ಬನ್ನಿ ಅಗೆಯೋಣಾ... ದೈವ ದೇವರುಗಳನ್ನು ಹುಡುಕೋಣಾ..!

Nagakatte

ಮೊಘಲರು, ನವಾಬರು ಹಿಂದೂಗಳನ್ನು ಓಡಿಸಿ ದೇವಸ್ಥಾನ ನೆಲಸಮ ಮಾಡಿದ್ದಾರೆ ಎನ್ನುವುದಕ್ಕೆ ಯಾವ ಐತಿಹಾಸಿಕ ದಾಖಲೆಯೂ ಇಲ್ಲ. ಆದರೆ ನಮ್ಮ ಕಾಲದಲ್ಲಿ ಹೀಗೆ ದೈವ-ದೇವಸ್ಥಾನಗಳನ್ನು ನೆಲಸಮ ಮಾಡಿದಾಗೆಲ್ಲ ಅಲ್ಲಿದ್ದ ಹಿಂದೂಗಳನ್ನು ನಮ್ಮ ಕಣ್ಣೆದುರೇ ಅಕ್ಷರಶಃ ಓಡಿಸಲಾಗಿದೆ. ಪೊಲೀಸ್ ವ್ಯವಸ್ಥೆಯನ್ನು ಬಳಸಿಕೊಂಡು ದೌರ್ಜನ್ಯ ಮಾಡಲಾಗಿದೆ.

ಮಸೀದಿಯೊಳಗೆ ಶಿವಲಿಂಗ ಹುಡುಕುವುದು ಬಿಟ್ಟು ನಮ್ಮ ನೆಲದೊಳಗೆ ನಮ್ಮದೇ ದೈವ ದೇವರುಗಳನ್ನು ಹುಡುಕೋಣಾ. ಅದರಲ್ಲೂ ಕರಾವಳಿಯಲ್ಲಿ ಅತೀ ದೊಡ್ಡ ಮತ್ತು ಬಲಿಷ್ಠ ಸಂಘಟನೆಯಾಗಿರುವ ಭಜರಂಗದಳ, ವಿಶ್ವಹಿಂದೂ ಪರಿಷತ್, ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರು ಅಗೆಯಲು ಶುರು ಮಾಡಿದರೆ ವರ್ಷಗಟ್ಟಲೆ ದಿನಗಳೂ ಸಾಕಾಗಲ್ಲ ಎನ್ನುವಷ್ಟು ಮಣ್ಣಿನೊಳಗೆ ನಮ್ಮ ದೈವ ದೇವರ ಮೂರ್ತಿಗಳು ಹುದುಗಿರುವ ಪ್ರದೇಶಗಳು ಕರಾವಳಿಯಲ್ಲಿದೆ.

