ಹಯವದನರಾಯರ ಹಣೆಬರ ಕೆಟ್ಟಿತ್ತು, ನಡೀಲಿಲ್ಲ ಹಕೀಕತ್ತು

hayavadana rao

ಹಯವದನರಾವ್ ಜೋಶಿಯವರು ಈ ಭಾಗದ ಹತ್ತು ಹಳ್ಳಿಗಳಲ್ಲಿ ಭಾಳ ಫೇಮಸ್ ಹಿಂದೂ ಸಂಘಟನೆಯ ಭಾಷಣಕಾರರು. ಜನರು ಅವರನ್ನು ರಾಯರೆಂದೇ ಕರೆಯುತ್ತಿದ್ದರು. ಆದರೆ, ಈ ಸಲ ರಾಯರು ದೇಶಭಕ್ತಿ ಮತ್ತು ಹಿಂದೂ ಧರ್ಮದ ಬಗ್ಗೆ ಕರಾರುವಕ್ಕಾಗಿ ಮಾತನಾಡುತ್ತ ಜನರನ್ನು ಪುಸಲಾಯಿಸುತ್ತಿದ್ದರೂ ಪ್ರಯೋಜವಾಗಲಿಲ್ಲ. ಜನರಿಗೆ ಜ್ಞಾನೋದಯವಾಗಿತ್ತು.

"ಏ ಪದ್ಮಾ ˌ ಒಂದ್ ಕಪ್ ಚಹಾನಾದರೂ ತಂದು ಕೊಡೆ..." ಅದೇ ತಾನೆ ಸಂಧ್ಯಾವಂದನೆ ಮುಗಿಸಿಕೊಂಡು ತಮ್ಮ ಮನೆಯ ಜಗುಲಿ ಮೇಲೆ ಪವಡಿಸಿˌ ನಗಾರಿಯಂತ ಹೊಟ್ಟೆಯ ಮೇಲಿನ ಜನಿವಾರವನ್ನು ತಮ್ಮ ಎರಡೂ ಕೈಗಳಿಂದ ಸವರುತ್ತ ಹಯವದನರಾಯರು ಅಧಿಕಾರಯುತವಾಗಿ ಹೆಂಡತಿಯನ್ನು ಆದೇಶಿಸಿದರು.

"ಅಯ್ಯ ಸುಡ್ಲಿˌ ಈಗಾದ್ರೂ ಸಂಧ್ಯಾವಂದನೆ ಮುಗಿಸಿ ಬಂದು ಕುಂತಿರಿ, ಇಷ್ಟ್ ಲಘು ನಿಮಗ ಚಹ ಬೇಕಾತೇನು. ತಡಿರಿ ತಗೊಂಡು ಬರ್ತಿನಿ.." ಎಂದು ಅಡುಗೆ ಮನೆಯಿಂದ ರಾಯರ ಪತ್ನಿ ಪದ್ಮಕ್ಕ ಅಷ್ಟೇ ಅಧಿಕಾರಯುತವಾಗಿ ಪ್ರತಿಕ್ರಿಯಿಸಿದರು.

ಹಯವದನರಾವ್ ಜೋಶಿಯವರು ಈ ಭಾಗದ ಹತ್ತು ಹಳ್ಳಿಗಳಲ್ಲಿ ಭಾಳ ಫೇಮಸ್ ಹಿಂದೂ ಸಂಘಟನೆಯ ಭಾಷಣಕಾರರು. ಜನರು ಅವರನ್ನು ರಾಯರೆಂದೇ ಕರೆಯುತ್ತಿದ್ದರು. ರಾಯರು ದೇಶಭಕ್ತಿ ಮತ್ತು ಹಿಂದೂ ಧರ್ಮದ ಬಗ್ಗೆ ಕರಾರುವಕ್ಕಾಗಿ ಮಾತನಾಡುತ್ತ ಜನರನ್ನು ಪುಸಲಾಯಿಸುತ್ತಿದ್ದರು. ರಾಯರು ತಮ್ಮ ಮನೆಯ ಜಗುಲಿಯ ಮೆಲೆ ಕುಳಿತ್ತಿದ್ದರು. ಅಷ್ಟರಲ್ಲಿ ನಾಲ್ಕಾರು ಜನ ಹಿಂದೂ ಸಂಘಟನೆಯ ಕಾರ್ಯಕರ್ತರು ಹೆಗಲ ಮೇಲೆ ಕೇಸರಿ ಶಾಲುಗಳನ್ನು ಹಾಕಿಕೊಂಡು ರಾಯರ ಅಂಗಳ ಪ್ರವೇಶಿಸಿದರು.

