ಮಸೀದಿಯೊಳಗೆ ಕನ್ನಡ ಕಲಿಸಿದ ಮೈನೋದ್ದೀನ್ ಮಾಸ್ತರ್

Bidar mazjid

ಮೈನೋದ್ದೀನ್ ಮಾಸ್ತರ್ ಊರಿನ ಪಟೇಲ್ ಮನೆತನದವರು. ಪಟೇಲ್ ಅಂದ್ರೆ ಬ್ಯಾರೆ ಹೇಳ್ಬೇಕಾ ಅವರು ಅರಬ್ಬಿ ಭಾಷೆಯಲ್ಲಿ ಓದಿದವ್ರು. ಆದ್ರು ಸಕಲಭಾಷಾ ಪರಿಣಿತರು. ಕನ್ನಡ, ಹಿಂದಿ ಭಾಷೆಯೂ ಕಲಿಸುತ್ತಿದ್ರು, ಅದರಲ್ಲೂ ಗಣಿತ ಮಗ್ಗಿ ಅಂದ್ರೆ ಫೇಮಸ್. ಹೀಗಾಗಿ ಒಂದನೇ ಓದೋ ಮಕ್ಳಿಗೂ ಕಮ್ಮಿ ಅಂದ್ರ 20 ತನಕ ಮಗ್ಗಿ ಬಾಯಿಪಾಠ ಮಾಡ್ಸುತಿದ್ರು.

ಮಕ್ಕಳಿಗೆ ಸ್ವಲ್ಪ ಉರಿ, ಚಳಿ ಬಂದ್ರೆ ಸಾಕು, ಶೇಕ್ ಪೀರ್, ಮೈಬೂಬ್ ಸುಬಾನಿ, ಮೌಲಾಲಿ, ಹುಸೇನ್ ದರ್ಗಾಗಳು ನೆನಪಾಗ್ತವೆ. ಈ ದೇವ್ರಿಗೆ ಐದು ದಿನಾ ಎಣ್ಣೆ ಬತ್ತಿ ಹಾಕಿ ದೀಪ ಹಚ್ಚಿದ್ರೆ ಸಾಕ್, ಎಲ್ಲಾ ಬ್ಯಾನಿ ತಂತಾನೇ ಕಮ್ಮಿ ಆಗ್ತದ್, ಹಂಗೇ ಹನುಮಾನ್ ದೇವ್ರಿಗೆ  ಗ್ಯಾರಾ ದಿನಾ ಸುತ್ತಾಕಿ ದೀಪ ಹಚ್ಚು ಅಂತ ಮನೆ ಹಿರಿಯರ ಮಾತು ಚಾಚು ತಪ್ಪದೇ ಪಾಲಿಸುತ್ತಿರುವ ನಮ್ಮೂರಿನ ಬಹುತೇಕ ಜನರು ಬಹುತ್ವದ ಮೇಲೆ ನಂಬಿಕೆ ಇಟ್ಟವರು. ಒಬ್ಬರಿಗೊಬ್ಬರು ಪರಸ್ಪರ ಪ್ರೀತಿಸುವ ಮೊಗಲಾಯಿ ಮಂದಿಗೆ ಧರ್ಮದ ಅಡ್ಡಗೋಡೆ ಇಲ್ಲವೇ ಇಲ್ಲ.

