ಗೆಳೆತನದ ಹೊರತಾಗಿ ಯಾವ ಧರ್ಮದ ಚಹರೆಗಳೂ ನಮ್ಮ ನಡುವೆ ಕಾಣಿಸುತ್ತಿರಲಿಲ್ಲ

preethi

ಆ ದಿನಗಳನ್ನು ನೆನೆಸಿಕೊಂಡರೆ, ಈಗಲೂ ಕಣ್ಣಂಚಿಂದ ಒಂದೆರಡು ಹನಿಗಳು ಕೆನ್ನೆಯಿಂದ ಜಾರುತ್ತವೆ. ಈಗಲೂ ನನ್ನ ಗೆಳೆಯರ ಪಟ್ಟಿಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಇರೋದು ಮುಸ್ಲಿಂ ಮತ್ತು ಹಿಂದುಗಳೇ. ಪರಸ್ಪರ ಒಟ್ಟು ಸೇರಿದಾಗ, ಗೆಳೆತನದ ಹೊರತಾಗಿ ಯಾವ ಧರ್ಮದ ಚಹರೆಗಳೂ ನಮ್ಮ ನಡುವೆ ಕಾಣಿಸುತ್ತಿರಲಿಲ್ಲ. ಹಬ್ಬ ಹರಿದಿನಗಳಲ್ಲಿ ಒಟ್ಟಾಗಿ ಸಂಭ್ರಮಿಸುತ್ತಿದ್ದೆವು

ಭಾರತದಂತಹ ನಿಸರ್ಗ ಸಂಪದ್ಭರಿತ ದೇಶದಲ್ಲಿ ಪರ್ವತ, ಬಯಲು, ಕಾಡು, ಹೊಳೆ, ನದಿಗಳ ಪಾತ್ರ ಎಷ್ಟು ಮುಖ್ಯವಾದದ್ದೋ, ಸದ್ಯಕ್ಕಂತೂ ಅದಕ್ಕಿಂತ ಮುಖ್ಯವಾದದ್ದು ಕೋಮು ಸೌಹಾರ್ದತೆ. ಅದಕ್ಕೆ ಕಾರಣ ಎಲ್ಲೆಡೆಯೂ ಬುಸುಗುಡಲೆತ್ನಿಸುತ್ತಿರುವ ಕೋಮು ವಿಷಸರ್ಪಗಳು!

ಮೊನ್ನೆ ಮೊನ್ನೆವರೆಗೂ ಸಹೋದರರಂತಿದ್ದ, ಪರಸ್ಪರರ ಕಷ್ಟ ಸುಖಕ್ಕೆ ಹೆಗಲಾಗಿ, ನೋವಿಗೆ ಜೊತೆಗೂಡಿ ಬೆಳೆದ ಮಕ್ಕಳು ಇಂದು ತನ್ನ ಸ್ನೇಹಿತರು, ನೆರೆಹೊರೆಯವರು ಎಂದು ನೋಡದೆ ಕೋಮು ವಿಷ ಕಾರುತ್ತಿದ್ದಾರೆ. ಇಂತಹ ಸನ್ನಿವೇಶ ಸೃಷ್ಟಿಯಾಗಿದ್ದು ಬುದ್ಧಿವಂತರ ಜಿಲ್ಲೆಯೆನಿಸಿದ್ದ ಇದೇ ನಮ್ಮ ಕರಾವಳಿಯ ಜಿಲ್ಲೆಗಳಲ್ಲಿ ಎನ್ನುವುದು ಕಳವಳದ ಸಂಗತಿ. ಒಂದು ದೇಶವನ್ನು ಹಾಳು ಗೆಡವಲು ಹೊರಗಿನ ದುಷ್ಟ ಶಕ್ತಿಗಳು ಬೇಕಾಗಿಲ್ಲ ನಮ್ಮ ನಡುವೆ ದ್ವೇಷದ ಬೀಜ ಬಿತ್ತೋ ದುಷ್ಟ ಶಕ್ತಿಗಳೇ ಸಾಕು ಎನ್ನುವುದಕ್ಕೆ ಇತ್ತೀಚೆಗಿನ ಅನೇಕ ವಿದ್ಯಮಾನಗಳೇ ಸಾಕ್ಷಿ.

