ಯೂಸುಫ್‌ ನಮಾಜೂ ಮಾಡ್ತಾನೆ, ವಿಭೂತಿನೂ ಹಚ್ತಾನೆ...!

ನಾವು ನಮ್ಮ ಹೊಲದಲ್ಲಿ ಕೂಲಿಗಳನ್ನಿಟ್ಟು ಕೆಲಸ ಮಾಡಿಸಬೇಕೆಂದರೆ, ನಮ್ಮ ಹೊಲದಲ್ಲಿ ಟ್ರಾಕಟರ್‌ನಿಂದ ಉಳುಮೆ ಮಾಡಬೇಕಾದರೆ, ಗೊಬ್ಬರ ಹಾಕಬೇಕಾದರೆ, ನಾಟಿ ಮಾಡಬೇಕಾದರೆ ಹೀಗೆ ಯಾವುದೇ ರೀತಿಯ ಕೆಲಸ ಮಾಡಬೇಕೆಂದರೂ, ಮೊದಲಿಗೆ ಬಂದು ಕೈ ಜೋಡಿಸುವುದು ಮುಸ್ಲಿಂ ಜನ. ನಾವೂ ಅವರ ಹೊಲಕ್ಕೆ ಹೋಗಿ ಸಹಾಯ ಮಾಡುತ್ತೇವೆ

ನಾನು ಬ್ರಾಹ್ಮಣರ ಕುಟುಂಬಕ್ಕೆ ಸೇರಿದವಳು. ನಮ್ಮ ಊರು ಕುಣಿಗಲ್ ತಾಲ್ಲೂಕಿನ ಗುಲ್ಲಹಳ್ಳಿಪುರ ಗ್ರಾಮದ ನಾನು ಯಾವತ್ತಿಗೂ ಮೇಲ್ಜಾತಿಯ ಕುಟುಂಬಕ್ಕೆ ಸೇರಿದವಳು ಎಂದು ಎಲ್ಲಿಯೂ ಹೇಳಿಕೊಂಡವಳಲ್ಲ. ನಮ್ಮ ಕುಟುಂಬದಲ್ಲಿ ಎಲ್ಲರೂ ಹೀಗೆ. ಯಾಕೆಂದರೆ ಅದಕ್ಕೆ ನಮ್ಮ ಊರಿನಲ್ಲಿ ಸಿಕ್ಕಿರುವ ಒಂದು ಒಳ್ಳೆಯ ಶಾಂತಿಯುತವಾದ ವಾತಾವಾರಣ ಕಾರಣ. ಈ ವಿಷಯದಲ್ಲಿ ನಾನು ನನ್ನ ಊರಿನ ಜನರಿಗೆ ಧನ್ಯವಾದ ಹೇಳಬೇಕು.

ನಮ್ಮ ಊರಿನಲ್ಲೂ ಮುಸ್ಲಿಂ ಕುಟುಂಬಗಳು ಇವೆ. ಅದೇ ರೀತಿ ಬೇರೆ ಬೇರೆ ಜಾತಿ ಮತ್ತು ಧರ್ಮದ ಕುಟುಂಬಗಳೂ ಇವೆ. ನಾವು ನಮ್ಮ ಹೊಲದಲ್ಲಿ ಕೂಲಿಗಳನ್ನಿಟ್ಟು ಕೆಲಸ ಮಾಡಬೇಕೆಂದರೆ, ನಮ್ಮ ಹೊಲದಲ್ಲಿ ಟ್ರಾಕ್ಟರ್‌ನಿಂದ ಉಳುಮೆ ಮಾಡಬೇಕಾದರೆ, ಗೊಬ್ಬರ ಹಾಕಬೇಕಾದರೆ, ನಾಟಿ ಮಾಡಬೇಕಾದರೆ ಇನ್ನೂ ಯಾವುದೇ ರೀತಿಯ ಕೆಲಸ ಮಾಡಬೇಕೆಂದರೂ, ಮೊದಲಿಗೆ ಬಂದು ಕೈ ಜೋಡಿಸುವುದು ಮುಸ್ಲಿಂ ಜನರೇ. ನಾವೂ ಕೂಡ ಅವರ ಹೊಲಕ್ಕೆ ಹೋಗಿ ಸಹಾಯ ಮಾಡುತ್ತೇವೆ. ಈ ರೀತಿಯಾಗಿ ಅವರು ನಮ್ಮ ಜೊತೆ, ನಾವು ಅವರ ಜೊತೆ ಹೊಂದಾಣಿಕೆಯಿಂದ ಇರುತ್ತೇವೆ. ನಮ್ಮ ಊರಿನಲ್ಲಿ ಇಲ್ಲಿಯವರೆಗೂ ಯಾವುದೇ ರೀತಿಯ ಧರ್ಮ, ಜಾತಿ ವಿಚಾರದಲ್ಲಿ ಗಲಾಟೆ ನಡೆದಿಲ್ಲ.

