ಕೋಮು ಸಾಮರಸ್ಯಕ್ಕೆ ಸಾಕ್ಷಿಯಾದ ಮೊಹರಂ ಹಬ್ಬ

ರಾಜ್ಯದ ಹಲವು ಭಾಗಗಳು ಭಾವೈಕ್ಯತೆ ಸಾರುವ ಪ್ರದೇಶಗಳಾಗಿವೆ. ಮುಸ್ಲಿಮರ ಒಂದೇ ಒಂದು ಕುಟುಂಬವೂ ಇಲ್ಲದ ಊರುಗಳಲ್ಲಿ ಹಿಂದೂಗಳಿಂದ ಮೊಹರಂ ಹಬ್ಬದ ಆಚರಣೆ ಇದಕ್ಕೆ ಸಾಕ್ಷಿ. ಕೋಮು ಸಂಘರ್ಷ, ಪರಸ್ಪರ ವ್ಯಾಪಾರ ಬಹಿಷ್ಕಾರ, ಧರ್ಮದ್ವೇಷಗಳಿಂದ ಕಂಗೆಟ್ಟಿದ್ದ ರಾಜ್ಯದ ಜನರಿಗೆ ಇಂತಹ ಸುದ್ದಿಗಳು ತುಸು ಸಮಾಧಾನ ನೀಡುತ್ತವೆ

ದೇಶದ ಬಹುತೇಕ ಭಾಗಗಳಲ್ಲಿ ಕ್ಷುಲ್ಲಕ ವಿಚಾರಗಳಿಗೆ ಹಿಂದೂ ಮತ್ತು ಮುಸ್ಲಿಮರ ನಡುವೆ ಕೋಮುಗಲಭೆಗಳು ನಡೆಯುತ್ತಿರುವ ಈ ಹೊತ್ತಿನಲ್ಲಿ, ಕರ್ನಾಟಕದ ಕೆಲವು ಪ್ರದೇಶಗಳಲ್ಲಿ ಹಿಂದೂ ಮತ್ತು ಮುಸ್ಲಿಮರ ನಡುವೆ ಭಾವೈಕ್ಯತೆಯನ್ನು ಸಾರುವ ಮೊಹರಂ ಆಚರಣೆಗಳು ಎಲ್ಲರ ಗಮನ ಸೆಳೆಯುತ್ತಿವೆ.

ಮೊಹರಂ ಎಂದರೆ, ಕೇವಲ ಮುಸಲ್ಮಾನರ ಹಬ್ಬವಲ್ಲವೆನ್ನುವುದು ಒಂದು ಪ್ರದೇಶದಲ್ಲಿ ಹೇಳಿದರೇ, ಮೊಹರಂ ಹಬ್ಬವನ್ನು ಕೇವಲ ಮುಸಲ್ಮಾನರು ಮಾತ್ರ ಮಾಡುವುದಿಲ್ಲ ಎನ್ನುವ ಅಂಶ ಕೆಲವೊಂದು ಪ್ರದೇಶದಿಂದ ತಿಳಿಯುತ್ತದೆ. ಅಂತಹ ಕೆಲವು ಪ್ರದೇಶಗಳ ಮೊಹರಂ ಆಚರಣೆ ಮತ್ತು ವಿಶೇಷತೆಗಳ ಬಗ್ಗೆ ಈ ವರದಿಯಲ್ಲಿದೆ.

ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಮುದ್ದಲಗುಂದಿ 

ಈ ಊರಿನಲ್ಲಿ ಯಾವೊಬ್ಬ ಮುಸ್ಲಿಂ ಸದಸ್ಯರು ಇಲ್ಲದಿದ್ದರೂ, ಕಳೆದ ಒಂದು ಶತಮಾನದ ಹಿಂದಿನಿಂದ ಹಿಂದುಗಳೇ ಮೊಹರಂನ್ನು ಗ್ರಾಮೀಣ ಹಬ್ಬದಂತೆ ಆಚರಿಸುತ್ತಾ ಬಂದಿದ್ದಾರೆ.