ನಾವೆಲ್ಲಾ ಎಷ್ಟೊಂದು ಅನ್ಯೋನ್ಯತೆಯಲ್ಲಿ ಬೆಳೆದೆವು, ನಮ್ಮ ನಮ್ಮ ಮನೆಗಳಲ್ಲಿ ಧರ್ಮಗಳ ನಡುವೆ ಭೇದವೆಣಿಸುವುದನ್ನು ನಮಗ್ಯಾರೂ ಕಲಿಸಿರಲಿಲ್ಲ. ಎಲ್ಲರ ಮನೆಗಳಿಗೂ ಎಲ್ಲ ಧರ್ಮದವರು ಸಹಜವೆಂಬಂತೆ ಬರುತ್ತಿದ್ದರು. ನಾವು ಹಿಂದುಗಳ ಮನೆಗೆ ಹೋಗುತ್ತಿದ್ದೆವು, ಅವರ ಮನೆಯಲ್ಲಿ ಊಟ, ತಿಂಡಿ, ಭಜನೆ ಹಾಡುತ್ತಿದ್ದೆವು, ಕೆಲವೊಮ್ಮೆ ಅಲ್ಲೇ ಮಲಗಿ ಬಿಡುತ್ತಿದ್ದೆವು. ಅವರು ನಮ್ಮ ಮನೆಗಳಿಗೆ ಬರುತ್ತಿದ್ದರು. ಹಬ್ಬ ಹರಿದಿನಗಳಲ್ಲಂತೂ ಧರ್ಮದ ಕಟ್ಟುಪಾಡುಗಳ ಹಂಗಿಲ್ಲದೆ ಒಟ್ಟಾಗಿ ಸಂಭ್ರಮಿಸುತ್ತಿದ್ದೆವು. ಆ ದಿನಗಳನ್ನು ನೆನೆಸಿಕೊಂಡರೆ, ಈಗಲೂ ಕಣ್ಣಂಚಿಂದ ಒಂದೆರಡು ಹನಿಗಳು ಕೆನ್ನೆಯಿಂದ ಜಾರುತ್ತವೆ. ಈಗಲೂ ನನ್ನ ಗೆಳೆಯರ ಪಟ್ಟಿಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಇರೋದು ಮುಸ್ಲಿಂ ಮತ್ತು ಹಿಂದುಗಳೇ. ಪರಸ್ಪರ ಒಟ್ಟು ಸೇರಿದಾಗ, ಗೆಳೆತನದ ಹೊರತಾಗಿ ಯಾವ ಧರ್ಮದ ಚಹರೆಗಳೂ ನಮ್ಮ ನಡುವೆ ಕಾಣಿಸುತ್ತಿರಲಿಲ್ಲ.

ಎಲ್ಲಾ ಧರ್ಮಗಳನ್ನು ಮೀರಿದ್ದು ಮಾನವ ಧರ್ಮ ಅನ್ನೋದನ್ನು ಕಲಿಸಿದ್ದೇ ಈ ಗೆಳೆತನದ ಸಂಬಂಧ. ಕಾಲೇಜು ಜೀವನದಲ್ಲಂತೂ  ಬಹಳಷ್ಟು ಮಂದಿ ಗೆಳೆಯ, ಗೆಳತಿಯರಿದ್ರು. ಅವರ ಬಗ್ಗೆ ಬರೆದಷ್ಟೂ ಮುಗಿಯದ ನೂರಾರು ಘಟನೆಗಳಿವೆ. ಮಧ್ಯಾಹ್ನದ ಊಟಕ್ಕೆ ಹಣ ಇಲ್ಲದೆ ಉಪವಾಸ ಕುಳಿತಾಗ ಕೈ ಹಿಡಿದು ಎಳೆದುಕೊಂಡು ಹೋಗಿ ಊಟ ಕೊಡಿಸಿದ ಫಾತಿಮಾಳ ಮಧುರ ನೆನಪು  ವಾರದಲ್ಲಿ ಒಮ್ಮೆಯಾದರೂ ಕಾಡದೆ ಇರಲ್ಲ.

ಹೊಳೆಯಲ್ಲಿ ಕೊಚ್ಚಿ ಹೋಗುತ್ತಿದ್ದಾಗ...