ಬೀದರ್ ಜಿಲ್ಲೆಯ ಔರಾದ್ ತಾಲ್ಲೂಕು ಅಂದ್ರೆ ಹಿಂದುಳಿದ ತಾಲೂಕು ಅನ್ನೋದು ಈಗಲೂ ಭಾಳ್ ಅಸ್ಕಾರಿ, ಆದ್ರೆ ನಮ್ಮೋಟ್ ಶ್ಯಾಣೆ ಮಂದಿ ಬ್ಯಾರೆ ಕಡಿ ಸಿಗಲ್ಲ ಅನ್ನೋದು ಭಾಳ್ ಮಂದಿಗೆ ಗೊತ್ತಿರಲಿಕ್ಕಿಲ್ಲ. ಇಂಥ ತಾಲೂಕಿನಾಗ ಚಟ್ನಾಳ ಅಂತ ಸಣ್ಣೂರು ನಮ್ದು. ಈ ಹಿಂದೆ ನೂರರ ಆಸುಪಾಸು ಮನೆಗಳಿದ್ದ ನಮ್ಮೂರು ಈಗ ಹೆಚ್ಚು ಕಮ್ಮಿ ತೀನ್ಸೆ ಮನಿ, ಊರಿನ ಹೊರಗಿದ್ದ ಹನುಮಂದೇರ್ ಗುಡಿ, ಮಸೀದಿ, ದರ್ಗಾಗಳು ಈಗ ನಡು ಊರಾಗ್ ಆಗ್ಯಾವ್, ಅಂದ್ರ ಮಂದಿಬಿ ಜಾಸ್ತಿ ಆಗ್ಯಾರ್ ಮನಿ ಬಿ ಭಾಳ್ ಆಗ್ಯಾವ್.

ನಮ್ಮೂರಾಗ ಶಾಲಿ ಇರೋದೇ ಐದನೇ ತನಕ, ಈಗಲೂ ಅಷ್ಟೇ, ಯಾಕಂದ್ರೆ ಹತ್ರಾನೇ ಸಂತಪೂರ ಅನ್ನೋ ಊರಿನಾಗ ಬೇಕಾದಷ್ಟು ಸರ್ಕಾರಿ, ಖಾಸಗಿ ಇಂಗ್ಲಿಷ್, ಕನ್ನಡ, ಉರ್ದು ಶಾಲೆಗಳು ಅವಾ. ಇನ್ನೂ ನಮ್ಮೂರಿನ ಮಂದಿ ಊರಾಗಿನ ಶಾಲ್ಯಾಗ್ ಓದ್ಸುದೂ ಕಮ್ಮಿ.  ಹೀಗಾಗಿ 'ಆರಕ್ಕೆ ಏರಿಲ್ಲ ಮೂರಕ್ಕೆ ಇಳಿದಿಲ್ಲ' ಅನ್ನೋ ಹಾಂಗ್ ಆಗಿನಿಂದ ಅಷ್ಟೇ ಅದಾ.

ಅದು 1998 ಕಾಲ ಇರ್ಬೇಕು, ನಾನಾಗ ಮೂರನೇ ತರಗತಿಯಲ್ಲಿ ಓದ್ಲಾತಿದ್ದ ಅಂತ ಛಂದ್ ನೆನಪು ಅದಾ. ಆಗ ನಮ್ಮೂರಿನ ಸರ್ಕಾರಿ ಶಾಲಿ ಭಾಳ್ ಛಂದ್ ಇತ್ತು. ಆಗೆಲ್ಲಾ ʼಹೊರಗಡೆ ಕನ್ನಡ ಬೋರ್ಡ್ ಹಾಕಿ ಒಳಗೆ ಇಂಗ್ಲಿಷ್ ಕಲಿಸೋʼ ಶಾಲಿಗೋಳು ಇದ್ದಿಲ್ಲ. ಹಿಂಗಾಗಿ ನಾವು ಓದುವಾಗ ಒಂದನೇ ಇಂದ ಐದನೇ ತನಕ 150-200 ಮಕ್ಕಳು ಇದ್ದೇವು. ಐದಾರು ಮಾಸ್ತರರು ಇದ್ರೂ. ಆದ್ರೆ ಈಗಿನಾಂಗ ಸರ್ಕಾರಿ ಸವಲತ್ತು ಎನೂ ಇದ್ದಿಲ್ಲ. ನಮ್ಗ್ ಹತ್ತನೇ ತನಕ ಪುಸ್ತಕ ಒಂದ್ ಬಿಟ್ರೆ ಬ್ಯಾರೇ ಏನೂ ಸಿಕ್ಕಿಲ್ಲ. ಒಂದೆರಡು ಸಲ ಎರಡು ಕಿಲೋ ಗೋಧಿ ಕೊಟ್ಟಿದ ನೆನಪು ಅದಾ ಅಷ್ಟೇ. ಕೂಡ್ಲಾಕ್ ಬೆಂಚ್ ಇದ್ದಿಲ್ಲ, ಛಂದಂದ್ ಗ್ರೌಂಡ್ ಇದ್ದಿಲ್ಲ. ಇನ್ನು ಶೌಚಾಲಯ ಅಂಬೋದು ಗೊತ್ತೇ ಇರಲಿಲ್ಲ.

