ಸೆಕ್ಯುಲರ್ ದೈವಗಳ ನಾಡಿನಲ್ಲಿ ದ್ವೇಷದ ಬಹಿಷ್ಕಾರಕ್ಕೆ ಕಿಮ್ಮತ್ತಿಲ್ಲ

church masjid


ಶತಶತಮಾನಗಳಿಂದಲೂ ಸಣ್ಣ ಪುಟ್ಟ ಕೋಮು ಸಂಘರ್ಷ, ಕೋಮು ವೈಷಮ್ಯದ ಹೊರತಾಗಿಯೂ ಜನ ಸಾಮರಸ್ಯದಿಂದ ಬದುಕಿದ್ದರು. ಯಾಕೆಂದರೆ ಆಚಾರ ವಿಚಾರಗಳು ಯಾವುದೇ ಇರಲಿ ಸಂಘ ಜೀವನದಲ್ಲಿ ಕೊಡುಪಡೆ, ಅವಲಂಬನೆ, ಸಾಮರಸ್ಯ ಅಗತ್ಯ ಮತ್ತು ಅನಿವಾರ್ಯ. ಅದಿಲ್ಲದೆ ನಿತ್ಯ ಬದುಕು ಸಾಗದು. ಈ ಅವಲಂಬನೆ ವ್ಯಾಪಾರ ಚಟುವಟಿಕೆಗೆ ಮಾತ್ರ ಸೀಮಿತವಾಗಿಲ್ಲ. ಧಾರ್ಮಿಕ ಆಚರಣೆಗಳಿಗೂ ವಿಸ್ತರಿಸಿದೆ

ನಾವು ಮೂಲತಃ ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯ ದಕ್ಷಿಣ ತುದಿಯವರು. ಆದರೆ ಅಪ್ಪ ಅರಣ್ಯ ಇಲಾಖೆಯ ಉದ್ಯೋಗಿಯಾಗಿದ್ದುದರಿಂದ ಅಲೆಮಾರಿಗಳಂತೆ ಊರೂರು ಅಲೆದವರು. ಹೀಗೆ ಊರೂರು ಅಲೆಯುವ ನಡುವೆ ನಾನು ಮೂಡಬಿದಿರೆಯ ಬಳಿಯ ತೋಡಾರಿನಲ್ಲಿ ಜನಿಸಿದರೂ ನನ್ನ ಬಾಲ್ಯದ ಒಂದು ದಶಕಕ್ಕೂ ಅಧಿಕ ಕಾಲ ಕಳೆದುದು ಕುಂದಾಪುರ ತಾಲೂಕಿನ ಶಂಕರನಾರಾಯಣದಲ್ಲಿ. ಆ ಊರಿನಲ್ಲಿ ಅಷ್ಟು ಕಾಲ ಇದ್ದರೂ ನಮಗೆ ಮತೀಯ ಭಿನ್ನತೆಗಳ ಮತ್ತು ಮತೀಯ ವೈವಿಧ್ಯಗಳ ಅರಿವು ಇರಲಿಲ್ಲ. ಯಾಕೆಂದರೆ, ಅಲ್ಲಿ ಹಿಂದೂಯೇತರ ಸಮುದಾಯಗಳೇ ಇರಲಿಲ್ಲ.

ನಾನು ಹೈಸ್ಕೂಲು ಓದುತ್ತಿದ್ದಾಗ ಅಲ್ಲಿನ ಪೋಸ್ಟ್ ಮಾಸ್ಟರ್ ಒಬ್ಬರ ಮಗಳು ಆರಿಫಾ ಬೇಗಂ ಎಂಬಾಕೆ ಒಂದೆರಡು ವರ್ಷ ನನ್ನ ಸಹಪಾಠಿಯಾಗಿದ್ದಳು. ಅದು ಬಿಟ್ಟರೆ ನಾವು ನೋಡಿದ್ದು ನಮ್ಮ ಮನೆಯ ಹತ್ತಿರದ ಹಾಲಾಡಿ ಶಂಕರನಾರಾಯಣ ರಸ್ತೆಯಲ್ಲಿ ಮೀನು ಮಾರಿಕೊಂಡು ಬರುತ್ತಿದ್ದ ಮುಸ್ಲಿಂ ವ್ಯಕ್ತಿಯೊಬ್ಬನನ್ನು. ಆತನ ಸೈಕಲ್ ನ ಪೋಂ ಪೋಂ ಕೇಳುತ್ತಿದ್ದಂತೆಯೇ ಅಪ್ಪ ‘ಎಂದ್ರ್ ಲಾ ಕಾಕಾ’ ಎಂದು ಕೂಗು ಹಾಕುತ್ತ ಆತನ ಬಳಿಗೆ ಹೋಗಿ ಮೀನು ತರುತ್ತಿದ್ದರು. ಆತನಲ್ಲಿ ಅದಾಗಲೇ ಕೊನೆಯ ಘಟ್ಟ ತಲುಪಿರುವ ಬೈಗೆಮೀನು ಬಿಟ್ಟರೆ ಬೇರೇನೂ ಇರುತ್ತಿರಲಿಲ್ಲ, ಆ ವಿಚಾರ ಬೇರೆ. ನಾನು ಶಂಕರನಾರಾಯಣದಲ್ಲಿ ನೋಡಿದ ಅನ್ಯ ಮತೀಯರೆಂದರೆ ಇವರಿಬ್ಬರೇ.

