ಸಾಯಿಬರು ಕ್ರೂರಿಗಳು, ಕಿರಿಸ್ತಾನರು ಮತಾಂತರಿಗಳು ಎಂದು ನಮ್ಮ ಹಿರಿಯರು ಹೇಳಿಲ್ಲ; ಈಗ್ಯಾಕೆ ಈ ಪ್ರಶ್ನೆ!

Hindu muslim Harmony

ಕೊನೆಗೂ ನಮ್ಮ ಊರಲ್ಲಿ, ನಮ್ಮ ನೆರೆಕರೆಯಲ್ಲಿ ಶಾಂತಿ ನೆಲೆಗೊಳಿಸಬೇಕಾದವರು ನಾವೇ. ಸಾಯಿಬರು, ಪೊರ್ಬುಗಳು, ಬಾಯಮ್ಮ  ಹಾಗೂ ಭಟ್ರು ಶೆಟ್ರು, ಸೇರೆಗಾರ, ಶೆಟ್ಟಿಗಾರರು ಎಲ್ಲ ಒಟ್ಟಾಗಿದ್ದರೆ ಚಂದ. ಇಲ್ಲದಿದ್ದರೆ ಊರದು ಮಸಣ. ಈ ಸರಳ ಸಾಮಾನ್ಯ ವ್ಯಾವಹಾರಿಕ ವಿವೇಕ ತಳಮಟ್ಟದಲ್ಲಿ ಜನರಲ್ಲಿ ಇದ್ದೇ ಇದೆ. ನೆಮ್ಮದಿಯಿಂದ ಬದುಕಲು ಈ ವಿವೇಕ ಅಗತ್ಯ

ಕೋಮುವಾದ ಈ ದೇಶಕ್ಕೆ ಹೊಸದೇನಲ್ಲ. ಪ್ರಾರ್ಥನೆಯ ಹೊತ್ತನ್ನು ಅಪವಿತ್ರಗೊಳಿಸಿದ ದೇಶವಿದು. ಪವಿತ್ರವೆಂದು ಭಾವಿಸಿದ ಪ್ರಾರ್ಥನೆಯ ಹೊತ್ತಲ್ಲೆ ಗಾಂಧಿಯನ್ನು ಕೊಂದವರು ನಾವು.‌ ಕೊಂದದ್ದು ಆಕಸ್ಮಿಕವಲ್ಲ. ಅದೊಂದು ಪೂರ್ವನಿಯೋಜಿತ ಪಿತೂರಿ. ಕೊಂದವನು ಮತಿಭ್ರಾಂತನಲ್ಲ. ಮತಭ್ರಾಂತ, ಮತಾಂಧ‌. ‌ಹಿಂದೂ ಮಹಾಸಭಾದ ಸಕ್ರಿಯ ಕಾರ್ಯಕರ್ತ. ಗಾಂಧಿಯ ಬಾಳ್ವೆಯ ಕೊನೆಯ ಒಂದು ದಶಕದಲ್ಲಿ ಅವರ ಬೆನ್ನುಬಿದ್ದು ಕನಿಷ್ಠ ಆರು ವಿಫಲ ಯತ್ನಗಳನ್ನು ಮಾಡಿ ಏಳನೆಯ ಸಲ ಕೊಂದು ಕಳೆದ. ನಾಥೂರಾಮ್ ಗೋಡ್ಸೆ ಹಾಗೂ ನಾರಾಯಣ ಆಪ್ಟೆ ಗಾಂಧಿಯನ್ನು ಕೊಲ್ಲುವುದಕ್ಕೆ ಕಾರಣವೇನು? ಗಾಂಧಿ ಮುಸಲ್ಮಾನರ ಪರ ವಹಿಸಿ ಮಾತಾಡುತ್ತಾರೆ, ಹಿಂದೂಗಳಿಗೇ ಬುದ್ಧಿ ಹೇಳುತ್ತಾರೆ; ಎಲ್ಲಕ್ಕಿಂತ ಮುಖ್ಯವಾಗಿ ತಮ್ಮ ಮಹತ್ವಾಕಾಂಕ್ಷಿ ಕನಸಾದ ವಿಶಾಲ ಹಿಂದೂ ರಾಷ್ಟ್ರ ನಿರ್ಮಾಣಕ್ಕೆ ಗಾಂಧಿ ದೊಡ್ಡ ತೊಡರುಗಾಲು. ಆದ್ದರಿಂದ ತಮ್ಮ ದಾರಿಗೆ ಅಡ್ಡನಿಂತ ಅವರನ್ನು ನಿವಾರಣೆ ಮಾಡಲೇಬೇಕೆಂದು ನಿರ್ಧಾರವಾಗಿತ್ತು.