ಮುದ್ದಲಗುಂದಿ ಗ್ರಾಮದ ಹಿರಿಯರು ಹೇಳುವ ಪ್ರಕಾರ, “ನಮಗೆ ಬುದ್ದಿ ಬಂದಾಗಲಿಂದಲೂ ನಮ್ಮ ಊರಿನಲ್ಲಿ ಮುಸ್ಲಿಂ ಸಮುದಾಯದ ಕುಟುಂಬಗಲಿಲ್ಲ. ಆದರೂ, ನಮ್ಮ ಗ್ರಾಮದ ಪೂರ್ವಿಕರ ಪರಂಪರೆಯಂತೆ, ಎಲ್ಲ ಸಮುದಾಯದ ಜನರು ಒಂದೆಡೆ ಸೇರಿ ಅಲಾಹಿ ದೇವರುಗಳನ್ನು ಪ್ರತಿಷ್ಠಾಪಿಸಿ, ಸಂಭ್ರಮ ಮತ್ತು ಸಡಗರದಿಂದ ಮೊಹರಂ ಹಬ್ಬದವನ್ನು ಆಚರಿಸುತ್ತೇವೆ.” ಎನ್ನುತ್ತಾರೆ. 

“ನಮ್ಮ ಊರಿನಲ್ಲಿ ಮುಸ್ಲಿಮರು ಇಲ್ಲದಿರುವುದರಿಂದ ಪಕ್ಕದ ಮುದೇನೂರಿನಿಂದ ಮೌಲ್ವಿಗಳನ್ನು ಕರೆಸಿ, ಧಾರ್ಮಿಕ ವಿಧಿ-ವಿಧಾನಗಳನ್ನು ನೆರವೇರಿಸುವುದರಿಂದ ಪ್ರಾರಂಬವಾಗಿ, ದೇವರನ್ನು ಪೂಜಿಸಿ ಆರಾಧನೆ ಮಾಡಿ, ದೇವರನ್ನು ಹೊಳೆಗೆ ಹಿಂತುರಿಗಿಸುವವರೆಗೂ ಎಲ್ಲ ಜವಾಬ್ದಾರಿಗಳನ್ನು ಹಿಂದೂಗಳೇ ನಿರ್ವಹಿಸುತ್ತೇವೆ.” ಎಂದು ಸಂತಸ ವ್ಯಕ್ತಪಡಿಸಿದರು.

Image

“ಮೊಹರಂ ಹಬ್ಬ ಇನ್ನೇನು ಬರುತ್ತಿದೆ ಎನ್ನುವಷ್ಟರಲ್ಲಿ ಗ್ರಾಮಸ್ಥರೆಲ್ಲಾ, ತಮ್ಮ ತಮ್ಮ ಮನೆಗಳನ್ನು ಸ್ವಚ್ಚಗೊಳಿಸಿ ಅಲಂಕರಿಸುತ್ತಾರೆ. ನಮ್ಮ ಊರಿನ ಮಧ್ಯಭಾಗದ ಆಂಜನೇಯನ ದೇವಸ್ಥಾನದ ಮುಂಭಾಗದಲ್ಲಿ ಮಸೀದಿ ಇದೆ. ಇದೇ ನಮ್ಮ ಊರಿಗೊಂದು ವಿಶೇಷ.” ಎಂದು ಹರ್ಷ ವ್ಯಕ್ತಪಡಿಸಿದರು.

ನಮ್ಮ ಗ್ರಾಮದ ಬಹುಪಾಲು ಜನ ಕೃಷಿಕರಾಗಿದ್ದು, ನಾವುಗಳೇ ಚಂದ ವಸೂಲಿ ಮಾಡಿ ನಮ್ಮ ಸ್ವಂತ ಹಣದಿಂದ ಮಸೀದಿ ನಿರ್ಮಿಸಿಕೊಂಡಿದ್ದು, ಸುತ್ತಮುತ್ತಲಿರುವ ಗ್ರಾಮಸ್ಥರ ಹಾಗೂ ಮುಸ್ಲಿಂ ಭಾಂಧವರ ನಡುವೆ ಬಾಂಧವ್ಯವನ್ನು ಬೆಳೆಸಿಕೊಂಡಿದ್ದೇವೆ ಎಂದು ಹೇಳಿದರು.

ಬಳ್ಳಾರಿ ಜಿಲ್ಲೆ ಕುರುಗೋಡು ತಾಲೂಕಿನ ಮುಷ್ಟಗಟ್ಟೆ

ಕುರುಗೋಡು ತಾಲೂಕಿನ ಮುಷ್ಟಗಟ್ಟೆ ಗ್ರಾಮದಲ್ಲಿಯೂ ಕೂಡ ಯಾವ ಮುಸ್ಲಿಂ ಸದಸ್ಯರಿಲ್ಲದಿದ್ದರೂ, ಹಲವು ವರ್ಷಗಳಿಂದ ಮೊಹರಂ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡು ಬರಲಾಗುತ್ತಿದೆ.