Eedina App

ನಾವು ಮಾತ್ರವಲ್ಲ, ನಮ್ಮ ಮುತ್ತಜ್ಜನೂ ಹುಟ್ಟಿರದ ಕಾಲದಲ್ಲಿ ನವಾಬರೋ, ಮೊಘಲರೋ ಹಿಂದೂಗಳನ್ನು ಓಡಿಸಿ ದೇವಸ್ಥಾನ ನೆಲಸಮ ಮಾಡಿ ಮಸೀದಿ ಸ್ಥಾಪಿಸಿದರು ಎಂಬುದನ್ನು ಪಕ್ಕಕ್ಕಿಡೋಣಾ. ನಮ್ಮದೇ ಕಾಲದಲ್ಲಿ, ನಾವು ನೋಡನೋಡುತ್ತಿದ್ದಂತೆ ಐದಾರು ದೇವಸ್ಥಾನಗಳು, ನೂರಾರು ದೈವದ ಗುಡಿಗಳು, ನೂರಾರು ನಾಗನ ಗುಡಿಗಳನ್ನು ನೆಲಸಮ ಮಾಡಲಾಗಿದೆ. ಮೊಘಲರು, ನವಾಬರು ಹೀಗೆ ಹಿಂದೂಗಳನ್ನು ಓಡಿಸಿ ನೆಲಸಮ ಮಾಡಿದ್ದಾರೆ ಎನ್ನುವುದಕ್ಕೆ ಯಾವ ಐತಿಹಾಸಿಕ ದಾಖಲೆಯೂ ಇಲ್ಲ. ಆದರೆ ನಮ್ಮ ಕಾಲದಲ್ಲಿ ಹೀಗೆ ದೈವ-ದೇವಸ್ಥಾನಗಳನ್ನು ನೆಲಸಮ ಮಾಡಿದಾಗೆಲ್ಲ ಅಲ್ಲಿದ್ದ ಹಿಂದೂಗಳನ್ನು ನಮ್ಮ ಕಣ್ಣೆದುರೇ ಅಕ್ಷರಶಃ ಓಡಿಸಲಾಗಿದೆ. ಪೊಲೀಸ್ ವ್ಯವಸ್ಥೆಯನ್ನು ಬಳಸಿಕೊಂಡು ದೌರ್ಜನ್ಯ ಮಾಡಲಾಗಿದೆ. ಕರಾವಳಿಗರ ಪವಿತ್ರ ಮೊಗಮೂರ್ತಿಗಳು, ನಾಗನ ಕಲ್ಲುಗಳನ್ನು ಯಾವ ದಾಕ್ಷಿಣ್ಯವೂ ಇಲ್ಲದೆ ಜೆಸಿಬಿ ಮಣ್ಣಿನ ಅಡಿಗೆ ಹಾಕಿದೆ. ಹೀಗೆಲ್ಲಾ ದೈವಸ್ಥಾನ, ದೇವಸ್ಥಾನವನ್ನು ಜೆಸಿಬಿ ಮತ್ತು ಪೊಲೀಸರು ನೆಲಸಮ ಮಾಡುವಾಗ ಅದಕ್ಕೆ ಶ್ರೀರಕ್ಷೆಯಾಗಿ ನಿಂತಿದ್ದು ಇದೇ ಹಿಂದೂ ಸಂಘಟನೆಗಳು.

ಸನಾತನ ಮನುವಾದಿಗಳ ಕುತಂತ್ರಕ್ಕೆ ಬಲಿಬಿದ್ದ ಶೂದ್ರ ಯುವಕರು ತಮ್ಮ ಕಣ್ಣ ಮುಂದೆಯೇ ತಾವು ನಂಬಿರುವ ದೈವ ದೇವರುಗಳ ಸ್ಥಾನಕ್ಕೇ ಕುತ್ತು ಬಂದರೂ ಎಚ್ಚೆತ್ತುಕೊಂಡಿಲ್ಲ. ಅವರ ಮಿದುಳಿಗೆ ಮುಸ್ಲಿಂ ದ್ವೇಷದ ವಿಷ ತುಂಬಲಾಗಿದೆ. ಹಿಜಾಬಿನಿಂದ ಆರಂಭಗೊಂಡ ದ್ವೇಷದ ಅಭಿಯಾನ ಆಝಾನ್‌ ವಿಚಾರದಲ್ಲಿ ಹಿಂದೂಗಳ ಬುಡಕ್ಕೆ ಬಂದಿದೆ. ಕರಾವಳಿಯ ಭೂತಾರಾಧನೆ, ಯಕ್ಷಗಾನ, ವಾರಗಟ್ಟಲೆ ನಡೆಯುವ ಜಾತ್ರೆಗಳಲ್ಲಿ ರಾತ್ರಿ ಮೈಕ್‌ ಬಳಸವಂತಿಲ್ಲ ಎಂದರೆ ಹೇಗೆ? ಸಹಬಾಳ್ವೆಗೆ ಕೊಳ್ಳಿ ಇಡಲು ಹೊರಟವರೇ ಈಗ ತಲೆಯ ಮೇಲೆ ಕೈ ಹೊತ್ತು ಕೂರುವಂತಾಗಿದೆ.