ಅಪ್ಪನಿಗೆ ಮತ್ತೆ ವರ್ಗಾವಣೆಯಾದಾಗ 1978ರಲ್ಲಿ ನಾವು ಕಾರ್ಕಳಕ್ಕೆ ಬಂದೆವು. ಕಾರ್ಕಳ ನಮಗೆ ಹೊಸದೊಂದು ಲೋಕದಂತೆ ಭಾಸವಾಗಿತ್ತು. ಅದಕ್ಕೆ ಕಾರಣ ಅಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ ಮಾತ್ರವಲ್ಲ ಜೈನ ಸಮುದಾಯದವರೂ ದೊಡ್ಡ ಸಂಖ್ಯೆಯಲ್ಲಿದ್ದುದು. ನಮ್ಮ ಮನೆಯ ಸುತ್ತ ಕ್ರೈಸ್ತರು, ಜೈನರ ಮನೆಗಳಿದ್ದವು. ಹೀಗೆ ಭಿನ್ನ ಸಮುದಾಯಗಳ ನಡುವೆ ಬದುಕುತ್ತಿದ್ದುದರಿಂದ ಅನ್ಯ ಧರ್ಮೀಯರ ಹಬ್ಬಗಳು ಆಚರಣೆಗಳು ಜೀವನಪದ್ಧತಿಗಳ ಬಗ್ಗೆ ತಿಳಿದುಕೊಳ್ಳುವುದು ಸಾಧ್ಯವಾಯಿತು. ಅಂತಹ ಅರಿವೇ ಪರಸ್ಪರರನ್ನು ಪ್ರೀತಿಸಲು ಮತ್ತು ಗೌರವಿಸಲೂ ಪ್ರೇರಣೆಯಾಯಿತು.

ಕಾಲೇಜಿಗೆ ಹೋದರೆ ಅಲ್ಲೂ ಮತ್ತೆ ಎಲ್ಲ ಸಮುದಾಯದವರ ಒಡನಾಟ. ಇನಾಸ್ ಮಿನೆಜಸ್, ರೊನಾಲ್ಡ್ ಫೆರ್ನಾಂಡಿಸ್ ಕ್ರೈಸ್ತ ಮತೀಯರಾದರೆ, ಮುನಿರಾಜ ರೆಂಜಾಳ, ಶ್ರೀವರ್ಮ ಅಜ್ರಿ, ಜೈನ ಸಮುದಾಯದವರು, ಖಲೀಲ್, ಮುಶ್ತಾಖ್ ಮುಸ್ಲಿಂ ಸಮುದಾಯವರು. ಕ್ರೈಸ್ತರ ಕ್ರಿಸ್ ಮಸ್ ಎಂದರೆ ನಮಗೆ ಸಂಭ್ರಮವೋ ಸಂಭ್ರಮ. ಅನೇಕ ಗೆಳೆಯರು ಮನೆಗೆ ಕರೆದು ಪೋರ್ಕ್, ಇಡ್ಲಿಯ ಸಮಾರಾಧನೆ ಮಾಡುತ್ತಿದ್ದರು. ಒಂದಿಷ್ಟು ಎಣ್ಣೆಯೂ ಇರುತ್ತಿತ್ತು. ಇನ್ನು ಮುಸ್ಲಿಂ ಗೆಳೆಯರ ರಮ್ಜಾನ್ ಬಂತೆಂದರೆ ನಮಗೆ ಸ್ವಾದಿಷ್ಟಕರ ಬಿರಿಯಾನಿ ಇದ್ದೇ ಇರುತ್ತಿತ್ತು. ಪಕ್ಕಾ ಶಾಕಾಹಾರಿಗಳಾದ ಜೈನರ ಮನೆಗಳ ರೀತಿ ರಿವಾಜುಗಳು ಒಂದಿಷ್ಟು ಭಿನ್ನ. ಅವರಲ್ಲಿ ಮಡಿ ಜಾಸ್ತಿ. ಅವರಿಗೆ ಇತರ ಶೂದ್ರರಂತೆ ದೈವಗಳ ಮೇಲೆ ನಂಬಿಕೆ ಇತ್ತು. ಅಪರೂಪಕ್ಕೊಮ್ಮೆ ದೈವಗಳಿಗೆ ಕೋಲ ಇತ್ಯಾದಿ ನಡೆಯುತ್ತಿತ್ತು. ದೀಪಾವಳಿ ಬಂತೆಂದರೆ ಅವರ ಮನೆಯ ದಪ್ಪನೆಯ ಉದ್ದಿನ ದೋಸೆಯ ಮತ್ತು ಅವರದೇ ವಿಶಿಷ್ಟ ಉಪ್ಪಿನಕಾಯಿಯ ರುಚಿಯನ್ನು ತಿಂದೇ ಅನುಭವಿಸಬೇಕು.