ಹಿಂದು ಧರ್ಮದ ಐಡಿಯಾಲಜಿ ಬೇರೆ, ಮುಸ್ಲಿಂ ಧರ್ಮದ ಐಡಿಯಾಲಜಿ ಬೇರೆಯಿರುತ್ತದೆ. ಆದರೆ ಅದು ಅವರವರ ವೈಯುಕ್ತಿಕ ಆಗಿರಬೇಕು. ಅದು ನಮ್ಮ ನಮ್ಮ ಮನೆಯಲ್ಲಿ ಮಾತ್ರ ಇರಬೇಕೇ ಹೊರತು, ಸಮಾಜಕ್ಕೂ  ವೈಯುಕ್ತಿಕ ಆಚರಣೆಗಳಿಗೂ ಸಂಬಂಧ ಕಲ್ಪಿಸಬಾರದು. ನಮ್ಮ ಮನೆಯಲ್ಲಿ ನಾವು ಪೂಜೆ ಮಾಡಿಕೊಳ್ತೀವಿ, ಅವರ ಮನೆಯಲ್ಲಿ ಅವರು ಪೂಜೆ ಮಾಡಿಕೊಳ್ತಾರೆ. ಅವರ ಧರ್ಮದ ಮೇಲೆ ಇರುವ ನಂಬಿಕೆ ಅವರದು, ಅವರ ಧರ್ಮದ ನಂಬಿಕೆ ಸರಿಯಾಗಿದೆ, ಇವರ ಧರ್ಮದ ನಂಬಿಕೆ ತಪ್ಪಾಗಿದೆ ಎಂದು ಹೇಳುವುದಕ್ಕೆ ಸಾಧ್ಯವಿಲ್ಲ ಮತ್ತು ಹೇಳಲೂಬಾರದು. ಈ ರೀತಿಯ ಆಲೋಚನೆಗಳು ಎಲ್ಲಿ ಹುಟ್ಟುತ್ತದೋ ಅಲ್ಲಿಂದಲೇ ಕೋಮುಗಲಭೆಗಳು ಸೃಷ್ಟಿ ಆಗುವುದು. ಯಾವುದು ಸರಿ, ಯಾವುದು ತಪ್ಪು ಎನ್ನುವ ವಿಚಾರಗಳಿಗೆ ನಮ್ಮ ಆಲೋಚನೆಗಳು ಹುಟ್ಟಬಾರದು. ಅವರವರ ಧರ್ಮವನ್ನು ಅವರ ನಂಬಿಕೆಯಂತೆ ಅವರಿಗೆ ಆಚರಣೆ ಮಾಡಿಕೊಳ್ಳಲು ಬಿಡಬೇಕು.

ನಮ್ಮ ಧರ್ಮಕ್ಕೆ ಅವರು, ಅವರ ಧರ್ಮಕ್ಕೆ ನಾವು ಕೇಡು ಬಯಸದೇ ಜಾತಿ-ಧರ್ಮ ಎನ್ನುವುದನ್ನು ನಮ್ಮ ನಮ್ಮ ಮನೆಗೆ ಮಾತ್ರ ಸೀಮಿತವಾಗಿಸಿಕೊಳ್ಳಬೇಕು. ಅದನ್ನು ಬಿಟ್ಟು ಸಮಾಜಕ್ಕೆ ತರಬಾರದು. ಯಾಕೆಂದರೆ, ಧರ್ಮದ ಸ್ವಾತಂತ್ರ ಎಲ್ಲರಿಗೂ ಇರುತ್ತದೆ. ನನಗೆ ಜೋಹರ್ ಅನ್ನುವ ಗೆಳತಿ ಇದ್ದಳು, ಅವಳು ನನಗೆ ತುಂಬಾ ಹತ್ತಿರದ ಸ್ನೇಹಿತೆ. ನನಗೆ ಚಿಕ್ಕ ವಯಸ್ಸಿನಿಂದಲೂ ಅನೇಕ ಮುಸ್ಲಿಂ ಸ್ನೇಹಿತರು. ಯಾವತ್ತಿಗೂ ಧರ್ಮದ ವಿಚಾರದಲ್ಲಿ ಬೇಸರ ಅಥವಾ ಕಿತ್ತಾಟ ಇರಲಿ, ಕನಿಷ್ಠ ಒಂದು ಮನಸ್ತಾಪ ಕೂಡ ನಮ್ಮ ಮಧ್ಯೆ ನಡೆದಿಲ್ಲ. ಅಷ್ಟು ಚೆನ್ನಾಗಿ ನಮ್ಮ ಸಂಬಂಧಗಳು ಇರುತ್ತಿತ್ತು.

