ಕವ್ವಾಲಿಯವರು ʼಕುಲದಲ್ಲಿ ಕೀಳ್ಯಾವುದೋ...ʼ ಹಾಡು ಹಾಡುತ್ತಿದ್ದಾಗ ನನ್ನಲ್ಲಿದ್ದ ಧರ್ಮದ ಅಮಲು ಇಳಿಯಲಾರಂಭಿಸಿತ್ತು

preethi 12

ʼಅಣ್ಣಾವ್ರ ಹಾಡು ಹೇಳಿ, ಇಲ್ಲ ಅಂದ್ರೆ ನೀವೆಲ್ಲ ಪಾಕಿಸ್ತಾನಕ್ಕೆ ಸೇರಿದವ್ರು ಅಂತ ಒಪ್ಕೊಳಿʼ ಅಂತ ಕವ್ವಾಲಿ ಹಾಡುತ್ತಿದ್ದವರನ್ನು ಹಂಗಿಸಿದೆವು. ಅವರು ಶಾಂತವಾಗಿ ಹೋಗಿ ʼಕುಲದಲ್ಲಿ ಕೀಳ್ಯಾವುದೊ... ಹುಚ್ಚಪ್ಪ ಮತದಲ್ಲಿ ಮೇಲ್ಯಾವುದೊʼ ಅಂತ ಅಷ್ಟೇ ಚಂದವಾಗಿ ರಾಗಬದ್ಧವಾಗಿ ಹಾಡಲು ಪ್ರಾರಂಭಿಸಿಬಿಟ್ಟರು. ನನ್ನ ತಲೆಯಲ್ಲಿದ್ದ ಧರ್ಮದ ಅಮಲು ಇಳಿಯಲಾರಂಭಿಸಿತು.

ನಮ್ಮೂರಲ್ಲಿ ಭೂತಪ್ಪ ಚೌಡಮ್ಮ - ಸೈಯದ್ ಸಾದಾತ್ ಒಂದೇ ಕಡೆ ನೆಲೆಸಿದ್ದಾರೆ. ಉರುಸ್ಸನ್ನು ಎಲ್ಲರು ಸೇರಿ ಆಚರಿಸುತ್ತಾರೆ. ನಾನು ಕೂಡ ಪೂಜಾ ಸಾಮಗ್ರಿಯ ಅಂಗಡಿ ಇಟ್ಟು ವ್ಯಾಪಾರ ನಡೆಸಿದ್ದೆ. ಎಲ್ಲರೂ ಆತ್ಮೀಯರು, ಮನೆಯ ಸದಸ್ಯರ ಹಾಗೆ ಬಾಂಧವ್ಯವಿತ್ತು. ಕಾರಣಾಂತದಿಂದ ಅಲ್ಲಿಂದ ಹೊರಬಂದ ಕೆಲವು ಸಮಯದ ನಂತರ ಬೇರೊಂದು ವಾತಾವರಣದಲ್ಲಿದ್ದ ಪರಿಣಾಮವೊ ಅಥವಾ ಕೋಮುವಾದದ ವಿಷ ಬೀಜ ತಲೆಗೆ ಹೊಕ್ಕ ಪರಿಣಾಮವೊ, ನೆಗೆಟಿವ್ ಯೋಚನೆಗಳು ನೆಗೆಟಿವ್ ಚಿಂತನೆಗಳೇ ನನ್ನೊಳಗೆ ಸುಳಿದಾಡಲು ಶುರುವಾದವು.

