ಸಾಯಿರಾಳ ಪುಟ್ಟ ಮನೆಯಲ್ಲಿ ಪ್ರೀತಿಗೇನೂ ಬರವಿರಲಿಲ್ಲ

saira

ಅವ್ರು ಸಾಬ್ರು, ನಾವು ಅವ್ರ ಮನೆಗೋಗದು ಸರಿ ಇರಲ್ಲ ಅನ್ನೋದು ಅಣ್ಣನ ಮನಸ್ಸಲ್ಲಿತ್ತು. ಬಾಗಿಲಲ್ಲೇ ನಿಂತು ಪತ್ರಿಕೆ ಕೊಟ್ಟು ವಾಪಸ್ ಬರೋಣ ಅಂತಾ ಅಂದೆ. ಅಣ್ಣ  ಒಲ್ಲದ ಮನಸ್ಸಿನಿಂದಲೇ ಅವರ ಮನೆಯತ್ತ ಬೈಕ್ ತಿರುಗಿಸಿದ. ಸಾಯಿರಾ ಮನೆ ತುಂಬ ಬಾಟಲ್, ಪ್ಲಾಸ್ಟಿಕ್ ಸಾಮಾನುಗಳು ರಾಶಿ ಇದ್ವು. ಆದರೆ ಅಲ್ಲಿ ಪ್ರೀತಿಗೇನೂ ಕೊರತೆ ಇರಲಿಲ್ಲ.

ಅಣ್ಣನ ಮದುವೆಗೆ ಇನ್ನು ಕೇವಲ ಮೂರು ದಿನ ಬಾಕಿ ಇತ್ತು. ʼನಾಳೆ ನಾನು ಎಲ್ಲಿಯೂ ಹೊರಗೆ ಹೋಗುವ ಹಾಗಿಲ್ಲ. ನಿನ್ನ ಫ್ರೆಂಡ್ಸ್ ಎಲ್ಲರಿಗೂ ಇನ್ವಿಟೇಷನ್ ಕೊಟ್ಟು ಬರೋಣ ಬಾ. ಇಲ್ಲದಿದ್ದರೆ ನಾಳೆ ನೀನು ಒಬ್ಬಳೇ ಹೋಗಬೇಕಾಗುತ್ತೆʼ ಎಂದ ಅಣ್ಣ. ಇವ್ನು ಹೇಳ್ದಂಗೆ ಮಾಡ್ತಾನೆ. ಯಾಕ್ ಬೇಕು ನಾನೊಬ್ಬಳೇ ನಾಳೆ ಪಡಿಪಾಟಲು ಪಡುವ ಬದಲು ಇಂದು ಹೋಗೋದೇ ಉತ್ತಮ ಎಂದುಕೊಂಡು ಆತುರಾತುರಾಗಿ ರೆಡಿಯಾದೆ.

ದೊಡ್ಡಬಳ್ಳಾಪುರದ ಹೊನ್ನಾವರದಿಂದ ಶುರುವಾದ ನಮ್ಮ ಪಯಣ ಇಸ್ತೂರು, ಶ್ಯಾಕಲದೇವನಪುರ, ಹೊನ್ನಾದೇವಿಪುರ, ಪುಟ್ಟಯ್ಯನ ಅಗ್ರಹಾರ ಮಾರ್ಗವಾಗಿ ಕಾಡನೂರು ತಲುಪಿತು. ಬಹುತೇಕ ಆ ಮಾರ್ಗದ ಸ್ನೇಹಿತರೆಲ್ಲರಿಗೂ ಪತ್ರಿಕೆ ಕೊಟ್ಟಾಗಿತ್ತು. ಎಲ್ಲರಿಗೂ ಪತ್ರಿಕೆ ಕೊಟ್ಟಾಯ್ತಲ್ಲ. ಬೇರೆ ಬೇರೆ ಕೆಲಸಗಳಿವೆ. ಮನೆಗೆ ಹೋಗಣ್ವ ಅಂದ ಅಣ್ಣ. ತಾಳಣ್ಣ.. ಇಲ್ಲೇ ಹೋಗ್ತಾ ನನ್ ಫ್ರೆಂಡ್ ಸಾಯಿರಾ ಮನೆಯಿದೆ. ಹಾಗೆ ಹೋಗಿ ಅವ್ಳಿಗೊಂದು ಕಾರ್ಡ್ ಕೊಟ್ಟು ಹೋಗಣ ಅಂದೆ. ಸಾಯಿರಾ ಅಂದ್ರೆ ಯಾರು? ಅಂದ. ಆಮೇಲೆ ಅವನೇ ಸೈಕಲ್‌ನಲ್ಲಿ ಊರೂರು ಸುತ್ತಿ, ಸಾರಾಯಿ ಬಾಟಲ್ ಈಸ್ಕೊಂಡು ಮಿಠಾಯಿ ಕೊಡ್ತಾರಲ್ಲ ಅವ್ರ ಮಗಳಾ ಅಂದ. ಹೌದು ಅಂತಾ ತಲೆಯಾಡಿಸಿದೆ.