ಇದನ್ನು ಓದಿದ್ದೀರಾ?: ಬಸವಣ್ಣ ಹೇಳಿದಂಗ ಬದುಕೋದಂದ್ರೆ ಏನಂತ ಗೊತ್ತೇನ್ರಿ?

ನಾನು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ತಿರುಗಾಡಿದ್ದೇನೆ. ಕೆಲವು ತಾಲೂಕುಗಳಲ್ಲಿ ವಾಸಿಸಿದ್ದೇನೆ ಕೂಡಾ. ಆದರೆ ಕಾರ್ಕಳ ನನ್ನಲ್ಲಿ ಉಂಟುಮಾಡಿದ ಖುಷಿ ಮತ್ತು ಬೆರಗನ್ನು ಇನ್ಯಾವ ತಾಲೂಕೂ ಉಂಟುಮಾಡಲಿಲ್ಲ. ಅದಕ್ಕೆ ಕಾರಣ ಈಗಾಗಲೇ ನಾನು ಉಲ್ಲೇಖಿಸಿದೆನಲ್ಲ, ಅವು ಮಾತ್ರವಲ್ಲ, ಕಾರ್ಕಳಕ್ಕೆ ಇರುವ ಐತಿಹಾಸಿಕ ಹಿನ್ನೆಲೆ ಕೂಡಾ. ದೀರ್ಘಕಾಲ ಜೈನ ಅರಸರಿಂದ ಆಳಲ್ಪಟ್ಟ ಇಲ್ಲಿ ಶತಶತಮಾನಗಳಿಂದ ಎಲ್ಲ ಮತೀಯರು ಅನ್ಯೋನ್ಯವಾಗಿ ವಾಸಿಸಿದ್ದಾರೆ, ತಮ್ಮ ತಮ್ಮ ಧರ್ಮವನ್ನು ಯಾರ ವಿರೋಧವೂ ಇಲ್ಲದೆ ಆಚರಿಸಿಕೊಂಡು ಬಂದಿದ್ದಾರೆ. ಸರ್ವಧರ್ಮ ಸಮಭಾವ ತತ್ತ್ವದೊಂದಿಗೆ ಬೇರೆಯವರ ಧರ್ಮದ ಆಚರಣೆಗಳಿಗೂ ನೆರವಾಗುತ್ತಾ ನಿಜ ಅರ್ಥದಲ್ಲಿ ತಮ್ಮ ಧರ್ಮಕ್ಕೆ ಕೀರ್ತಿ ತಂದಿದ್ದಾರೆ. ಇದಕ್ಕೆ ಪುರಾವೆಯೆಂಬಂತೆ ಇಲ್ಲಿ ಮುಸ್ಲಿಮರ ಮಸೀದಿಯಿದೆ, ಹಿಂದೂ ಧರ್ಮೀಯರ 800 ವರ್ಷ ಹಳೆಯ ಅನಂತಶಯನ ದೇವಸ್ಥಾನವಿದೆ, ಜೈನರ ಚತುರ್ಮುಖ ಬಸದಿ ಇದೆ, 1432 ರಲ್ಲಿ ಸ್ಥಾಪನೆಯಾದ ಬಾಹುಬಲಿ ವಿಗ್ರಹ ಇದೆ, 1537 ರಲ್ಲಿ ಸ್ಥಾಪನೆಯಾದ ಗೌಡ ಸಾರಸ್ವತ ಸಮುದಾಯದ ವೆಂಕಟರಮಣ ದೇವಸ್ಥಾನವಿದೆ,  1759 ರಲ್ಲಿ ಸ್ಥಾಪನೆಯಾದ ಕ್ರೈಸ್ತರ ಪ್ರಸಿದ್ಧ ಅತ್ತೂರು ಸಂತ ಲಾರೆನ್ಸ್ ಚರ್ಚ್ ಇದೆ.