ಅದು ಉರುಸ್ ಸಮಯ. ಮೂರನೆ ದಿನಕ್ಕೆ ಕವ್ವಾಲಿ ಇರುತ್ತದೆ. ಅಷ್ಟು ವರ್ಷ ಕವ್ವಾಲಿ ನಾವು ನೋಡುತ್ತಲೇ ಇರಲಿಲ್ಲ. ಆದರೆ, ಆ ದಿನ ಅಮಲಿನಲ್ಲಿದ್ದ ಪರಿಣಾಮ ಕವ್ವಾಲಿ ನಡೆಯೋ ಜಾಗಕ್ಕೆ ಹೋಗಿ ಜೋರಾಗಿ ಕೂಗಾಟ ಕಿರುಚಾಟ ಮಾಡಿ ಇರಿಟೇಟ್ ಮಾಡಲು ಶುರುಮಾಡಿದ್ದೆವು. ಕವ್ವಾಲಿ ಹಾಡುತಿದ್ದ ಒಬ್ಬರು ಕೆಳಗಿಳಿದು ಬಂದು ಸಹನೆಯಿಂದಲೇ ಯಾಕೆ ಹೀಗೆ ಮಾಡುತ್ತಿದ್ದೀರಿ ಎಂದು ಕೇಳಿದಕ್ಕೆ , ನಾವು ಅಣ್ಣಾವ್ರ ಹಾಡು ಹೇಳಿ ಇಲ್ಲ ಅಂದ್ರೆ ನೀವೆಲ್ಲ ಪಾಕಿಸ್ತಾನಕ್ಕೆ ಸೇರಿದವ್ರು ಅಂತ ಒಪ್ಕೊಳಿ ಅಂತ ಹಂಗಿಸಿದೆವು. ಅವರು ಶಾಂತವಾಗಿ ಹೋಗಿ ʼಕುಲದಲ್ಲಿ ಕೀಳ್ಯಾವುದೊ... ಹುಚ್ಚಪ್ಪ ಮತದಲ್ಲಿ ಮೇಲ್ಯಾವುದೊʼ ಅಂತ ಅಷ್ಟೇ ಚಂದವಾಗಿ ರಾಗಬದ್ಧವಾಗಿ ಹಾಡಲು ಪ್ರಾರಂಬಿಸಿಬಿಟ್ಟರು. ಜಾತಿ ಧರ್ಮ ಎನ್ನದೆ ಅಲ್ಲಿದ್ದ ಜನರೆಲ್ಲ ಆ ಹಾಡಿಗೆ ಕುಣಿಯುತಿದ್ದಾಗ ನನ್ನ ತಲೆಯಲ್ಲಿದ್ದ ಧರ್ಮದ ಅಮಲು ಇಳಿಯಲಾರಂಭಿಸಿತು. ಬಾಲ್ಯದ ದಿನಗಳ ನೆನಪೆಲ್ಲ ಒಂದೊಂದಾಗೆ ಕಾಡಲಾರಂಬಿಸಿದವು

ಫ್ರಾಂಕಿ ವಾಲ್ಟಿ ನನ್ನ ಸಹೋದರ ರೀತಿಯೆ ಇದ್ದರು. ಮಾವಿನ ಹಣ್ಣಿನ ಸೀಸನ್ನಿನಲ್ಲಂತು ನಮಗಿಷ್ಟ ಅಂತ ದಿನ ಮನೆಗೆ ಬರುವಾಗಲೆಲ್ಲ ಯಾವ ಮರ ಹತ್ತೊ, ಕಲ್ಲೊಡೆದೊ ತಂದು ಕೊಡುತ್ತಿದ್ದರು. ಒಂದಿನ ಫ್ರಾಂಕಿ ಮಾವಿನಹಣ್ಣು ಸಿಗದೇ, ಮನೆಯಲ್ಲಿ ಹಾಕಿದ ಮಿಡಿ ಉಪ್ಪಿನಕಾಯಿ ತಂದು ಕೊಟ್ಟುಬಿಟ್ಟಿದ್ದ, ನಿಸ್ವಾರ್ಥ ಗೆಳೆಯ.

ಐದನೆ ಕ್ಲಾಸೊ, ಆರನೆ ಕ್ಲಾಸಿನಲ್ಲಿ ಬಾಬುವಿನೊಂದಿಗೆ ಕುಸ್ತಿ ಮಾಡಿಕೊಂಡು ಮಾತು ಬಿಟ್ಟು ಒಂದು ವಾರವಾಗಿತ್ತು.  ಇತ್ತೀಚೆಗೆ ಬಾಬು ಮನೆಗೆ ಯಾಕೆ  ಬರ್ತಿಲ್ಲ ಅಂತ ಅಪ್ಪ  ಕೇಳ್ತಿದ್ದರು. ನಾನು ಏನು ಹೇಳ್ತಿರಲಿಲ್ಲ. ಒಂದಿನ ಬಾಬು ತಂದೆ ಪೊಲೀಸ್‌ ಡ್ಯೂಟಿ ಡ್ರೆಸಲ್ಲೇ ಬಾಬುನ ನಮ್ಮನೆಗೆ ಕರ್ಕೊಂಡು ಬಂದು, ಇಬ್ರು ಫೈಟಿಂಗ್ ಮಾಡ್ಕೊಂಡು ಮಾತು ಬಿಟ್ಟಿದಾರೆ. ಆ ರೂಮಲ್ಲಿ ಇಬ್ರಿಗೂ ಒಂದಿನ  ಕೂಡಾಕಿ ಅಂತ ನಮ್ಮ ಅಪ್ಪನಿಗೆ ಹೇಳಿ ನಮ್ಮಿಬ್ಬರ ತಲೆಗೆ ಕುಕ್ಕಿ. ಸಂಜೆ ಬಂದು ನಾನೇ ಕರ್ಕೊಂಡು ಹೋಗ್ತಿನಿ, ಅಲ್ಲಿವರೆಗೂ ಇಲ್ಲೇ ಇರಬೇಕು ಅಂತ ಹೇಳಿ ಹೋಗಿದ್ದರು.

