ವಿನೋದಾಗೆ ಅಮ್ಮನಾದ ನೂರ್ವಿ, ಮಕ್ಕಳಿಗೆ ಪ್ರೀತಿಯ ʼಅಮ್ಮಿʼ

Communal Harmony

ನನ್ನದು ಪ್ರೇಮವಿವಾಹ. ಆದರೆ, ಕಷ್ಟ ಬಂದಾಗ ನೆರವಾಗುವವರು, ನೋವು-ನಲಿವನ್ನು ಹಂಚಿಕೊಳ್ಳುವುದಕ್ಕೆ ಯಾರೂ ಇರಲಿಲ್ಲ. ಆ ಸಮಯದಲ್ಲಿ ನನ್ನ ತಾಯಿಯ ಸ್ಥಾನ ತುಂಬಿದವರು ಮುಸ್ಲಿಂ ಮಹಿಳೆ ನೂರ್ವಿ. ಮೇಕೆ ಮೇಯಿಸುವ ನೂರ್ವಿ ಬಡವರಾದರೂ, ಗುಣ ನಡತೆಯಲ್ಲಿ ಅವರಷ್ಟು ಶ್ರೀಮಂತರು ಯಾರೂ ಇಲ್ಲ ಅಂತಾರೆ ವಿನೋದಾ.

ಇಲ್ಲೊಂದು ಅಪರೂಪದ ಸೌಹಾರ್ದ ಕಥನವಿದೆ. ಚಿಂತಾಮಣಿ ತಾಲ್ಲೂಕಿನ ಕತ್ರಿಗುಪ್ಪೆಯ ವಿನೋದ ಮತ್ತು ನೂರ್ವಿಯವರ ಕುಟುಂಬಗಳ ಅನ್ಯೋನ್ಯ ಸಂಬಂಧ ಅಮ್ಮ ಮಗಳ ಬಾಂಧವ್ಯದಂತೆ ಅಬಾಧಿತವಾಗಿ ಮುಂದುವರಿದಿದೆ.

ʼಮುಸ್ಲಿಂ ಕುಟಂಬದ ನೂರ್ವಿ ನನ್ನ ಹೆತ್ತಮ್ಮನ ಸ್ಥಾನ ತುಂಬಿದ್ದಾರೆʼ ಎಂಬ ವಿನೋದಾ ಅವರ ಮಾತು ಅವರಿಬ್ಬರ ಸ್ನೇಹ ಸಂಬಂಧಕ್ಕೆ ಸಾಕ್ಷಿ. ನೂರ್ವಿಯೊಂದಿಗಿನ ಒಡನಾಟ ಶುರುವಾಗಿದ್ದು ಹೇಗೆ, ಮುಂದೆ ಅದು ಗಟ್ಟಿಯಾದ ಪರಿ ಎಂಥದ್ದು ಎಂಬುದನ್ನು ವಿನೋದಾ ಅವರ ಮಾತಿನಲ್ಲೇ ಕೇಳಿ.

"ನಾನು ಅಂತರ್ಜಾತಿಯ ಮದುವೆ ಆದ ಕಾರಣ, ನನಗೆ ಕಷ್ಟ ಬಂದಾಗ ನೆರವಾಗುವವರಾಗಲಿ, ನೋವು-ನಲಿವನ್ನು ಹಂಚಿಕೊಳ್ಳುವುದಕ್ಕಾಗಲಿ ಅಥವಾ ನನ್ನ ಬೆಂಬಲಕ್ಕೆಂದು ನಮ್ಮವರು ಯಾರೂ ಇರಲಿಲ್ಲ. ಆಗ ನಾನಿರುವ ಊರಿನಲ್ಲಿ ಮೇಕೆ ಮೇಯಿಸುವ ನೂರ್ವಿಯ ಪರಿಚಯವಾಯ್ತು. ಕಡೆಗೆ ಆಕೆಯೇ ನನ್ನ ಅಮ್ಮನ ಸ್ಥಾನ ತುಂಬಿದರು. ಅವರು ಬಡವರಾಗಿರಬಹುದು ಆದರೆ, ಗುಣ ಮತ್ತು ನಡತೆಯಲ್ಲಿ ಅವರಷ್ಟು ದೊಡ್ಡ ಶ್ರೀಮಂತರು ಯಾರೂ ಇಲ್ಲ.  ನೂರ್ವಿ ನನಗಿಂತ 20 ವರ್ಷ ದೊಡ್ಡವರು.