೧೯೪೮ರ ಸುಮಾರಿಗೆ ದೆಹಲಿಯಲ್ಲಿ ಗಾಂಧಿಯವರ ಪ್ರಾರ್ಥನಾ ಸಭೆಗಳಿಗೆ ಹಿಂದೂ ಮತಾಂಧ ಯುವಕರು ಅಡ್ಡಿಮಾಡುತ್ತಿದ್ದರು. ಸರ್ವ ಧರ್ಮಗಳ ಗ್ರಂಥಗಳನ್ನು ಪಠಿಸುವುದು ಈ ಸಭೆಯ ವಾಡಿಕೆ. ಆದರೆ ಕುರಾನ್ ಪಠಣ ಶುರುವಾದೊಡನೆ ದಾಂಧಲೆ, ಅಡ್ಡಿ ಆತಂಕ ಎದುರಾಗುತ್ತಿತ್ತು. ಒಂದು ಸಲ ಗಾಂಧಿ ಸಭೆಯನ್ನು ಬರಖಾಸ್ತುಗೊಳಿಸಿ "ನಾಳೆಯಿಂದ ನಮ್ಮ ಪ್ರಾರ್ಥನಾ ಸಭೆಗಳು ಕುರಾನ್ ಪಠಣದಿಂದ ಪ್ರಾರಂಭವಾಗುತ್ತವೆ. ಯಾರಾದರೂ ಅಡ್ಡಿಪಡಿಸಿದರೆ ಸಭೆ ರದ್ದಾಗುತ್ತದೆ. ಒಂದೋ ನನ್ನನ್ನು ಇಡಿಯಾಗಿ ಒಪ್ಪಿಕೊಳ್ಳಿ ಇಲ್ಲವೇ ತಿರಸ್ಕರಿಸಿ" ಎಂದು  ಬಿರುಸಾಗಿ ನುಡಿದರು.

ಹೀಗೆ ಮುಸ್ಲಿಂ ವಿರೋಧದ ರಾಜಕಾರಣಕ್ಕೆ ಇತಿಹಾಸ ಇದೆ. ಬ್ರಿಟಿಷರು ಒಡೆದು ಆಳುವ ನೀತಿ ಅನುಸರಿಸಿದರು ಎಂದು ದೂರುವುದು ಸುಲಭ. ಆದರೆ ಹಿಂದೂ ಮತೀಯ ಶಕ್ತಿಗಳು ಮಾಡಿದ್ದೇನು? ಮುಸ್ಲಿಂ ಸಂಘಟನೆಗಳು ಮಾಡಿದ್ದೇನು? ಇಂದು ಭಾರತೀಯ ಸಮಾಜ ' ನಾವು'- ' ಅವರು' ಎಂದು ಇಬ್ಭಾಗವಾಗುವುದಕ್ಕೆ, ಕೋಮು ಧ್ರುವೀಕರಣಕ್ಕೆ ಈ ಮತಾಂಧ ಶಕ್ತಿಗಳೇ ಕಾರಣ ಎಂಬುದನ್ನು ಅಲ್ಲಗಳೆಯಲಾಗದು. ಅಂದು ನಮ್ಮ ಬೆರಳುಗಳಿಗೆ ಅಂಟಿದ ನೆತ್ತರನ್ನು ನೆಕ್ಕುತ್ತಲೇ, ಮೂಸುತ್ತಲೇ ಈ ಸಂಕೀರ್ಣ ಸ್ಥಿತಿಗೆ ಬಂದು ಮುಟ್ಟಿದ್ದೇವೆ.