ಲೇಯ್.. ಅವ್ರ ಮನೆಗೋಗದು ಹೆಂಗೆ ಅಂದ..ಯಾಕಂದ್ರೆ ಅವ್ರು ಸಾಬ್ರು.. ನಾವು ಅವ್ರ ಮನೆಗೋಗದು ಸರಿ ಇರಲ್ಲ ಅನ್ನೋದು ಅಣ್ಣನ ಮನಸ್ಸಲ್ಲಿತ್ತು. ಆದರೆ ನಾನು ಜಾಸ್ತಿ ಹೊತ್ತು ಇರೋದು ಬೇಡ. ಬಾಗಿಲಲ್ಲೇ ನಿಂತು ಪತ್ರಿಕೆ ಕೊಟ್ಟು ವಾಪಸ್ ಬರೋಣ ಅಂತಾ ಅಂದೆ. ಅಣ್ಣ  ಒಲ್ಲದ ಮನಸ್ಸಿನಿಂದಲೇ ಅವರ ಮನೆಯತ್ತ ಬೈಕ್ ತಿರುಗಿಸಿದ. ನಾವು ಅಂದುಕೊಂಡಂತೆಯೇ ಸಾಯಿರಾ ಮನೆ ತುಂಬ ಬಾಟಲ್, ಪ್ಲಾಸ್ಟಿಕ್ ಸಾಮಾನುಗಳು ರಾಶಿ ಇದ್ವು. ಅಣ್ಣ ನನ್ನ ಮುಖ ನೋಡಿದ. ಈಗ ಅಣ್ಣನಿಗೆ ಕೊಂಚ ಇರಿಸುಮುರಿಸಾಯಿತು. ಆದರೂ, ಇಬ್ಬರು ಮನೆಯ ಒಳಗೆ ಹೋದೆವು. ಸಾಯಿರಾ ಕಾಲೇಜಿಗೆ ರೆಡಿಯಾಗಿ ಹೂ ಕಟ್ಟುತ್ತಿದ್ದಳು. ನಮ್ಮ ಮುಖ ನೋಡಿದ ಕೂಡಲೇ, ದಿವಾನದ ಮೇಲಿದ್ದ ಸಾಮಾನುಗಳನ್ನು ಕೆಳಗಿಳಿಸಿ ನಮಗೆ ಕುಳಿತುಕೊಳ್ಳಲು ಜಾಗ ಮಾಡಿಕೊಟ್ಟಳು. ʼಪರ್ವಾಗಿಲ್ಲ ಸಾಯಿರಾ, ಅಣ್ಣನ ಮದ್ವೆ ಇನ್ವಿಟೇಷನ್ ಕೊಟ್ಟು ಹೋಗೋಣ ಅಂತಾ ಬಂದ್ವಿ ಅಂದೆʼ. ʼಹೇಯ್ ಕೂತ್ಕೊ, ಸಾರಿ ನೀವು ಬರ್ತಿರಾ ಅಂತಾ ಗೊತ್ತಿರ್ಲಿಲ್ಲ. ಮನೆ ತುಂಬಾ ಸಾಮಾನು ತುಂಬ್ಕೊಂಡಿದಿವಿ ಅಂದ್ಲು..ʼ ಇರ್ಲಿ ಬಿಡು ಮತ್ತೇನು ಸುದ್ದಿ, ಹೇಗಿದ್ದಿ ಎಂದು ವಿಷಯ ಬದಲಾಯಿಸಿದೆ.