ಇಂದು ಜೀವಂತವಾಗಿ ನಿಮ್ಮೆಲ್ಲರ ನಡುವೆ ಇದೆಲ್ಲ ಬರೆಯಲು ಕಾರಣನಾಗಿದ್ದು ನನ್ನ ತಮ್ಮನ ತಾಲೀಂ ಮಾಸ್ಟರ್ ಮಗ. ನಾನಗಾಗ  ಒಂಬತ್ತು ವರ್ಷ ವಯಸ್ಸಿರಬೇಕು, ಉಪ್ಪಿನಂಗಡಿಯಲ್ಲಿ  ಇದ್ದೆವು. ಯಾವಾಗಲೂ ಕುಮಾರಧಾರ ನದಿಯಲ್ಲಿ  ಈಜು ಕಲಿಸುತ್ತಿದ್ದರು. ಅದೊಂದು ದಿನ ಅಪ್ಪ ಇರಲಿಲ್ಲ ಎಂದು ನಾವು ಮಕ್ಕಳೇ ನದಿಗೆ ಇಳಿದೆವು. ಜೋರು ಮಳೆಯ ದಿನಗಳವು, ಒಂದು ಬದಿಯಲ್ಲಿ  ಈಜುತ್ತಾ ಇರುವಾಗ ದೊಡ್ಡ ಕಲ್ಲಿನ ಮೇಲೆ ಕೈ ಇಡುವ ಸಂದರ್ಭ ಜಾರಿದೆ. ಆಗ ಕೊಚ್ಚಿ ಹೋಗುತ್ತಿದ್ದ ನನ್ನನ್ನು ತನ್ನ ಪ್ರಾಣದ ಹಂಗು ತೊರೆದು, ನನ್ನ ಜುಟ್ಟನ್ನು ಹಿಡಿದು ದಡಕ್ಕೆ ತಂದು ರಕ್ಷಿಸಿದ ಜಗದೀಶನನ್ನು ಯಾವತ್ತಿಗೂ ಮರೆಯಲಾರೆ.

ಇವತ್ತು ಕೂಡಾ ನಾನು ಕೆಲಸದ ಮೇಲೆ ಫೀಲ್ಡ್ ನಲ್ಲಿ ಇರೋದೇ ಹೆಚ್ಚು, ಊಟ ಮಾಡಲು ಸಮಯವಿರಲ್ಲ. ಹಾಗಾಗಿ ಮಧ್ಯಾಹ್ನದ ಊಟ ಸರಿಯಾಗಿ ಮಾಡಲ್ಲ ಎಂದು ನನ್ನ ಸಹೋದ್ಯೋಗಿ ಗೆಳತಿ ಪುಷ್ಪ ದಿನಾ ನನಗಾಗಿ ಅವಳ ಮನೆಯಿಂದ ಊಟ ತರುತ್ತಾಳೆ

ಬಹುಶ: ಪ್ರತಿಯೊಬ್ಬರ ಬದುಕೂ ರೂಪುಗೊಂಡಿದ್ದು ಇಂತಹುದೇ ಅನ್ಯೋನ್ಯ ಸಂಬಂಧಗಳ ಹೆಣಿಗೆಯಲ್ಲಿಯೇ ಇರಬೇಕು. ಹಾಗಿದ್ದರೂ, ಈಗೇಕೆ ಸೌಹಾರ್ದತೆಯ ನಡುವೆ ಗೋಡೆಗಳೇಳುತ್ತಿವೆ? ನೂರಕ್ಕೆ ಎಂಭತ್ತು ಪಾಲು ನಮ್ಮ ನಿಮ್ಮಂತಹ ಜನಸಾಮಾನ್ಯರ ಬದುಕು ಈಗಲೂ ಹಿಂದಿನಂತೆಯೇ ಸೌಹಾರ್ದಯುತವಾಗಿಯೇ ಸಾಗುತ್ತಿದೆ. ಹಾಗಿದ್ದರೆ, ನಮ್ಮ ನಡುವೆ ನುಸುಳಿಕೊಂಡು ಧರ್ಮದ ಹೆಸರಿನಲ್ಲಿ ಸೌಹಾರ್ದತೆಗೆ ಕೊಳ್ಳಿಯಿಡುವ, ಕೋಮು ವಿಷಗಾಳಿ ಹಬ್ಬಿಸುತ್ತಿರುವ ಆ ಶೇಕಡಾ ಇಪ್ಪತ್ತು ಮಂದಿ ಯಾರು? ಆ ಇಪ್ಪತ್ತು ಮಂದಿ ಹಬ್ಬಿಸುವ ಕೋಮು ಕಿಚ್ಚು ಕಾಳ್ಗಿಚ್ಚಿನಂತೆ ವ್ಯಾಪಿಸುವ ಮುನ್ನ ನಾವು ಎಚ್ಚರಗೊಳ್ಳದಿದ್ದರೆ, ಆ ಕೋಮು ಕಾಳ್ಗಿಚ್ಚಿಗೆ, ನಾವೆಲ್ಲ  ಬಲಿಯಾಗುವ ದಿನಗಳು ದೂರವಿಲ್ಲ.