ಈ ಗ್ರಾಮದಲ್ಲಿ ಸರಿಸುಮಾರು 700ಕ್ಕೂ ಕುಟುಂಬಗಳು ವಾಸವಾಗಿದ್ದು, 2000ಕ್ಕಿಂತ ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದರೂ, ಮುಸ್ಲಿಂ ಸಮುದಾಯದ ಒಂದೇ ಒಂದು ಮನೆಯೂ ಇಲ್ಲ. ಆದರೂ, ತಲೆತಲಾಂತರದಿಂದ ನಡೆದುಕೊಂಡು ಬಂದಿರುವ ಮೊಹರಂ ಪರಂಪರೆಯನ್ನು ಉಳಿಸಿಕೊಳ್ಳುವ ಸಲುವಾಗಿ, ಗ್ರಾಮಸ್ಥರೆಲ್ಲರು ಒಟ್ಟಾಗಿ ಸೇರಿ ಮೌಲಾಲಿ ತಾತನ ಪ್ರತೀಕವಾಗಿ ಒಂದು ಮಸೀದಿಯನ್ನು ಗ್ರಾಮದಲ್ಲಿಯೆ ಕಟ್ಟಿದ್ದಾರೆ.

ಗ್ರಾಮದ ಹಿರಿಯರೊಬ್ಬರು ಹೇಳುವ ಪ್ರಕಾರ, “ಕುಂಬಾರು ಭೀಮಪ್ಪ ತಾತಾ ಎಂಬುವವರು ಮೊಹರಂ ಹಬ್ಬದ ಸಂದರ್ಭದಲ್ಲಿ ಗ್ರಾಮಕ್ಕೆ ಉತ್ತಮ ಮಳೆ-ಬೆಳೆಯಾಗಲಿ ಇಲ್ಲಿರುವ ಜನರು ಆಯಸ್ಸು ಆರೋಗ್ಯದಿಂದ ಇರಲಿ.” ಎಂದು ಹೇಳಿಕೆ ನೀಡುತ್ತಿದ್ದರು.

"ಅದರಂತೆ ನಮ್ಮ ಗ್ರಾಮದಲ್ಲಿ ಜನಸಾಮಾನ್ಯರು ಜೀವನ ಸಾಗಿಸುತ್ತಿದ್ದರು ಎನ್ನುವ ನಂಬಿಕೆ ಈಗಲು ಇದೆ" ಎಂದು ತಮ್ಮ ಊರಿನ ಬಗ್ಗೆ ಹೆಮ್ಮೆಪಟ್ಟರು.  

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಬಗನಕಟ್ಟೆ

ಬಗನಕಟ್ಟೆ ಗ್ರಾಮದಲ್ಲಿಯೂ ಕೂಡ ಮುಸ್ಲಿಂ ಸಮುದಾಯದ ಒಂದೂ ಕುಟುಂಬವಿಲ್ಲ. ಆದರೂ, ‘ಅಲಾಬಿಸ್ವಾಮಿ’ಯ ಮೊಹರಂ ಆಚರಣೆಯನ್ನು ತಲೆತಲಾಂತರದಿಂದ ಬಹಳ ಅದ್ಧೂರಿಯಾಗಿ ಆಚರಿಸಿಕೊಂಡು ಬರುತ್ತಿದ್ದಾರೆ.

ಬಗನಕಟ್ಟೆಯ ಜನರು ತಾವು ಆಚರಿಸುವ ಹಿಂದೂ ಧರ್ಮದ ಎಲ್ಲ ಹಬ್ಬಗಳನ್ನು ಹೇಗೆ ಮಾಡುತ್ತಾರೊ, ಅದೇ ರೀತಿಯಲ್ಲಿ ಮೊಹರಂ ಹಬ್ಬವನ್ನು ಕೂಡ ಆಚರಣೆ ಮಾಡುತ್ತಾ ಬಂದಿದ್ದಾರೆ.

ಈ ಗ್ರಾಮದಲ್ಲಿರುವ ಶ್ರೀಆಂಜನೇಯಸ್ವಾಮಿ, ಶ್ರೀಸಿದ್ದೇಶ್ವರಸ್ವಾಮಿ, ಶ್ರೀರೇವಣಸಿದ್ದಸ್ವಾಮಿ ಮತ್ತು ಶ್ರೀ ಮಾರಿಕಾಂಬೆ ದೇವರುಗಳ ದೇವಸ್ಥಾನಗಳಿದ್ದು, ಇವುಗಳೊಂದಿಗೆ ಅಲಾಬಿಸ್ವಾಮಿ ದೇವರನ್ನು ಕೂರಿಸುವುದಕ್ಕೆ ಗುಡಿಯನ್ನು ಕಟ್ಟಲಾಗಿದೆ. 

