
ಊರೂರು ತಿರುಗಾಡಿ ತರಕಾರಿ ಮಾರಾಟ ಮಾಡುತ್ತಿದ್ದ ಜಾಲಹಳ್ಳಿಯ ಮುಸ್ಲಿಂ ಮಹಿಳೆ ರಾಜಾಂಬೆವ್ವ ಕೊರೊನಾ ಲಾಕ್ಡೌನ್ ಸಮಯದಲ್ಲಿ ಈ ಲಕ್ಕಲಕಟ್ಟಿ ಗ್ರಾಮದಲ್ಲಿಯೇ ಲಾಕ್ ಆಗಿಬಿಟ್ಟಿದ್ದಳು. ತಿಂಗಳುಗಟ್ಟಲೇ ಲಕ್ಕಲಕಟ್ಟಿಯಲ್ಲಿಯೇ ಉಳಿದುಕೊಳ್ಳುವ ಪ್ರಸಂಗ ಬಂದಿತ್ತು. ಆಗ ಆಕೆ ಉಳಿದುಕೊಳ್ಳಲು ಆಯ್ಕೆ ಮಾಡಿಕೊಂಡಿದ್ದು ಗ್ರಾಮದ ಅಳೆ ಬಸಪ್ಪನ ದೇವಸ್ಥಾನ!
ನನ್ನೂರು ಮತ್ತು ನಮ್ಮ ಸಂಬಂಧಿಕರ ಊರುಗಳ ಕಡೆ ಹೋಗಿ ಬಂದಾಗಲೆಲ್ಲ ನಾನು ಸಮಾಧಾನದ ನಿಟ್ಟುಸಿರು ಬಿಡುತ್ತೇನೆ. ಹಳ್ಳಿಗಳ ಜನರು ಈಗಲೂ ಮೊದಲಿನಂತೆಯೇ ಅದೇ ಹೊಕ್ಕುಬಳಕೆ ಸಂಬಂಧಗಳಲ್ಲೆ ಬದುಕುವುದು ನೋಡಿ ಮನಸ್ಸು ನಿರಾಳವಾಗುತ್ತದೆ. ಅಸಲಿಗೆ ನಮ್ಮೂರ ಕಡೆಯ ಹಳ್ಳಿ ಜನರಿಗೆ ಸೌಹಾರ್ದ, ಸಹಬಾಳ್ವೆ, ಒಳಗೊಳ್ಳುವಿಕೆ, ಸಹಿಷ್ಣುತೆ ಇಂಥ ಪದಗಳ ಅರ್ಥವೇ ಗೊತ್ತೆ ಇಲ್ಲ. ಮಾತಾಡುವುದೂ ಇಲ್ಲ, ಆದರೆ ಸುಮ್ಮನೆ ಬದುಕುತ್ತಾರೆ ಅಷ್ಟೆ. ಸಾವಯವ ಸಂಬಂಧಗಳೇ ಹಾಗೆ ಅಲ್ಲವೇ? ಗದಗ ಜಿಲ್ಲೆಯ ಜಾಲಹಳ್ಳಿಯ ಗ್ರಾಮದ ರಾಜಾಂಬಿ ಅನ್ನೋ ಈ ಅವ್ವಳ ಕಥೆ ಇಂಥ ಒಂದು ಅರ್ಥಪೂರ್ಣ ಬದುಕಿಗೆ ಕನ್ನಡಿಯಂತಿದೆ.
