'ಮಾನವ ಪ್ರೇಮದ ನಶೆ ಅಂಟಿಸುತ್ತಾ, ದ್ವೇಷದ ಗಾಳಿಯ ಎದುರಿಸೋಣ'

Preethi

ನಾವು ಚಿಕ್ಕವರಾಗಿದ್ದಾಗ ನಮ್ಮವ್ವ ಅಲ್ಲಾಸ್ವಾಮಿಗೇಂತ ಹಬ್ಬದ ಮುನ್ನಾದಿನವೇ ಹೆಪ್ಪು ಹಾಕುವುದಿತ್ತು. ಥೇಟ್‌ ಅವಳ ಮನೆ ದೇವರು ಬಸವಣ್ಣನಿಗೆ ಹೆಪ್ಪು ಹಾಕುವ ತೆರದಿ. ನಾವು ನಸುಕಿಲೇ ಎದ್ದು ಮೊಸರು ಡಬ್ಬಿ ಹಿಡಿದು ಗೆಳತಿ ಮಾಜವ್ವಳ ಮನೆಗೆ ಹೋಗ್ತಿದ್ವಿ. ಅವರೂ ಅಷ್ಟೇ ಸಂಜೆಗೆ ನಮ್ಮನೆಗಳಿಗೆ ಸುರ್ ಕುರ್ಮಾ, ಗೋಡೆ, ಮಸಾಲೆ ಅನ್ನ ಕೊಡುವುದಿತ್ತು.

ಉತ್ತರ ಕರ್ನಾಟಕದ ನಮ್ಮೂರುಗಳಲ್ಲಿ ಮತ ಸೌಹಾರ್ದ ಎಲ್ಲೆಲ್ಲೂ ಕಾಣಸಿಗುವ ಅಂಶ.ಅದರಲ್ಲೂ ಹಿಂದೂ-ಮುಸ್ಲಿಂ ಸೌಹಾರ್ದಕ್ಕೆ ಇಲ್ಲಿ ಕೊರತೆ ಇಲ್ಲ. ಕರ್ನಾಟಕದ ಕೆಲವೆಡೆಯಂತೆ ಗಲಾಟೆಗಳಾಗುವುದು ಇಲ್ಲವೇ ಇಲ್ಲ ಎನ್ನುವಷ್ಟು ಅಪರೂಪ. ಇಲ್ಲಿ ಇಸ್ಲಾಂ ಒಂದು ಜಾತಿ ಅಷ್ಟೇ. ಹಬ್ಬಗಳನ್ನೂ ಸಹ ಭಾವೈಕ್ಯತೆಯಿಂದ ಆಚರಿಸುವುದಿದೆ. ಮೊಹರಂನಲ್ಲಿ ಹಿಂದೂಗಳು ಹಗಲು-ರಾತ್ರಿಯೆನ್ನದೇ ಆಲಾವಿ ಹೆಜ್ಜೆ ಹಾಕುತ್ತಾ ಖವ್ವಾಲಿ ಹಾಡುವಾಗಾಲೂ ಯಾವುದೇ ಭೇದ-ಭಾವ ಸುಳಿಯುವುದಿಲ್ಲ.

