ʼನಾನು ರಾಧಾ ಇವಳು ಜಮೀಲಾ ಅಕ್ಕತಂಗೀರಂತೆ ಬದುಕ್ತಿದ್ದೀವಿʼ

Radha jameela

ಕೋಮುವಾದಿ ಸಂಘಟನೆಗಳು ರಾಜಕೀಯ ಪ್ರೇರಿತ ದ್ವೇಷದ ಅಭಿಯಾನ ನಡೆಸಿ, ಹಿಂದೂ ಮುಸ್ಲೀಮರ ನಡುವೆ ಕಂದಕವನ್ನು ಸೃಷ್ಟಿಸಲು ಎಷ್ಟೇ ಯತ್ನಿಸಿದರೂ ಈ ನೆಲದ ಮೂಲಗುಣವಾದ ಸಹಬಾಳ್ವೆಯ ತಂತುಗಳು ಇನ್ನಷ್ಟು ಗಟ್ಟಿಯಾಗಿವೆ ಎಂಬುದಕ್ಕೆ  ಸಾಕಷ್ಟು ಉದಾಹರಣೆಗಳು ಸಿಗುತ್ತವೆ. ಚಿಕ್ಕಮಗಳೂರಿನ ರಾಧಾ ಮತ್ತು ಜಮೀಲಾರ ಸ್ನೇಹ ಅಂಥದ್ದು.

"ಹಿಂದೂ ಮುಸ್ಲಿಂ ಅಣ್ಣ ತಮ್ಮಂದಿರಲ್ಲ. ಮುಸ್ಲಿಮರು ನಮ್ಮವರಲ್ಲ ಎನ್ನುವ ಮಾತುಗಳು ರಾಜಕಾರಣಿಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ಬಳಸುತ್ತಿರುವ ಮಾತುಗಳಷ್ಟೆ. ಮುಸ್ಲಿಮರು ಯಾವಾಗ್ಲೂ ನಮ್ಮ ಅಣ್ಣ ತಮ್ಮಂದಿರು ಇದ್ದಂಗೇನೆ. ಯಾರೇನೇ ಹೇಳಿದ್ರು ಒಟ್ಟೊಟ್ಟಿಗೆ ಬದುಕ್ತಿರೋ ನಾವು ಬದಲಾಗೊಲ್ಲ. ನಿಮ್ಟಿವಿ ಚಾನೆಲ್ಗಳಿಗೂ ಮಾಡೋಕೇನು ಕೆಲಸ ಇಲ್ಲ. ಅದಿಕ್ಕೆ ಇಲ್ಲಸಲ್ಲದ್ದನ್ನ ತೋರಿಸ್ತಾರಷ್ಟೇʼ' ಇದು ಚಿಕ್ಕಮಗಳೂರಿನ ರಾಧಾ ಮತ್ತು ಜಮೀಲಾರ ಮನಸಿನ ಮಾತುಗಳು.

Eedina App

ರಾಧಾ ಮತ್ತು ಜಮೀಲಾ ಅಂಟಿಕೊಂಡೇ ಬದುಕುತ್ತಿರುವ ಎರಡು ಜೀವಗಳು. ಕಳೆದ ಇಪ್ಪತ್ತು ವರ್ಷಗಳಿಂದ ಒಬ್ಬರಿಗೊಬ್ಬರು ಹೆಗಲಾಗಿ, ಜೊತೆಯಾಗಿ ಮಾದರಿ ಗೆಳೆತಿಯರಾಗಿ ಬದುಕುತ್ತಿದ್ದಾರೆ. ಅನಿರೀಕ್ಷಿತವಾಗಿ ಆಸ್ಪತ್ರೆಯಲ್ಲಿ ಸಿಕ್ಕ ಇಬ್ಬರು ʻಬೆಸ್ಟ್‌ ಫ್ರೆಂಡ್ಸ್ʼ ತಮ್ಮ ಸ್ನೇಹದ ಬಗ್ಗೆ ವಿವರಿಸಿದಾಗ ಅವರ ಬಂಧ ನೋಡಿ ನನಗೂ ಚೂರು ಹೊಟ್ಟೆಕಿಚ್ಚು ಉಂಟಾಯಿತು.‌ ಸ್ನೇಹಕ್ಕೆ ಜಾತಿ, ಧರ್ಮಗಳ ಬಂಧವಿಲ್ಲ ಎಂಬುದನ್ನು ತಮ್ಮ ಸಹಬಾಳ್ವೆಯ ಜೀವನದ ಮೂಲಕವೇ ತೋರಿಸಿಕೊಟ್ಟಿದ್ದಾರೆ ಈ ಅದ್ಭುತ ವ್ಯಕ್ತಿಗಳು.