Image
ಮಂಜೇಶ್ವರದಲ್ಲಿ ಬೂತದ ಕೋಲಕ್ಕೂ ಮುನ್ನ ಮುಸ್ಲಿಂ ವ್ಯಕ್ತಿಗೆ ಗೌರವ ಸಲ್ಲಿಕೆ
 ಭೂತದ ಕೋಲಕ್ಕೂ ಮುನ್ನ ಮುಸ್ಲಿಂ ವ್ಯಕ್ತಿಗೆ ಗೌರವ ಸಲ್ಲಿಕೆ

ವೆಂಕಟರಮಣ ದೇವಾಲಯದ ದೀಪೋತ್ಸವ, ಜೈನರ ಬಾಹುಬಲಿ ಮಸ್ತಕಾಭಿಷೇಕ, ವಾರ್ಷಿಕ ಜಾತ್ರೆ, ಅತ್ತೂರು ಇಗರ್ಜಿಯ ಸಾಂತ್ ಮಾರಿಯೆಂದರೆ ಅದು ಊರಿಗೇ ಹಬ್ಬವಿದ್ದಂತೆ. ನಾವು ಆ ಸಂಭ್ರಮವನ್ನು ತಪ್ಪಿಸಿಕೊಳ್ಳುತ್ತಿದ್ದುದೇ ಇಲ್ಲ. ಇನ್ನು ಅತ್ತೂರು ಇಗರ್ಜಿಯ ವಿಶೇಷ ಒಂದಿಷ್ಟು ಹೆಚ್ಚೇ. ನಮ್ಮ ಸಮನ್ವಯ ಸಂಸ್ಕೃತಿಯ ಅತ್ಯುತ್ತಮ ಪುರಾವೆಯೆಂಬಂತೆ ಇಲ್ಲಿನ ಈ ಇಗರ್ಜಿಗೆ ನಡೆದುಕೊಳ್ಳುವವರಲ್ಲಿ ಮತ್ತು ಅಲ್ಲಿನ ಸಾಂತ್ ಮಾರಿ ಹಬ್ಬದಲ್ಲಿ ಪಾಲ್ಗೊಳ್ಳುವವರಲ್ಲಿ ಹಿಂದೂಗಳೇ ಅಧಿಕ.

ಇವತ್ತು ಆ ಧರ್ಮೀಯರು ಅಲ್ಲಿ ಅಂಗಡಿ ಹಾಕಬಾರದು, ಇಲ್ಲಿ ಅಂಗಡಿ ಹಾಕಬಾರದು ಎಂದೆಲ್ಲ ಕೆಲವು ಮತಾಂಧ ಸಂಘಟನೆಗಳು ಕರೆಕೊಡುತ್ತಿವೆಯಲ್ಲಾ? ಅಲ್ಲಿ ಕಾರ್ಕಳ ಅತ್ತೂರಿನ ಇಗರ್ಜಿಯ ಸಾಂತ್ ಮಾರಿಯಲ್ಲಿ ಅಂಗಡಿ ಹಾಕಲು ಯಾರೂ ಕೂಡಾ ಏಲಂಗೆ ನಿಲ್ಲಬಹುದಾಗಿತ್ತು. ನಾವು ಗೆಳೆಯರು – ಇದರಲ್ಲಿ ಹಿಂದೂ ಮುಸ್ಲಿಂ ಕ್ರೈಸ್ತ ಎಲ್ಲ ಸಮುದಾಯವವರೂ ಇದ್ದರು- ಬಹುಷಃ 1981 ರಲ್ಲಿರಬೇಕು, ಅಲ್ಲಿನ ಸಾಂತ್ ಮಾರಿಯಲ್ಲಿ ಬ್ರೆಡ್ ಆಮ್ಲೆಟ್, ಐಸ್ ಕ್ರೀಂ ಅಂಗಡಿ ಹಾಕಿದ್ದೆವು. ಮೂರು ದಿನ ನಮ್ಮ ವ್ಯಾಪಾರವೋ ವ್ಯಾಪಾರ. ಬೇರೆಯವರಿಗೆ ಮಾರಿದ್ದಕ್ಕಿಂತ ನಾವು ತಿಂದದ್ದೇ ಹೆಚ್ಚಾಗಿ ಅಸಲು ಕೂಡಾ ಕೈಗೆ ಬಾರದೆ ಭಾರೀ ನಷ್ಟದೊಂದಿಗೆ ವ್ಯಾಪಾರ ಮುಗಿಸಿದ್ದೆವು. ಆರ್ಥಿಕ ನಷ್ಟ ಎಷ್ಟಾದರೇನಾಯಿತು? ಎಲ್ಲ ಸಮುದಾಯವರು ಒಂದು ಪಾರ್ಟನರ್ ಶಿಪ್ ನೊಂದಿಗೆ ಮೂರು ದಿನ ವ್ಯಾಪಾರ ನಡೆಸಿದ ಖುಷಿಯ ಮುಂದೆ ಅದು ಯಾವ ಲೆಕ್ಕ? ‘ಅನುಭವಕ್ಕಿಂತ ನೆನಪೇ ಸಿಹಿ’ ಎಂಬ ಮಾತೇ ಇದೆಯಲ್ಲ? ‘ಕೂಡಿ ಬಾಳಿದರೆ ಸ್ವರ್ಗ ಸುಖ’ ಎಂಬ ಮಾತಿದೆಯಲ್ಲ ಅದಕ್ಕೆ ಜೀವಂತ ಉದಾಹರಣೆಯಾಗಿತ್ತು ಅಂದಿನ ಕಾರ್ಕಳ.