ಇಂಥ ಕಾಲದಾಗ ಇಂಥ ಶಾಲಿದಾಗ ಓದ್ಸೋ ಜೊತೆಗೆ ಟ್ಯೂಷನ್ ಬ್ಯಾರೆ ಹಾಕಿದ್ರು, ಮೂರನೇ ದಿಂದ ಐದನೇ ತನಕ ನಮ್ಮೂರಾಗೇ ಶಾಲಿ ಹೋಗುವಾಗ ಮುಂಜಾನಾತ ಟ್ಯೂಷನ್‌ಗೆ ಹೋಗ್ತಾ ಇದ್ದೀವಿ. ಪೈಲಾನೇ ಹೇಳಿದ್ಹಾಂಗ ನಮ್ಮೂರಾಗ ಮಂದಿರ ಬ್ಯಾರೆ ಅಲ್ಲ, ಮಸೀದಿ ಬ್ಯಾರೆ ಅಲ್ಲ. ಅವ್ರು ಇಲ್ಲಿ ಬರ್ತಾರ್ ನಾವ್ ಅಲ್ಲಿ ಹೋಗ್ತೇವ್. ಹೀಗಾಗಿ ನಾ ಟ್ಯೂಷನ್ ಕಲ್ತಿದ್ದು ಮಸೀದಿಯೊಳಗೆ. ನಮ್ ಟ್ಯೂಷನ್ ಮಾಸ್ಟರ್ ಮೈನೋದ್ದೀನ್ ಪಟೇಲ್.

ಮೈನೋದ್ದೀನ್ ಮಾಸ್ತರ್ ಊರಿನ ಪಟೇಲ್ ಮನೆತನದವರು, ಪಟೇಲ್ ಅಂದ್ರೆ ಬ್ಯಾರೆ ಹೇಳ್ಬೇಕಾ ಅವರು ಅರಬ್ಬಿ ಭಾಷೆಯಲ್ಲಿ ಓದಿದವ್ರು, ಹೆಚ್ಚೇನೂ ಓದಿಲ್ಲ. ಆದ್ರು ಸಕಲಭಾಷಾ ಪರಿಣಿತರು. ಅರಬ್ಬಿ ಜೊತೆಗೆ ಕನ್ನಡ, ಹಿಂದಿ ಭಾಷೆಯೂ ಕಲಿಸುತ್ತಿದ್ರು. ಅದರಲ್ಲೂ ಗಣಿತ ಮಗ್ಗಿ ಅಂದ್ರೆ ಫೇಮಸ್. ಹೀಗಾಗಿ ಒಂದನೇ ಓದೋ ಮಕ್ಳಿಗೂ ಕಮ್ಮಿ ಅಂದ್ರ 20 ತನಕ ಮಗ್ಗಿ ಬಾಯಿಪಾಠ ಮಾಡ್ಸಿತಿದ್ರು. ಅವರು ಕಲಿಸೋ ಪದ್ಧತಿಯೇ ಅಷ್ಟು ಭಾರಿ ಇತ್ತು.