ಇಲ್ಲಿ ಯಾರೂ ಶತ್ರುಗಳಲ್ಲ. ಕೋಮು ದ್ವೇಷದಿಂದ ಬಡವರ ಮನೆಯ ಬೆಳಕು ನಂದಿ ಹೊಗುತ್ತೆ ವಿನಃ ಕೋಮು ದ್ವೇಷ ಪಿಪಾಸುಗಳ  ಮಕ್ಕಳಲ್ಲ. ಅವರ ಮಕ್ಕಳೆಲ್ಲ ವಿದ್ಯೆ ಕಲಿತು ಸ್ವಂತ ಉದ್ಯಮ ಮಾಡ್ಕೊಂಡೋ, ಅಥವಾ ವಿದೇಶಗಳಲ್ಲಿ ಹವಾ ನಿಯಂತ್ರಿತ ರೂಮು, ಕಾರು ಎಂದು ಸುಖವಾಗಿರ್ತಾರೆ. ಇಂದಿನ ಪೀಳಿಗೆಯ ಮಕ್ಕಳಿಗೆ ಇವನ್ನೆಲ್ಲ ಅರ್ಥ ಮಾಡಿಸಿ, ಇಂತಹ ಕೋಮು ಷಡ್ಯಂತ್ರಗಳಿಗೆ ಬಲಿ ಬೀಳದೆ ತಮ್ಮ ಬದುಕನ್ನು ಕಟ್ಟಿಕೊಳ್ಳುವತ್ತ ಚಿತ್ತ ನೆಡುವಂತೆ ಅರಿವು ಮೂಡಿಸಬೇಕಾದ್ದು ಹಿರಿಯರಾದ ನಮ್ಮೆಲ್ಲರ ಕರ್ತವ್ಯ ಮತ್ತು ಜವಾಬ್ದಾರಿ. ಒಳ್ಳೆಯ ಆರೋಗ್ಯ ವಿದ್ಯಾಭ್ಯಾಸ ಪಡೆಯುವುದು ಪ್ರತಿಯೊಂದು ಮಗುವಿನ ಹಕ್ಕು. ನಾಗರಿಕ ಸಮಾಜ ಉತ್ತಮ ಉದ್ಯೋಗ, ಬದುಕು, ಆರೋಗ್ಯಕ್ಕಾಗಿ ಸುಸಜ್ಜಿತ ಆಸ್ಪತ್ರೆಯ ಹಕ್ಕುಗಳಿಗಾಗಿ ಹೋರಾಡುತ್ತಲೇ ಇರಬೇಕು.

ಇದನ್ನು ಓದಿದ್ದೀರಾ? ʼಮಾನವ ಪ್ರೇಮದ ನಶೆಯ ಅಂಟಿಸುತ್ತಾ, ದ್ವೇಷದ ಗಾಳಿಯ ಎದುರಿಸೋಣಾʼ

ಇಂದಿನ  ಮಕ್ಕಳು ಮುಂದಿನ ಪ್ರಜೆಗಳಲ್ಲ , ಅವರು ಇಂದಿನ ಪ್ರಜೆಗಳು. ಹೆತ್ತವರು ತಮ್ಮ ಮಕ್ಕಳ ಮೇಲೆ ನಿಗಾ ಇಟ್ಟು, ಎಲ್ಲ ಬಗೆಯ ಒಳಿತು ಕೆಡುಕುಗಳ ಬಗ್ಗೆ ಅದರಿಂದ ಆಗುವ ಕೆಡುಕುಗಳ ಬಗ್ಗೆ ಮಕ್ಕಳಿಗೆ ತಿಳಿಸಿ ಹೇಳಬೇಕು, ಇಲ್ಲಿ ಎಲ್ಲರೂ ನಮ್ಮವರೇ, ಈ ಮಣ್ಣಿನ ಮಕ್ಕಳೇ ಎಂಬುದನ್ನು ಅವರಿಗೆ ವಿವರಿಸಿ ಹೇಳಬೇಕು, ನಮ್ಮನ್ನು ನೋಡಿ ನಮ್ಮ ಮಕ್ಕಳು ಅನುಕರಿಸುತ್ತಾರೆ. ಹಾಗಾಗಿ ಮಕ್ಕಳ ಮುಂದೆ ನಾವು ಸರಿಯಾಗಿ ಮಾತನಾಡುವುದನ್ನು ಕಲಿಯಬೇಕು. ನಾವಾಡೋ ಪ್ರತೀ ಮಾತು ಮಕ್ಕಳ ಮನಸ್ಸನ್ನು ಅರಳಿಸಲಿ, ನಮ್ಮ ಮಾತು ತುಟಿ ಮೀರದಿರಲಿ, ಹೆಜ್ಜೆ ತಪ್ಪದಿರಲಿ. ಕೋಮು ಸೌಹಾರ್ದದ ನಂದಾದೀಪ ಎಂದೂ ಆರದಿರಲಿ.

ನಿಮಗೆ ಏನು ಅನ್ನಿಸ್ತು?
6 ವೋಟ್