ಬೇಸಿಗೆ ಬಂತೆಂದರೆ ಕೈರುಗುಂದ ಅನ್ನೊ ಮುಳುಗಡೆ ಪ್ರದೇಶದಲ್ಲಿ ಈಜು ಹೊಡೆಯಲು ಹೋಗುತ್ತಿದ್ದೆವು. ಆ ಜಾಗದಲ್ಲಿ ಮುಳುಗುತಿದ್ದ ನನ್ನ ಕಾಪಾಡಿದ್ದು ಅಣ್ಣ ಜಾನಿ. ಇವರೆಲ್ಲರ ಸ್ನೇಹದಿಂದಲೊ ಒಡನಾಟದಿಂದಲೊ ಹೈಸ್ಕೂಲಿಗೆ ಹೋಗುವಾಗ ಮೊದಲು ಸಿಗುತಿದ್ದ ಮಾಸ್ತಿಯಮ್ಮ ಗುಡಿಗೂ, ನಂತರ ಚರ್ಚಿಗೆ, ಆಮೇಲೆ ಮಸೀದಿಗೂ ಕೈ ಮುಗಿದು ಹೋಗುತ್ತಿದ್ದೆ.

ಒಂದು ಸಮಯದಲ್ಲಿ ಶಕ್ತಿಮಾನ್ ಅನ್ನೊ ಕಾಮಿಕ್ಸ್ ಧಾರಾವಾಹಿ ಹೆಚ್ಚು ಜನಪ್ರಿಯ. ಅದನ್ನು ನೋಡಿ ಕೆಲ ಮಕ್ಕಳು ಕಟ್ಟಡದಿಂದ ಹಾರಿ ಬಿದ್ದು ಅನಾಹುತಗಳು ಆದ ವಿಷಯಗಳು ಪೇಪರಿನಲ್ಲಿ ಓದಿದ್ದೆ. ಒಂದು ಸಲ ಚಿಕ್ಕ ಮಕ್ಕಳು ಅಂದರೆ ಒಂದರಿಂದ ಐದನೆ ಕ್ಲಾಸ್ ಇರಬಹುದು. ಬಸ್ಸಿಳಿದು ಜೊರಾಗಿ ಶಕ್ತಿಮಾನ್ ಅಂತ ಓಡುತ್ತಿದ್ದರು. ನಾನು ಅವರನ್ನು ನಿಲ್ಲಿಸಿ ಅದರ ಅನಾಹುತಗಳ ಬಗ್ಗೆ ತಿಳಿಹೇಳಿ ಬೀಳ್ಕೊಟ್ಟೆ. ಮುಂದಿನ ದಿನ ಅದೆ ಮಕ್ಕಳು ನನ್ನ ನೋಡಿ ಜೈ ಹನುಮಾನ್ ಅಂತ ಹೇಳಿ ಓಡೋದಕ್ಕೆ ಶುರು ಮಾಡಿದವು (ಜೈ ಹನುಮಾನ್ ಕೂಡ ಅವಾಗ ಜನಪ್ರಿಯ ಧಾರಾವಾಹಿ ಆಗಿತ್ತು) ಯಾಕ್ರಪ್ಪ ಶಕ್ತಿಮಾನ್ ಇಲ್ವ ಇವಾಗ ಅಂದ್ರೆ, ನೀವೆ ಹೇಳುದ್ರಲ್ವಾ ಅಂಕಲ್ ಶಕ್ತಿಮಾನ್ ನೋಡಿ ಅದೆ ರೀತಿ ಅನುಕರಣೆ ಮಾಡಬಾರದು ಅಂತ, ಅದಿಕ್ಕೆ ಜೈ ಹನುಮಾನ್ ನೋಡ್ತಿದೀವಿ ಅನ್ನಬೇಕೆ. ಆಗಷ್ಟೇ ಮಕ್ಕಳು ಮದರಸದಿಂದ ಬಂದಿದ್ದರು!.