ಇಬ್ಬರೂ ಸ್ವಲ್ಪ ಹೊತ್ತು ಮಾತನಾಡಿಕೊಂಡೆವು. ಅಷ್ಟೊತ್ತಿಗೆ ಸಾಯಿರಾ ಅಪ್ಪ ವ್ಯಾಪಾರ ಮುಗಿಸಿ ಸೈಕಲ್‌ನಲ್ಲಿ ಬಂದಿಳಿದರು. ನಮ್ಮನ್ನು ನೋಡಿದ ಕೂಡಲೇ, ಓಹ್ ನೀವಾ.. ಕೂತ್ಕೊಳಿ.. ನಿಮ್ಮೂರಿಗೂ ವ್ಯಾಪಾರಕ್ಕೆ ಹೋಗಿದ್ದೆ ಅಂದ್ರು. ಹಾಗೇ ಮಾತಾಡ್ತಾ, ʼಸಾಯಿರಾ, ಇವರಿಗೆ ತಿನ್ನೋಕೆ ಏನಾದ್ರು ಕೊಟ್ಯೇನಮ್ಮʼ ಅಂದ್ರು. ಅವಳು, ಇವರು ಈಗ ತಾನೆ ಬಂದ್ರು. ಕೊಡ್ತಿನಿ ಅಂದ್ಲು.. ನಾವಿಬ್ಬರು ನಮಗೇನು ಬೇಡ ಅಂತಾ ಹೇಳಿ ಪತ್ರಿಕೆ ಕೊಡಲು ಮುಂದಾದ್ವು. ಅಷ್ಟೊತ್ತಿಗಾಗಲೇ ಸಾಯಿರಾ ತಾತ ನಾವು ಬಂದಿದ್ದನ್ನು ಹೊರಗಿನಿಂದಲೇ ಗಮನಿಸಿದ್ದರು. ಎರಡು ಜ್ಯೂಸ್ ಬಾಟಲ್, ಬಾಳೆಹಣ್ಣು ಇದ್ದ ಒಂದು ಕವರ್ ತಂದು ಸಾಯಿರಾ ಕೈಗಿಟ್ಟರು. ಸಾಯಿರಾ ನಮ್ಮಿಬ್ಬರಿಗೂ ಜ್ಯೂಸ್ ಮತ್ತು ಬಾಳೆಹಣ್ಣು ಕೊಟ್ಟಳು. ನನಗೆ ದುಂಡು ಮಲ್ಲಿಗೆ ಇಷ್ಟವೆಂದು ಸಾಯಿರಾಗೂ ತಿಳಿದಿತ್ತು. ಹಾಗಾಗಿ ಮಾತಾಡುತ್ತಲೇ ಎರಡು ಮೊಳ ಹೂ ಕಟ್ಟಿದಳು.