ಮುಂದೆ ಉದ್ಯೋಗ ನಿಮಿತ್ತ ಮಂಗಳೂರಿಗೆ ಬಂದೆ. ಇಲ್ಲಿ ಬಂದಾಗಲೂ ಮತ್ತದೇ ಕೂಡು ಸಂಸ್ಕೃತಿಯ ಅನುಭವ. ಇಲ್ಲಿ ಜೈನರ ಸಂಖ್ಯೆ ತುಂಬಾ ಕಡಿಮೆಯಾದರೆ ಕ್ರೈಸ್ತರು, ಮುಸ್ಲಿಮರು, ಹಿಂದೂಗಳು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಮತ್ತೆ ಇಲ್ಲೂ ಅನೇಕ ದೇವಾಲಯಗಳು, ದರ್ಗಾಗಳು, ಚರ್ಚ್ ಗಳು. ಕಾರ್ಕಳದ ಅತ್ತೂರು ಇಗರ್ಜಿಯೆಂದರೆ ಇಲ್ಲಿನವರಿಗೆ ಹೆಚ್ಚು ಅರ್ಥವಾಗದು, ದೂಪದಕಟ್ಟೆ ಎಂದರೆ ಅರ್ಥವಾಗುತ್ತದೆ. ದೊಡ್ಡ ಸಂಖ್ಯೆಯಲ್ಲಿ ದೂಪದ ಕಟ್ಟೆಗೆ ಜನ ಇಲ್ಲಿಂದ ಹೋಗುತ್ತಾರೆ. ಅಲ್ಲದೆ ಇಲ್ಲಿನ ಚರ್ಚುಗಳಲ್ಲೂ ಸಾಂತ್ ಮಾರಿ ನಡೆಯುತ್ತದೆ. ಸಾಂತ್ ಮಾರಿ ಇರಬಹುದು, ಮಂಗಳಾದೇವಿ ಜಾತ್ರೆಯಿರಬಹುದು, ಅಥವಾ ಉಳ್ಳಾಲದ ದರ್ಗಾದ ಉರೂಸು ಇರಬಹುದು ಅಲ್ಲೆಲ್ಲ ಎಲ್ಲ ಮತೀಯರನ್ನೂ ಕಾಣಬಹುದಾಗಿತ್ತು. ಅದಕ್ಕೆ ಮುಖ್ಯ ಕಾರಣ ಆ ಹಬ್ಬಗಳ ಸಂದರ್ಭದ ಸಂತೆ. ಎಲ್ಲ ಮತೀಯರಿಂದ ಎಲ್ಲ ಬಗೆಯ ಸರಕುಗಳ ಮಾರಾಟ ಮತ್ತು ಖರೀದಿ. ಜಾತ್ರೆಗಳಿಗೆ ಮೆರುಗು ನೀಡುತ್ತಿದ್ದುದೇ ಇಂತಹ ಸಂತೆಗಳು.

