ಕೊಪ್ಪಳ | ವರಮಹಾಲಕ್ಷ್ಮಿ ಹಬ್ಬ ಮಾಡಿದ ಮುಸ್ಲಿಂ ಕುಟುಂಬ

alavandi

ರಾಜಕೀಯ ಹತ್ಯೆಗಳು, ಕೋಮು ದ್ವೇಷದ ಘಟನೆಗಳು ನಡೆದು ರಾಜ್ಯ ವಿಷಾದದ ಕರಿ ನೆರಳಿನಲ್ಲಿರುವಾಗ ಕೊಪ್ಪಳದ ಮುಸ್ಲಿಂ ಕುಟುಂಬವೊಂದು ಮೊಹರಂ ಹಬ್ಬದ ಜೊತೆಗೆ ವರಮಹಾಲಕ್ಷ್ಮಿಯನ್ನು ಮನೆಯೊಳಗೆ ಪ್ರತಿಷ್ಟಾಪಿಸಿ, ಹೂವಿನಿಂದ ಅಲಂಕರಿಸಿ, ನೈವೇದ್ಯ ಅರ್ಪಿಸಿ ನೆರೆ ಹೊರೆಯವರ ಜೊತೆ ಸಂಭ್ರಮಿಸಿ ಸಮಾಜಕ್ಕೆ ಸೌಹಾರ್ದತೆಯ ಸಿಹಿ ಹಂಚಿದೆ

ಮುಸ್ಲಿಂ ಕುಟುಂಬವೊಂದರಲ್ಲಿ ವರ ಮಹಾಲಕ್ಷ್ಮಿ ಪೂಜೆ ಮಾಡುವ ಮೂಲಕ ಸಾಮರಸ್ಯಕ್ಕೆ ಸಾಕ್ಷಿಯಾದ ಘಟನೆ ಕೊಪ್ಪಳ ತಾಲೂಕಿನ ಅಳವಂಡಿ ಗ್ರಾಮದಲ್ಲಿ ನಡೆದಿದೆ. ಅಳವಂಡಿ ಗ್ರಾಮದ ನಜರುದ್ದೀನ್ ಬಿಸರಳ್ಳಿ ಕುಟುಂಬ ನಿನ್ನೆ ಹಿಂದೂ ಪದ್ಧತಿಯಂತೆ ಮಹಾಲಕ್ಷ್ಮಿ ಹಬ್ಬವನ್ನು ನೆರವೇರಿಸುವ ಮೂಲಕ ಭಾವೈಕ್ಯತೆಯನ್ನು ಸಾರಿದೆ.‌

ಕಳೆ ಮೂರು ವರ್ಷಗಳಿಂದ ಈ ಹಬ್ಬ ಆಚರಿಸುವ ಅವರು ಹಿಂದೂ ಸಂಪ್ರದಾಯದಂತೆ ಹಸಿರು ತೋರಣ ಕಟ್ಟಿ, ಬಾಳೆ ದಿಂಡು, ಹೂವುಗಳಿಂದ ಸಿಂಗರಿಸಿ ವಿವಿಧ ತಿಂಡಿ ತಿನಿಸನ್ನು ಎಡೆಯಿಟ್ಟು ವರಮಹಾಲಕ್ಷ್ಮಿ ಹಬ್ಬವನ್ನು ಆಚರಣೆ ಮಾಡಿದ್ದಾರೆ.