ದೇವಸ್ಥಾನದಲ್ಲಿ ಪೂಜೆ ಮಾಡುವ ಬ್ರಾಹ್ಮಣರು ನಾವಾಗಿದ್ದರೂ, ನಮ್ಮ ದೇವಸ್ಥಾನದ ಒಳಗೆ ಮುಸ್ಲಿಂ ಸ್ನೇಹಿತರು ಬಂದು ಪೂಜೆಯನ್ನು ಭಕ್ತಿಯಿಂದ ಮಾಡಿಕೊಳ್ಳುತ್ತಿದ್ದರು, ನಾವು ದೇವಸ್ಥಾನದಲ್ಲಿ ಕೊಡುವಂತಹ ಪ್ರಸಾದವನ್ನು ಅವರು ತಿನ್ನುತ್ತಿದ್ದರು ಮತ್ತು ಅವರ ಮನೆಯಲ್ಲಿ ಮಾಡುವ ಹಬ್ಬದ ಪ್ರಸಾದವನ್ನು ನಾವು ಕೂಡ ತಿನ್ನುತ್ತಿದ್ದೆವು. 
ನಾವು ಶಾಲಾ ಕಾಲೇಜು ದಿನಗಳಲ್ಲಿ ಎಲ್ಲರು ಒಟ್ಟಾಗಿ ಪ್ರವಾಸ ಹೋಗುತ್ತಿದ್ದೆವು. ಒಂದು ಪ್ರವಾಸ ಸ್ಥಳ ಆಗಿದ್ದ ಮಸೀದಿಗೆ ಭೇಟಿ ನೀಡಿದ್ದೆವು. ಆ ಮಸೀದಿಗೆ ಹೋದಾಗ ನಾವು ಯಾವುದೋ ಬೇರೆ ಧರ್ಮದ ದೇವಸ್ಥಾನಕ್ಕೆ ಬಂದಿದ್ದೀವಿ ಎನ್ನುವ ಆಲೋಚನೆ ನಮಗೆ ಬಂದಿಲ್ಲ. ಅಲ್ಲಿ ನಾವು ತುಂಬಾ ಖುಷಿಯಿಂದ ಮಸೀದಿಯಲ್ಲಿ ದೇವರಲ್ಲಿ ಪ್ರಾರ್ಥನೆ ಮಾಡಿದ್ವಿ, ಮುಸ್ಲಿಂ ಸ್ನೇಹಿತರು ಕೂಡ ಅದೇ ಖುಷಿಯಿಂದ ನಡೆದುಕೊಂಡಿದ್ದು ಇವೆಲ್ಲವೂ ನೆನೆಸಿಕೊಳ್ಳುವಾಗ ನನಗೆ ಈಗಲೂ ತುಂಬಾ ಸಂತೋಷ ಅನಿಸುತ್ತದೆ.

ಈಗ ನಾನು ಓದುತ್ತಿರುವ ಕಾಲೇಜಿನಲ್ಲಿ ಯೂಸುಫ್ ಪಾಷಾ ಎಂಬ ಸ್ನೇಹಿತ ಇದ್ದಾನೆ. ಅವನು ನಮಾಜು ಮಾಡ್ತಾನೆ, ಯಾರಾದರೂ ಪ್ರಸಾದ ಕೊಟ್ಟರೆ ಅದನ್ನು ತಿನ್ನುತ್ತಾನೆ, ಹಣೆಗೆ ವಿಭೂತಿಯನ್ನೂ ಹಚ್ಚಿಕೊಳ್ಳುತ್ತಾನೆ. ನಮ್ಮ ದೇವಸ್ಥಾನದಲ್ಲಿ ಬಂದು ಭಕ್ತಿಯಿಂದ ದೇವರಿಗೆ ಕೈ ಮುಗಿಯುತ್ತಾನೆ. ಎಲ್ಲರ ಜೊತೆಗೂ ಅವನು ನಿಸ್ಸಂಕೋಚದಿಂದ ಬೆರೆಯುತ್ತಾನೆ. ನಾವು ಕೂಡ ಅಷ್ಟೇ. ಅವನು ಮನೆಯಿಂದ ಹಬ್ಬದ ತಿಂಡಿ ತಿನಿಸಿಗಳು ತಂದರೆ ಎಲ್ಲವನ್ನೂ ಹಂಚಿಕೊಂಡು ತಿನ್ನುತ್ತೇವೆ. ಇದು ನಮಗೆಲ್ಲ ಅಭ್ಯಾಸವಾಗಿಯೇ ಬಂದಿದೆ.