ಅವರನ್ನು ನೋಡಿದ ರಾಯರು ದಿಗಿಲುಗೊಂಡರು. ಎಲ್ಲಿ ತಮ್ಮ ಪತ್ನಿ ಇವರೆಲ್ಲರ ಎದುರಿಗೆ ತಮಗೆ ಚಹಾ ತಂದುಕೊಡ್ತಾಳೊˌ ಹಾಗೊಂದು ವೇಳೆ ಆದರೆ ಅವರೆಲ್ಲರಿಗೂ ಚಹಾ ಕೊಟ್ಟು ಉಪಚರಿಸಬೇಕಾಗುತ್ತದಲ್ಲ ಎಂದು ರಾಯರು ಹೌಹಾರಿದರು. ತಡಬಡಿಸಿ "ಏಯ್ ಇಕಿನಾˌ ಇಲ್ಲಿ ನಮ್ಮ ಕಾರ್ಯಕರ್ತರು ಬಂದಾರˌ ನಾನು ನಿನಗ ಹೇಳಿದ್ದು ಆಮೇಲೆ ಮಾಡುವಿಯಂತˌ ನೀನು ನಿನ್ನ ಕೆಲ್ಸ ಮಾಡು.." ಎಂದು ಆತುರಾತುರವಾಗಿ ಆದೇಶಿಸಿ ಕಾರ್ಯಕರ್ತರನ್ನು ಬರಮಾಡಿಕೊಂಡರು.

ಕಾರ್ಯಕರ್ತರನ್ನು ಉದ್ದೇಶಿಸಿ ರಾಯರು..."ಏನ್ರೊ ತಮ್ಮಾ ಈ ಕಡೆ ಬಂದಿರಲ್ಲಾ. ನಿಮಗೆಲ್ಲ ಚಹಾನಾದರೂ ಕುಡಿಸಬಹುದಿತ್ತು ˌ ಆದ್ರ ಇವತ್ ಏಕಾದಶಿ ಐತಿˌ ಕ್ಷಮಿಸ್ರಪಾ ನನ್ನನ್ನು. ಅದ್ಸರಿ... ಏನಾದ್ರೂ ಕೆಲ್ಸಾ-ಗಿಲ್ಸಾ ಇತ್ತೇನು..?"  ಎಂದು ಪ್ರಶ್ನಿಸಿದರು. ಆಗ ಪಟೇಗಾರ ತುಕಾರಾಮ..."ನೋಡ್ರಿ ರಾಯರˌ ನಿನ್ನೆ ನೀವು ಹಲಾಲ್ ಮತ್ತು ಜಟ್ಕಾ ವಿಷಯ ಕುರಿತು ಮಾಡಿದ ಭಾಷ್ಣಾ ಕೇಳಿ ನಾವೆಲ್ಲ ಭಾಳಷ್ಟು ತಿಳ್ಕೊಂಡಿವ್ರೇರಿ..." ಅಂದ.

ರಾಯರ ಮುಖ ಬಿಜೆಪಿಯ ಕಮಲ ಹೂವಿನಂತೆ ಅರಳಿತು. ಹೆಸರಿಗೆ ತಕ್ಕಂತೆ ಕುದುರೆ ಮುಖದವರಾಗಿದ್ದ ರಾಯರು ಕಾರ್ಯಕರ್ತನ ಮಾತಿನಿಂದ ಕುದುರೆಯಂತೆ ಕೆನೆಯುತ್ತಾ... "ಭೇಷ್ ಭೇಷ್! ನಾವೆಲ್ಲ ಹಿಂದೂˌ ನಾವೆಲ್ಲ ಒಂದು... ಇನ್ಮುಂದ ನೀವೆಲ್ಲ ಜಟ್ಕಾ ಮಾಂಸನೇ ತಿನ್ಬೇಕು ನೋಡ್ರಿ..." ಎಂದು ಫರ್ಮಾನು ಹೊರಡಿಸಿದರು.