ಕೆಲ ವರ್ಷಗಳ ಹಿಂದೆ ತಿರುಪತಿಗೆ ಹೋದಾಗ ಮುಸ್ಲಿಂ ಸ್ನೇಹಿತೆಯ ಕಾಲ್ ಬಂದಿತ್ತು. ಎಲ್ಲಿದ್ದಿಯಾ ಅಂದ್ಲು, ತಿರುಪತಿ ಬೆಟ್ಟ ಹತ್ತುತ್ತಿದ್ದೀನಿ ಅಂದೆ. ಕಾಲ್ ಕಟ್ ಮಾಡಿ ಸ್ವಲ್ಪ ಸಮಯದ ನಂತರ ಮತ್ತೆ ಕಾಲ್ ಮಾಡಿದಳು. ನಿನ್ ಅಕೌಂಟಿಗೆ ನೂರಾ ಒಂದು ರೂಪಾಯಿ ಹಾಕಿದಿನಿ, ನನ್ನ ಪರವಾಗಿ ಕಾಣಿಕೆ ಹಾಕು. ಆಮೇಲೆ ಅಲ್ಲಿ ಕಲ್ಲು ಮೇಲೆ ಕಲ್ಲಿಟ್ಟು ಮನೆ ಕಟ್ಟಲು ಹರಕೆ ಹೊರುತ್ತಾರಂತೆ, ನೀನು ಹಾಗೆ ಮಾಡು. ಇನ್ನೊಂದು ನನಗಾಗಿ ಕಲ್ಲು ಕಟ್ಟಿ ಬಾ. ನಾನು ಮನೆ ಕಟ್ಟಬೇಕು, ನನ್ನ ಪರವಾಗಿ ಹರಕೆ ಮಾಡಿ ಬಾ. ಮನೆ ಕಟ್ಟಿದ ಮೇಲೆ ತಿರುಪತಿಗೆ ನಮ್ಮನ್ನು ಕರೆದುಕೊಂಡು ಹೋಗು ಅಂತ ತಿಳಿಸಿದಳು.

ಇದನ್ನು ಓದಿದ್ದೀರಾ? ಅವನಿಗೆ ನಾನೇ ಅಲ್ಲಾಹು, ನನಗೆ ಅವನೇ ಈಶ್ವರ!

ಇವತ್ತಿನ ದಿನದಲ್ಲಿ ಮಸೀದಿಯಲ್ಲಿ ಮಂದಿರ ಹುಡುಕುವವರು, ನಮ್ಮ ದೇವರುಗಳಿಗೆ ಹರಕೆ ಹೊರುವವರನ್ನು, ನಮ್ಮ ದೇವಸ್ಥಾನಗಳಿಗೆ ಹೋಗಿ ಹರಕೆ ಸಲ್ಲಿಸುವವರನ್ನು ನೋಡಿ ಕಲಿಯಬೇಕಾದದ್ದು ತುಂಬಾ ಇದೆ. ಎಷ್ಟೋ ಜನ ಹಿಂದುಗಳು ಕ್ರಿಸ್‌ಮಸ್ ಹಬ್ಬಗಳಲ್ಲಿ ಸಾಂತಾಕ್ಲಾಸ್ ವೇಷ ಧರಿಸಿದ್ದಾರೆ, ಮುಸ್ಲಿಂ, ಕ್ರಿಶ್ಚಿಯನ್ ಮಕ್ಕಳು ಕೃಷ್ಣನ ವೇಶ ಧರಿಸಿ ಸಹಬಾಳ್ವೆ ಸೂಚಿಸಿದ್ದಾರೆ.
ಆದರೂ ಅನ್ಯ ಧರ್ಮಿಯರನ್ನು ಪರಕೀಯರಂತೆ ನೋಡುವುದು ಎಷ್ಟು ಅಸಮಂಜಸ ? ಹಿಂದೂ, ಮುಸ್ಲಿಂ, ಕ್ರೈಸ್ತರು ಅಂತ ಬೇರೆಯಾಗಿ ನೋಡದೇ ಮನುಷ್ಯತ್ವದ ಮೌಲ್ಯವನ್ನು ಅರಿತು ಬದುಕು ಸಾಗಿಸೋಣ. ಸೌಹಾರ್ದಯುತ ಸಮಾಜ ಕಟ್ಟಲು ಇಟ್ಟಿಗೆಯಾಗೊಣ.

ನಿಮಗೆ ಏನು ಅನ್ನಿಸ್ತು?
13 ವೋಟ್