ನನಗೆ ರಾಜಾಂಬಿ ಪರಿಚಯವಾದದ್ದು ಗದಗ ಜಿಲ್ಲೆಯ ರೋಣ ತಾಲೂಕಿನ ಲಕ್ಕಲಕಟ್ಟಿ ಅನ್ನೋ ನನ್ನ ಬೀಗರ ಊರಲ್ಲಿ. ಕಳೆದ ಸಲ ಕೊರೊನಾ ಲಾಕ್ಡೌನ್ ಸಮಯದಲ್ಲಿ ನಾನು ಬೀಗರ ಊರಿಗೆ ಹೋಗಿದ್ದಾಗ ಈ ರಾಜಾಂಬೆವ್ವ ಪರಿಚಯವಾಗಿದ್ದಳು. ವಿಚಿತ್ರ ಅಂದ್ರೆ ಆ ಕೊರೋನಾ ಸಮಯದಲ್ಲಿ ಇಡೀ ದೇಶದ ತುಂಬ ಮುಸ್ಲಿಂ ಸಮುದಾಯದ ಬಗ್ಗೆ ಕೊರೊನಾ ವೈರಸ್ ಹರಡುವ ತಬ್ಲೀಗಿಗಳು ಎಂದೆಲ್ಲ ಅಪ ಪ್ರಚಾರ ಮಾಡುತ್ತಿರುವ ಆ ದಿನಗಳಲ್ಲಿಯೂ ನಮ್ಮ ಕಡೆಯ ಉತ್ತರ ಕರ್ನಾಟಕದ ಹಳ್ಳಿಗಳು ಇವ್ಯಾವ ಗೌಜಿ ಗದ್ದಲಗಳಿಗೆ ಕಿವಿಗೊಡದೇ ತಣ್ಣಗಿದ್ದವು. ಇಲ್ಲಿನ ಹಿಂದೂ-ಮುಸ್ಲಿಮರು ಕಾಕಾ, ದೊಡ್ಡಪ್ಪ, ಮಾವ, ಅತ್ತಿ, ಅಣ್ಣ ಅನ್ಕೊಂಡು ಅದೇ ಹಳೆಯ ಬದುಕನ್ನೇ ಬದುಕುತ್ತಿದ್ದರು. ನಿಜ ಹೇಳಬೇಕೆಂದರೆ ಈ ಹಳ್ಳಿ ಜನರಿಗೆ ಮುಸ್ಲಿಂ ಅನ್ನುವುದು ಒಂದು ಪ್ರತ್ಯೇಕ ಧರ್ಮ ಅನ್ನುವ ಪರಿಜ್ಞಾನವೂ ಇರಲಿಲ್ಲ. ಕುರುಬರು, ಕುಂಬಾರರು, ಉಪ್ಪಾರರು ಎಂಬ ಜಾತಿಗಳಿರುವಂತೆ ಅದೊಂದು ಜಾತಿ ಜಾತಿಯಂದೇ ಅವರೆಲ್ಲ ನಂಬಿಕೊಂಡಿದ್ದಾರೆ.
ಹಾಗಂತ ಹಳ್ಳಿಯ ಎಲ್ಲರೂ ಹೀಗೆಯೆ ಬದುಕುತ್ತಿದ್ದರು ಎಂದು ಹೇಳಿದರೆ; ಇದು ಒಣ ಆದರ್ಶದ ಮಾತಷ್ಟೇ ಆಗುತ್ತದೆ. ಇಂಥ ಹಳ್ಳಿಗಳಲ್ಲೂ ಯಾರೆಲ್ಲ ಸಿಟಿಗಳ ಕಾಲೇಜು ಓದುತ್ತಿದ್ದರೋ, ಯಾರೆಲ್ಲರ ಕೈಯಲ್ಲಿ ಕ್ಷಣಕ್ಕೊಮ್ಮೆ ಟಿಣಕ್ ಪಣಕ್ ಅಂತ ಮಿಂಚುವ ಮೊಬೈಲ್ಗಳಿದ್ದವೋ ಅಂಥ ಎಳಸು ಯುವಕರ ಮಾತ್ರ ಇಂಥ ತಣ್ಣಗಿನ ಹಳ್ಳಿಗಳಲ್ಲೂ ಮುಸ್ಲಿಮರನ್ನು ಕಂಡಾಗ ಮುಸು ಮುಸು ಅಂತ ಮುಸುಗುಡುತ್ತಿದ್ದರು. ಆಗ ಆ ಊರು ಹಿರಿಕರು ಈ ಯುವಕರ ಮುಸುಗುಡುವಿಕೆಯನ್ನು ಶಾಂತಗೊಳಿಸುತ್ತಿದ್ದರು.