ಅದರಿಂದ ಉತ್ತೇಜಿತನಾದ ಕಾರ್ಯಕರ್ತ ವಡ್ಡರ ಯಂಕಪ್ಪ..."ಆಯ್ತರಿ ರಾಯರˌ ನಿಮ್ಮ ಭಾಷ್ಣಾದಿಂದ ಪ್ರಭಾವಿತರಾಗಿ ನಾಳೆ ರವಿವಾರ ಊರೊಳಗ ಒಂದು ಜಟ್ಕಾ ಮಾಂಸ ಸಮಾರಾಧನೆ ಕಾರ್ಯಕ್ರಮ ಆಯೋಜಿಸಿವ್ರಿ..." ಎಂದ. ಆಗ ರಾಯರು.."ಭಲೆ ಭಲೆ! ಯಂಕ್ಯಾ... ಚಲೊ ಕೆಲ್ಸಾ ಮಾಡಿರಿ ನೋಡ್..." ಎಂದು ಪ್ರೋತ್ಸಾಹಿಸಿದರು.

ಆಗ ಚಲವಾದಿ ಶೀನಪ್ಪ..."ರಾಯರˌ ಈ ಜಟ್ಕಾ ಮಾಂಸ ಸಮಾರಾಧನೆ ಕಾರ್ಯಕ್ರಮ ಮಾಂಸಾಹಾರ ಸೇವಿಸುವ ಮೂಲಕ ತಾವೇ ಉದ್ಘಾಟಿಸಬೇಕು ಅಂತ ನಮ್ಮೆಲ್ಲರ ಅಪೇಕ್ಷೆ ಐತ್ರಿ.." ಎಂದ ಖುಷಿಯಿಂದ.

ಇದನ್ನು ಕೇಳಿ ರಾಯರ ಕುದುರೆ ಮುಖ ಕತ್ತೆಯ ಮುಖದಂತಾಯಿತು. ಆಗ ರಾಯರು..."ಅದ್ಹ್ಯಾಂಗ ಅಕ್ಕಾದೊ ಶಿನ್ಯಾ? ನಾನು ಮಾಂಸಾಹಾರ ತಿನ್ನೊದಿಲ್ಲ ಅಂತ ಗೊತ್ತೈತಿಲ್ಲ ನಿನಗ...?" ಅಂದರು. ಅದಕ್ಕೆ ಲಂಬಾಣಿ ವಾಸು... "ಅಲ್ರಿ ರಾಯರˌ ಮಾತ್-ಮಾತಿಗೆ ನಾವೆಲ್ಲ ಹಿಂದುˌ ನಾವೆಲ್ಲ ಒಂದು ಅಂತಿರಿ. ನಿನ್ನೆನೆ ಹಲಾಲ್ ಕಟ್ ಮಾಂಸ ತಿನ್ಬಾರ್ದುˌ ಜಟ್ಕಾ ಕಟ್ ಮಾಂಸ ತಿನ್ಬೇಕು ಅಂತ ಭಾಷ್ಣಾ ಮಾಡಿ ನಮ್ಮೆಲ್ಲರ ಕಣ್ಣ ತೆರಿಸಿರಿ. ಈಗ ನೋಡಿದ್ರ ಒಲ್ಲೆ ಅಂದ್ರ ಹ್ಯಾಂಗರಿ...? ಅಂದ.‌

ಇದನ್ನು ಓದಿದ್ದೀರಾ?  ಘನಿಸಾಬರನ್ನು ಕಂಡು ಮಾತನಾಡಿಸಿದರೆ, ಅಪ್ಪನನ್ನು ಕಂಡಷ್ಟೇ ಸಮಾಧಾನ

"ಅಲ್ಲಲೇ ವಾಸ್ಯಾ ˌ ನಾವು ಬ್ರಾಮ್ರುˌ ನಾವು ಮಾಂಸಾಹಾರ ತಿನ್ನುದುಲ್ಲ ಅಂತ ನಿನಗ ಗೊತ್ತಿಲ್ಲೇನು..." ಎಂದು ಸಿಟ್ಟಿನಿಂದ ಬುಸುಗುಟ್ಟಿದರು. ಇದಕ್ಕೆ ..."ಅಲ್ರಿ ರಾಯರˌ ಕಾಶ್ಮೀರಿ ಪಂಡಿತರು ಕುರಿˌ ಬಂಗಾಲಿ ಮತ್ತು ಕೊಂಕಣಿ ಬ್ರಾಮರು ಮೀನುˌ ಕೋಳಿ ಮಾಂಸ ತಿನ್ನುದಿಲ್ಲೇನ್ರಿ. ಹಾಂಗsss ನೀವೂ ಕೂಡ ನಾಳೆ ಮಾಂಸಾಹಾರ ಸೇವಿಸಿ ನಾವೆಲ್ಲ ಹಿಂದೂˌ ನಾವೆಲ್ಲ ಒಂದು ಅನ್ನೋದನ್ನ ಖರೆ ಮಾಡಿ ತೋರಿಸ್ರಿ..." ಅಂದ ತಳವಾರ ಭೀಮಣ್ಣ.