ಇಲ್ಲಿಯೇ ಜಾಸ್ತಿ ಟೈಮ್ ಆಗೋಯ್ತು. ಹೊರಡೋಣ ಅಂತಾ ರೆಡಿಯಾದೆವು.  ಸ್ವಲ್ಪ ಹೊತ್ತು ಇರಿ, ಏನಾದ್ರು ಮಾಡ್ತಿನಿ ತಿಂದ್ಕೊಂಡು ಹೋಗಿವ್ರಂತೆ ಅಂದಳು. ಇಲ್ಲ ಮದ್ವೆ ಕಾರ್ಯಗಳೆಲ್ಲ ಜಾಸ್ತಿ ಇದಾವೆ. ಇನ್ನು ಸಾಕಷ್ಟು ಜನರಿಗೆ ಇನ್ವಿಟೇಷನ್ ಕೊಟ್ಟಿಲ್ಲ. ಎಷ್ಟೊತ್ತಾದರೂ, ಇಂದು ಸಂಜೆಯೊಳಗೆ ಕೊಟ್ಟು ಮುಗಿಸಬೇಕು ಅಂದ ಅಣ್ಣ. ಸಾಯಿರಾ ಆವರೆಗೆ ಕಟ್ಟಿದ್ದ ಮಲ್ಲಿಗೆ ಹೂವನ್ನು ನನ್ನ ಕೈಗಿತ್ತಳು. ಮದುವೆಗೆ ಮಿಸ್ ಮಾಡದೆ ಬನ್ನಿ ಅಂತೇಳಿ ನಾನು-ಅಣ್ಣ ಹೊರಟೆವು.

ಮನೆ ಚಿಕ್ಕದಾದರೂ ಪ್ರೀತಿಗೆ ಬರವಿರಲಿಲ್ಲ

ಸಾಯಿರಾ ಮನೆಯಲ್ಲಿ ಪ್ರೀತಿಗೇನೂ ಕೊರತೆಯಿರಲಿಲ್ಲ. ಅಣ್ಣನಿಗೆ ಸಾಯಿರಾ ಮನೆಯವರ ಮಾತು, ಅವರು ತೋರಿದ ಪ್ರೀತಿ ಇಷ್ಟವಾಗಿತ್ತು. ಇಬ್ಬರೂ, ಬೈಕ್ ಏರಿ ಮನೆಯತ್ತ ಹೊರಟೆವು. ಬೆಳಗ್ಗೆಯಿಂದ ಎಷ್ಟೋ ಜನರ ಮನೆಗೆ ಹೋಗಿದ್ವಿ ಕಣೆ... ಆದರೆ, ಇವರು ಟ್ರೀಟ್ ಮಾಡ್ದಂಗೆ ಯಾರೂ ಮಾಡ್ಲಿಲ್ಲ ಅಂದ ಅಣ್ಣ.. ನಾನು ಖುಷಿಯಿಂದ ಎಷ್ಟೇ ಆದ್ರೂ, ಅವ್ಳು ನನ್ ಫ್ರೆಂಡಪ್ಪಾ... ಬೆಳಗ್ಗೆಯಿಂದ ನಾವು ಹೋಗಿದ್ದು ನಿನ್ ಫ್ರೆಂಡ್ಸ್ ಮನೆಗೆ... ಈಗ ಹೋಗಿದ್ದು ನನ್ ಫ್ರೆಂಡ್ಸ್ ಮನೆಗೆ ಅಂತಾ ಬೀಗಿದೆ. ಮನೆಗೆ ಹೋದ ಮೇಲೆ ಅಣ್ಣ ಸಾಯಿರಾ ಕುಟುಂಬದ ಬಗ್ಗೆ ಅಮ್ಮ-ಅಪ್ಪನ ಬಳಿ ಹೇಳಿದ. ಅವ್ರು ಖುಷಿ ಪಟ್ರು. ಆಮೇಲೆ ಸಾಯಿರಾ ತಂದೆ ನಮ್ಮ ಊರಿಗೆ ವ್ಯಾಪಾರಕ್ಕೆ ಬಂದಾಗಲೆಲ್ಲ, ನಮ್ಮ ಮನೆಗೆ ಬಂದು ಕಾಫಿ, ಟೀ ಕುಡ್ಕೊಂಡು ಹೋಗೋರು.