ಊರೂರು ತಿರುಗಾಡಿ ತರಕಾರಿ ಮಾರಾಟ ಮಾಡುತ್ತಿದ್ದ ಜಾಲಹಳ್ಳಿಯ ಈ ರಾಜಾಂಬೆವ್ವ ಕೊರೊನಾ ಲಾಕ್ಡೌನ್ ಸಮಯದಲ್ಲಿ ಈ ಲಕ್ಕಲಕಟ್ಟಿ ಗ್ರಾಮದಲ್ಲಿಯೇ ಲಾಕ್ ಆಗಿಬಿಟ್ಟಿದ್ದಳು. ಆಕೆ ಈ ಹಳ್ಳಿಗೆ ಬಂದ ದಿನವೇ ಸರಕಾರಿ ಬಸ್ ಸಂಚಾರ ಸೇರಿದಂತೆ ಎಲ್ಲ ಸಂಚಾರಗಳನ್ನು ಬಂದ್ ಮಾಡಿ ಬಿಟ್ಟಿತ್ತು. ಹಾಗಾಗಿ ಈ ರಾಜಾಂಬೆವ್ವ ತಿಂಗಳುಗಟ್ಟಲೇ ಲಕ್ಕಲಕಟ್ಟಿಯಲ್ಲಿಯೇ ಉಳಿದುಕೊಳ್ಳುವ ಪ್ರಸಂಗ ಬಂದಿತ್ತು. ಆಗ ಆಕೆ ಉಳಿದುಕೊಳ್ಳಲು ಆಯ್ಕೆ ಮಾಡಿಕೊಂಡಿದ್ದ ಜಾಗ ಗ್ರಾಮದ ಅಳೆ ಬಸಪ್ಪನ ದೇವಸ್ಥಾನದ ಒಳಾಂಗಣ. ಆಕೆ ಹೀಗೆ ತರಕಾರಿ ಮಾರಾಟ ಮಾಡಲು ಯಾವುದೇ ಊರಿಗೆ ಹೂದರೂ, ಆ ಊರಲ್ಲಿ ಉಳಿದುಕೊಳ್ಳುವ ಆಕೆ ದೇವಸ್ಥಾನಗಳಲ್ಲೆ ಉಳಿದುಕೊಳ್ಳುವ ರೂಢಿ ಇಟ್ಟುಕೊಂಡಿದ್ದಾಳೆ. ಗುಡಿಗೆ ಬರುವ ಪ್ರತಿಯೊಬ್ಬರು ಆಕೆಯನ್ನು ಮಾತಾಡಿಸಿದ ಹಿಂದಿರುಗುತ್ತಿದ್ದರು.
ಆಕೆಗೆ ಊರವರೇ ಪ್ರತಿ ದಿನ ಅಜ್ಜಿಗೆ ಊಟ ತಿಂಡಿ ವ್ಯವಸ್ಥೆ ಮಾಡುತ್ತಿದ್ದಾರೆ. ಈ ಅಜ್ಜಿ ಊರು ಇಲ್ಲಿಂದ 30 ಕಿಮೀ ದೂರದಲ್ಲಿರುವ ಜಾಲಿಹಾಳ ಗ್ರಾಮ. ಜಾಲಿಹಾಳದಿಂದ ಮಗ ದಿನವೂ ಪೊನ್ ಮಾಡಿ ವಿಚಾರಿಸುತ್ತಾನೆ “ಟಂಟಂ ಗಾಡಿ ಬಾಡಿಗೆ ಮಾಡ್ಕೊಂಡು ಬರ್ಲೇನ ಬೇ ಯವ್ವ ಕರ್ಕೊಂಡ ಹೋಗಾಕ” ಅಂತ ಮಾತಿಗೆಂಬಂತೆ ಕೇಳುತ್ತಾನೆ. ಅಜ್ಜಿ “ಬ್ಯಾಡಬಿಡು ಇಲ್ಲೇನ ಕಡಿಮಿ ಐತಿ ನಂಗ. ಇಲ್ಲೆ ಊರ ಮನೆಗೊಳಾಗ ರುಚಿ ರುಚಿ ಊಟ ಮಾಡ್ಕೊಂಡು ಆರಾಮ ಅದಿನಿ” ಅನ್ನುತ್ತಾಳೆ.. ಅಲ್ಲಿಗೆ ಆತನೂ ಸುಮ್ಮನಾಗಿಬಿಡುತ್ತಾನೆ. ಮಗನಿಗೆ ಯಾಕೆವಿನಾಕಾರಣ ಖರ್ಚು ಮಾಡಿಸಬೇಕು ಅನ್ನೋದು ಈ ತಾಯಿ ಹೃದಯದ ಲೆಕ್ಕಾಚಾರ.