ನನಗೆ ಮೂವರು ಹೆಣ್ಣುಮಕ್ಕಳು. ಹೆರಿಗೆಯ ಸಮಯದಲ್ಲಿ ಸಹಾಯಕ್ಕೆಂದು ಯಾರೂ ಇರಲಿಲ್ಲ. ಆ ಸಮಯದಲ್ಲಿ ನನ್ನ ಆರೋಗ್ಯ ನೋಡಿಕೊಂಡು, ಮಗುವಿಗೆ ಸ್ನಾನ ಮಾಡಿಸಿ, ಬಟ್ಟೆ ಒಗೆಯುವುದರಿಂದ ಹಿಡಿದು ನನ್ನ ಎಲ್ಲ ಕೆಲಸಗಳನ್ನು ಅವರೇ ಮಾಡಿದ್ರು. ನನ್ನ ತಾಯಿಯ ನೆನಪಾದಾಗಲೆಲ್ಲ ನೂರ್ವಿ ಜೊತೆ ಮಾತನಾಡಿದರೆ ತಾಯಿಯ ಜೊತೆ ಮಾತನಾಡಿದಷ್ಟೇ ನೆಮ್ಮದಿ ಮತ್ತು ಸಂತೋಷ.

ತಾಯಿ ಮಗಳಿಗೆ ಹೇಗೆ ಧೈರ್ಯ ನೀಡುತ್ತಾಳೋ, ಬುದ್ದಿವಾದ ಹೇಳುತ್ತಾಳೋ ಅದೇ ರೀತಿ ನೂರ್ವಿ ಅಮ್ಮ ಯಾವುದು ತಪ್ಪು ಮತ್ತು ಸರಿ ಎಂದು ಹೇಳಿಕೊಡುತ್ತಾರೆ. ಯಾವತ್ತಿಗೂ ನಮ್ಮ ಹಿಂದೆ ಒಬ್ಬರಿದ್ದಾರೆ ಎಂದರೆ ಧೈರ್ಯವಿರುತ್ತದೆ. ಆ ಧೈರ್ಯವೇ ನನಗೆ ನೂರ್ವಿ ಅಮ್ಮ. ಅವರಿಗೆ ಎಲ್ಲಾ ರೀತಿಯ ಅನುಭವಗಳಿರುವುದರಿಂದ ನನಗೆ ಯಾವತ್ತಿಗೂ ಯಾವ ವಿಷಯದಲ್ಲಿ ನೋವು ಮಾಡಿದವರಲ್ಲ. ನಮ್ಮಿಬ್ಬರ ಈ ಸಂಬಂಧದಲ್ಲಿ ಯಾವುದೇ ಬೇಸರದ ಸಂಗತಿಗಳೇ ನಡೆದಿಲ್ಲ. ಅವರ ಮೂವರು ಗಂಡು ಮಕ್ಕಳೂ ಓದಿ ಸರ್ಕಾರಿ ಕೆಲಸಗಳಲ್ಲಿದ್ದಾರೆ. ಆದರೂ ಮೇಕೆ ಮೇಯಿಸುವ ವೃತ್ತಿಯನ್ನು ನೂರ್ವಿ ಇನ್ನೂ ಬಿಟ್ಟಿಲ್ಲ.  