ಜಾತ್ರೆಗಳ ಸಮಯದಲ್ಲಿ ಗ್ರಾಮದ ಮುಖ್ಯ ಬೀದಿಗಳಲ್ಲಿ ದೀಪಾಲಂಕಾರ ಮಾಡಿ, ಮೈಕ್‌ ಸೆಟ್‌ಗಳನ್ನು ಹೇಗೆ ಹಾಕಿರುತ್ತಾರೋ, ಅದೇ ರೀತಿಯಲ್ಲಿ ಮೊಹರಂ ಸಂದರ್ಭದಲ್ಲಿಯೂ ಎಲ್ಲ ಬೀದಿಗಳಲ್ಲಿ ಅಲಂಕಾರ ಮಾಡಿ ಸಂಭ್ರಮದಿಂದ ಆಚರಿಸಲಾಗುತ್ತದೆ.

ಮೊಹರಂ ಮಾಸದ ಅಮಾವಾಸ್ಯೆ ಆದ ಮೂರು ದಿನಗಳ ನಂತರ ಕೆಂಡವನ್ನು ಹಾಯುವ ಭಕ್ತಾದಿಗಳಿಗಾಗಿ ಗುಂಡಿ ತೆಗೆಯುವ ಶಾಸ್ತ್ರ ಮಾಡುತ್ತಾರೆ. ಮೂರು ದಿನ ದೇವರನ್ನು ಅಲ್ಲಿಯೇ ಕೂರಿಸಿರುತ್ತಾರೆ.

Image

ಈಶ್ವರಪ್ಪ ಎನ್ನುವ ಹಿರಿಯರು ಇದರ ನೇತೃತ್ವವನ್ನು ವಹಿಸಿಕೊಂಡು ಎಲ್ಲ ಸಮುದಾಯದ ಜನರನ್ನು ಪಾಲ್ಗೊಳುವಂತೆ ಮಾಡುತ್ತಾರೆ. ಕೊನೆ ದಿನ ಬೈರನಹಳ್ಳಿ ಗ್ರಾಮದ ಮುಸ್ಲಿಂ ಸಮುದಾಯದ ವ್ಯಕ್ತಿಯನ್ನು ಕರೆತಂದು ಪೂಜೆ ಸಲ್ಲಿಸುವುದರೊಂದಿಗೆ ಮೊಹರಂಗೆ ಇನಷ್ಟು ಮೆರಗು ನೀಡುತ್ತಾರೆ.

ಈ ಸಂದರ್ಭದಲ್ಲಿ ಗ್ರಾಮದ ಬಹುತೇಕ ಜನ ಹರಕೆ ಹೊತ್ತುಕೊಂಡು ಉಪವಾಸ ಮಾಡಿ, ತಮ್ಮ ಭಕ್ತಿಯನ್ನು ಸಮರ್ಪಣೆಗಾಗಿ ಕೋಳಿ, ಕುರಿಯನ್ನು ದೇವರಿಗೆ ಅರ್ಪಿಸುತ್ತಾರೆ. 

ಸಸ್ಯಾಹಾರಿ ಭಕ್ತರು ಮಂಡಕ್ಕಿ, ಸಕ್ಕರೆ, ಮೆಣಸಿನ ಕಾಳುಗಳನ್ನು ದೇವರ ಮೇಲೆ ಎರಚ್ಚುತ್ತಾ, ಓದಿಕೆ ಮಾಡಿಸುತ್ತಾರೆ. ಹಬ್ಬ ಮುಗಿದ ಮೇಲೆ ದೇವರ ಮೈದೊಳೆದು ಮುಂದಿನ ಹಬ್ಬ ಬರುವವರೆಗೂ ದೇವಸ್ಥಾನದ ಕಪಾಟಿನಲ್ಲಿ ಸುರಕ್ಷಿತವಾಗಿ ಇಡುತ್ತಾರೆ.

ಬೆಳಗಾವಿ ಜಿಲ್ಲೆಯ ಯರಗಟ್ಟಿ ತಾಲೂಕಿನ ಆಲದಕಟ್ಟಿ

ಯರಗಟ್ಟಿ ತಾಲೂಕಿನ ಆಲದಕಟ್ಟಿ ಕೆ. ಎಂ. ಗ್ರಾಮದಲ್ಲಿ ಮುಸ್ಲಿಂ ಸಮುದಾಯದ ಜನರು ಇದ್ದರೂ ಕೂಡ, ಮೊಹರಂ ಆಚರಣೆಯ ಪೂಜೆಯೊಂದನ್ನು ಬಿಟ್ಟು ಪ್ರಮುಖ ಎಲ್ಲ ಕಾರ್ಯಗಳನ್ನು ಮಾಡುವುದು ಹಿಂದುಗಳೇ. ಹಾಗಾಗಿ ಈ ಊರಿನಲ್ಲಿ ಹಿಂದೂ ಮತ್ತು ಮುಸ್ಲಿಮರು ಒಟ್ಟಾಗಿ ಸೇರಿ ಮೊಹರಂ ಹಬ್ಬವನ್ನು ಸೌಹಾರ್ದತೆಯಿಂದ ಆಚರಿಸುತ್ತಾ ಬಂದಿದ್ದಾರೆ. 