ಹಂಗ ನೋಡಿದ್ರ ಅಜ್ಜಿನ ಲಗ್ನ ಮಾಡಿ ಕೊಟ್ಟಿದ್ದು ಬಾಗಲಕೋಟ ಜಿಲ್ಲೆ ಶಿರೂರು. ಪ್ರತಿದಿನವೂ ಗಂಡ ಸೆರೆ ಕುಡಿದು ಬಂದು ಹೊಡೆಯೋದು ಬಡಿಯೋದು, ವರದಕ್ಷಿಣೆ ತುಗೊಂಬಾ ಅಂತ ಕಿರಿ ಕಿರಿ ಮಾಡುತ್ತಿದ್ದುದರಿಂದ ಶಿರೂರು ಬಿಟ್ಟು ಬಂದು ತನ್ನ ಸಂಬಂಧಿಕರ ಊರು ಜಾಲಿಹಾಳಕ್ಕೆ ಬಂದು ಪುಟ್ಟ ಬಾಡಿಗೆ ಮನೆಯಲ್ಲೆ ವಾಸವಾಗಿದ್ದಳು. ಆದ್ರೆ ಬಾಡಿಗೆ ಕೊಡಲಿಕ್ಕಾಗದ್ದರಿಂದ ಸಂಬಂಧಿಕರು ಮನೆಯಿಂದ ಹೊರಗೆ ಹಾಕಿದರು. ಊರ ಹೊರಗಿನ ಬಯಲು ಜಾಗದಲ್ಲಿ ಕೆಲವರು ಗುಡಿಸಲು ಕಟ್ಟಿಕೊಟ್ಟು ನೆರವಾದರು.
ಆಗ ಮಾವಿನ ಹಣ್ಣಿನ ಸುಗ್ಗಿ ಇತ್ತಂತೆ. ಸುತ್ತಲಿನ ಹಳ್ಳಿಗಳ ರೈತರ ಮಾವಿನ ಗಿಡಗಳನ್ನು ಗುತ್ತಿಗೆ ಹಿಡಿದು ಊರೂರು ಅಡ್ಡಾಡಿ ಮಾವಿನ ಹಣ್ಣುಗಳನ್ನು ಮಾರಾಟ ಮಾಡುತ್ತಿದ್ದಳಂತೆ. ಊರ ಮನೆಗಳ ಜನರಲ್ಲಿ ಆಗ ರೊಕ್ಕ ಇರುತ್ತಿರಲಿಲ್ಲ. ಹೀಗಾಗಿ ಸೇರು ಜ್ವಾಳ ಕೊಟ್ಟರೆ ಈಕೆ ಅರ್ಧ ಡಜನ್ ಮಾವಿನ ಹಣ್ಣು ಕೊಡ್ತಿದ್ಲಂತೆ. ಹೀಗೆ ಮಾಡಿಯೇ ಒಂದೇ ವರ್ಷದಲ್ಲಿ ಎರಡು ಚೀಲ ಜ್ವಾಳ ಸಂಪಾದಿಸಿದಳಂತೆ. ಮುಂದೆ ಗಜೇಂದ್ರಗಡದ ಕಾಡುಗುಡ್ಡದಲ್ಲಿ ಸಿಗುತ್ತಿದ್ದ ಸೀತಾಫಲ ಹಣ್ಣುಗಳನ್ನು ತಂದು ಮಾರಾಟ ಮಾಡಿ ಒಂದೂವರೆ ಚೀಲ ಜ್ವಾಳ ಸಂಪಾದಿಸಿದಳಂತೆ.