AV Eye Hospital ad

ಕೈಗಾರಿಕೆಗಾಗಿ ನಾಗಬನಗಳ ನಾಶ

ಮಂಗಳೂರು ವಿಶೇಷ ಆರ್ಥಿಕ ವಲಯಕ್ಕಾಗಿ ಪೆರ್ಮುದೆ, ಕುತ್ತೆತ್ತೂರು, ಬಾಳ, ಕಳವಾರು ಕೃಷಿ ಭೂಮಿಯನ್ನು ವಶಪಡಿಸಿಕೊಂಡಾಗ ನಾಗನ ಬನ ಮತ್ತು ದೈವಗಳನ್ನು ಏನು ಮಾಡುವುದು ಎಂಬ ಪ್ರಶ್ನೆ ಬಂತು. ಮನೆ-ಕುಟುಂಬದ ಒಳಗಿರುವ ದೈವಗಳನ್ನು ಪುನರ್ವಸತಿ ಕಾಲನಿಯಲ್ಲಿ ಸಿಗೋ ಮನೆಗೆ ಸ್ಥಳಾಂತರಿಸಬಹುದು. ಮನೆಯ ಹೊರಗೆ ಕುಟುಂಬದ ಭೂತಸ್ಥಾನವನ್ನು ಹಾಗೆ ಸ್ಥಳಾಂತರಿಸಲಾಗಲ್ಲ. ಪುನರ್ವಸತಿ ಕಾಲನಿಯಲ್ಲಿ ಕುಟುಂಬದ ದೈವಸ್ಥಾನಕ್ಕೆ ಪ್ರತ್ಯೇಕ ಜಾಗ ನೀಡುವುದಿಲ್ಲ. ಹಾಗೆಯೇ ನಾಗಬನವನ್ನು ಸ್ಥಳಾಂತರಿಸಲು ಆಗಲ್ಲ. ಅದು ಜಾಗಕ್ಕೆ ಸಂಬಂಧಪಟ್ಟ ನಾಗಬನ. ನಾಗನ ಕಲ್ಲುಗಳನ್ನು ಒಂದು ಕಾಡಿನಿಂದ ಮತ್ತೊಂದು ಕಾಡಿಗೆ ಸ್ಥಳಾಂತರಿಸಿ ಪೂಜೆ ಮಾಡಲಾಗಲ್ಲ. ಹಾಗೊಂದು ವೇಳೆ ಸಾಧ್ಯವಾದರೂ ಪುನರ್ವಸತಿ ಕಾಲನಿಯಲ್ಲಿ ನಾಗಬನಕ್ಕೆ ಕಾಡೂ ಇಲ್ಲ, ಜಾಗವೂ ಇಲ್ಲ. ಆಗ ಜಮೀನಿನ ಹಣ ಪಡೆದುಕೊಂಡ ಹಲವರು ನಾಗನ ಕಲ್ಲುಗಳನ್ನು ಮುಡಿಪುಗೋ, ನದಿಗೋ ಹಾಕಿ ಹೋದರು. ಆಗ ಯಾವ ಹಿಂದೂ ಸಂಘಟನೆಯೂ ನಾಗಬನ ಅಪವಿತ್ರ ಆಯ್ತು ಎಂದು ಪ್ರತಿಭಟನೆ ಮಾಡಲಿಲ್ಲ. ಬದಲಾಗಿ ನಾಗಬನ, ದೈವಸ್ಥಾನ ಬಿಟ್ಟು ಬರಲ್ಲ ಎಂದು ಹಠ ಹಿಡಿದು ಕೂತ ರೈತರನ್ನು ಒಕ್ಕಲೆಬ್ಬಿಸುವ ಅಕ್ರಮ ಕೆಲಸವನ್ನು ಕೆಲ ಹಿಂದುತ್ವ ನಾಯಕರಿಗೆ ನೀಡಲಾಯಿತು.