ನಮ್ಮ ಹಿರಿಯರು ಅವರನ್ನು ಪಾಕಿಸ್ತಾನಕ್ಕೆ ಹೋಗಿ ಅಂದಿರಲಿಲ್ಲ

ನಾವು  ಚಿಕ್ಕವರಿದ್ದಾಗ ಅಂದರೆ ಅರುವತ್ತರ ದಶಕದಲ್ಲಿ ನಮ್ಮ ಮನೆಗಳಲ್ಲಿ, ಸುತ್ತಮುತ್ತಲಲ್ಲಿ, ವಿದ್ಯಾಸಂಸ್ಥೆಗಳಲ್ಲಿ ಯಾರೂ ಸಾಯಿಬ, ಕಿರಿಸ್ತಾನ ಅಂತೆಲ್ಲ ಹೀಗಳೆದು ಮಾತಾಡುತ್ತಿರಲಿಲ್ಲ.  ಸಾಯಿಬರನ್ನು ನಂಬಬಾರದು. ಕ್ರೂರಿಗಳು, ಕೊಳಕರು, ಅವರ ಸ್ನೇಹ ಮಾಡಬೇಡಿ, ಕಿರಿಸ್ತಾನರು ಮತಾಂತರ ಮಾಡುತಾರೆ ಅಂತ ನಮ್ಮ ಹಿರಿಯರು ಯಾರೂ ಹೇಳಿದ್ದು ನನಗೆ ತಿಳಿದಿಲ್ಲ. ಈ ವಿಷಯಗಳು ನಮ್ಮ ಸಾರ್ವಜನಿಕ ಸಂಕಥನಗಳಲ್ಲಿ ಎಲ್ಲೂ ಪ್ರಸ್ತಾಪವಾಗುತ್ತಿದ್ದಿಲ್ಲ. ಕ್ರಿಶ್ಚಿಯನ್ ಹುಡುಗಿಯರ ವೇಷಭೂಷಣ ಗಮನಿಸಿ ಅವರು ತುಂಬ 'ಫಾರ್ವರ್ಡ್‌' ಅಂತ ಒಂದು ಟೀಕೆ ಕೇಳಿ ಬರುತ್ತಿತ್ತು. ಹಾಗೆ ನೋಡಿದರೆ ನಾನು ಕ್ರಿಶ್ಚಿಯನ್ನರು ನಡೆಸುತ್ತಿದ್ದ ಶಾಲೆಯಲ್ಲಿ ಓದಿದ್ದು ಮತ್ತು  ಅದೇ ಶಾಲೆಯ ಹೈಸ್ಕೂಲ್ ವಿಭಾಗದಲ್ಲಿ ಒಂದು ವರ್ಷ ಅಧ್ಯಾಪಕನಾಗಿ ಕೆಲಸ ಮಾಡಿದ್ದು. ಯಾವ ಮತಾಂತರ, ಬೈಬಲ್ ಕಡ್ಡಾಯ ಪಾಠ ಎಂಥದ್ದೂ ಇರಲಿಲ್ಲ! ಹೆಚ್ಚಿನ ಅಧ್ಯಾಪಕರು ಹಿಂದೂಗಳೇ ಆಗಿದ್ದರು. ಕ್ರಿಶ್ಚಿಯನ್ ಅಧ್ಯಾಪಕರಿದ್ದರೂ ಅವರು ತಾರತಮ್ಯ ಮಾಡುತ್ತಿರಲಿಲ್ಲ. ಹಿಂದೂಗಳನ್ನು, ಹಿಂದೂ ಧರ್ಮವನ್ನು ಹಳಿಯುತ್ತಿರಲಿಲ್ಲ. ಐದನೆಯ ತರಗತಿಯಲ್ಲಿ ನನ್ನ ತಾಯಿ ತೀರಿಕೊಂಡಾಗ ನಮ್ಮ ಶಾಲೆಯ ಮುಖ್ಯೋಪಾಧ್ಯಾಯರಾಗಿದ್ದ ಧರ್ಮಗುರುಗಳು ನಮ್ಮ ಮನೆಗೆ " ಸಾವು ಮಾತನಾಡಿಸಲು" ಬಂದಿದ್ದರು.