ಆದ್ರೆ ನಂತರ ಬಂದ ಮಳೆಗಾಲದಲ್ಲಿ ಇಕೆ ಹಾಕಿಕೊಂಡಿದ್ದ ಗುಡಿಸಲೆಲ್ಲ ಸೋರತೊಡಗಿತಂತೆ. ಜೋಳದ ಚೀಲಗಳು ತಳದಲ್ಲಿ ಮೊಳಕೆಯೊಡೆದು ಗುಡಿಸಲು ಹೊಲವಾಗತೊಡಗಿತಂತೆ. ಊರವರೆಲ್ಲ ಬೈದಿದ್ದರಿಂದ ಅವೇ ಜ್ವಾಳ ಮಾರಿ ಆರು ತಗಡು (ಸೀಟು) ಕೊಂಡು ಗುಡಿಸಲ ಮೇಲೆ ಹೊದಿಸಿಕೊಂಡಳಂತೆ. ಮುಂದೇ ಹೀಗೆ ಹಣ್ಣು ತರಕಾರ ಮಾರಿ ಚಿಲ್ಲರೆ ಕಾಸು ಕೂಡಿಟ್ಟು ತನ್ನ ಮೂವರು ಹೆಣ್ಣುಮಕ್ಕಳನ್ನು ಮದುವೆ ಮಾಡಿಕೊಟ್ಟಿದ್ದಾಳೆ. ಇಬ್ಬರು ಗಂಡು ಮಕ್ಕಳಿಗೆ ಚಿಕ್ಕದಾದ ಚೊಕ್ಕದಾದ ಎರಡು ಮನೆಗಳನ್ನು ಹಾಕಿಸಿಕೊಟ್ಟಿದ್ದಾಳೆ. ವಿಚಿತ್ರವೆಂದರೆ ಮನೆ ಹಾಕಿಸಿದ್ದು ಹಿಂದೂಗಳ ಜಾಗದಲ್ಲಿ. ಮನೆ ಹಾಕಿಸುವಾಗ ಸಣ್ಣಪುಟ್ಟದಕ್ಕೆಲ್ಲ ರೊಕ್ಕ ಕೊಟ್ಟು ಮನೆ ಕಟ್ಟಿಸಿಕೊಳ್ಳಲು ನೆರವಾದವರು ಕೂಡ ಹಿಂದೂಗಳೇ ಅಂತ ಮುದುಕಿ ನಿನ್ನೆ ರಾತ್ರಿ ನನ್ನ ಮುಂದೆ ಕಥೆ ಮಾಡಿ ಹೇಳಿದಳು.
ಈ ಹಳ್ಳಿಗಳಲ್ಲಿರುವ ಇಂಥ ದೇವಸ್ಥಾನಗಳ ಬಗ್ಗೆ ಇಲ್ಲೆ ಒಂದೆರಡು ಮಾತು ಹೇಳಬೇಕು. ಹಳ್ಳಿಗರ ಅಗತ್ಯಕ್ಕೆ ತಕ್ಕಂತೆ ಈ ದೇವಸ್ಥಾನಗಳು ಪ್ರತಿದಿನ ನಾನಾ ರೂಪಗಳನ್ನು ತಾಳುತ್ತಿರುತ್ತವೆ. ಬೆಳಗ್ಗೆ ಊರು ಜನರು ಜಳಕ ಮುಗಿದ ಕೈಯಲ್ಲಿ ಎಣ್ಣಿಬತ್ತಿ ಹಿಡ್ಕೊಂಡು ಐದಾರು ಸುತ್ತು ಹಾಕಿ ವಾಕಿಂಗ್ ಪಥವಾಗಿ ಬಳಸಿಕೊಳ್ಳುತ್ತಾರೆ. ಮಧ್ಯಾಹ್ನದ ಬಿಡುವಿನಲ್ಲಿ ಹುಲಿಮನಿಯಾಟ, ಚಕ್ಕಾ ದೋಣಿಯಾಡುತ್ತಾರೆ. ಸಂಜೆಯಾಗುತ್ತಿದ್ದಂತೆ ಗುಡಿ ಅಂಗಳದಲ್ಲಿ ಅನೌಪಚಾರಿಕ ಚರ್ಚಾಕೂಟ, ವಾಗ್ವಾದ, ಸಂವಾದ, ವಿಚಾರಗೋಷ್ಠಿಗಳ ನಡೆಯುವ ವೇದಿಕೆಯಾಗುತ್ತದೆ. ರಾತ್ರಿಯಾಗುತ್ತಿದ್ದಂತೆ ಮದುವೆಯಾಗದ ಹುಡುಗರು, ವಯಸ್ಸಾದ ಮುದುಕರು ಕೌದಿ ಬಗಲಾಗಿಟ್ಟುಕೊಂಡು ಬರತೊಡಗಿದಂತೆ ಚರ್ಚಾಗೋಷ್ಠಿಗಳಲ್ಲಿದ್ದ ಜನರು ಒಬ್ಬೊಬ್ಬರಾಗಿ ಜಾಗ ಖಾಲಿ ಮಾಡುತ್ತಾರೆ.