ಮಸೀದಿ ಎಂಬ ಟ್ಯೂಷನ್‌ ರೂಮ್

ಮುಂಜಾನೆ 6ಕ್ಕೆ ಎದ್ದು 7 ರಿಂದ 8 ತನಕ ಮಸೀದಿಯಲ್ಲಿ ಟ್ಯೂಷನ್ ಮುಗಿಸಿಕೊಂಡು ಮತ್ತೆ ಮನೆಗೆ ಬಂದು ಶಾಲೆಗೆ ಹೋಗುವುದು ನಮ್ಮ ದಿನಚರಿಯಾಗಿತ್ತು. ಮೈನೋದ್ದೀನ್ ಮಾಸ್ತರ್ ಅವರು ಮಸೀದಿಯಲ್ಲಿ ದಿನಾಲೂ ಐದು ಸಲ ನಮಾಜ್ ಅವ್ರೇ ಹೇಳ್ತಾ ಇದ್ರು, ಮಸೀದಿಯ ರೇಕ್ ದೇಖ್ ಅವ್ರೇ ನೋಡ್ತಿದ್ರು, ಈಗಲೂ ಅವ್ರೇ ನೋಡ್ತಾರೆ. ಅದಕ್ಕೆ ಅವರು ಮುಸ್ಲಿಂ ಸಮುದಾಯದ ಮಕ್ಕಳಿಗೆ ಉರ್ದು, ಅರಬ್ಬಿ ಕಲಿಸುವ ಜೊತೆಗೆ ಹಿಂದೂ ಸಮುದಾಯದ ಮಕ್ಕಳಿಗೆ ಕನ್ನಡ, ಹಿಂದಿ, ಗಣಿತ ಪಾಠ ಮಾಡ್ತಿದ್ರು. ಸುಮಾರು 40 ಕ್ಕಿಂತ ಹೆಚ್ಚು ನಾವು ಸಹಪಾಠಿಗಳು ಜೊತೆಗೆ ಮುಸ್ಲಿಂ ಸಮುದಾಯದ 30 ವಿದ್ಯಾರ್ಥಿಗಳು ಒಂದೇ ಕಡೆ ಕಲಿತ್ತಿದ್ದೇವು. ಅದರಲ್ಲಿ ಹುಡುಗಿಯರ ಸಂಖ್ಯೆಯೂ ಸಮವಾಗಿತ್ತು.

ನಮ್ಗ ಮಸೀದಿ ಅಂದ್ರೆ ಟ್ಯೂಷನ್ ಕ್ಲಾಸ್ ರೂಮ್ ಇದ್ದಂತ್ತಿತ್ತು, ಒಂದು ಕಡೆ ಅರಬ್ಬಿ ಬಾಯಿಪಾಠ ಮಾಡುತ್ತಿದ್ರೆ ಈ ಕಡೆ ಕನ್ನಡ- ಗಣಿತ-ಮಗ್ಗಿ ಓದುತ್ತಿದ್ದೇವು. ನಂತರ ಎಲ್ಲರಿಗೂ ಒಂದೇ ಕಡೆ ಮಗ್ಗಿ ಓದಿಸಿಕೊಳ್ಳುತ್ತಿದ್ರು. ಆಗ ಹಿಂದೂ-ಮುಸ್ಲಿಂ ಅನ್ನೋದು ನಮ್ಗೇನೂ ಗೊತ್ತೆ ಇರ್ಲಿಲ್ಲ. ಹಿಜಾಬ್‌ ಹಾಕೋರು ಮುಸ್ಲಿಮರು ಅಂತ ಅಷ್ಟೇ ಗೊತ್ತು. ಆದ್ರ ಅವರೂ ನಾವು ಒಬ್ಬರಿಗೊಬ್ಬರು ಓದಿಸಿಕೊಳ್ಳೋದು ತಪ್ಪಾಗಿದ್ದು ತಿಳಿದುಕೊಳ್ಳೋದು ಮಾಡ್ತಾ ಇದ್ದೀವಿ.