Image
ಸರ್ವಧರ್ಮೀಯರಿಂದ ಸಾಮೂಹಿಕ ಪ್ರಾರ್ಥನೆ (ಸಾಂದರ್ಭಿಕ ಚಿತ್ರ)
ಸಾಮೂಹಿಕ ಪ್ರಾರ್ಥನೆ (ಸಾಂದರ್ಭಿಕ ಚಿತ್ರ)

ನಾನು  ಒಂಬತ್ತು ಮತ್ತು ಹತ್ತನೆಯ ತರಗತಿ ಓದಿದ್ದು  ಬೆಂಗಳೂರು ಸಮೀಪದ ರಾಮನಗರದಲ್ಲಿ. ಅದು ಮುಸ್ಲಿಂ ಬಾಹುಳ್ಯದ ಪಟ್ಟಣ‌. ರೇಷ್ಮೆ ಗೂಡುಗಳ, ಫಿಲೇಚರ್ಗಳ ಊರು. ನಮ್ಮ ದೊಡ್ಡಪ್ಪನ ಹೊಟೆಲ್ ಇದ್ದದ್ದೇ ಬಾಲಗೇರಿ ಎಂಬ ಬಡಾವಣೆಯಲ್ಲಿ. ಸುತ್ತಮುತ್ತ ಮುಸ್ಲಿಮರೇ. ಹುಬ್ಬಳ್ಳಿಯ ಹಾಗೆ ಇತಿಹಾಸ ಪ್ರಸಿದ್ಧ ಕ್ಲೋಸ್ ಪೇಟೆ ಅಥವಾ ರಾಮನಗರ ಕೂಡಾ ಹಿಂದೂ ಮುಸ್ಲಿಂ ಗಲಭೆಗಳ ತಾಣವೇ. ಆದರೆ ನಾನು ಅಲ್ಲಿ ವಾಸವಾಗಿದ್ದಾಗ ಇಂಥ ಯಾವ ಬಿಕ್ಕಟ್ಟನ್ನು ಕಂಡವನಲ್ಲ. ಹಾಗೆ ನೋಡಿದರೆ ರಾತ್ರಿಯ ಊಟಕ್ಕೆ ಎಷ್ಟೋ ಸಂದರ್ಭಗಳಲ್ಲಿ ಮುಸ್ಲಿಮರ ಬೇಕರಿಗಳಿಂದ ಸಿಹಿಬ್ರೆಡ್ ಬನ್ ಕೊಂಡು ತಿಂದವನು. ನಮ್ಮ ಮನೆಗಳಿಗೆ ಪಾತ್ರೆಗಳಿಗೆ ಕಲಾಯಿ ಹಾಕಲು ಬರುತ್ತಿದ್ದವರು. ಚಾಕೂ ಚೂರಿ, ಕತ್ತಿ ಹಾರೆ ಸಾಣೆಹಿಡಿಯಲು ಬರುತ್ತಿದ್ದವರು, ಹಾಸಿಗೆ ರಿಪೇರಿ ಮಾಡಲು ಬರುತ್ತಿದ್ದವರು ಸಾಯಿಬರು. ಯಾರೂ ಅವರನ್ನು ತುಚ್ಛವಾಗಿ ನೋಡುತ್ತಿರಲಿಲ್ಲ, ಪಾಕಿಸ್ಥಾನಕ್ಕೆ ಹೋಗಿ ಅನ್ನುತ್ತಿರಲಿಲ್ಲ.