ಮೊಹರಂ ಹಬ್ಬ ಪ್ರಾರಂಭವಾಗುವ ಒಂದು ತಿಂಗಳು ಮುಂಚಿತವಾಗಿ ಹಿಂದುಗಳು ಕಲಾ ಪ್ರದರ್ಶನಕ್ಕೆ, ಕರಬಲ್, ಝಾಂಜ್ ಪಥಕ್ಕೆ ಮುಂಗಡವಾಗಿ ಸಿದ್ದತೆ ಮಾಡಿಸಿ, ಅಲಂಕೃತವಾಗಿ ತಾಬೂಥ್ ಸಿದ್ಧಪಡಿಸಿ ಅದರ ಮೇಲೆ ಗಂಡು ಮತ್ತು ಹೆಣ್ಣು ದೇವರ ಭಾವಚಿತ್ರಗಳನ್ನು ಅಂಟಿಸುತ್ತಾರೆ.  

Image

ಹಬ್ಬದ ದಿನ ಫಕ್ಕೀರೇಶ್ವರ ಸ್ವಾಮಿ ದೇವಸ್ಥಾನದ ಬಳಿ ಪಂಝಾ (ದೇವರು)ಗಳನ್ನು ಪ್ರತಿಷ್ಠಾಪನೆ ಮಾಡಿ, ಸಾಂಸ್ಕೃತಿಕ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾರೆ.

ಇದನ್ನು ಓದಿದ್ದೀರಾ? ಕೊಪ್ಪಳ| ವರಮಹಾಲಕ್ಷ್ಮಿ ಹಬ್ಬ ಮಾಡಿದ ಮುಸ್ಲಿಂ ಕುಟುಂಬ

ಹಬ್ಬ ಮುಗಿಯುವವರೆಗೂ ಗ್ರಾಮದ ಪ್ರತಿ ಮನೆಯಿಂದ ಕಟ್ಟಿಗೆಗಳನ್ನು ತಂದು ಕೆಂಡವನ್ನು ಸಿದ್ಧಪಡಿಸಿದ್ದಾರೆ. ಒಂದನೇ ದಿನ ಗಂಧರಾತ್ರಿ ಆಚರಣೆ ಇದೆ. ಎರಡನೆ ದಿನದ ಮಧ್ಯರಾತ್ರಿ ಭಕ್ತಾದಿಗಳು ಕೆಂಡ ಹಾಯುತ್ತಾರೆ. 
ಮೊಹರಂ ಹಿಂದಿನ ರಾತ್ರಿ ದೇವರು ನದಿಗೆ ಹೋಗಿ ಬರುವವರೆಗೂ ಜಾಗರಣೆಯ ಜೊತೆಗೆ ಧಾರ್ಮಿಕ ಆಚರಣೆಗಳು ನಡೆಯುತ್ತಿರುತ್ತವೆ. ಭಕ್ತರು ಕೇಳಿದ್ದನ್ನು ಪಂಝಾಗಳು ಕೊಡುತ್ತವೆ ಎನ್ನುವ ನಂಬಿಕೆ ಗ್ರಾಮಸ್ಥರಲ್ಲಿ ದಟ್ಟವಾಗಿರುತ್ತದೆ.

ಇವುಗಳಷ್ಟೇ ಅಲ್ಲದೇ, ಕರ್ನಾಟಕದ ಬಹು ಭಾಗಗಳಲ್ಲಿ ಮುಸ್ಲಿಂ ಸಮುದಾಯದವರು ಗ್ರಾಮದಲ್ಲಿ ಅಥವಾ ತಾವು ವಾಸಿಸುವ ಪ್ರದೇಶದಲ್ಲಿ ಇಲ್ಲದಿದ್ದರೂ, ಹಿಂದುಗಳೇ ಮೊಹರಂ ಹಬ್ಬವನ್ನು ಶ್ರದ್ದಾ ಭಕ್ತಿಯಿಂದ ಆಚರಿಸುತ್ತಾ ಬಂದಿದ್ದಾರೆ. 

ನಿಮಗೆ ಏನು ಅನ್ನಿಸ್ತು?
1 ವೋಟ್