ಟ್ಯೂಷನ್ ಮಾಸ್ತರ್ ಅಂದ್ರೆ ಭಾಳ್ ಖಡಕ್ ಇದ್ರು, ಒಂದಿನಾ ಹೋಗಿಲ್ಲ ಅಂದ್ರೆ ಮರ್ದಿನಾ ಯಾಕಂತ ಕೇಳ್ತಿದ್ರು, ಇಲ್ಲಾಂದ್ರೆ ಬ್ಯಾರೆ ಹುಡುಗ್ರು ಅವರ ಮನೀಗ್ ಕರಿಲಾಕ್ ಖಳಿಸುತ್ತಿದ್ರು. ನಮ್ಗ ಕನ್ನಡ ಛಂದ್ ಓದೋಕೆ, ಗಣಿತ ಲೆಕ್ಕ ಕಲಿಸಿದ್ದು, 30 ತನಕ ಮಗ್ಗಿ ಬಾಯಿಪಾಠ ಮಾಡ್ಸಿದ್ದು , ಹಿಂದಿ ಪದ್ಯ ಓದಲು ಕಲಿಸುವ ಜೊತೆಗೆ ನಮ್ಗೆ ಗೊತ್ತಿಲ್ಲದಂತೆ ನಾವೆಲ್ಲರೂ ಒಂದೇ ಎನ್ನುವ ಭಾವೈಕ್ಯತೆಯ ಪಾಠ ಕಲಿಸದವ್ರೂ ಮೈನೋದ್ದೀನ್ ಮಾಸ್ತರ್ ಎನ್ನುವುದು ಆಗಾಗ್ಗೆ ನೆನಪು ಬರ್ತಾದ್. ಅವರನ್ನು ಕಂಡರೆ ಈಗಲೂ ಏನೋ ಗೌರವ, ಪ್ರೀತಿ, ಹೆಮ್ಮೆ ಅನಿಸುತ್ತದೆ. ಅವರೂ ಅಷ್ಟೇ ಪ್ರೀತಿಯಿಂದ ಕರೀತಾರೆ. ಸಾಮರಸ್ಯ ಸಹಬಾಳ್ವೆ ಅಂದ್ರೆ ಇದೇ  ಅಲ್ಲವೇ ಅಂತ ಒಳದನಿ ಹೇಳುತ್ತದೆ.

ನಮ್ಮುರಾಗ ಲಿಂಗಾಯತ, ಮುಸ್ಲಿಂ, ಕುಂಬಾರ, ಹರಿಜನ, ಕ್ರಿಶ್ಚಿಯನ್, ಬಡಗೇರ್, ಅಗಸುರ್, ಕುರುಬರು ಸೇರಿ ಎಲ್ಲರೂ ಇದ್ದಾರೆ. ಎಲ್ಲರೂ ಎಲ್ಲಾ ದೇವ್ರಿಗೆ ಪೂಜೆ ಮಾಡ್ತಾರೆ. ಶೇಕ್ ಪೀರ್ ಸಂದಲ್ ಇದ್ದಾಗ ಊರ್ ಮಂದಿ ಅಲ್ಲೇ ಹಾಜರ್, ಇನ್ನೂ ಮೊಹರಂ ಹಬ್ಬ ಅಂತಾ ಮುಸ್ಲಿಮರಿಗಿಂತ ಉಳಿದವರ ನೇತೃತ್ವದಲ್ಲಿ ನಡೀತಿದ್ವು. ಊರಿನ ಮರ್ಗೆಮ್ಮಾ, ಹನುಮಾನ್ ಖಾಂಡ, ಮಹಾದೇವ ಮಂದಿರ ಕಾಂಡ ಇದ್ದಾಗೆಲ್ಲ ಮುಸ್ಲಿಂ ಸಮುದಾಯದ ಹುಡುಗರೇ ಊಟಕ್ಕೆ ನೀಡ್ತಾರೆ. ಗಣೇಶ ಚತುರ್ಥಿಗೆ ಲಿಂಗಾಯತ ಹುಡುಗರ ಗಣೇಶ ಮಂಡಳಿಯಲ್ಲಿ ಮುಸ್ಲಿಂ ಸಮುದಾಯದ ಹುಡುಗರೂ ಇರ್ತಾರೆ, ಡ್ಯಾನ್ಸ್ ಮಾಡ್ತಾರೆ, ಉಳಿದ ಸಭೆ, ಸಮಾರಂಭದಲ್ಲಿ ಎಲ್ಲರೂ ಒಬ್ಬರಿಗೊಬ್ಬರು ಪರಸ್ಪರ ಸಹಕಾರ ನೀಡ್ತಾರೆ.

