ಇದು ನಮ್ಮ ಸೌಹಾರ್ದ | ಮುಹಮ್ಮದ್‌ಗೆ ಹೆಗಲಾದ ಆರ್ಯ, ಅರ್ಚನಾ; ಬೆಂಕಿ ಹಚ್ಚುವವರ ನಡುವೆ ಪ್ರೀತಿ ಹಂಚಿದವರು

ALIF MUHAMMED

ಹಿಜಾಬ್ ವಿಷಯವನ್ನು ಮುಂದಿಟ್ಟುಕೊಂಡು ಕರ್ನಾಟಕದ ಶೈಕ್ಷಣಿಕ ಪರಿಸರವನ್ನು ಮಲಿನಗೊಳಿಸಿದವರ ಮನಬದಲಾಗುವ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಜನಪ್ರಿಯತೆ ಪಡೆಯುತ್ತಿದೆ. ಹುಟ್ಟಿನಿಂದಲೇ ಎರಡೂ ಕಾಲುಗಳನ್ನು ಕಳೆದುಕೊಂಡಿರುವ ಕಾಲೇಜು ವಿದ್ಯಾರ್ಥಿಯೊಬ್ಬನಿಗೆ ಇಬ್ಬರು ಸಹಪಾಠಿಗಳು ಹೆಗಲಾದ ವೀಡಿಯೋ ನೆಟ್ಟಿಗರ ಮನಗೆದ್ದಿದೆ.

ಕೇರಳದ ಕೊಲ್ಲಂ ಜಿಲ್ಲೆಯ ಸಾಸ್ತಾಂಕೋಟ್ಟ ಎಂಬಲ್ಲಿನ ದೇವಸ್ಯಂ ಮಂಡಳಿಯ ಅಧೀನದಲ್ಲಿರುವ ಕಾಲೇಜಿನ ಬಿ.ಕಾಂ. ಅಂತಿಮ ವರ್ಷದ ವಿದ್ಯಾರ್ಥಿಯಾಗಿರುವ ಅಲಿಫ್ ಮುಹಮ್ಮದ್‌ಗೆ ಹುಟ್ಟಿನಿಂದ ಕಾಲುಗಳಿಲ್ಲ, ಆದರೆ ಆತನ ವಿದ್ಯೆಯ ಹಂಬಲಕ್ಕೆ ಕಾಲುಗಳ ಕೊರತೆ ಕಾಡಿಲ್ಲ. ಪ್ರತಿನಿತ್ಯ ಕಾಲೇಜಿಗೆ ತೆರಳಲು, ತರಗತಿ ಕೋಣೆ, ಲೈಬ್ರರಿ, ಕ್ಯಾಂಟೀನ್‌ ತಲುಪಲು, ಸ್ನೇಹಿತರ, ಸಹಪಾಠಿಗಳ ಹೆಗಲುಗಳು ಅಲಿಫ್‌ಗಾಗಿ ಸದಾ ಸಿದ್ದ.

ಕಾಲೇಜಿನ ಈ ದಿನನಿತ್ಯದ ಘಟನೆಯನ್ನು ಕ್ಯಾಮೆರಾ ಕಣ್ಣಲ್ಲಿ ಸೆರೆ ಹಿಡಿದಿರುವವರು ಖ್ಯಾತ ದಿನಪತ್ರಿಕೆ ಮಲಯಾಳ ಮನೋರಮಾದ ಛಾಯಾಗ್ರಾಹಕ ಜಗತ್ ತುಳಸೀಧರನ್. ಕ್ಯಾಂಪಸ್‌ನಿಂದ ತರಗತಿ ಕೋಣೆಗೆ ತೆರಳಲು ಕಾಯುತ್ತಿದ್ದ ಮುಹಮ್ಮದ್ ಅಲಿಫ್ ನನ್ನು  ಸಹಪಾಠಿಗಳಾದ ಆರ್ಯ ಮತ್ತು ಅರ್ಚನಾ, ತಮ್ಮ ಹೆಗಲೇರಿಸಿ, ಬೆನ್ನಿಗೆ ಕೈಯ ಬಲನೀಡಿ ಕರೆದೊಯ್ಯುವ ವೀಡಿಯೋ ಲಕ್ಷ ಲಕ್ಷ ಮನಸುಗಳ ಗೆದ್ದಿದೆ. ಆರ್ಯ ಮತ್ತು ಅರ್ಚನಾರಿಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಧರ್ಮದ ಕಿಚ್ಚುಹೊತ್ತಿಸಿ ವಿದ್ಯಾರ್ಥಿಗಳ ನಡುವೆ ಸಂಘರ್ಷ ತಂದಿಡುವವರ ಕಣ್ಣು ತೆರೆಸುವಂತಿದೆ ಈ ವೀಡಿಯೋ.

 

ಕಾಲೇಜಿನಲ್ಲಿ ನಡೆಯುತ್ತಿದ್ದ  ಯೂತ್ ಫೆಸ್ಟಿವಲ್ ಕಾರ್ಯಕ್ರಮಕ್ಕೆ ಕರ್ತವ್ಯದ ಮೇಲೆ ಬಂದಿದ್ದ  ತುಳಸೀಧರನ್, ಅನಿರೀಕ್ಷಿತವಾಗಿ ಕಂಡ ಅಪೂರ್ವ ದೃಶ್ಯವನ್ನು ಕೂಡಲೇ ತಮ್ಮ ಕ್ಯಾಮರಾದಲ್ಲಿ ದಾಖಲಿಸಿದ್ದಾರೆ. ಬಳಿಕ ಅಲಿಫ್ ಸೇರಿದಂತೆ ತಮ್ಮ ಸ್ನೇಹಿತರ ಬಳಿ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಅಲಿಫ್ ತನ್ನ ಫೇಸ್ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದ ವೀಡಿಯೋವನ್ನು ಲಕ್ಕಕ್ಕೂ ಅಧಿಕ ಮಂದಿ ನೋಡಿದ್ದಾರೆ. 

ಅಲಿಫ್ ಪಾಲಿಗೆ ಸ್ನೇಹಿತರೇ ಸರ್ವಸ್ವ. ನಿತ್ಯ ಸಂಚರಿಸುವ ಅಗತ್ಯಗಳಿಗೆ ಅವರನ್ನೇ ನೆಚ್ಚಿಕೊಂಡಿದ್ದಾರೆ. ಆದರೆ  ಗೆಳೆಯ ಗೆಳತಿಯರ ಹೆಗಲುಗಳಿಗೆ ಅಲಿಫ್ ಎಂದಿಗೂ ʼಭಾರʼ ಎನಿಸಿಲ್ಲ. ತಮ್ಮಳೊಗೊಬ್ಬ ಎಂಬ ಪ್ರೀತಿಯಿಂದಲೇ ಜೊತೆಯಾಗಿದ್ದಾರೆ. ಅನ್ಯ ಧರ್ಮದವರ ಜೊತೆ ಮಾತನಾಡಿದರು ಎಂಬ  ಕ್ಷುಲ್ಲಕ ಕಾರಣಕ್ಕೆ ಗುಂಪುಹಲ್ಲೆಗಳು ಜರುಗಿರುವ ದ್ವೇಷ ವೈಮನಸ್ಯಗಳ ನಡುವೆ, ಧರ್ಮ-ಲಿಂಗಭೇದ ಮೀರಿದ ಈ ವಿಡಿಯೋ ಮಾನವಪ್ರೇಮವನ್ನು ಗಟ್ಟಿಗೊಳಿಸಲಿ.

 

ನಿಮಗೆ ಏನು ಅನ್ನಿಸ್ತು?
4 ವೋಟ್