ಇಗರ್ಜಿ-ದರ್ಗಾಗಳಿಗೆ ನಡೆದುಕೊಳ್ಳುವ ಹಿಂದೂಗಳು

ಕ್ರೈಸ್ತರ ಇಗರ್ಜಿಗಳಿಗೆ ದೊಡ್ಡ ಸಂಖ್ಯೆಯಲ್ಲಿ ಹಿಂದೂಗಳು ನಡೆದುಕೊಳ್ಳುತ್ತಾರೆ. ಉಳ್ಳಾಲದ ದರ್ಗಾದ ಉರೂಸಿನಲ್ಲಿಯೂ ಹಿಂದೂಗಳೇ ಅಧಿಕ. ಕುಕ್ಕೆ ಸುಬ್ರಹ್ಮಣ್ಯಕ್ಕೆ ಬೆಳ್ಳಿ ನಾಗನನ್ನು ಸಮರ್ಪಿಸಿ ಬರುವ ಮುಸ್ಲಿಮರು ನನಗೆ ಗೊತ್ತು. ಪಾಂಡೇಶ್ವರ ಬಳಿ ಇರುವ ದರ್ಗಾಕ್ಕೆ ಪ್ರತಿಯೊಂದು ಬಸ್ ನ ಕಂಡಕ್ಟರ್ ಒಂದಿಷ್ಟು ಕಾಣಿಕೆ ಹಾಕಿದ ಬಳಿಕವೇ ಬಸ್ ಮುಂದೆ ಓಡುತ್ತಿತ್ತು. ನನಗೆ ಗೊತ್ತಿರುವ ಒಬ್ಬಾಕೆ ತನ್ನ ಕೂಸನ್ನು ದೇವಸ್ಥಾನಕ್ಕೆ ಮಾತ್ರವಲ್ಲ ಚರ್ಚ್ ಮತ್ತು ದರ್ಗಾಕ್ಕೆ ಕೂಡಾ ತೆಗೆದುಕೊಂಡು ಹೋಗಿ ಕಾಣಿಕೆ ಹಾಕಿದ್ದು ನನಗೆ ಗೊತ್ತಿದೆ (ಆಕೆಯನ್ನು ದರ್ಗಾಕ್ಕೆ ಹೋಗದಂತೆ ಹಿಂದುತ್ವ ಮತಾಂಧನೊಬ್ಬ ತಡೆಯಲೆತ್ನಿಸಿದ್ದ). ಹೀಗೆ ದೇವರ ಮೇಲಿನ ನಂಬಿಕೆ, ಕಷ್ಟಕಾಲದಲ್ಲಿ ನೆರವಾಗುತ್ತಾನೆ ಎಂಬ ಮುಗ್ಧ ಆಶಾವಾದ ಇಲ್ಲಿನ ಜನರನ್ನು ಮತಾತೀತವಾಗಿ ಒಂದು ಎಳೆಯಲ್ಲಿ ಪೋಣಿಸಿದೆ.
ಶತಶತಮಾನಗಳಿಂದಲೂ ಸಣ್ಣ ಪುಟ್ಟ ಕೋಮು ಸಂಘರ್ಷ, ಕೋಮು ವೈಷಮ್ಯದ ಹೊರತಾಗಿಯೂ ಜನ ಸಾಮರಸ್ಯದಿಂದ ಬದುಕಿದ್ದರು. ಯಾಕೆಂದರೆ ಆಚಾರ ವಿಚಾರಗಳು ಯಾವುದೇ ಇರಲಿ ಸಂಘ ಜೀವನದಲ್ಲಿ ಕೊಡುಪಡೆ, ಅವಲಂಬನೆ, ಸಾಮರಸ್ಯ ಅಗತ್ಯ ಮತ್ತು ಅನಿವಾರ್ಯ. ಅದಿಲ್ಲದೆ ನಿತ್ಯ ಬದುಕು ಸಾಗದು.

ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಯಾವಾಗಲೂ ಹೇಳುತ್ತಿರುವಂತೆ ಇಲ್ಲಿ ಮಲ್ಲಿಗೆಯನ್ನು ಬೆಳೆಯುವವರು ಕ್ರೈಸ್ತರು, ಅದನ್ನು ಮಾರುವವರು ಮುಸ್ಲಿಮರು ಮತ್ತು ಅದನ್ನು ದೇವರಿಗೆ, ಪೂಜೆಗೆ, ಮುಡಿಯಲು ಎಂದು ಬಹುವಾಗಿ ಬಳಸುವವರು ಹಿಂದೂಗಳು. ಇನ್ನು ಇಲ್ಲಿನ ಪ್ರಮುಖ ವೃತ್ತಿಯಾದ ಮೀನುಗಾರಿಕೆಯಲ್ಲೂ ಹಿಂದೂಗಳೂ ಮುಸ್ಲಿಮರೂ ಅಣ್ಣತಮ್ಮಂದಿರಂತೆ ದುಡಿಯುತ್ತಾರೆ. ಒಂದು ವೇಳೆ ಕೇವಲ ಮೊಗವೀರ ಸಮುದಾಯದವರು ಕಡಲಿನಿಂದ ಮೀನು ತಂದರೂ ಅದನ್ನು ಮನೆ ಮನೆ ತಲುಪಿಸುವವರು ಮುಸ್ಲಿಮರು. ಇವರು ಕೈಜೋಡಿಸದೆ ಮೀನುಗಾರಿಕೆ ನಡೆಯದು. ಹಳ್ಳಿಗಾಡುಗಳಲ್ಲೂ ಕೃಷಿಕರಿಗೆ ಮುಸ್ಲಿಮ್ ವ್ಯಾಪಾರಿಗಳ ನೆರವು ಅನಿವಾರ್ಯ.

ಆಲಿಭೂತ, ಬೊಬ್ಬರ್ಯ ಎಂಬ ಮುಸ್ಲಿಂ ದೈವಗಳು!