ಇದನ್ನು ಓದಿದ್ದೀರಾ? ಕೊಪ್ಪಳ| ವರಮಹಾಲಕ್ಷ್ಮಿ ಹಬ್ಬ ಮಾಡಿದ ಮುಸ್ಲಿಂ ಕುಟುಂಬ
ಹಳ್ಳಿಗಳಲ್ಲಿನ ಬಹುತೇಕ ಯುವಕರ ಬ್ರಹ್ಮಚರ್ಯಾಶ್ರಮ ಮತ್ತ ಮುದುಕರ ವಾನಪ್ರಸ್ಥಾಶ್ರಮಗಳು ಇಂಥ ದೇವಸ್ಥಾನಗಳಲ್ಲೇ ಮುಗಿಯುತ್ತವೆ. ಬಾಲ್ಯ ಮತ್ತು ಸಂಸಾರ ಆವಸ್ಥೆಗಳು ಮಾತ್ರ ಮನೆಯಲ್ಲಿ ನಡೆಯುತ್ತವೆ. ಹುಡುಗ ಹಾಸಿಗೆ ತೊಗೊಂಡು ಗುಡಿಗೆ ಬರಲಿಕ್ಕೆ ಶುರು ಮಾಡಿದನೆಂದ್ರೆ ಆತ ಬಾಲ್ಯವಸ್ಥೆಯಿಂದ ಯವ್ವನಾವಸ್ಥೆಗೆ ಕಾಲಿಟ್ಟನೆಂದೇ ಅರ್ಥ. ಮುದುಕ ಬಗಲಲ್ಲಿ ಹಾಸಿಗೆ ಇಟ್ಕೊಂಡು ಬರತೊಡಗಿದನಂದ್ರೆ ಮನೆಯಲ್ಲಿ ಮಕ್ಕಳು ದೊಡ್ಡವರಾಗಿದ್ದಾರೆ; ಸಾಕಿನ್ನು ಅಂತ ಮುದುಕಿ ಹೊರಗೆ ಹಾಕಿದ್ದಾಳೆ ಅಂತಲೇ ಅರ್ಥ.
ಅದೇನೇ ಇರಲಿ, ಈಗಲೂ ಹಳ್ಳಿಗಳೆಂದರೆ, ಕೊಡುಕೊಳ್ಳುವಿಕೆಗೆ ಮತ್ತು ಕೂಡುಬಾಳ್ವೆಗೆ ಮಾದರಿಗಳೆಂದೇ ಹೇಳಬಹುದು. ಇಂಥ ಹಳ್ಳಿಗಳಲ್ಲೂ ಇತ್ತೀಚೆಗೆ ವಾಟ್ಸಪ್ ಯುನಿವರ್ಸಿಟಿಯ ಬ್ರ್ಯಾಂಚ್ಗಳು ಶುರುವಾಗಿದ್ದರಿಂದ, ಅಲ್ಲಿನ ಯುವಕರ ಅಂಗೈ ಅಗಲ ಪರದೆಯ ಮೇಲೆ ತುಪುಕ್ ತುಪುಕ್ ಅಂತ ಮೆಸೇಜ್ಗಳು ಶೇರ್ ಆಗ್ತಿರೋದ್ರಿಂದ; ಮುಂದೆ ಹೆಂಗೆ ಅನ್ನೋ ಭಯ ಅಂತೂ ಇದ್ದೆ ಇದೆ.