ಅಂದ ಹಾಗೇ ನಮ್ಮುರಾಗ ದಳಪತಿ ಅಂತ ಮುಸ್ಲಿಮರೇ ಇದ್ದಾರೆ, ಪೊಲೀಸ್ ಪಾಟೀಲ್ ಅಂತ ಅವ್ರಿಗೆ ಕರೀತಾರೆ. ಏನಾದರೂ ನ್ಯಾಯ ಪಂಚಾಯ್ತಿ ಇದ್ರೆ ಊರಿನ ದೇಶಮುಖ, ಪಟೇಲರ ಜೊತೆಗೆ ದಳಪತಿಗಳು ಬರ್ತಾರೆ, ಊರಾಗ ಯಾರಾದ್ರೂ ಸತ್ರು ಜಾತಿ ಧರ್ಮ ಎನ್ನದೆ ಎಲ್ಲರೂ ಮೊದಲು ಹಾಜರ್ ಇದ್ದು ಎಲ್ಲಾ ಸುಸೂತ್ರವಾಗಿ ನಡೆಸಿ ಹೋಗ್ತಾರೆ. ಅಂತ್ಯಕ್ರಿಯೆಗೆ ಹಣ ಇಲ್ಲದಿದ್ದರೆ ಮೊದಲಿಗೆ ಅವರೇ ಕೊಡ್ತಾರೆ.

ನಂಗೇ ಮೊದಲು ಸುರುಕುಂಬಾ ಕುಡಿಸಿದ್ದು, ಟ್ರೈನ್ ನಲ್ಲಿ ಮೊದಲು ಹೈದರಾಬಾದ್‌ಗೆ ಕರ್ಕೊಂಡು ಹೋಗಿದ್ದು ನಮ್ ಟ್ಯೂಷನ್ ಮಾಸ್ಟರ್ ಮೈನೋದ್ದೀನ್ ಅವರು, ಯಾಕಂದ್ರೆ ನಮ್ಮಲ್ಲಿ ಆವಾಗ ಜೋಡೆತ್ತು ಇದ್ದವು, ಒಕ್ಕಲುತನ ಇತ್ತು. ಅಪ್ಪಾ ಅವರ ಹೊಲ ಲಾವಣಿ ಮಾಡಿತಿದ್ರು, ಹಿಂಗಾಗಿ ಅವರ ಕುಟುಂಬದ ಏನೇ ಕಾರ್ಯಕ್ರಮಗಳಿದ್ದರೂ ನಾವು ತಪ್ಪದೆ ಹೋಗ್ತಾ ಇದ್ದೀವಿ. ರಂಝಾನ್‌ಗೆ ಮನೆಗೆ ಕರಿಸಿ ಊಟ ಮಾಡ್ಸತಿದ್ರು, ನಾವು ಏನಾದರೂ ಕಾರ್ಯಕ್ರಮ ಇದ್ರೆ ಊಟಕ್ಕೆ ಕರೀತಿದ್ವು, ಅವರದು ನಮ್ಮದು ಒಡನಾಟ ಭಾಳ್ ಗಟ್ಟಿಯಾಗಿ ಬೆಳೆದಿತ್ತು. ಆದ್ರು ನಾನು ಮಾತ್ರ ಅವರನ್ನು ಗುರುಗಳು ಅಂತೆ ಗೌರವಿಸುವುದು ಇನ್ನೂ ತಪ್ಪಿಲ್ಲ.