ನೂರ್ವಿಯವರದು ಎಂಥಾ ತಾಯಿ ಹೃದಯ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಊರಿನ ಮೂರು ಹೆಣ್ಣುಮಕ್ಕಳಿದ್ದ ಹಿಂದೂ ಕುಟುಂಬದಲ್ಲಿ ನಾಲ್ಕನೆಯ ಮಗುವೂ ಹೆಣ್ಣಾಗಿದ್ದರಿಂದ ಆಸ್ಪತ್ರೆಯಲ್ಲಿಯೇ ಆ ಮಗುವನ್ನು ಸಾಯಿಸುವುದಕ್ಕೆ ಪ್ರಯತ್ನ ಮಾಡಿದ್ದರು. ನೂರ್ವಿಯ ಗಂಡ ಮೌಲಾ ಅವರ ಆಟೋದಲ್ಲಿಯೇ ಆ ಮಹಿಳೆಯನ್ನು ಹೆರಿಗೆಗೆ ಕರೆದುಕೊಂಡು ಹೋಗಿದ್ದರಿಂದ ಮೌಲಾ ಸಾಬ್ ತಕ್ಷಣವೇ ಪತ್ನಿ ನೂರ್ವಿಗೆ ಕರೆ ಮಾಡಿ, “ಇಲ್ಲಿ ಒಂದು ಹೆಣ್ಣು ಮಗುನ ಸಾಯ್ಸಬೇಕು ಅಂತಿದಾರೆ. ನಾವೇ ಸಾಕೋಣವಾ? ಎಂದು ಕೇಳಿದರಂತೆ. ಮೌಲಾ ಅವರ ಭಾಷೆಯಲ್ಲಿ ಮಗುವಿಗೆ ʼಬಚ್ಚಿʼ ಎಂದು ಹೇಳಿದ್ದು, ನೂರ್ವಿಗೆ ʼಮಚಲಿʼ ಎಂದು ಕೇಳಿಸಿತಂತೆ. ಏನಿವತ್ತು ಇವರು ಮೀನನ್ನು ಮನೆಗೆ ತರಲಾ ಎಂದು ಯಾಕೆ ಕೇಳ್ತಿದ್ದಾರೆ? ಎಂದು ನೂರ್ವಿಗೆ ಆಶ್ಚರ್ಯವಾಯಿತಂತೆ. ಹೂ ಸರಿ ತಗೋ ಬನ್ನಿ, ಅದನ್ನು ಏನಕ್ಕೆ ಕೇಳ್ತಿದೀರಾ ಎಂದಾಗ ಮೌಲಾ ಸಾಬ್ ಇರುವ ವಿಷಯವನ್ನು ಮತ್ತೆ ವಿವರಿಸಿದರಂತೆ. ಆಗ ಸಂತೋಷವಾಗಿ 'ಹೂ ಸರಿ ಮಗುವನ್ನು ತನ್ನಿ ನಾವೇ ಸಾಕೋಣ' ಎಂದು ಹೇಳಿದರಂತೆ. ಆ ಮಗುವನ್ನು ಹೆತ್ತ ಮಗಳಂತೆಯೇ ಸಾಕುತ್ತಿರುವ ನೂರ್ವಿ, ನನಗೂ ಹೆತ್ತ ತಾಯಿಯ ಸ್ಥಾನವನ್ನು ತುಂಬಿದ್ದಾರೆ.

ನೂರ್ವಿಯ ಎರಡನೇ ಮಗ ಹಿಂದೂ ಹುಡುಗಿಯನ್ನು ಮದುವೆಯಾಗಿ ಸಂತೋಷದಿಂದ ಜೀವನ ನಡೆಸುತ್ತಿದ್ದಾರೆ. ಬೇರೆ ಧರ್ಮದವರನ್ನು ಮದುವೆಯಾದ ಕಾರಣಕ್ಕೆ ತಿರಸ್ಕರಿಸದೇ ಅವಳನ್ನೂ ಮನೆಮಗಳಂತೆಯೇ ನೋಡಿಕೊಳ್ಳುತ್ತಿರುವ ದೊಡ್ಡ ಗುಣ ನೂರ್ವಿ ಮತ್ತು ಮೌಲಾ ಸಾಬ್ ಕುಟುಂಬದ್ದು.  