ಎಂಬತ್ತರ ದಶಕದಲ್ಲಿ ನಮ್ಮ ಕಾಲೇಜಿಗೆ ಬರುತ್ತಿದ್ದ ಮುಸ್ಲಿಂ ಹುಡುಗ ಹುಡುಗಿಯರ ಸಂಖ್ಯೆ ವಿರಳವಾಗಿದ್ದರೂ ನಮಗೆ ಅವರ ಬಗ್ಗೆ ಅಭಿಮಾನವಿತ್ತು. ಅಧ್ಯಾಪಕರಾಗಲಿ, ಸಹಪಾಠಿಗಳಾಗಲಿ ಅವರನ್ನು ವಿಚಿತ್ರ ರೀತಿಯಲ್ಲಿ ನೋಡುತ್ತಿರಲಿಲ್ಲ. ಆಗ ಹಿಜಾಬ್, ಬುರ್ಖ  ಹಾವಳಿ ಇರಲಿಲ್ಲ. ಹುಡುಗಿಯರು ಸೀರೆ ಉಟ್ಟುಕೊಂಡು ಬರುತ್ತಿದ್ದರು. ಆದರೆ  ಇತ್ತೀಚಿನ ವರ್ಷಗಳಲ್ಲಿ ಈ ಬುರ್ಖ, ಹಿಜಾಬ್ ಧರಿಸುವವರ ಸಂಖ್ಯೆ ಹೆಚ್ಚಿದೆ. ಯಾರು ಕಾರಣ? ವಿದ್ಯಾಪ್ರಸಾರ ಹೆಚ್ಚಾದಂತೆ ಕಂದಾಚಾರಗಳು ಕಡಮೆಯಾಗಬೇಕಿತ್ತಲ್ಲ? ಅವಿದ್ಯಾವಂತರಲ್ಲಿ ಕಂಡುಬರದಿದ್ದ ಕಂದಾಚಾರಗಳು ಆಧುನಿಕ ವಿದ್ಯಾಭ್ಯಾಸ ಮಾಡಿದ  ಹಿಂದೂ ಮುಸಲ್ಮಾನರಲ್ಲಿ ಮಿತಿಮೀರುವುದಕ್ಕೆ ಯಾರು, ಯಾವುದು ಕಾರಣ ಎಂಬುದು ಈಗ ನಿಚ್ಚಳವಾಗಿ ಗೋಚರಿಸುತ್ತಿದೆ.

ಉರಿದುಬೀಳುವ ಯಂಗ್ ಬ್ರಿಗೇಡ್

ಸಹಬಾಳ್ವೆ, ಕೋಮು ಸಾಮರಸ್ಯ ಇತ್ಯಾದಿ ಪದಗಳು ನಮಗೆ  ಅಂದು ತಿಳಿದಿರಲಿಲ್ಲ. ನಮ್ಮ ಮನೆಗಳಲ್ಲಿ ಹಿರಿಯರು, ಶಾಲೆಗಳಲ್ಲಿ ಶಿಕ್ಷಕರು  ಈ ಪದಗಳನ್ನು ಅಷ್ಟಾಗಿ ಬಳಸುತ್ತಿರಲಿಲ್ಲ. ರಾಮಜನ್ಮಭೂಮಿ- ಬಾಬರಿ ಮಸೀದಿ ವಿವಾದದ ಬಳಿಕ ದಿನ ಬೆಳಗಾದರೆ ಈ ಪದಗಳು ಕಿವಿಯ ಮೇಲೆ ಬೀಳುತ್ತಿವೆ. ನಮ್ಮಲ್ಲಿ ಸಕ್ರಿಯವಾಗಿದ್ದ ಎಡ ಪಕ್ಷಗಳು ಜನರಿಗೆ ಸಹಬಾಳ್ವೆಯ ಸಂದೇಶಗಳನ್ನು ಸಾರುತ್ತ ಬಂದವು. ಆದರೆ ಈಗ ಆ ಪಕ್ಷಗಳು ಉಸಿರು, ಬೆಂಬಲ ಎರಡನ್ನೂ ಕಳೆದುಕೊಂಡಿವೆ. ಹೋರಾಟದ ಕಿಚ್ಚು ಬಹುಮಟ್ಟಿಗೆ ನಂದಿದೆ. ಪ್ರಬಲ ನಾಯಕತ್ವದ ಕೊರತೆ ಎದ್ದು ಕಾಣುತ್ತಿದೆ. ಈ ನಡುವೆ ನಮ್ಮ ತಥಾಕಥಿತ ಪ್ರಗತಿಪರರ, ಎಡ ಪಂಥೀಯರ ಮತ್ತು ಸಮಾಜಮುಖಿ ಚಿಂತಕರ ಎಡಬಿಡಂಗಿ ಧೋರಣೆ ಕೂಡಾ ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಹಾಗಾಗಿದೆ. ಹಿಂದೂ ಮತಾಂಧ ಶಕ್ತಿಗಳನ್ನು ಖಂಡತುಂಡ ವಿರೋಧಿಸುತ್ತಾ ಅಲ್ಪಸಂಖ್ಯಾತರ ತಪ್ಪುಗಳನ್ನು ಎತ್ತಿ ಆಡದೆ ಖಂಡಿಸದೆ ಅವರನ್ನು ಸಂಪೂರ್ಣ ಬೆಂಬಲಿಸುವುದು ತೀರಾ ಸಾಮಾನ್ಯ ಬಹುಸಂಖ್ಯಾತರಿಗೆ ಹಿಡಿಸದ ವಿಷಯವಾಗಿದೆ. ಹೀಗಾಗಿ ಈ ಬಗೆಯ ಸಾಹಿತಿಗಳು, ಚಿಂತಕರು ಹಾಗು ಪ್ರಗತಿಪರರ ಬಗ್ಗೆ ಜನ ನಂಬಿಕೆ ಕಳೆದುಕೊಂಡಿದ್ದಾರೆ. ಸಹಬಾಳ್ವೆ ಎಂದರೆ ಸಾಕು ಉರಿದುಬೀಳುವ ಯಂಗ್ ಬ್ರಿಗೇಡ್ ನಮ್ಮ ಮುಂದಿದೆ.  ವರ್ತಮಾನದ ತುಂಬ ಭೂತದ ಸುದ್ದಿ. ಮುಂದಣ ಭವಿಷ್ಯ ವರ್ತಮಾನದ ಪಾಪದ ಫಲ. ದಿನ ಬೆಳಗಾದರೆ ಎರಡೂ ಕಡೆಯ ಧರ್ಮಾಂಧರ ಕಡಿದಾಟ, ಬಡಿದಾಟಗಳಿಂದ ಶಾಂತಿಪ್ರಿಯ ಸಾಮಾನ್ಯ ಜನ ಹೈರಾಣಾಗಿದ್ದಾರೆ.