ಹೀಗೆ 1800 ಎಕರೆಯ ಪ್ರದೇಶದಲ್ಲಿದ್ದ ನೂರಾರು ನಾಗಬನ, ನೂರಾರು ಮನೆಗಳ ಅಂಗಳದಲ್ಲಿದ್ದ ದೈವದ ಗುಡಿಗಳು, ಹಲವು ಪುಟ್ಟ ಪುಟ್ಟ ದೇವಸ್ಥಾನಗಳನ್ನು ನೆಲಸಮ ಮಾಡಲಾಯ್ತು. ಕರಾವಳಿಯಲ್ಲಿ ಈಗ ತಲೆ ಎತ್ತಿರುವ ಎಂಆರ್‌ಪಿಎಲ್, ಒಎನ್‌ಜಿಸಿ, ಎಸ್ಇಝಡ್, ಬಿಎಸ್ಎಪ್‌ನಂತಹ ಕೈಗಾರಿಕೆಗಳ ಕೆಳಗಡೆ ನೂರಾರು ದೈವಸ್ಥಾನ, ದೇವಸ್ಥಾನ, ನಾಗನ ಕಲ್ಲುಗಳಿವೆ. ಹಿಂದುತ್ವ ಸಂಘಟನೆಯ ಕಾರ್ಯಕರ್ತರಿಗೇನಾದರೂ ಸಮಯವಿದ್ದರೆ ಮಂಗಳೂರು ವಿಶೇಷ ಆರ್ಥಿಕ ವಲಯದ ವಿರುದ್ಧ ಹೋರಾಟ ಮಾಡಿ ಕಂಪನಿಗಳ ಒಳಗೆ ಹುದುಗಿರುವ ದೈವಸ್ಥಾನ, ದೇವಸ್ಥಾನ, ನಾಗನ ಕಲ್ಲುಗಳನ್ನು ಹೊರತೆಗೆಯಬೇಕಾಗಿದೆ.

ಮಣ್ಣಿನಡಿ ಹುದುಗಿದ ಮೂರ್ತಿಗಳಿಗೆ ಎಲ್ಲಿದೆ ಗೌರವ?

ಮಸೀದಿಯಲ್ಲೇನಾದರೂ ಶಿವಲಿಂಗವಿದ್ದರೆ ಅದಕ್ಕೆ ಕನಿಷ್ಠ ಗೌರವವಾದರೂ ದಕ್ಕಿರುತ್ತೆ. ಆದರೆ ಮಣ್ಣಿನಡಿಯಲ್ಲಿ ಹುದುಗಿರುವ ದೈವ ದೇವರ ಮೂರ್ತಿಗಳಿಗೆ ಆ ಗೌರವವೂ ಇರುವುದಿಲ್ಲ. ಮಂಗಳೂರು ವಿಶೇಷ ಆರ್ಥಿಕ ವಲಯದ ಮೊದಲ ಹಂತಕ್ಕಾಗಿ ಪೆರ್ಮುದೆ, ಕುತ್ತೆತ್ತೂರು, ಬಾಳ, ಕಳವಾರು ಗ್ರಾಮಗಳನ್ನು ಸ್ವಾಧೀನ ಪಡಿಸಿಕೊಂಡ ಬಳಿಕ ಎರಡನೇ ಹಂತದ ಎಸ್‌ಇಝಡ್ ಗಾಗಿ ಕುತ್ತೂರು, ಪೆರ್ಮುದೆಯ ಉಳಿದ ಭಾಗಗಳು ಮತ್ತು ದೇಲಂತಬೆಟ್ಟು, ಎಕ್ಕಾರು ಪ್ರದೇಶಕ್ಕೆ ನೋಟಿಸ್ ಜಾರಿಗೊಳಿಸಲಾಯ್ತು. ಈ ಸಂದರ್ಭದಲ್ಲೂ ಹಿಂದುತ್ವ ಸಂಘಟನೆಗಳು ಎಸ್ಇಝಡ್ ಪರ ನಿಂತವು. ಆದರೆ 2035 ಎಕರೆ ಭೂಮಿಯಲ್ಲಿದ್ದ ಒಂದೇ ಒಂದು ಮನೆ, ನೂರಾರು ದೈವಸ್ಥಾನ, ಹಲವು ದೇವಸ್ಥಾನ, ನೂರಾರು ನಾಗಬನವನ್ನು ನೆಲಸಮ ಮಾಡಲಾಗಿಲ್ಲ. ಇವತ್ತೇನಾದರೂ 2035 ಎಕರೆಯ ಭೂಮಿಯಲ್ಲಿನ ನೂರಾರು ನಾಗಬನಗಳು ಉಳಿದಿವೆ ಎಂದರೆ ಅದಕ್ಕೆ ಕಾರಣ ವಿದ್ಯಾದಿನಕರ್ ಮತ್ತು ಕೃಷಿಭೂಮಿ ಸಂರಕ್ಷಣಾ ಸಮಿತಿ ಕಾರಣ.