ಈ ಬಗ್ಗೆ ಈ ದಿನ.ಕಾಮ್ ಜೊತೆ ಮಾತನಾಡಿದ ನಜರುದ್ದೀನ್, ʼ2019 ರಲ್ಲಿ ನಮ್ಮ ಮನೆಯ ಗೃಹ ಪ್ರವೇಶವಾಗಿದ್ದು ಆ ದಿನ ಮಹಾಲಕ್ಮೀ ಹಬ್ಬವಾಗಿತ್ತು. ಹೀಗಾಗಿ ಅಂದಿನಿಂದ ಪ್ರತೀ ವರ್ಷವೂ ಈ ಹಬ್ಬ ಆಚರಿಸಿಕೊಂಡು ಬರುತ್ತಿದ್ದೇವೆ“ ಎಂದರು. ಇದು ಮೊಹರಂ ಹಬ್ಬದ ಮಾಸವಾಗಿದ್ದು ನಮ್ಮ ಮನೆಯಲ್ಲಿ ವರಮಹಾಲಕ್ಷ್ಮೀ  ಹಬ್ಬ ಆಚರಿಸಿದ  ನಂತರ ಮೊಹರಂ ಹಬ್ಬದ ಆಚರಣೆಗೆ ತಯಾರಿ ನಡೆಸುತ್ತೇವೆ. ನಮ್ಮ ಊರಿನ ಮಸೀದಿಯ ಎದುರೇ ಆಂಜನೇಯನ ಗುಡಿಯಿದೆ. ನಾನು ಆಂಜನೇಯನ ಭಕ್ತನಾದ್ದರಿಂದ ಪ್ರತೀ ಶನಿವಾರ ಕಾಯಿ ಒಡೆದು ಕರ್ಪೂರ ಹಾಕುತ್ತೇನೆ. ಪ್ರತೀ ಅಮವಾಸ್ಯೆಗೆ ನನ್ನ ಕುಟುಂಬದ ಸಮೇತ ಧರ್ಮಸ್ಥಳಕ್ಕೆ ಭೇಟಿ ಮಾಡುತೇವೆʼ ಎಂದು ನಜೀರುದ್ದಿನ್ ಹೇಳಿದ್ದಾರೆ.

ʼನಮಗೆ ಇಷ್ಟವಾದ ಹಬ್ಬವನ್ನು ನಾವು ಆಚರಿಸುತೇವೆಯೇ ಹೊರತು ಅದು ಯಾವ ಧರ್ಮದ್ದೆಂದು ನೋಡುವುದಿಲ್ಲ. ನಮ್ಮ ಸಂಬಂಧಿಕರು ಮತ್ತು ನೆರೆಹೊರೆಯವರೂ ಸಂತಸ ವ್ಯಕ್ತಪಡಿಸುತ್ತಾರೆ ಮತ್ತು ಅವರೂ ಕೂಡ ಆಚರಣೆಯಲ್ಲಿ ಪಾಲ್ಗೊಳ್ಳುತ್ತಾರೆ. ನಾನು ಎಂದಿಗೂ ಜಾತಿ ಧರ್ಮವೆಂದು ಓಡಾಡುವುದಿಲ್ಲ, ಜಾತಿ ಎಂದರೆ ಗಂಡು ಹೆಣ್ಣು ಎರಡೇ. ಎಲ್ಲರಿಗೂ ಸಿಗುವುದು ಒಂದೇ ಗಾಳಿ, ಒಂದೇ ನೀರು. ಇದರಲ್ಲಿ ಜಾತಿ ಧರ್ಮದ ಪ್ರಶ್ನೆಯೇ ಇಲ್ಲʼ ಎಂದಿದ್ದಾರೆ.

Image
Najaruddin

ʼನಮ್ಮ ಊರಿನ ಜಾತ್ರೆ ಉತ್ಸವಗಳಲ್ಲಿ ಎಲ್ಲರೂ ಒಂದಾಗಿ ಪಾಲ್ಗೊಳ್ಳುತ್ತೇವೆ, ಒಟ್ಟಿಗೆ ಆಚರಿಸುತ್ತೇವೆ. ಪ್ರತಿಯೊಬ್ಬರಲ್ಲೂ ಸೌಹಾರ್ದತೆಯಿರುತ್ತದೆ. ಅವರ ಕಷ್ಟಗಳಲ್ಲಿ ನಾವು ಭಾಗಿಯಾಗುತ್ತೇವೆ ಮತ್ತು ನಮ್ಮ ಕಷ್ಟಕ್ಕೆ ಅವರಿರುತ್ತಾರೆ ಎಂದ ಅವರು, ನಾಲ್ಕು ಮುಸ್ಲಿಂ ಕುಟುಂಬ ಮತ್ತು ಹತ್ತು ಹಿಂದೂ ಕುಟುಂಬ ಸೇರಿ ಸಿಗಂದೂರು, ಬೇಲೂರು, ಹಳೆಬೀಡು, ಕೊಲ್ಲೂರು, ಮುರುಡೇಶ್ವರಕ್ಕೆ ಪ್ರವಾಸ ಹೋಗಿ ಬಂದಿದ್ದೆವು. ಆದರೆ ಅಲ್ಲಿ ಯಾವುದೇ ಹಿಂದೂ ಮುಸ್ಲಿಂ ಎಂಬ ಭಾವನೆಗಳಿರಲಿಲ್ಲʼ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