ಇದನ್ನು ಓದಿದ್ದೀರಾ? ಈಗಲೂ ಸೇಬು ತಿನ್ನುವಾಗ ಶಂಕರಭಟ್ಟರೇ ಕಣ್ಣೆದುರು ಬರುತ್ತಾರೆ

ವಿವಿಧ ರಾಜಕೀಯ ಪಕ್ಷಗಳು, ಮತೀಯ ಶಕ್ತಿಗಳು ಮತಬೇಟೆಯ ಸಲುವಾಗಿ, ಹಣ ಲೂಟಿ ಹೊಡೆಯುವ ಸಲುವಾಗಿ ಮಾಡುವ ಹೊಡೆದಾಟಗಳು, ಬಡಿದಾಟಗಳು  ತೀರ ತಳಮಟ್ಟದಲ್ಲಿ ಬಹಳ ದೊಡ್ಡ ಪರಿವರ್ತನೆಯನ್ನು ಉಂಟು ಮಾಡುತ್ತವೆ ಎನ್ನಲು ಆಧಾರಗಳು ಸಾಲವು. ಯೋಗಿ, ಋತುಂಬರಾ, ಶಾ, ರಾಮದೇವ, ಹುಸೇನ, ಸೆಕ್ವೇರಾ ಇತ್ಯಾದಿಗಳು  ಎಷ್ಟೇ ವೀರಾವೇಶದಿಂದ ಮಾತಾಡಲಿ ಬಹಿಷ್ಕಾರಗಳು ಒಂದೆರಡು ದಿನ ಮಾತ್ರ. ಕೊನೆಗೂ ನಮ್ಮ ಊರಲ್ಲಿ, ನಮ್ಮ ನೆರೆಕರೆಯಲ್ಲಿ ಶಾಂತಿ ನೆಲೆಗೊಳಿಸಬೇಕಾದವರು ನಾವೇ. ಸಾಯಿಬರು, ಪೊರ್ಬುಗಳು, ಬಾಯಮ್ಮ  ಹಾಗೂ ಭಟ್ರು ಶೆಟ್ರು, ಸೇರೆಗಾರ, ಶೆಟ್ಟಿಗಾರರು ಎಲ್ಲ ಒಟ್ಟಾಗಿದ್ದರೆ ಚಂದ. ಇಲ್ಲದಿದ್ದರೆ ಊರದು ಮಸಣ. ಈ ಸರಳ ಸಾಮಾನ್ಯ ವ್ಯಾವಹಾರಿಕ ವಿವೇಕ ತಳಮಟ್ಟದಲ್ಲಿ ಜನರಲ್ಲಿ ಇದ್ದೇ ಇದೆ. ನೆಮ್ಮದಿಯಿಂದ ಬದುಕಲು ಈ ವಿವೇಕ ಅಗತ್ಯ ಎಂಬುದು ಜನಸಾಮಾನ್ಯರಿಗೆ ತಿಳಿದಿದೆ. ಆದರೆ ಈ ವಿವೇಕವನ್ನು ಮತ್ತೆಮತ್ತೆ ಯುವಜನತೆಯ ಮುಂದಿಡುವುದೇ ಪ್ರಜ್ಞಾವಂತರ ಕಾಯಕವಾಗಬೇಕು.