ನಾವು ಚಿಕ್ಕವರಾಗಿದ್ದಾಗ ನಮ್ಮವ್ವ ಅಲ್ಲಾಸ್ವಾಮಿಗೇಂತ ಹಬ್ಬದ ಮುನ್ನಾದಿನವೇ ಹೆಪ್ಪು ಹಾಕುವುದಿತ್ತು. ಥೇಟ್‌ ಅವಳ ಮನೆ ದೇವರು ಬಸವಣ್ಣನಿಗೆ ಹೆಪ್ಪು ಹಾಕುವ ತೆರದಿ. ನಾವು ನಸುಕಿಲೇ ಎದ್ದು ಸ್ನಾನ ಮಾಡಿ ಮೊಸರು ಡಬ್ಬಿ ಹಿಡಿದು ಗೆಳತಿ ಮಾಜವ್ವ(ಮಾಜಾನಬಿ)ಳ ಮನೆಗೆ ಹೋಗ್ತಿದ್ವಿ. ಅವರೂ ಅಷ್ಟೇ ಸಂಜೆಗೆ ನಮ್ಮನೆಗಳಿಗೆ ಸುರ್'ಕುರ್ಮಾ, ಗೋಡೆ, ಮಸಾಲೆ ಅನ್ನ ಕೊಡುವುದಿತ್ತು. ಆಲೇ ಹಬ್ಬದ ದಿನ ಊರಿನ ಎಲ್ಲಾ ಜನ ಹೊಸ ಬಟ್ಟೆ ತೊಟ್ಟು ಗುಂಪು ಗುಂಪಾಗಿ ಹೋಗಿ ದೇವರು ಹೊಳೆಗೆ ಹೋಗೋದು ನೋಡೋದಕ್ಕೆ ಸೇರೋದಿದೆ. ಟಿವಿ, ಪೇಪರುಗಳಲ್ಲಿ  ತೋರಿಸುವಂತೆ ಹಿಂದೂ ದೇವರು, ಮುಸಲ್ಮಾನ ದೇವರು ಅನ್ನುವ ಕಲ್ಪನೆಯೇ ಇಲ್ಲದಷ್ಟು ಮುಗ್ದರು.ಒಂದು ಸಲ ಮೈಸೂರಿಗೆ ಹೋದಾಗ ಚರ್ಚ್ ನೋಡಿದ ನಮ್ಮವ್ವ ನಿಂತು, ಕೈಮುಗಿದು ಬಂದಿದ್ಳು. ಊರಿಗೆ ಬಂದಮೇಲೆ ಕಂಡ ಕಂಡವರಿಗೆಲ್ಲಾ, 'ಯೇಸು ಸ್ವಾಮಿ ಗುಡಿ ಅಂದ್ರ ಗುಡಿ. ಅಷ್ಟು ಚೆಂದೈತಿ' ಅಂತಾ ವರ್ಣನೆ ಮಾಡ್ತಿದ್ಳು. ನಮ್ಮೂರಿನ ಜಾತ್ರೆಗೆ ದೂರದೂರುಗಳಲ್ಲಿ ವಾಸವಿರುವ ಮುಸ್ಲಿಂ ಸಮುದಾಯದ ಮನೆಯ ಜನ, ಹೆಣ್ಣುಮಕ್ಕಳು ತಪ್ಪದೇ ಬರುವುದಿದೆ. ಯಾವ ಹಬ್ಬಕ್ಕೆ ತಪ್ಪಿಸಿದರೂ ಊರ ಜಾತ್ರೆಗೆ ಮಾತ್ರ ಊರಿನವರೆಲ್ಲ ಹಾಜರು.

ಬಹುಶಃ ಕೋವಿಡ್ ಸಮಯದಲ್ಲಿ ಜನಗಳ ಬಾಯಲ್ಲಿ ಮುಸ್ಲಿಂ ಸಮುದಾಯದವರ ಬಗ್ಗೆ ಗುಮಾನಿಯ ಮಾತಾಡುವುದನ್ನು ಮೊದಲ ಬಾರಿ ನಾನು ಕೇಳಿಸಿಕೊಂಡದ್ದು. ವಾಟ್ಸಪ್, ಟಿವಿಗಳು ಮಾಡಿದ ಅನಾಹುತ ಅದು. ಒಣ ಮೆಣಸಿನಕಾಯಿ ಮಾರಲು ಬಂದ ಸವಣೂರಿನ ಸಾಹೇಬರೊಬ್ಬರನ್ನ ಬಾಯಿಗೆ ಬಂದಂತೆ ಅಂದು ಕಳಿಸಿದ್ದರು. ಮೊನ್ನೆ ಧಾರವಾಡದ ನಬೀಸಾಬರನ್ನು ಕಲ್ಲಂಗಡಿ ಮಾರದಂತೆ ತಾಕೀತು ಮಾಡಿದ್ದು ಇದೇ ಅನಾಹುತದ ವಿಸ್ತೃತ ರೂಪ. ಮುಸ್ಲಿಂ ಅನ್ನೋದು ಒಂದು ಜಾತಿಯಾಗೇ ಇದ್ದದ್ದು ಮತವಾಗಿ ಕಾಣಿಸುವಂತೆ ಮಾಡಿದವರ ಹುನ್ನಾರ ಫಲ ನೀಡಿರಬೇಕು.