ನೀವಿಬ್ರು ಸ್ನೇಹಿತರಾ? ನಿಮ್ಮನ್ನು ನೋಡಿ ತುಂಬಾ ಖುಷಿಯಾಯಿತು ಎಂದಾಗ, ಈ ಆಸ್ಪತ್ರೆಯಲ್ಲಿ ಇದೇ ತರ ಹೇಳಿದವರಲ್ಲಿ ನೀವು ಮೂರನೇಯವರು ಎಂದು ಹೇಳುತ್ತಲೇ ಅತಿ ಉತ್ಸಾಹದಿಂದ ತಮ್ಮ ಗೆಳೆತನದ ಗಟ್ಟಿತನದ ಬಗ್ಗೆ ಮಾತನಾಡಿದರು.

AV Eye Hospital ad

ಇಪ್ಪತ್ತು ವರ್ಷಗಳ ಸ್ನೇಹ
ʻʻನಾನು ರಾಧಾ ಇವಳು ಜಮೀಲಾ. ನಮ್ಮಿಬ್ರುದು ಸುಮಾರು 20 ವರ್ಷಗಳ ಸ್ನೇಹ. ನನ್ನ ಗಂಡ ಜಮೀಲಾ ಗಂಡ ಇಬ್ರೂನು ನಮ್ಮಂಗೆ ಒಳ್ಳೆ ಸ್ನೇಹಿತ್ರಾಗಿದಾರೆ. ಈಗ ನಮ್ನಮ್ಮಕ್ಳು ಕೂಡ ಇದೇ ಗೆಳೆತನ ಮುಂದುವರೆಸಿದ್ದಾರೆ. ಚಿಕ್ಕಮಗಳೂರೇ ನನ್ನೂರು. ನಮ್ಮ ಅಪ್ಪ ಅಮ್ಮ ಕೇರಳದವರು. ಜಮೀಲಾದು ಅದೇ ಕತೆ. ಇಪ್ಪತ್ತು ವರ್ಷಗಳ ಹಿಂದೆ ನಾವಿಬ್ರು ಒಂದೇ ವಠಾರದ ಅಕ್ಕಪಕ್ಕದ ಮನೆಗಳಲ್ಲಿ ವಾಸವಾಗಿದ್ವಿ. ಅವಾಗಿಂದ ಅಕ್ಕತಂಗೀರ ತರ ಬದುಕ್ತಿದೀವಿ. ನಮ್ಮಿಬ್ಬರ ಗೆಳೆತನಕ್ಕೆ ಜಾತಿ, ಧರ್ಮ ಯಾವತ್ತು ಅಡ್ಡಿಯಾಗಿಲ್ಲ. ಇಬ್ರಲ್ಲು ಹರಿಯೋದು ಒಂದೇ ರಕ್ತ, ತಿನ್ನೋದು ಅದೇ ಊಟ ಅನ್ನುವಾಗ ನಾವು ಬೇರೆ ಬೇರೆ ಹೇಗಾಗ್ತಿವಿ? ಇನ್ಮುಂದಕ್ಕೂ ನಾವಿಂಗೆ ಖುಷ್ಖುಷಿಯಾಗೇ ಬದುಕ್ತೀವಿʼʼ ಎಂದು ರಾಧಾ ಹೇಳಿದ್ರು.   