ನಾವು ಮುಸ್ಲಿಂ ಸ್ನೇಹಿತ ಅಥವಾ ಸ್ನೇಹಿತೆ ಅಷ್ಟೇ ಅಲ್ಲ, ಬೇರೆ ಧರ್ಮದ ಸ್ನೇಹಿತರೊಡನೆ ಕೂಡ ಹೀಗೆ ನಡೆದುಕೊಳ್ಳುತ್ತೇವೆ. ನಾವೆಲ್ಲರೂ ಕೂಡ ಹಿಂದು ಮುಸ್ಲಿಂ ಎನ್ನುವ ಭೇದ ಭಾವ ಇಲ್ಲದೇ ಖುಷಿಯಿಂದ ಇರ್ತೀವಿ ಮತ್ತು ಹಾಗೆಯೇ ಇರಬೇಕು ಅಂತ ಬಯಸ್ತೀವಿ. ಸಮಾಜವೂ ನಮ್ಮಂತೆಯೇ ಕೂಡಿ ಬಾಳುವ ಯೋಚನೆ ಮಾಡಿದಾಗ ಯಾವ ಸಮಸ್ಯೆಗಳು ಬರುವುದಿಲ್ಲ. ಆದರೆ, ಕೆಲವು ಕಿಡಿಗೇಡಿಗಳು, ಧರ್ಮದ ಹೆಸರಿನಲ್ಲಿ ಶ್ರೇಷ್ಠ ಮತ್ತು ಕನಿಷ್ಠ ಎಂಬ ಭಾವನೆಯನ್ನು ಜನರಲ್ಲಿ ಹುಟ್ಟಿಸಿ, ಕೋಮುವಾದ ಸೃಷ್ಟಿ ಮಾಡ್ತಾರೆ. 

ಈ ಸುದ್ದಿ ಓದಿದ್ದೀರಾ? ಫಾರೂಕ್ ರಕ್ತ ಉಳಿಸಿದ್ದು ಜೀವವನ್ನಷ್ಟೇ ಅಲ್ಲ, ಸೌಹಾರ್ದತೆಯ ಪರಂಪರೆಯನ್ನು!

ನಮ್ಮ ಕುಟುಂಬದಲ್ಲಿ ಪ್ರವಾಸ ಹೋದಾಗ, ನಿಮಿಷಾಂಬದಲ್ಲಿರುವ ಟಿಪ್ಪು ಸುಲ್ತಾನ್ ಜಾಗಕ್ಕೆ ಭೇಟಿ ನೀಡಿದ್ದೆವು. ನಮ್ಮ ಮನೆಯ ಹಿರಿಯರಾದ ಶಂಕರಪ್ಪ ಮಾವ ಅವರು ಟಿಪ್ಪು ಸುಲ್ತಾನ್ ಮತ್ತು ಹೈದರಾಲಿಯ ಬಗ್ಗೆ ಆಳವಾಗಿ ವಿಚಾರಗಳನ್ನು ತಿಳಿದವರಾಗಿದ್ದ ಅವರು, ಟಿಪ್ಪುವಿನ ಸಾಧನೆ ಮತ್ತು ಕೊಡುಗೆಗಳ ಬಗ್ಗೆ ನಮಗೂ ವಿವರಿಸಿದ್ದರು. ಸೌಹಾರ್ದತೆ ಎಂಬುದು ನಿಜವಾಗಿಯೂ ಪ್ರತಿಯೊಬ್ಬರ ಮನೆಯಿಂದಲೇ ಪ್ರಾರಂಭವಾದರೆ, ಸಮಾಜದಲ್ಲಿ ಅಶಾಂತಿ, ಕೋಮುಗಲಭೆ, ಅಸಮಾನತೆಯ ಸುಳಿವೇ ಇರುವುದಿಲ್ಲ.

ನಿಮಗೆ ಏನು ಅನ್ನಿಸ್ತು?
0 ವೋಟ್