ಕರಾವಳಿ ಕರ್ನಾಟಕ ಭಾಗದ ಸ್ನೇಹಿತರು ತಮ್ಮ ನೋವಿನ ಕುರಿತು ಮಾತಾಡುವಾಗ ಹೀಗೂ ಇದೆಯಾ ಅಂತ ಮೊದಮೊದಲು ಆಶ್ಚರ್ಯವಾಗೋದು. 'ಹೇ ನಮ್ಮಲ್ಲಿ ಇದೆಲ್ಲ ಇಲ್ಲ ಬಿಡ್ರಿ' ಅಂತ ಚೂರು ಗರ್ವದಿಂದ ಹೇಳಿಕೊಳ್ಳುತ್ತಿದ್ದೆ. ಈಗೀಗ ಉತ್ತರ ಕರ್ನಾಟಕ ಕೂಡ ಸೌಹಾರ್ದತೆಯ ನೆಲವಾಗಿ ಉಳಿಯುವ ಲಕ್ಷಣಗಳು ಕಾಣಿಸ್ತಿಲ್ಲ. ಇಲ್ಲಿ ಹಿಂದೂ-ಮುಸ್ಲಿಂ ಭಾವೈಕ್ಯ ಸಾರುವ ಅನೇಕ ದೇವಾಲಯ, ಮಸೀದಿಗಳಿವೆ. ಶಿರಹಟ್ಟಿಯ ಫಕೀರೇಶ್ವರ, ವರವಿಯ ಮೌನೇಶ, ತಿಂಥಿಣಿಯ ಮೌನೇಶ, ಶಿಶುವಿನಾಳ ಮುಂತಾದ ಸ್ಥಳಗಳು ಭಾವೈಕ್ಯ ಸಾರುತ್ತಲಿವೆ. ಇಲ್ಲಿಗೆ ನಡೆದುಕೊಳ್ಳುವವರಲ್ಲಿ ಎಲ್ಲಾ ಧರ್ಮೀಯರೂ ಇದ್ದಾರೆ.

Image
ಮೊಹರಂ ಮೆರವಣಿಗೆ - ಸಾಂಕೇತಿಕ ಚಿತ್ರ
ಮೊಹರಂ ಮೆರವಣಿಗೆ - ಸಾಂಕೇತಿಕ ಚಿತ್ರ

ನಮ್ಮ ಮನೆಯಲ್ಲಿ ಬಸವಣ್ಣನವರ ಬಗ್ಗೆ, ಹರಿಶ್ಚಂದ್ರನ ಬಗ್ಗೆ, ಹಾಡು, ಕತೆ, ನಾಟಕಗಳನ್ನ ಕೇಳಿಸಿಕೊಂಡಷ್ಟೇ ಪ್ರಮಾಣದಲ್ಲಿ ಶರೀಫ ಸಾಹೇಬರು, ಗೋವಿಂದ ಭಟ್ಟರ ಕತೆ, ತತ್ವಪದಗಳನ್ನ ಕೇಳಿಸಿಕೊಂಡಿದ್ದಿದೆ. ನಮ್ಮ ಊರಿನ ದೇವಸ್ಥಾನಗಳಲ್ಲಿ ಹಬ್ಬದ ದಿನಗಳಲ್ಲಿ ಈಗಲೂ ಸಹ ಮೈಕಿನಲ್ಲಿ ಶರೀಫರ ತತ್ವಪದಗಳು ಕೇಳುವುದರೊಂದಿಗೆ ಬೆಳಗು ಶುರುವಾಗುವುದಿದೆ. ಗುರುರಾಜುಲು ನಾಯ್ಡು ಬಾಯಲ್ಲಿ ನಳ-ದಮಯಂತಿಯ ಕತೆ,ಶನೇಶ್ವರನ ಕತೆ ಕೇಳಿಸಿಕೊಂಡಷ್ಟೇ ಪ್ರೀತಿಯಿಂದ ಶರೀಫರ 'ತೊಗಲ ಮಲ್ಯಾಗಿನ ಹಾಲ ಕುಡಿದು ನೀವು ಶೀಲ ಮಾಡತೀರಿ ಹಗಲೆಲ್ಲ' ಅಂತ ಕೇಳುತ್ತ ಬೆಳೆದವರು ನಾವು. ಹಿಂದೂ-ಮುಸ್ಲಿಂ ಹುಡುಗ, ಹುಡುಗಿ ಮದುವೆಯಾದರೆ  ಇತರ ಅಂತರ್ಜಾತಿ ವಿವಾಹದಂತೆ ಅದೂ ಒಂದೆಂದು ಭಾವಿಸುತ್ತಾರೆಯೇ ಹೊರತು ಈ ಲವ್ ಜಿಹಾದು, ಮತ್ತೊಂದು ಪದಗಳು ಈಗೀಗ ವಾಟ್ಸಪ್ ಮೂಲಕ ಯುವ ಜನರ, ಮಕ್ಕಳ ಕಿವಿಗೆ ಬಿದ್ದು ತಲೆಗೆ ಹೋಗುತ್ತಲಿವೆ.