ಇದನ್ನು ಓದಿದ್ದೀರಾ? ಸಾವರ್ಕರರು ಹಿಂದುತ್ವ ಯೋಜನೆಯ ಸ್ಪಷ್ಟ ವ್ಯಾಖ್ಯಾನವನ್ನು ಎಂದಿಗೂ ನೀಡಿರಲಿಲ್ಲ

ʼವರಮಹಾಲಕ್ಷ್ಮೀ ಹಬ್ಬದಂದು ಹೋಳಿಗೆ, ಸಂಡಿಗೆ ಇತ್ಯಾದಿ ತಿನಿಸುಗಳನ್ನು ಮಾಡಿ, ಬಾಳೆಕಂಬ, ಮತ್ತು ಕಬ್ಬಿನಕಂಬಗಳನ್ನು ಇಟ್ಟು ಅಲಂಕಾರ ಮಾಡಿ ಪತ್ನಿ, ಇಬ್ಬರು ಮಕ್ಕಳು ಹಬ್ಬವನ್ನಾಚರಿಸಿ ಸಂಭ್ರಮಿಸಿದೆವು. ಈ ಸಮಯದಲ್ಲಿ ಊರಿನ ಮುಖಂಡರು ಮತ್ತು ನೆರೆಹೊರೆಯವರು ಹಾಜರಿದ್ದರು. ನಾವು ಹಿಂದೂ ದೇವಸ್ಥಾನಕ್ಕೆ ಹೋಗುವುದು, ಹಬ್ಬಗಳನ್ನು ಆಚರಿಸುವುದು ಮತ್ತು ದೇವರಿಗೆ ಕಾಯಿ ಒಡೆದು, ಕರ್ಪೂರ ಹಾಕುವುದನ್ನು ನಮ್ಮ ಸಮಾಜ ಎಂದೂ ಪ್ರಶ್ನೆ ಮಾಡಿಲ್ಲ. ನಮಗೆ ಅನಿಸಿದ್ದನ್ನು ನಾವು ನಿಸ್ಸಂಕೋಚದಿಂದ ಮಾಡುತ್ತೇವೆ ದೇವರು ಎಂದರೆ ಎಲ್ಲರಿಗೂ ಒಂದೇ. ಇದನ್ನೇ ನಾನು ನನ್ನ ಮಕ್ಕಳಿಗೂ ಕಲಿಸುತ್ತೇನೆ. ಈ ಎಲ್ಲಾ ಆಚರಣೆಗಳಿಂದ ಅವರಿಗೂ ಸಂಭ್ರಮ ಮತ್ತು ಅವರೂ ಇದನ್ನೇ ರೂಢಿಮಾಡಿಕೊಂಡು ಭಾವೈಕ್ಯತೆಯನ್ನು ಬಿಂಬಿಸುತ್ತಾರೆʼ ಎಂದು ಹೇಳುವ ಮೂಲಕ ನಜರುದ್ದೀನ್‌ ಅವರು ಭಾರತದ ಸೌಹಾರ್ದ ಪರಂಪರೆಯ ಸ್ಪಷ್ಟ ಸಂದೇಶ ಸಾರಿದ್ದಾರೆ.

ನಿಮಗೆ ಏನು ಅನ್ನಿಸ್ತು?
1 ವೋಟ್