ಇಲ್ಲಿನ ದೈವಾರಾಧನೆಯ ಕಾಲಕ್ಕೆ ಹೋದರೆ ಅಲ್ಲಿ ಮತ್ತೆ ಆಲಿಭೂತ, ಬೊಬ್ಬರ್ಯ ಮೊದಲಾದ ಮುಸ್ಲಿಂ ದೈವಗಳ ಉದಾಹರಣೆ ದೊರೆಯುತ್ತವೆ. ದೈವಗಳಿಗೆ ಮಸೀದಿಗಳೊಂದಿಗೆ ಇದ್ದ ಸಂಬಂಧಕ್ಕೆ ಇತಿಹಾಸ ಮಾತ್ರವಲ್ಲ ವರ್ತಮಾನವೂ ಸಾಕ್ಷಿ. ಮೂಲ್ಕಿ ಬಳಿಯ ಬಪ್ಪನಾಡು ದೇವಸ್ಥಾನವನ್ನು ಕಟ್ಟಿಸಿದವನೇ ಬಪ್ಪ ಬ್ಯಾರಿ! ಇನ್ನು ದೈವಾರಾಧನೆಯಾಚೆಗಿನ ಇತಿಹಾಸದ ಪುಟಗಳನ್ನು ತಿರುವಿ ಹಾಕಿದರೂ ಶತಮಾನಗಳ ಹಿಂದಿನಿಂದಲೂ ಹಿಂದೂ ಮುಸ್ಲಿಮರು ಜತೆಯಾಗಿ ಕೆಲಸ ಮಾಡಿದ ಅಸಂಖ್ಯ ಉದಾಹರಣೆ ಸಿಗುತ್ತದೆ. ಕಡಲ ಯುದ್ಧದಲ್ಲಿ ಪೋರ್ಚುಗೀಸರನ್ನು ದಿಟ್ಟವಾಗಿ ಎದುರಿಸಿದ ಪ್ರಸಿದ್ಧ ಉಳ್ಳಾಲ ಅಬ್ಬಕ್ಕ ರಾಣಿಯ ಸೇನೆಯಲ್ಲಿದ್ದವರು ಮಾಪಿಳ್ಳೆಗಳು ಮತ್ತು ಮೊಗವೀರರು. ಟಿಪ್ಪುವಿನ ಸೇನೆಯಲ್ಲಿಯೂ ಇದ್ದವರು ಮುಸ್ಲಿಮರು ಮತ್ತು ಹಿಂದೂಗಳು. ಇನ್ನು ಸ್ವಾತಂತ್ರ್ಯ ಹೋರಾಟದ ಕಾಲಕ್ಕೆ ಬಂದರೆ, ಬ್ರಿಟಿಷರ ವಿರುದ್ಧ ಹಿಂದೂಗಳಿಗೆ ಹೆಗಲಿಗೆ ಹೆಗಲು ಕೊಟ್ಟು ಹೋರಾಡಿದವರು ಮುಸ್ಲಿಮರು.

Image
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಇಲ್ಲಿನ ಮತೀಯ ಸಹಬಾಳ್ವೆ ಮತ್ತು ಸಾಮರಸ್ಯಕ್ಕೆ ಶತ ಶತಮಾನಗಳ ಇತಿಹಾಸವಿದೆ. ಆ ಸೌಹಾರ್ದ ಮರದ ಬೇರುಗಳು ತುಂಬಾ ಆಳಕ್ಕೆ ಇಳಿದಿವೆ. ಒಡೆದು ಆಳುವ ಮೂಲಕ ರಾಜಕೀಯ ಲಾಭ ಪಡೆಯುವ ಉದ್ದೇಶದಿಂದ ಈ ಸಾಮರಸ್ಯವನ್ನು ಹಾಳುಗೆಡಹಲು ಹೆಚ್ಚು ಕಡಿಮೆ ಆರ್ ಎಸ್ ಎಸ್ ಸ್ಥಾಪನೆಯಾದ 1924 ರಿಂದಲೂ ಯತ್ನ ನಡೆಯುತ್ತಿದ್ದರೂ ಅದು ಹೆಚ್ಚು ಗಂಭೀರ ಸ್ವರೂಪ ಪಡೆದುದು ಬಾಬರಿ ರಾಮ ಮಂದಿರ ಚಳವಳಿಯ ಸಮಯದಲ್ಲಿ. ಮುಸ್ಲಿಮರನ್ನು ‘ನೀವು ಅನ್ಯರು’ ಎಂದು ಹೇಳಿ ಅವರನ್ನು ದೂರ ಮಾಡುವ ಮತ್ತು ಅವರ ಆರ್ಥಿಕ ಬೆನ್ನೆಲುಬು ಮುರಿಯುವ ಯತ್ನಗಳು 1990ರ ದಶಕದಿಂದ ತೀವ್ರಗೊಂಡವು. ಸುಳ್ಯ ಭಾಗದ ದೇವಾಲಯವೊಂದರ ಜಾತ್ರೆಯ ಸಮಯ ಅಲ್ಲಿನ ಬೀದಿಯಲ್ಲಿ ‘ಮುಸ್ಲಿಮರಿಗೆ ಪ್ರವೇಶ ಇಲ್ಲ’ ಎಂದು ಹಾಕಲಾಗಿದ್ದ ಬ್ಯಾನರ್ ಕಂಡಿದ್ದೆ. ಅದೇ ಜಾತ್ರೆಯಲ್ಲಿದ್ದ ಮುಸ್ಲಿಮ್ ವ್ಯಾಪಾರಿಯನ್ನು ಮತೀಯ ಸಂಘಟನೆಯವರು ಎಬ್ಬಿಸಿದಾಗ ‘ನೀವು ಮೊದಲೇ ಹೇಳಿದ್ದರೆ ನೆಲಬಾಡಿಗೆಯನ್ನಾದರೂ ಉಳಿಸಿಕೊಳ್ಳುತ್ತಿದ್ದೆನಲ್ಲ’ ಎಂದು ಆತ ದೀನನಾಗಿ ನುಡಿದಾಗ ನನ್ನ ಕಣ್ಣಲ್ಲಿ ನೀರು ಬಂದಿತ್ತು.