ಒಳ್ಳೆಯತನ, ಕೆಟ್ಟತನಕ್ಕೆ ಜಾತಿ-ಧರ್ಮ ಕಾರಣವಲ್ಲ

ಆದರೆ ನಮ್ಮೂರುಗಳು ಅಷ್ಟು ಸುಲಭವಾಗಿ ಹಾಳಾಗಲಾರವಾದರೂ ವಿಷ ಹಾಗೇ ಹರಿಯುತ್ತಿದ್ದರೆ ಕೊಲ್ಲದೇ ಹೋದೀತೇ?
ನನ್ನ ಕ್ಲಾಸ್'ಮೇಟ್ಸ್ ಕೆಲವರು ಕೆಲವು ಜಾತಿ, ಧರ್ಮಗಳ ಜನರ ಕುರಿತು ಕೆಲವು ಪೂರ್ವಾಗ್ರಹ ಪೀಡಿತ, ಅವರಿಗೇ ಗೊತ್ತಿಲ್ಲದಂತೆ ಅವರ ತಿಳುವಳಿಕೆಯಲ್ಲಿ ನುಸುಳಿ ಬಂದ ಮಾತುಗಳನ್ನು ಆಡುವುದಿದೆ/ಆಡುವುದಿತ್ತು. 'ಹೇ, ಆ ಮಂದಿನಾ? ದಿನಾಲೂ ಜಳಕ ಮಾಡಲ್ಲ ಅವ್ರಾ? ಹೇ ಸ್ವಚ್ಛ ಇರಲ್ಲ ಆ ಮಂದಿ, ಕಳ್ಳರು, ಸುಳ್ಳರು' ಅಂತ ಆಡುವುದು ಕೇಳಿದಾಗ ಸಿಟ್ಟು ಬರೋದು. ಆಗ ಅದೇ ಜಾತಿಗಳವರು ಅವರ ಆತ್ಮೀಯರ ಲಿಸ್ಟಿನಲ್ಲಿರೋದನ್ನ ತೋರಿಸಿದಾಗ ಮುಖ ಕಿವುಚಿಕೊಂಡು ಸುಮ್ಮನಾಗೋರು. ಒಳ್ಳೆಯತನ, ಕೆಟ್ಟತನಕ್ಕೆ ಜಾತಿ, ಧರ್ಮ ಕಾರಣವಲ್ಲ. ನಿಮ್ಮ ಸುತ್ತಲೇ ಎಷ್ಟೊಂದು ದುರುಳರು ನಿಮ್ಮದೇ ಜಾತಿಯಲ್ಲಿ ಇಲ್ಲ?ಎಷ್ಟೊಂದು ನೋವು ಕೊಟ್ಟಿಲ್ಲ? ಅಂತ ಪ್ರಶ್ನಿಸ್ತಿದ್ದೆ. ಆದರೆ ಇತ್ತೀಚಿನ ಕೋವಿಡ್ ಟೈಂ ವಾಟ್ಸಪ್ ಯುನಿವರ್ಸಿಟಿ ತಂದು ಹಾಕಿದ ಯೂಟ್ಯೂಬ್ ವೀಡಿಯೋ, ಫೇಕ್ ನ್ಯೂಸ್ ಸರಕು, ತಿರುಚಿದ ಫೋಟೋಗಳು ಮಾಡಿದ ಅನಾಹುತವನ್ನು ಮುಗ್ಧ ಜನರು ನಂಬಿರೋದು ಸತ್ಯ.

