವೀರ ಮಹಾರಾಜ್ ಮಂದಿರದಲ್ಲಿ, ರಂಝಾನ್ ತಿಂಗಳ ವೃತಾನುಷ್ಠಾನ ಮಾಡಿದ್ದ ಗ್ರಾಮದ ಮುಸ್ಲಿಂ ಸಮುದಾಯದ 100ಕ್ಕೂ ಅಧಿಕ ಮಂದಿಗೆ ಶುಕ್ರವಾರ ಇಫ್ತಾರ್ ಕೂಟ ಆಯೋಜಿಸಲಾಗಿತ್ತು. ಇಫ್ತಾರ್ ಬಳಿಕ ದೇವಾಲಯದ ಆವರಣದಲ್ಲಿ ಮಗ್ರಿಬ್ ನಮಾಜ್ (ಸಂಜೆಯ ಪ್ರಾರ್ಥನೆ) ಮಾಡಲು ಅವಕಾಶ ಮಾಡಿಕೊಡಲಾಗಿತ್ತು. 

ಇದೇ ಮೊದಲ ಬಾರಿಗೆ ದಲ್ವಾನಾದ ಮುಸ್ಲಿಮರಿಗಾಗಿ ದೇವಾಲಯದಲ್ಲಿ ಇಫ್ತಾರ್ ಕೂಟ ಆಯೋಜಿಸಲಾಗಿದೆ. ಪ್ರಸ್ತುತ ಸನ್ನಿವೇಶದಲ್ಲಿ ಇದನ್ನ ಆದ್ಯತೆಯ ಮೇರೆಗೆ ಆಯೋಜಿಸುರುವುದಾಗಿ ದೇವಸ್ಥಾನದ ಪ್ರಧಾನ ಅರ್ಚಕ ಪಂಕಜ್ ಠಾಕರ್ ಮಾಧ್ಯಮಗಳಿಗೆ ಪ್ರತಿಕ್ರಯಿಸಿದ್ದಾರೆ.

ದಲ್ವಾನಾ ಹಳ್ಳಿಯ ಜನರು ಸಹಬಾಳ್ವೆ ಮತ್ತು ಸಹೋದರತ್ವದಿಂದಲೇ ಜೀವನ ನಡೆಸುತ್ತಿದ್ದಾರೆ. ಹಿಂದೂ ಮುಸ್ಲಿಂ ಧರ್ಮೀಯರ ಹಬ್ಬಗಳು ಒಂದೇ ದಿನದಲ್ಲಿ ಬಂದಾಗ ಗ್ರಾಮದ ನಿವಾಸಿಗಳು ಪರಸ್ಪರ ಸಹಕಾರದಿಂದಲೇ ಹಬ್ಬವನ್ನು ಆಚರಿಸುತ್ತಾರೆ ಎಂದು ಠಾಕರ್ ಹೇಳಿದ್ದಾರೆ.

ದೇವಾಲಯದ ಟ್ರಸ್ಟ್ ಮತ್ತು ಗ್ರಾಮ ಪಂಚಾಯತ್ ಜಂಟಿಯಾಗಿ ಸಭೆ ಸೇರಿ, ಈ ವರ್ಷ ರಂಝಾನ್ ಉಪವಾಸಿಗರನ್ನು ಇಫ್ತಾರ್‌ಗಾಗಿ ದೇವಾಲಯದ ಆವರಣಕ್ಕೆ ಆಹ್ವಾನಿಸಲು ನಿರ್ಧರಿಸಿದೆವು. ದೇವಾಲಯಕ್ಕೆ ಬಂದಿದ್ದ ಅತಿಥಿಗಳಿಗಾಗಿ ಆರು ವಿಧದ ಹಣ್ಣುಗಳು, ಖರ್ಜೂರ ಮತ್ತು ತಂಪುಪಾನೀಯಗಳನ್ನು ಒಳಗೊಂಡ ಇಫ್ತಾರ್ ವ್ಯವಸ್ಥೆ ಮಾಡಲಾಗಿತ್ತು. ನಮ್ಮ ಸ್ಥಳೀಯ ಮಸೀದಿಯ ಮೌಲಾನಾ ಸಾಹಿಬ್ ಅವರನ್ನು ನಾನು ಮುಂದೆ ನಿಂತು ವೈಯಕ್ತಿಕವಾಗಿ ಸ್ವಾಗತಿಸಿದ್ದೇನೆ ಎಂದು ಠಾಕರ್ ಹೇಳಿದ್ದಾರೆ. 

ಸ್ಥಳೀಯ ಮುಸ್ಲಿಂ ಉದ್ಯಮಿ ವಾಸಿಂ ಖಾನ್ ಮಾತನಾಡಿ, ಗ್ರಾಮದಲ್ಲಿ ಜನರು ಸಾಮರಸ್ಯದಿಂದ ಸಹಬಾಳ್ವೆ ನಡೆಸುತ್ತಿದ್ದಾರೆ. ಎಲ್ಲಾ ಹಬ್ಬಗಳ ಆಚರಣೆ ವೇಳೆ ಪರಸ್ಪರ ಸಹಕರಿಸುತ್ತಾರೆ. ಇಫ್ತಾರ್ ಆಯೋಜನೆಗೂ ಮೊದಲು ಗ್ರಾಮದ ಹಿಂದೂ ಮತ್ತು ಮುಸ್ಲಿಂ ಮುಖಂಡರನ್ನು ಸಂಪರ್ಕಿಸಿ ಶುಕ್ರವಾರ ದೇವಸ್ಥಾನದಲ್ಲಿ ಇಫ್ತಾರ್ ಆಯೋಜಿಸುವ ಪ್ರಸ್ತಾಪವನ್ನು ಮುಂದಿಟ್ಟಿದ್ದರು ಎಂದು ಹೇಳಿದ್ದಾರೆ.

ಈ ಹಿಂದೆ 2018ರಲ್ಲಿ ಉತ್ತರಪ್ರದೇಶದ ಲಕ್ನೋದ ಗೋಮತಿ ನದಿ ದಡದಲ್ಲಿರುವ ಪ್ರಸಿದ್ಧ ಮಂಕಮೇಶ್ವರ ದೇವಸ್ಥಾನದಲ್ಲೂ ಇಫ್ತಾರ್ ಕೂಟ ಆಯೋಜಿಸಲಾಗಿತ್ತು. ಮಹಂತ್ ದಿವಿಯ ಗಿರಿ ಅವರ ನೇತೃತ್ವದಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ನೂರಾರು ಜನರಿಗೆ ಇಫ್ತಾರ್ ಆಯೋಜಿಸಲಾಗಿತ್ತು.

ನಿಮಗೆ ಏನು ಅನ್ನಿಸ್ತು?
1 ವೋಟ್