ನಾವೀಗ ಮತ್ತೆ ನಮ್ಮ ಸಾಮಾಜಿಕ  ಧಾರ್ಮಿಕ, ಆಧ್ಯಾತ್ಮಿಕ ಬದುಕನ್ನು ಪರಿಶೀಲಿಸಿ ಸಹಬಾಳ್ವೆಯ ನಿದರ್ಶನಗಳನ್ನು ಯುವಜನರ ಮುಂದೆ ಇಡುವ ಅಗತ್ಯ ಹಿಂದೆಂದಿಗಿಂತ ಹೆಚ್ಚಿಗೆ ಇದೆ.   ಬಂಡಾಯ ಸಾಹಿತ್ಯದ ಉದಯದ ಸಂದರ್ಭದಲ್ಲಿ ಪಂಪನಿಂದ ಸಿದ್ಧಲಿಂಗಯ್ಯರವರೆಗೆ ಸಾಹಿತ್ಯದಲ್ಲಿ ಬಂಡಾಯದ ನಿದರ್ಶನಗಳನ್ನು ಹುಡುಕಿ ತೆಗೆದು ಸಮರ್ಥಿಸಿಕೊಂಡ ಹಾಗೆ ಕವಿರಾಜ ಮಾರ್ಗದಿಂದ ಇಲ್ಲಿಯ ತನಕದ ಸಾಹಿತ್ಯದಲ್ಲಿ ಕಂಡು ಬರುವ ಸಾಮರಸ್ಯದ ಎಳೆಗಳನ್ನು  ಹಾಡು, ನೃತ್ಯ, ನಾಟಕ, ಚಿತ್ರ, ಚಲನಚಿತ್ರ, ಜಾಥಾಗಳ ಮೂಲಕ ಜನರ ಮನೆಬಾಗಿಲುಗಳಿಗೆ ಕೊಂಡೊಯ್ಯುವ ಆಂದೋಲನ  ಹಮ್ಮಿಕೊಳ್ಳಬೇಕಾಗಿದೆ. ಜನರನ್ನು ಒಡೆಯುವುದೇ ಈಗ ಆಡಳಿತದಲ್ಲಿರುವ ಸರಕಾರಗಳ ನೀತಿ. ಹೀಗಾಗಿ ಆರ್‌ಎಸ್‌ಎಸ್ ಸರಸ್ವತಿ ವಿದ್ಯಾಲಯಗಳ ಮೂಲಕ ತನ್ನ ಸಿದ್ಧಾಂತವನ್ನು ಪ್ರಚುರಪಡಿಸುತ್ತಿರುವ ಹಾಗೆ ಕೋಮು ಸಾಮರಸ್ಯ ಮತ್ತು ಸಹಬಾಳ್ವೆಯ ಸಿದ್ಧಾಂತದಲ್ಲಿ ನಂಬುಗೆ ಉಳ್ಳವರು ಪರ್ಯಾಯ ಜನಶಿಕ್ಷಣವನ್ನು ಅನೌಪಚಾರಿಕವಾಗಿ ಜಾರಿಗೆ ತರುವ ತುರ್ತು ಇದೆ.

ನಿಮಗೆ ಏನು ಅನ್ನಿಸ್ತು?
1 ವೋಟ್