ಮುಸ್ಲಿಮರೇ ಇಲ್ಲದ ಸೈಂದೂರು ಗ್ರಾಮದಲ್ಲಿ ಮೊಹರಂ ಆಚರಣೆ

moharm

ಸಾಗರ ತಾಲೂಕಿನ ಸೈಂದೂರು ಗ್ರಾಮವು ಸುಮಾರು 230 ಹಿಂದೂ ಕುಟುಂಬಗಳನ್ನು ಹೊಂದಿದ್ದು, ಯಾವುದೇ ಮುಸ್ಲಿಂ ಕುಟುಂಬವಿಲ್ಲ. ಈ ಗ್ರಾಮದಲ್ಲಿ  ಸತ್ಯನಾರಾಯಣ, ಶಿವಲಿಂಗ, ರಾಮೇಶ್ವರ ದೇವಸ್ಥಾನಗಳು ಒಂದೇ ಕಡೆ ಕಾಣಸಿಗುವುದು ವಿಶೇಷವಾಗಿದೆ. ಅದಕ್ಕಿಂತಲೂ ವಿಶೇಷವೆಂದರೆ ಆ ಊರಿನಲ್ಲಿ ಹಿಂದೂಗಳ ಮೊಹರಂ ಆಚರಣೆ

ಮುಸ್ಲಿಮರೇ ಇಲ್ಲದ ಗ್ರಾಮದಲ್ಲಿ ಹಿಂದೂ ಧರ್ಮೀಯರೆಲ್ಲರೂ ಒಟ್ಟಾಗಿ, ಐದು ದಿನಗಳ ಕಾಲ ಮೊಹರಂ ಹಬ್ಬವನ್ನು ಸಂಭ್ರಮದಿಂದ ಆಚರಿಸಿ, ಸಾಗರ ತಾಲೂಕಿನ ಸೈಂದೂರು ಗ್ರಾಮದ ಜನರು ಸೌಹಾರ್ದತೆಯನ್ನು ಮೆರೆದಿದ್ದಾರೆ.

ಮೊಹರಂ ಹಬ್ಬ ಬರುತ್ತಿದ್ದಂತೆ ಪ್ರತಿಯೊಬ್ಬರ ಮನೆಗೂ ಇಂತಿಷ್ಟು ಎಂಬಂತೆ  ಚಂದಾ ಹಾಕಿ ನಿಗದಿಪಡಿಸಿಕೊಂಡು ಮುಸ್ಲಿಂ ಪೂಜಾರಿಯನ್ನು ಕರೆಸಿ, ಗ್ರಾಮದ ಮಧ್ಯಭಾಗದಲ್ಲಿರುವ ಅಲಾವಿ ಗುಡಿಯಲ್ಲಿ ಐದು ದಿನಗಳ ಕಾಲ ವಿಶೇಷ ಪೂಜೆ ನೆರವೇರಿಸುತ್ತಾರೆ.

ಸಾಗರ ತಾಲೂಕಿನ ʼಸೈಂದೂರು ಗ್ರಾಮವು ಸುಮಾರು 230 ಹಿಂದೂ ಕುಟುಂಬಗಳನ್ನು ಹೊಂದಿದ್ದು, ಯಾವುದೇ ಮುಸ್ಲಿಂ ಕುಟುಂಬವಿಲ್ಲ. ದೇವಾಲಯದ ತೊಟ್ಟಿಲು ಎಂದೇ ಕರೆಯುವ ಈ ಗ್ರಾಮದಲ್ಲಿ  ಸತ್ಯನಾರಾಯಣ, ಶಿವಲಿಂಗ, ರಾಮೇಶ್ವರ ದೇವಸ್ಥಾನಗಳು ಒಂದೇ ಕಡೆ ಕಾಣಸಿಗುವುದು ವಿಶೇಷವಾಗಿದೆ.

ಆದರೆ ಈ ಊರಿನ ಮತ್ತೊಂದು ವಿಶೇಷ ಮೊಹರಂ ಆಚರಣೆ. ಹಿಂದೂಗಳೇ ಸೇರಿ ಮುಸ್ಲಿಂ ಪೂಜಾರಿ ಜೊತೆ ಸೇರಿ ಐದು ದಿನಗಳ ಕಾಲ ಅಲಾವಿ ದೇವರ ಪೂಜೆ ಮಾಡುತ್ತಾರೆ. ಈ ಬಗ್ಗೆ ಈ ದಿನ.ಕಾಮ್‌ ಜೊತೆ ಮಾತನಾಡಿದ ಅಲ್ಲಿನ ಗ್ರಾಮಸ್ಥರಾದ ರಘು ಹಬ್ಬದ ಆಚರಣೆಯ ವಿಧಿವಿಧಾನದ ಬಗ್ಗೆ ಹಂಚಿಕೊಂಡಿದ್ದಾರೆ.
 