ʻʻನನ್ನ ಮಕ್ಕಳಿಗೋ ರಾಧಾ ಅಂದ್ರೆ ನನಗಿಂತ ಬಾರಿ ಪ್ರೀತಿ. ಅವಳು ವಾರಕ್ಕೆರಡು ಸಲ ನಮ್ಮನೆಗೆ ಬರಲೇಬೇಕು. ಅವಳೆಲ್ಲಾದ್ರು ಬರದೇ ಇದ್ರೆ ನನ್ನ ಮಕ್ಕಳು ನಾನೇನೊ ಅವಳೊಟ್ಟಿಗೆ ಜಾಸ್ತಿ ಜಗಳ ಮಾಡಿದಿನಿ ಅನ್ಕೊಂಡು ಬೈತಾರೆ. ರಾಧಾ ನಾನು ಆಗಾಗ ಜಗಳ ಆಡ್ತಿರ್ತಿವಿ. ಜಗಳ ಅಂದ್ರೆ ಜೋರು ಗಲಾಟೆ ಅಂತಲ್ಲ. ಸಣ್ಣ ಪುಟ್ಟ ವಿಷಯಗಳಿಗೆ ಕಿತ್ತಾಡ್ತಾ ಇರ್ತಿವಿ. ನಮ್ಮಿಬ್ಬರ ಕೋಳಿ ಜಗಳ ನೋಡಿ ನನ್ಮಕ್ಕಳು ಇಬ್ಬರನ್ನು ರೇಗಿಸ್ತಾರೆ. ಸೌಹಾರ್ದ, ಸಹಬಾಳ್ವೆ ಇವೆಲ್ಲಾ ಪದಗಳ ಅರ್ಥ ನಮಗೆ ಗೊತ್ತಿಲ್ಲ. ನಾವಿಬ್ರು ಹೀಗೆ ಒಟ್ಟಿಗೆ ಬದುಕೋದ್ರಿಂದ ನಾವೆಲ್ಲಾ ನೆಮ್ಮದಿಯಾಗಿ, ಖುಷಿಯಾಗಿ ಇದೀವಿ ಅನ್ನೋದಷ್ಟೆ ಸತ್ಯʼʼ ಎಂದು ಜಮೀಲಾ ಹೇಳಿದ್ರು.

ನನ್ನ ಧರ್ಮ ನನಗೆ ಅವಳದ್ದು ಅವಳಿಗೆ
ಇನ್ನು ರಾಜ್ಯದೆಲ್ಲೆಡೆ ಹಬ್ಬಿರುವ ಮುಸ್ಲಿಂ ದ್ವೇಷದ ಬಗ್ಗೆ ಮಾತನಾಡಿದ ರಾಧಾ, ʻʻಈ ರಾಜಕಾರಣಿಗಳು, ಮೀಡಿಯಾಗಳಿಗೆ ಮಾಡೋಕೆ ಬೇರೆ ಏನು ಕೆಲಸ ಇಲ್ಲ. ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳೋಕೆ ಹಿಂದೂ ಮುಸ್ಲಿಂ ಅಂತೆಲ್ಲಾ ಬೇರೆ ಬೇರೆ ಮಾಡಿ ಮಾತಾಡ್ತಾರಷ್ಟೆ. ಅವರು ಮಾತಾಡ್ತಾರೆ, ಆದ್ರೆ ಅದು ನಿಜ ಅಲ್ಲ. ನಾವು ಬದುಕ್ತಿದಿವಲ್ಲ ಇದು ನಿಜ. ನನ್ನ ಧರ್ಮ ನನಗೆ. ಅವಳ ಧರ್ಮ ಅವಳಿಗೆ. ಅವಳು ಹಿಜಾಬ್‌ ಹಾಕೋದ್ರಿಂದ ನಂಗೇನು ಸಮಸ್ಯೆ ಆಗಿಲ್ಲ. ನಾನು ಹಣೆಗೆ ಬೊಟ್ಟಿಡೋದ್ರಿಂದ ಅವಳೇನು ಬೇಜಾರ್ಮಾಡ್ಕಳಲ್ಲ. ಇವತ್ತು ನಮ್ಮ ಕುಟುಂಬದವರು ನಮ್ಮ ಕಷ್ಟಕ್ಕೆ ಆಗದೇ ಇರಬಹುದು. ಆದ್ರೆ ಇವಳು ನನ್ನ ಜೊತೆಯಾಗಿದಾಳೆ. ಸಾಯೋವರೆಗೂ ನಾವು ಹಿಂಗೇ ಬದುಕ್ತೀವಿʼʼ ಎಂದರು.