ಮತೀಯವಾದಿ ಮನಸು ಹಿಂದೆ ಇರಲಿಲ್ಲ ಎಂದಲ್ಲ. ಆದರೆ ಅದಕ್ಕೆ ಪ್ರಭುತ್ವದ ನೇರ ಬೆಂಬಲವಿರಲಿಲ್ಲ. ಆದರೆ ಈಗ ಪರಿಸ್ಥಿತಿ ಕೆಟ್ಟ ದಿಕ್ಕಿನಲ್ಲಿ ಬದಲಾಗಿದೆ. ಪ್ರಭುತ್ವದ ಆಶೀರ್ವಾದದೊಂದಿಗೆ ಸಾಮರಸ್ಯ ಕೆಡಿಸುವ, ಆ ಮೂಲಕ ನಮ್ಮದೇ ದೇಶದ ಪ್ರಜೆಗಳಿಗೆ ‘ನೀವು ನಮ್ಮವರಲ್ಲ, ನೀವು ಎರಡನೆಯ ದರ್ಜೆಯ ಪ್ರಜೆಗಳು’ ಎಂದು ಹೇಳುವ ಕೆಲಸ ಆರಂಭವಾಗಿದೆ. ಆದರೆ ಈ ಕುಟಿಲ ರಾಜಕಾರಣದ ಯಶಸ್ಸು ಏನಿದ್ದರೂ ತಾತ್ಕಾಲಿಕ. ಯಾಕೆಂದರೆ ಮತೀಯ ಸೌಹಾರ್ದದ, ಮತ್ತು ಅವಲಂಬನೆಯ ಬೇರುಗಳು ಅಷ್ಟು ಆಳದಲ್ಲಿವೆ.

ಸಂಘ ಪರಿವಾರ ಕರಾವಳಿಯ ಈ ಭಾಗವನ್ನು ತನ್ನ ಕೋಮು ದ್ವೇಷದ ಪ್ರಯೋಗಶಾಲೆಯಾಗಿ ಆಯ್ದುಕೊಂಡಿರಬಹುದು. ಆದರೆ ಇದು ಜಾತಿ ಮತಗಳ ಮೂಲಕ ಭೇದ ಮಾಡದ ಮತ್ತು ‘ನಂಬಿದವರಿಗೆ ಎದೆಯಲ್ಲಿ ದಾರಿ ಮಾಡಿಕೊಡುವ’ ಸೆಕ್ಯುಲರ್ ದೈವಗಳ ನಾಡು ಕೂಡಾ. ಮುಸ್ಲಿಮ್ ವ್ಯಕ್ತಿಯೊಬ್ಬರಿಗೆ ದೈವವು ಪ್ರಸಾದ ನೀಡಿದ್ದನ್ನು ಆಕ್ಷೇಪಿಸಿದ ಬಜರಂಗದಳದವರು ಎನ್ನಲಾದ ಹುಡುಗರನ್ನು ದೈವ ಅಟ್ಟಾಡಿಸಿದ್ದು ಮತ್ತು ಭೂಮಿಗೆ ಕತ್ತಿ ಚುಚ್ಚಿ ತನ್ನ ಸಿಟ್ಟು ಹೊರಹಾಕಿದ್ದು, ‘ನನಗೆ ಎಲ್ಲರೂ ಒಂದೇ’ ಅಂದುದು ಬಹಳ ಹಿಂದೆ ಅಲ್ಲ. ಕೇವಲ ಐದು ವರ್ಷದ ಹಿಂದೆ, ಮಂಗಳೂರು ಬಳಿಯ ಕೋಲವೊಂದರಲ್ಲಿ.

ನಿಮಗೆ ಏನು ಅನ್ನಿಸ್ತು?
2 ವೋಟ್