2035 ಎಕರೆ ಕೃಷಿ ಭೂಮಿಯನ್ನು ಉಳಿಸುವುದರ ಜೊತೆಗೆ ಹಿಂದೂಗಳ ನೂರಾರು ದೈವಸ್ಥಾನ ಉಳಿಸುವ ಹೋರಾಟದಲ್ಲಿ ವಿದ್ಯಾದಿನಕರ್‌ಗೆ ಬೆನ್ನೆಲುಬಾಗಿ ನಿಂತಿದ್ದು ಜಮಾತೆ ಇಸ್ಲಾಮೀ ಹಿಂದ್ ಎನ್ನುವ ಮುಸ್ಲಿಂ ಸಂಘಟನೆ. ಒಂದೇ ಒಂದು ಮಸೀದಿಯು ಭೂಸ್ವಾಧೀನದ ಪಟ್ಟಿಯಲ್ಲಿ ಇಲ್ಲದೇ ಇದ್ದರೂ ದೈವಸ್ಥಾನ, ದೇವಸ್ಥಾನ, ನಾಗಮೂಲಸ್ಥಾನಗಳನ್ನು ಉಳಿಸುವುದಕ್ಕಾಗಿ ವಿದ್ಯಾದಿನಕರ್ ಮತ್ತು ಕೃಷಿ ಭೂಮಿ ಸಂರಕ್ಷಣಾ ಸಮಿತಿ ಜೊತೆ ಜಮಾತೆ ಇಸ್ಲಾಮೀ ಹಿಂದ್ ಹಗಲು ರಾತ್ರಿ ಹೋರಾಟ ನಡೆಸಿದೆ. ಅವತ್ತು ವಿದ್ಯಾದಿನಕರ್ ಹೋರಾಟವನ್ನು ಗಮನಿಸಿದ್ದ (ದಿವಂಗತ) ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿಗಳು ಅಂದು ಅವರಾಗಿಯೇ ವಿದ್ಯಾರನ್ನು ಸಂಪರ್ಕಿಸಿ ಹೋರಾಟಕ್ಕೆ ದುಮುಕಿದ್ದರು. ಪೇಜಾವರ ಸ್ವಾಮಿಗಳು ಪೆರ್ಮುದೆಯ ಶಿವನ ದೇವಾಲಯ ಭೂಸ್ವಾಧೀನದಿಂದ ಉಳಿಸಬೇಕು ಎಂದು ಉಪವಾಸ ಕುಳಿತಿದ್ದರು. ಆಗ ಪೇಜಾವರರಿಗೆ ಸಾಥ್ ನೀಡಿದ್ದು ವಿದ್ಯಾದಿನಕರ್ ನೇತೃತ್ವದ ಎಡ, ಮಾನವ ಹಕ್ಕು ಹೋರಾಟಗಾರರು ಮತ್ತು ಜಮಾತೆ ಇಸ್ಲಾಮೀ ಹಿಂದ್ ಮುಸ್ಲಿಂ ಸಂಘಟನೆ ಮಾತ್ರ. ಹಿಂದುತ್ವದ ವಿಚಾರದಲ್ಲಿ ಪೇಜಾವರರನ್ನು ತಲೆಮೇಲೆ ಹೊತ್ತು ಮೆರೆಸುವ ಒಂದೇ ಒಂದು ಸಂಘಟನೆ ಅಂದು ಪೇಜಾವರರ ಉಪವಾಸವನ್ನು ಬೆಂಬಲಿಸಲಿಲ್ಲ. ಯಾಕೆಂದರೆ ಎಲ್ಲರಿಗೂ ಮಂಗಳೂರು ವಿಶೇಷ ಆರ್ಥಿಕ ವಲಯವೆಂಬ ಲಕ್ಷಾಂತರ ಕೋಟಿಯ ಪ್ರಾಜೆಕ್ಟ್ ನಲ್ಲಿ ಸಣ್ಣಸಣ್ಣ ಗುತ್ತಿಗೆಗಳು ಬೇಕಾಗಿತ್ತು.