ಅಣ್ಣನ ಮದುವೆಗೆ ಸಾಯಿರಾ ಮತ್ತು ಅವರ ತಾತ ಬಂದಿದ್ದರು. ಅಪ್ಪ-ಅಮ್ಮ ಅವರನ್ನ ಪ್ರೀತಿಯಿಂದ ಮಾತಾಡ್ಸಿದ್ರು. ಅಂದಿನಿಂದ ನಮ್ಮ ಮನೆಯಲ್ಲಿ  ಏನೇ ಫಂಕ್ಷನ್ ಇದ್ರೂ, ಅವರಿಗೆ ಆಹ್ವಾನ ಇದ್ದೇ ಇರ್ತಿತ್ತು. ಅವರ ಮನೆಯ ಕಾರ್ಯಗಳಿಗೂ ನಮಗೆ ಆಹ್ವಾನ ಇರ್ತಿತ್ತು. ಯಾರು ಬರಲಿ, ಬಿಡಲಿ ನಮ್ಮ ಮನೆಯ ಕಾರ್ಯಗಳಿಗೆ ಸಾಯಿರಾ, ಅವರ ಮನೆಯ ಕಾರ್ಯಗಳಿಗೆ ನಾನು ಹೋಗುವುದು ಮಾತ್ರ ಬಿಡಲಿಲ್ಲ.

ಫೈರೋಜ್‌, ನಾನು ಒಂದೇ ಬೈಕಲ್ಲಿ ಓಡಾಡ್ತಿದ್ವಿ...

ಕಾಲೇಜು ಮುಗಿದು ಬೇಸಿಗೆ ರಜೆ ಬಂದಿತ್ತು. ಮನೆಲಿದ್ದು ಏನ್‌ ಮಾಡ್ತೀಯಾ ಅಂತಾ ಅಮ್ಮ ಕಂಪ್ಯೂಟರ್‌ ಕ್ಲಾಸ್‌ಗೆ ಹಾಕಿದ್ರು. ದಿನಾ ಬೆಳಗ್ಗೆ ಹೋಗಿ ಮಧ್ಯಾಹ್ನ ಕ್ಲಾಸ್‌ ಮುಗ್ಸಿ ಬರ್ಬೇಕಿತ್ತು. ಆದ್ರೆ, ಕಂಪ್ಯೂಟರ್‌ ಕ್ಲಾಸ್‌ಗೆ ಹೋಗ್ಬೇಕಂದ್ರೆ ನಮ್ಮೂರಿಂದ ಬಸ್‌ ಸ್ಟಾಂಡಿಗೆ ಒಂದು ಕಿಲೋ ಮೀಟರ್‌ ನಡೆಯಬೇಕಿತ್ತು. ಅವತ್ತೊಂದಿನ ಅದೇ ರೂಟಲ್ಲಿ ಪಾಷಾ ಕೂಡ ಬಂದ. ಫೈರೋಜ್‌ ಪಾಷಾ ನನ್‌ ಕ್ಲಾಸ್‌ ಮೇಟು. ರಜೆ ಇದ್ದಿದ್ರಿಂದ ಅವ್ನು ಅವ್ರಪ್ಪನಿಗೆ ಸಹಾಯವಾಗ್ಲಿ ಅಂತಾ ವ್ಯಾಪಾರಕ್ಕೋಗ್ತಿದ್ದ. ಹೇಯ್‌.. ನೀನೇನ್‌ ಇಲ್ಲಿ.. ಸ್ಕೂಟಿ ತಗೊಂಡ್‌ ಹೋಗದು ಬಿಟ್ಟು, ಬಿಸಿಲಲ್ಲಿ ನಡೆದುಕೊಂಡು ಹೋಗ್ತಿದ್ಯ ಅಂದ. ಇಲ್ಲ ಕಣೋ.. ಅಮ್ಮ ದಿನಾಲು ಸ್ಕೂಟಿ ಕೊಡಲ್ಲ.. ಅಪರೂಪಕ್ಕೊಂದಿನ ಕೊಡ್ತಾರೆ.. ಅದು ಲೇಟಾದ್ರೆ ಮಾತ್ರ ಅಂದೆ.. ಸರಿ ಬಿಡು ನೀನು ಇನ್ಮುಂದೆ ರೆಡಿಯಾಗಿ ಮೇನ್‌ ರೋಡಿಗೆ ಬಂದ್ಬಿಡು. ದಿನಾ ನಾನು ಕರ್ಕೊಂಡ್‌ ಹೋಗಿ, ಕರ್ಕೊಂಡ್‌ ಬರ್ತಿನಿ ಅಂದ. ಬೇಡ ಕಣೋ.. ಯಾರಾದ್ರೂ ನೋಡಿದ್ರೆ ಅಮ್ಮನಿಗೆ ಹೇಳ್ತಾರೆ ಅಂದೆ. ಅವನು ನೇರವಾಗಿ ನಮ್ಮ ಮನೆಗೆ ಬಂದ. ಅಮ್ಮ-ಅಪ್ಪ-ಅಣ್ಣನ ಜತೆ ಮಾತಾಡ್ದ. ಅಪ್ಪ- ಅಮ್ಮನಿಗೂ ಅವ್ನು ಒಳ್ಳೆ ಹುಡ್ಗ ಅನ್ನಿಸ್ತು. ಅವತ್ತಿಂದ ನಾವಿಬ್ಬರೂ ಒಂದೇ ಬೈಕಲ್ಲಿ ಹೋಗ್ತಿದ್ವಿ, ಬರ್ತಿದ್ವಿ.. ಯಾರು ಏನೇ ಅಂದ್ಕೊಂಡ್ರೂ, ಅಪ್ಪ- ಅಮ್ಮ ಮಾತ್ರ ಒಂದು ದಿನಕ್ಕೂ ನಮ್ಮನ್ನ ಅನ್ಯತಾ ಭಾವಿಸಲಿಲ್ಲ.

ನಮ್‌ ಕಾಲೇಜಲ್ಲಿ ಹೀನಾ ಕೌಸರ್‌, ಸಾಯಿರಾ, ಪಾಚಾಬಿ, ಕರೀಂಬಿ, ಫೈರೋಜ್‌ ಪಾಷಾ, ಕಲ್ಪನಾ, ತ್ರಿವೇಣಿ ಎಲ್ರು ಒಟ್ಟಾಗಿ ಓದ್ತಿದ್ವಿ. ಏನೇ ಡೌಟ್‌ ಬಂದ್ರು ಕೂತು ಒಬ್ಬರಿಗೊಬ್ಬರು ಚರ್ಚಿಸ್ತಿದ್ವಿ. ತಿಂಡಿ ತಂದರೆ ಎಲ್ಲರೂ ಹಂಚಿ ತಿಂತಿದ್ವಿ. ನಮ್ಮ ಮಧ್ಯೆ ಯಾವತ್ತೂ ಜಾತಿ, ಧರ್ಮ, ಮತಗಳ ಗೋಡೆ ಅಡ್ಡ ಬಂದಿರಲಿಲ್ಲ. ಯಾಕೆಂದರೆ ಶಾಲಾ-ಕಾಲೇಜುಗಳನ್ನ ನಾವು ನಮ್ಮ ಮನೆಯಂತೆಯೇ ಭಾವಿಸಿದ್ದೆವು. ಟೀಚರ್ಸ್‌ ಕೂಡ ನಮ್ಮನ್ನ ಮಕ್ಕಳಂತೆ ಕಾಣ್ತಿದ್ರು. ಹಾಗಾಗಿ, ನಮ್ಮಲ್ಲಿ ಯಾವುದೇ ಬೇಧ, ಭಾವವಿರುತ್ತಿರಲಿಲ್ಲ. ಬಹುಮುಖ್ಯವಾಗಿ, ಜಾತಿ-ಧರ್ಮಗಳ ಈಗಿನ "ವಿಶಾಲಾರ್ಥ"ವನ್ನು ನಮಗೆ ತುಂಬುವವರು ಆಗ ಯಾರೂ ಇರಲಿಲ್ಲ.

ನಿಮಗೆ ಏನು ಅನ್ನಿಸ್ತು?
5 ವೋಟ್