ʻʻನಮ್ಮಿಬ್ಬರ ಮಕ್ಕಳು ಚೆನ್ನಾಗಿ ಓದ್ತಿದಾರೆ. ಜಮೀಲಾಗು ಇಬ್ಬರು ಮಕ್ಕಳನ್ನು ಚೆನ್ನಾಗಿ ಓದಿಸ್ಬೇಕು. ಮಗಳಿಗೆ ಕೆಲಸ ಸಿಗೋವರೆಗೂ ಮದುವೆ ಮಾಡ್ಬಾರ್ದು ಅಂದಿದೀನಿ. ಅವಳು ಅಷ್ಟೆ ಮಕ್ಕಳನ್ನು ಚೆನ್ನಾಗಿ ಓದಿಸ್ತಿದಾಳೆ. ಅವಳ ಇಬ್ರು ಮಕ್ಳು ನನ್ನ ಮಕ್ಕಳಿದ್ದಂಗೆ. ದಿನಕ್ಕೆ ಮೂರ್ನಾಲ್ಕು ಸಲ ಫೋನಲ್ಲಿ ಮಾತಾಡ್ತಿವಿ. ವಾರಕ್ಕೆ ಎರಡ್ಮೂರು ಸಲ ಅವಳ ಮನೆಗೆ ನಾನು, ನನ್ನ ಮನೆಗೆ ಅವಳು ಹೋಗಿ ಬಂದು ಮಾಡ್ತೀವಿ. ʻಎಲ್ರೂ ಬೆರಿಬೇಕು, ಕಲಿಬೇಕುʼ ಅನ್ನೋದನ್ನ ಹೇಳ್ಕೊಡ್ಬೇಕಿದ್ದ ಸ್ಕೂಲುಗಳಲ್ಲಿ ಈಗ ಹಿಂದೂ -ಮುಸ್ಲಿಂ ಅಂತ ಗಲಾಟೆ ಆಗ್ತಿರೊದು ನಿಜಕ್ಕೂ ನಮಗೆ ಬೇಸರ ತಂದಿದೆʼʼ ಎನ್ನುತ್ತಾರೆ ರಾಧಾ.

ಮುಸ್ಲಿಮರು ಎಂದರೇನೇ ಪರಕೀಯರು ಎನ್ನುವ ದ್ವೇಷದ ಭಾವ ಕರ್ನಾಟಕದ ಜನರ ಮನಸ್ಸುಗಳಲ್ಲಿ ಉಳಿಯುವಂತೆ ಕೆಲವು ʻಧರ್ಮದ ಅಮಲಿನಲ್ಲಿರುವ ಸಂಘಟನೆಗಳುʼ ಪ್ರಚಾರ ಮಾಡುತ್ತಿವೆ. ಜೊತೆಯಾಗಿ ಬೆಳೆದ, ಓದಿದ, ಆಟವಾಡಿಕೊಂಡಿದ್ದ ಹಿಂದೂ ಮುಸ್ಲಿಮರು ಪರಸ್ಪರ ಕುಳಿತು ಮಾತನಾಡಿದರೆ ತಪ್ಪು ಎನ್ನುವಂತಾಗಿದೆ. ಇಂತಹ ಎಲ್ಲ ಕೆಟ್ಟ ಭಾವನೆಗಳನ್ನು ಮುರಿದುಕಟ್ಟುವ ಸ್ನೇಹಿತೆಯರಿಬ್ಬರ ಅನುಭವದ ಮಾತುಗಳು ದ್ವೇಷ ಬಿತ್ತುವ ಮನಸುಗಳಿಗೆ ಮಾದರಿಯಾಗಲಿ.

ನಿಮಗೆ ಏನು ಅನ್ನಿಸ್ತು?
2 ವೋಟ್
eedina app