ಮೊದಲನೇ ದಿನ ಅಲಾವಿ ಗುಡಿಯಲ್ಲಿ ಕೂಡಿಡುವ ವಿಗ್ರಹವನ್ನೆಲ್ಲಾ ಹೊಳಪುಗೊಳಿಸಲು ಊರಿನ ಶೆಟ್ಟ್ರಿಗೆ ಕೊಡುತ್ತಾರೆ ಮತ್ತು ದೇವಸ್ಥಾನದ ಮುಂದೆ ಕೊಂಡ ತೆಗೆಯಲಾಗುತ್ತದೆ. ಅಲ್ಲಿ ಹಿಂದಿನ ವರ್ಷದ ಕೆಂಡ ಮತ್ತು ಬೂದಿ ಇನ್ನೂ ಹಾಗೆಯೇ ಇರುತ್ತದೆ. ಎರಡನೇ ದಿನ ಪ್ರಾತಃಕಾಲದಲ್ಲಿ ಮುಸ್ಲಿಂ ಪೂಜಾರಿ ಬೆಲ್ಲ ಸಕ್ಕರೆ ನೈವೇದ್ಯ ಅರ್ಪಿಸಿ ಅಲಾವಿ ದೇವರ ಪೂಜೆ ನೆರವೇರಿಸುತ್ತಾರೆ.

Image
Alavi devaru

ಬಿರಿಯಾನಿ ಪ್ರಸಾದ

ಮೂರನೇ ದಿನ ಹರಕೆ ಇರುವುದರಿಂದ ಸಮಸ್ಯೆ ಪರಿಹಾರವಾದರೆ ಹರಕೆ ನೀಡುತ್ತೇವೆಂದು ಹೇಳಿಕೊಂಡ ಊರಿನವರು, ಕುರಿ, ಕೋಳಿಗಳನ್ನು ತಂದು ಬಲಿಕೊಡುತ್ತಾರೆ. ಕೆಲವರು ಬೆಳ್ಳಿಯ ಹಸ್ತಮುದ್ರೆ, ತೊಟ್ಟಿಲು,ದೀಪಗಳನ್ನು ಸಹ ನೀಡುತ್ತಾರೆ. ಊರಿನವರು ಮಾತ್ರವಲ್ಲದೆ ಪಕ್ಕದ ಊರಿನವರೂ ಹರಕೆಯಲ್ಲಿ ಪಾಲ್ಗೊಳ್ಳುತ್ತಾರೆ. ಊರಿನ ಯುವಕರೆಲ್ಲರೂ ಅಲ್ಲಿಯೇ ಬಿರಿಯಾನಿಯನ್ನು ತಯಾರಿಸುತ್ತಾರೆ. ಇದಕ್ಕೆ ʼಕಂದೂರಿʼ ಎಂದು ಕರೆಯಲಾಗುತ್ತದೆ. ಪ್ರತೀವರ್ಷ 800 ರಿಂದ 1000 ಮಂದಿ ಪ್ರಸಾದದ ರೂಪದಲ್ಲಿ ಬಿರಿಯಾನಿ ಸ್ವೀಕರಿಸುತ್ತಾರೆ.

ನಾಲ್ಕನೇ ದಿನ ದೇವರ ಹಸ್ತಮುದ್ರಿಕೆಯ ಆಯುಧವನ್ನು ಊರಿನಲ್ಲಿ ಮೆರವಣಿಗೆ ಮಾಡಿ, ರಾತ್ರಿ ದೇವಸ್ಥಾನದಲ್ಲಿ ʼಕತ್ತಲ ರಾತ್ರಿʼಯಿದ್ದು, ಜನರೆಲ್ಲರೂ ಕಟ್ಟಿಗೆ, ಕುಂಟೆ ಮತ್ತು ಉಪ್ಪನ್ನು ತಂದು ಕೊಂಡಕ್ಕೆ ಹಾಕುತ್ತಾರೆ. ಕಟ್ಟಿಗೆಯ ರಾಶಿ ಮತ್ತು ಬಯಲನ್ನೇ ಆಕ್ರಮಿಸುತ್ತಿರುವ ಕಿಡಿಗಳು ರಾತ್ರಿಯಲ್ಲಿ ಮೈ ಜುಂಯೆನ್ನಿಸುವಂತಿರುತ್ತದೆ. ಬೆಂಕಿ ಹಾಯುವ ಶಾಸ್ತ್ರದೊಂದಿಗೆ ಕೊಂಡದ ಸುತ್ತಲೂ ನರ್ತಿಸಿ ಸಂಭ್ರಮಿಸಲಾಗುತ್ತದೆ.

ಐದನೆಯ ದಿನ, ದೇವಸ್ಥಾನದಿಂದ ತೆಗೆಯಲಾಗಿದ್ದ ಮುದ್ರೆಯನ್ನು ಸ್ವಚ್ಛಗೊಳಿಸಿ  ನೆಲದ ಮೇಲೆ ಇಡಬಾರದೆಂಬ ಪ್ರತೀತಿ ಇರುವುದರಿಂದ, ಪೆಟತ್ತಿಗೆಯ ಒಳಗೆ ಇಡಲಾಗುತ್ತದೆ. ಕಾಯಿ, ಮಂಡಕ್ಕಿ ಪ್ರಸಾದ ಹಂಚಿ, ರಥದ ಮೆರವಣಿಗೆ ಮುಗಿಸಿ, ಗೌರಿ ಕೆರೆಯಲ್ಲಿ ವಿಸರ್ಜನೆ ಮಾಡಿ ಮೊಹರಂ ಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ.
ಅಲಾವಿ ದೇವರ ಮೇಲೆ ಮೊದಲಿನಿಂದಲೂ ಅಗಾಧವಾದ ನಂಬಿಕೆ ಇಟ್ಟುಕೊಂಡು ಬಂದಿದ್ದೇವೆ, ಅಲಾದಿ ನಮ್ಮೆಲ್ಲ ಇಷ್ಟಾರ್ಥಗಳನ್ನು ನೆರವೇರಿಸುವ ದೈವೀ ಶಕ್ತಿ ಎಂದು ಹೇಳಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್