ಇದನ್ನು ಓದಿದ್ದೀರಾ? ಹಸಿಮನದೊಳಗೊಂದು ಸಹಬಾಳ್ವೆಯ ಬೀಜ ಮೊಳೆಯಲಿದೆ 

ಶಾಲೆಯಲ್ಲಿ ಎಷ್ಟೇ ಕಲಿಸಿದ್ರು ಮೈನೋದ್ದೀನ್ ಮಾಸ್ತರ್ ಹತ್ರಾ ಟ್ಯೂಷನ್ ಹೋದ ಮಕ್ಕಳೇ ಭಾಳ್ ಹುಷ್ಯಾರ್ ಆಗ್ತಾರ್, ಟ್ಯೂಷನ್ ಗೆ ಹಾಕಲೇಬೇಕು ಎನ್ನುವುದು ಆಗಿನ ಪೋಷಕರ ಅಭಿಪ್ರಾಯ ಇತ್ತು. ಓದುವಾಗ ಸಣ್ಣ ಒತ್ತಕ್ಷರ ತಪ್ಪಿದರೂ ಸಾಕು, ತಲೆಯ ಮೇಲೆ ಛಡಿ ಬಿಳ್ತಿತ್ತು. ಒಂದು ಪುಟ ಓದೋವರೆಗೆ ಹತ್ತಾರು ಛಡಿ ಏಟು ತಿಂದ ನೆನೆಪು ಈಗ ಅಷ್ಟೇ ಖುಷಿ ನೀಡ್ತವೆ..
ʼಛಡಿ ಲಾಗ್ಲಾ ಚಮ್ ಚಮ್, ವಿದ್ಯಾ ಲಾಗ್ಲಾ ಘಮ್ ಘಮ್ʼ ಅಂತ ಮನೆಯಲ್ಲಿಯೂ ಛಡಿ ಬಿದ್ರೆ ಛಂದ್ ಓದ್ತಾರೆ ಅಂತೆ ನಮ್ಗೆ ಗೊತ್ತಿಲ್ಲದಂತೆ ಜರಾ ಹೊಡ್ದಿ ಅಂಜ್ಕಿ ಹಾಕಿ ಕಲ್ಸ್ರೀ ಸರ್ ಅಂತ ಹೇಳ್ತಿದ್ರು.

ಮಾಸ್ತರ್ ಮೈನೋದ್ದೀನ್ ಅವರ ಮಸೀದಿಯೊಳಗೆ ಕಲಿಸಿದ ಪಾಠ ನಮ್ಮನ್ನು ಪ್ರಜ್ಞಾವಂತರಾಗಿ ರೂಪಿಸಿದ್ದು ಖರೇ. ಕನ್ನಡ, ಹಿಂದಿ,  ಗಣಿತ ಲೆಕ್ಕ ಕಲಿತಿದ್ದು ಮೊದಲಿಗೆ ಅವರಿಂದಲೇ, ತಿಂಗಳಿಗೆ ಬರೀ ಹತ್ತು ರುಪಾಯಿ ನೋಟು ತೆಗೆದುಕೊಳ್ಳುತ್ತಿದ್ದ ಅವರು ಕಲ್ಪಿಸಿದ್ದು ಮಾತ್ರ ಬೆಟ್ಟದಷ್ಟು, ಇದು ಅವರ ಕಳಕಳಿಯ ನಿಸ್ವಾರ್ಥ ಸೇವೆ, ಕಲಿಸಲೇಬೇಕು ಎನ್ನುವುದು ಅವರಿಗೇನೂ ಅನಿವಾರ್ಯ ಇರಲಿಲ್ಲ. ಆದರೆ ತನ್ನೊಳಗಿನ ಜ್ಞಾನ ಮತ್ತೊಬ್ಬರಿಗೆ ಧಾರೆ ಎರೆಯಬೇಕೆಂಬ ಅವರ ಸಾಮಾಜಿಕ ಕಳಕಳಿಯ ಇಂದಿಗೂ ಆಶ್ಚರ್ಯ ಎನಿಸುತ್ತದೆ.

ಈ ಎಲ್ಲಾ ಕಾರಣದಿಂದಲೇ ಇಂದಿಗೂ ನಮ್ಮೂರು ಹಿಂದೂ -ಮುಸ್ಲಿಮರ ಸಾಮರಸ್ಯ ಸಹಬಾಳ್ವೆ  ಪರಂಪರೆಯನ್ನು ಮುಂದುವರೆಸಿ ಕೊಂಡು ಹೋಗುತ್ತಿರುವ ಊರು, ಯಾವುದೇ ಜಾತಿ ಧರ್ಮದ ನಡುವೆ ದ್ವೇಷಗಳಿಲ್ಲ. ʼಊರೆಲ್ಲ ನೆಂಟರು' ಎನ್ನುವಂತೆ ಹಬ್ಬ , ಮದುವೆ, ಜಾತ್ರೆಯಲ್ಲಿ ಮನೆಗೊಬ್ರು ಊಟಕ್ಕೆ ಕರೆಯೋದು ವಾಡಿಕೆ.

ನಿಮಗೆ ಏನು ಅನ್ನಿಸ್ತು?
12 ವೋಟ್