ಇದನ್ನು ಓದಿದ್ದೀರಾ: ಸಾಯಿರಾಳ ಪುಟ್ಟ ಮನೆಯಲ್ಲಿ ಪ್ರೀತಿಗೇನೂ ಬರವಿರಲಿಲ್ಲ

ನನ್ನ ಗೆಳತಿಯ ಅಕ್ಕ ಒಬ್ರು ತುಂಬಾ ಒಳ್ಳೆಯ ಹೆಣ್ಣುಮಗಳು, 'ಯುಟ್ಯೂಬ್ ಒಳಗ ಬಂದೈತಿ, ಮುಗೀತು ಅದೆಲ್ಲ ನಿಜ' ಅಂತ ಮುಸ್ಲಿಂ ಸಮುದಾಯದ ಬಗ್ಗೆ  ಮಾತಾಡಿದ ದಿನ ನನಗೆ ಈ ಫೇಕ್ ವಿಷಯಗಳು ಸೃಷ್ಟಿಸಿದ ಅನಾಹುತದ ಕಲ್ಪನೆ ಬಂದದ್ದು.
ಆಗ ಅವರ ಮನೆಗೆ ತುಂಬಾ ವರ್ಷಗಳಿಂದ (ಆ ಅಕ್ಕ ಹುಟ್ಟೋದಕ್ಕೂ ಮೊದಲಿಂದ) ಒಳ್ಳೆಯ ಬಂಧ ಇಟ್ಕೊಂಡ ಮುಸ್ಲಿಂ ಕುಟುಂಬದ ಉದಾಹರಣೆ ಕೊಟ್ಟಿದ್ದೆ. ಒಂದೇ ಮನೆತನದಂತೆ ಇರುವ ಅವರೂ ಕೆಟ್ಟವರಾ? ಅಂದಾಗ ಅಷ್ಟೇನೂ ಓದಿಲ್ಲದ ಆಕೆ,' ಹೌದಲ್ಲ. ಅವ್ರು ಭಾಳ ಒಳ್ಳೇವ್ರು' ಅಂದು, ಆಮೇಲೆ ಕೋವಿಡ್ ಸುದ್ದಿ ಬಂದಾಗಲೆಲ್ಲ ಫೇಕ್ ಸುದ್ದಿಯನ್ನು ಶಪಿಸಿ ಮಾತಾಡೋರು.

ನಮ್ಮ ಸುತ್ತಲಿನ ಜನರಿಗೆ, ನಮ್ಮ ಸಂಪರ್ಕಕ್ಕೆ ಸಿಗುವ ಒಂದೆರಡು ಜನರಿಗಾದರೂ ಈ ಮಾನವ ಪ್ರೇಮದ ನಶೆ ಅಂಟಿಸುತ್ತಾ ಹೋಗುವುದೇ ದ್ವೇಷದ ಗಾಳಿಯ ಎದುರಿಸುವ ದಾರಿ. ಶಿಕ್ಷಣ ಕ್ಷೇತ್ರದಲ್ಲಿರೋರು ಮಕ್ಕಳಿಗೆ ಪ್ರತಿಯೊಂದು ವಿಷಯವನ್ನೂ ಪ್ರಶ್ನಿಸದೆ ಒಪ್ಪಬಾರದೆಂಬ ಸಣ್ಣ ವಿಷಯ ಕಲಿಸಿದರೂ ಸಾಕು. ಯಾವುದೇ ಮೌಢ್ಯವನ್ನ, ಸುಳ್ಳನ್ನ ಪ್ರಶ್ನಿಸದೇ ಒಪ್ಪದಿರುವ ಆರೋಗ್ಯವಂತ ಭವಿಷ್ಯವನ್ನ ಕಟ್ಟಬಹುದು.

ನಿಮಗೆ ಏನು ಅನ್ನಿಸ್ತು?
1 ವೋಟ್