ಇದರಿಂದ ನಖಶಿಖಾಂತ ಉರಕೊಂಡ ರಾಯರ ಮುಖ ಅಕ್ಷರಶಃ ಕತ್ತೆಯ ಮುಖದಂತಾಯಿತು. ...."ಏಯ್ ಭೀಮ್ಯಾ... ಬುದ್ದಿಗಿದ್ದಿ ಆಯ್ತಿಲ್ಲೊ ನಿನಗ. ನನ್ನನ್ನ ಕುಲಭ್ರಷ್ಟ ಮಾಡ್ಬೇಕಂದಿದಿ? ನಡಿರಿ ಎಲ್ಲಾರೂ ಇಲ್ಲಿಂದˌ ನಾವೆಲ್ಲ ಹಿಂದೂˌ ನಾವೆಲ್ಲ ಒಂದುನೂ ಬ್ಯಾಡˌ ನಿಮ್ಮ ಜಟ್ಕಾ ಕಟ್ ಮಾಂಸನೂ ಬ್ಯಾಡ..." ಎಂದು ಅಬ್ಬರಿಸುತ್ತ.." ಪದ್ಮಾ ಚಹಾ ತಯ್ಯಾರಾಯ್ತೇನೆ ಎಂದು ಅಡುಗೆ ಮನೆಯ ಕಡೆಗೆ ಬಿರಬಿರನೆ ಹೊರಟೇ ಬಿಟ್ಟರು.

ಈ ಘಟನೆಯಿಂದ ಹಿಂದೂ ಸಂಘಟನೆಯಲ್ಲಿ ದುಡಿಯುತ್ತಿದ್ದ ಹಿಂದುಳಿದ ವರ್ಗದ ಕಾರ್ಯಕರ್ತರಿಗೆ ಹಿಂದೂ ಸಂಘಟನೆ ಹುಟ್ಟುಹಾಕಿದ ಹಯವದನರಾಯರ ಕುಲಸ್ಥರ ಮಡಿವಂತಿಕೆ ಮತ್ತು ಹಿಂದೂ ನಾವೆಲ್ಲ ಒಂದು ಎಂಬ ಖೊಟ್ಟಿ ಘೋಷವಾಕ್ಯದ ಹಿಂದಿನ ಮರ್ಮ ಗೊತ್ತಾಯಿತು. ಈ ಕುದುರೆಮುಖರಾಯರ ಮಾತು ಕೇಳಿ ಹಿಂದುಳಿದ ಬಡ ಹಿಂದೂಗಳ ಮಕ್ಕಳು ಹೊಡೆದಾಡಿ ಜೈಲು ಪಾಲಾಗುವುದು ಮತ್ತು ಹಿಂದುತ್ವದ ಪ್ರತಿಪಾದಕರಾದ ಹಯವದನರಾಯರ ಪೀಳಿಗೆ ಸಾಫ್ಟ್‌ ವೇರ್ ಎಂಜಿನಿಯರಿಂಗ್ ಓದಿ ಅಮೆರಿಕಗೆ ಹೋಗಿ ಉದ್ಯೋಗ ಮಾಡುವುದರ ಹಿಂದಿನ ಗುಟ್ಟು ತಿಳಿದುಕೊಂಡ ಹಿಂದೂ ಸಂಘಟನೆಯ ಯುವಕರು ಮುಂದೆಂದೂ ಹಿಂದೂ ಸಂಘಟನೆಯಲ್ಲಿ ದುಡಿಯುವುದಿಲ್ಲ ಎಂದು ನಿರ್ಧರಿಸಿ ತಮ್ಮ ತಮ್ಮ ಮನೆಯ ಕಡೆಗೆ ಹೆಜ್ಜೆ ಹಾಕಿದರು.

ನಿಮಗೆ ಏನು ಅನ್ನಿಸ್ತು?
7 ವೋಟ್