ಇದನ್ನು ಓದಿದ್ದೀರಾ? ಕೆಲಸ ಮತ್ತು ಊಟ ಅಂದ್ರೆ ಅಕ್ಬರ್‌ ಖಾನ್‌ ನೆನಪಾಗುತ್ತಾರೆ

ಮೊನ್ನೆ ವಿಧಾನಪರಿಷತ್ ಭರವಸೆ ಸಮಿತಿ ಜೊತೆ ನಾನು ಮತ್ತು ವಿದ್ಯಾದಿನಕರ್ ಎಂಆರ್‌ಪಿಎಲ್ ಗೆ ಹೋಗಿದ್ದೆವು. ಅಲ್ಲಿ ಪರಿಷತ್ ಶಾಸಕರು ಅಧ್ಯಕ್ಷ ಸದಸ್ಯರಾಗಿರುವ ಭರವಸೆ ಸಮಿತಿಗೆ ಭದ್ರತೆ ನೀಡುವ ಪೊಲೀಸರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾದಿನಕರ್‌ ಅವರಿಗೆ ಎಂಆರ್‌ಪಿಎಲ್ ಪ್ರವೇಶವನ್ನು ತಡೆಯಲು ಸಿಆರ್‌ಪಿಎಫ್ ನಿಯೋಜಿಸಲಾಗಿತ್ತು. ಭರವಸೆಯ ಸಮಿತಿಯ ವಾಹನಗಳ ಮಧ್ಯೆ ಇದ್ದ ನಮ್ಮ ವಾಹನವನ್ನು ಪ್ರತ್ಯೇಕಿಸಿ, ಕೇವಲ ಭರವಸೆ ಸಮಿತಿಯ ವಾಹನಗಳನ್ನು ಮಾತ್ರ ಒಳಬಿಟ್ಟುಕೊಂಡರು. ನಾನು ವಿದ್ಯಾ ಎಂಆರ್‌ಪಿಎಲ್ ಹೊರಗೆ ಕಾಯುತ್ತಿದ್ದೆವು. ವಿಪರೀತ ಬಿಸಿಲು, ಬೆವರಿನಿಂದ ಒದ್ದೆಯಾಗುವಷ್ಟು ಬಿಸಿಲಿತ್ತು. ಅಲ್ಲೇ ಎಂಆರ್‌ಪಿಎಲ್ ಆವರಣದ ಹೊರಗಿದ್ದ ಗಣಪತಿ ದೇವಸ್ಥಾನದ ಒಳಗೆ ನಾನು ಮತ್ತು ವಿದ್ಯಾ ಬಿಸಿಲಿಗೆ ಆಶ್ರಯ ಪಡೆದುಕೊಂಡೆವು. ವಿದ್ಯಾದಿನಕರ್ ಚಪ್ಪಲಿ ಹಾಕಿಕೊಂಡೇ ದೇವಸ್ಥಾನದ ಒಳಗೆ ಬಂದಿದ್ದರು. ಅಷ್ಟರಲ್ಲಿ ಓಡಿ ಬಂದ ದೇವಸ್ಥಾನದ ಸಿಬ್ಬಂದಿಗಳು ಗದರಿಸುವ ರೀತಿಯಲ್ಲಿ ʼಮೇಡಂ ಚಪ್ಪಲಿ ಹೊರಗಿಡಿʼ ಎಂದರು. ಯಾವ ಅಳುಕೂ ಇಲ್ಲದ ವಿದ್ಯಾ ದಿನಕರ್ ʼಚಪ್ಪಲಿ ಯಾಕೆ ಹೊರಗಿಡಬೇಕು. ಈ ದೇವಸ್ಥಾನಕ್ಕೆ ಯಾವ ಪಾವಿತ್ರ್ಯತೆಯೂ, ಪ್ರಭಾವವೂ ಇಲ್ಲ. ಇದು ದೇಗುಲವಲ್ಲ, ಸ್ಮಶಾನ. ಎಂಆರ್‌ಪಿಎಲ್‌ನ ಒಳಗೆ ಮಣ್ಣಿನಡಿ ಹತ್ತಾರು ದೇವಸ್ಥಾನಗಳು, ನೂರಾರು ದೈವದ ಗುಡಿಗಳು ಇವೆ. ಅವ್ಯಾವುದಕ್ಕೂ ಅಗದ ಅವಮಾನ ನನ್ನ ಚಪ್ಪಲಿಯಿಂದ ನಿಮ್ಮ ಗಣಪತಿ ಗುಡಿಗೆ ಆಗುತ್ತಾʼ ಎಂದು ಪ್ರಶ್ನಿಸಿದರು. ಒಬ್ಬನ ಬಳಿಯೂ ಉತ್ತರವಿರಲಿಲ್ಲ.

ಮಂಗಳೂರಿನ ವಿಶೇಷ ಆರ್ಥಿಕ ವಲಯದ ಸಾವಿರಾರು ಎಕರೆ ಭೂಮಿಯೊಳಗೆ ದೈವದ ಮೂರ್ತಿಗಳು, ನಾಗನ ಕಲ್ಲುಗಳು ಅನಾಥವಾಗಿ ಬಿದ್ದಿದೆ. ಇವ್ಯಾವುದನ್ನೂ ಮುಸ್ಲೀಮರು ಮಾಡಿದಲ್ಲ. ಹಿಂದುತ್ವದ ಗುತ್ತಿಗೆ ಪಡೆದುಕೊಂಡವರೇ ಹಿಂದೂ ಕೃಷಿಕರನ್ನು ಒಕ್ಕಲೆಬ್ಬಿಸುವ ಗುತ್ತಿಗೆ ತೆಗೆದುಕೊಂಡು ದೈವಸ್ಥಾನ, ನಾಗಬನಗಳನ್ನು ಮಣ್ಣಿನಡಿ ಹೂತು ಹಾಕಿದ್ದಾಗಿದೆ. ಹಾಗಾಗಿ ಅಗೆಯೋಣಾ ಬನ್ನಿ, ನಮ್ಮ ದೈವ ದೇವರು, ನಾಗ ಬೆರ್ಮೆರನ್ನು ಹುಡುಕೋಣ.

ನಿಮಗೆ ಏನು ಅನ್ನಿಸ್ತು?
3 ವೋಟ್
eedina app