ಈಗ ಆ ಮಗುವು ನೂರ್ವಿ ಮತ್ತು ಮೌಲಾ ಅವರ ಕುಟುಂಬದಲ್ಲಿ ರಾಣಿಯ ಹಾಗೆ ಇದ್ದಾಳೆ. ಅವಳಿಗೆ ಮೆಹೆಕ್ ಎಂದು ಹೆಸರಿಟ್ಟಿದ್ದಾರೆ. ಅವಳಿಗೆ ಯಾವುದಕ್ಕೂ ಕಡಿಮೆ ಮಾಡದೇ ಸ್ವಂತ ಮಗುವಿನ ಹಾಗೆ ಅವಳನ್ನು ಶಾಲೆಗೂ ಕಳುಹಿಸಿ, ವಿದ್ಯಾಭ್ಯಾಸ ಕೊಡಿಸುತ್ತಿದಾರೆ. ಉರ್ದು ಶಾಲೆಯಲ್ಲಿ ಅವಳು ಕಲಿಯುತ್ತಿದ್ದಾಳೆ. ನೂರ್ವಿ ಮತ್ತು ಮೌಲಾ ಸಾಬ್ ಅವರ ಸ್ವಂತ ಮಕ್ಕಳಿಗಿಂತಲೂ ಹೆಚ್ಚಾಗಿ ಇವಳನ್ನು ನೋಡಿಕೊಳ್ಳುತ್ತಾರೆ. ಅವರ ಮೂರು ಗಂಡು ಮಕ್ಕಳೂ ಇವಳನ್ನು  ಒಡಹುಟ್ಟಿದ ತಂಗಿಯೆಂದು ಸ್ವೀಕರಿಸಿದ್ದಾರೆ. ಅವರು ತಮ್ಮ ಹೆಂಡತಿಗೆ ಏನು ತೆಗೆದುಕೊಂಡು ಬಂದರೂ ಅದನ್ನು ತಂಗಿ ಮಹೆಕ್‌ಗೂ ತಂದುಕೊಡುತ್ತಾರೆ. ಇತ್ತೀಚೆಗೆ ಆ ಮಗುವಿಗೆ ಒಡವೆ ತರಲು ಹೋಗುವಾಗ ನನ್ನನ್ನೂ ಜೊತೆಗೆ ಕರೆದಿದ್ದರು!

ನಮ್ಮ ಊರಿನಲ್ಲಿ ಸುಮಾರು 100 ಮನೆಗಳು ಬರೀ ಮುಸ್ಲಿಮರದ್ದೆ. ಊರಿನ ಪ್ರತಿಯೊಂದು ಹಿಂದೂ ಮತ್ತು ಮುಸ್ಲಿಂ ಕುಟುಂಬಗಳೂ ಯಾವುದೇ ಭೇದವಿಲ್ಲದೇ ಖುಷಿಯಿಂದ ಇರುತ್ತಾರೆ. ದ್ವೇಷ ಹುಟ್ಟಿಸುವ ಕೆಲಸವನ್ನು ರಾಜಕೀಯ ವ್ಯಕ್ತಿಗಳು ಮತ್ತು ದ್ವೇಷ ಹರಡುವುದನ್ನೇ ವೃತ್ತಿಯಾಗಿಸಿಕೊಂಡಿರುವ ಕಿಡಿಗೇಡಿಗಳು ಹಣದ ಆಸೆಗೋಸ್ಕರ, ಗಲಭೆ ಹುಟ್ಟಿಸಲು ಇಂತಹ ಕೆಲಸ ಮಾಡುತ್ತಾರೆ. ಮನುಷ್ಯತ್ವ ಇರುವವರು ಯಾವತ್ತೂ ಈತರ ಮಾಡುವುದಿಲ್ಲ. 

ಇದನ್ನು ಓದಿದ್ದೀರಾ? ಯೂಸುಫ್‌ ನಮಾಜೂ ಮಾಡ್ತಾನೆ, ವಿಭೂತಿನೂ ಹಚ್ತಾನೆ...!

ನನಗೆ ನೂರ್ವಿ ಮಾಡಿದ ಉಪಕಾರಕ್ಕೆ ನಾನು ಅವರಿಗೆ ಎಷ್ಟು ಮಾಡಿದರೂ ಕಡಿಮೆಯೇ. ನಮ್ಮ ಜಮೀನಿನಲ್ಲಿ ಟೊಮೆಟೋ, ಬದನೆಕಾಯಿ, ಹೂಕೋಸು, ಮೆಕ್ಕೆಜೋಳ ಬೆಳೆಯುತ್ತೇವೆ. ನೂರ್ವಿ ಮೇಕೆಗಳನ್ನು ಮೇಯಲು ನಮ್ಮ ಜಮೀನಿನಲ್ಲಿಯೇ ಬಿಡುತ್ತಾರೆ. ಮೇಕೆಗಳಿಗೆ ದಿನವೂ ಹುಲ್ಲು ಮತ್ತು ಸೊಪ್ಪು ನಮ್ಮ ಜಮೀನಿನಿಂದಲೇ ಆಗುತ್ತದೆ. ನಾವು ಬೆಳೆಯುವ ದಿನಸಿ ಮತ್ತು ತರಕಾರಿಗಳನ್ನು ನೂರ್ವಿಯ ಮನೆಗೂ ಕೊಡುತ್ತೇನೆ. ಕೊರೋನಾ ಕಾರಣ ಲಾಕ್‌ಡೌನ್‌  ಸಮಯದಲ್ಲಿ ಅವರ ಮನೆಗೆ ತಿಂಗಳಿಗಾಗುವಷ್ಟು ದಿನಸಿಯನ್ನು ಕೊಡುತ್ತಿದ್ದೆ.

ಮಕ್ಕಳ ಪ್ರೀತಿಯ ʼಅಮ್ಮಿʼ

ಇನ್ನು ನೂರ್ವಿ ಮತ್ತು ನನ್ನ ಇಬ್ಬರು ಮಕ್ಕಳ ನಡುವೆ ಇರುವ ಸಂಬಂಧ ಬಹಳ ವಿಶೇಷವಾದದ್ದು. ಮಕ್ಕಳು ಹುಟ್ಟಿದಾಗಿಂದಲೂ ಆರೈಕೆ ಮಾಡಿದ ನೂರ್ವಿ ನನ್ನ ಮನೆಗೆ ಬರುವಾಗ ಬರಿಕೈನಲ್ಲಿ ಎಂದೂ ಬಂದವರೇ ಅಲ್ಲ.  ಮಕ್ಕಳಿಗೆಂದು ಏನನ್ನಾದರೂ ತೆಗೆದುಕೊಂಡೇ ಬರುವುದು ಅವರ ರೂಢಿ. ನೂರ್ವಿ ಮನೆಗೆ ಬರುತ್ತಾರೆಂದರೆ ಮಕ್ಕಳಿಗೆ ಸಂಭ್ರಮವೋ ಸಂಭ್ರಮ. ʼಅಮ್ಮಿʼ ಎಂದು ನೂರ್ವಿಯನ್ನು ಮಕ್ಕಳು ಕರೆಯುತ್ತಿದರು. ಅಮ್ಮಿ ಎಂದರೆ ʼಅಮ್ಮʼ ಎಂದೇ ಅರ್ಥ. ಮಕ್ಕಳಿಗೆ ಹುಷಾರಿಲ್ಲವೆಂದಾಗ ಔಷಧಿ ಮಾಡುವುದು ನೂರ್ವಿಯೇ!. ಮಕ್ಕಳಿಗೆ ದೃಷ್ಟಿಯಾಗಬಾರದೆಂದು ದೃಷ್ಟಿ ತೆಗೆಯುವುದು, ಮಕ್ಕಳನ್ನು ನೋಡಿಕೊಳ್ಳುವ ಬಗ್ಗೆ ನನಗೆ ಹೇಳುತ್ತಿರುತ್ತಾರೆ. ನನಗೆ ನೂರ್ವಿ ತಾಯಿಯಾದರೆ, ನನ್ನ ಮಕ್ಕಳಿಗೆ ಅಜ್ಜಿ ".

ನೂರ್ವಿ - ವಿನೋದಾ ಸ್ನೇಹದ ಪರಿ ಕೇಳಿದ ಮೇಲೆ ಅನ್ನಿಸಿದ್ದಿಷ್ಟು. ಹಿಂದೂ ಮತ್ತು ಮುಸ್ಲಿಮರ ನಿಷ್ಕಲ್ಮಶ ಪ್ರೀತಿ ಮತ್ತು ಸಂಬಂಧಗಳು, ಎಲ್ಲಡೆ ವ್ಯಾಪಿಸಿಕೊಳ್ಳುತ್ತಿರುವ ಕೋಮುದ್ವೇಷಕ್ಕೆ ತಡೆಗೋಡೆಯಾಗಿ ನಿಲ್ಲಬೇಕು. ಎಲ್ಲಿ ಸಂಬಂಧಗಳು ದೃಢವಾಗಿರುತ್ತವೆಯೋ ಅಲ್ಲಿ ದ್ವೇಷದ ಕಲೆ ಉಳಿಯುವುದಿಲ್ಲ. 

ನಿಮಗೆ ಏನು ಅನ್ನಿಸ್ತು?
1 ವೋಟ್