ಝಾಕೀರನ ಮಲತಾಯಿ ಉಪ್ಪಾರರ ಮಗಳು ರಾಚಮ್ಮ

Rachamma

ರಾತ್ರಿ ಆ ವೀರಭದ್ರೇಶ್ವರ ಗುಡಿಯ ಜಗುಲಿ ಮೇಲೆ ಚಾಪೆ ಹಾಸಿ ನಾಲ್ಕಾರು ಜನ ಮಲಗೋರು. ಆ ಕಲಾಯಿ ಸಾಬಿಗೆ ಆಗಲೇ ಅರವತ್ತರ ವಯಸ್ಸಿನ ಆಸುಪಾಸು. ನಮ್ಮ ಅಜ್ಜಿ, ಅಜ್ಜನಿಗೆ ಅವನೆಂದರೆ ಬಹಳ ಪ್ರೀತಿ. ಸಂಜೆ ಕುಲುಮೆ ಕೆಲಸ ಬೇಗ ಮುಗಿದರೆ ನಮ್ಮ ಮನೆಗೆ ಬಂದು ಕಷ್ಟ ಸುಖ ಮಾತನಾಡೋರು. ಅಜ್ಜಿ ಅವನಿಗೆ ಮಜ್ಜಿಗೆ ಕೊಟ್ಟು ಕಳುಹಿಸೋರು.

ಝಾಕೀರ್ ಹುಸೇನ್ ತಂದೆಗೆ ಮುದ್ದಿನ ಮಗ, ಒಮ್ಮೊಮ್ಮೆ ಅವರಪ್ಪ ತರಗತಿ ನಡೆಯುವ ಸಮಯದಲ್ಲಿ ಶಾಲೆಗೆ ಬಂದು ಮಗನನ್ನು ಆಚೆ ಕರೆದು ಏನಾದ್ರೂ ಸಿಹಿ ತಿಂಡಿ ತಿನ್ಸಿ ಹೋಗೋನು. ಆಮೇಲೆ ಗೊತ್ತಾಗಿದ್ದು ಆತನ ಅಮ್ಮ ತೀರಿ ಹೋಗಿದ್ಲು, ಆತ ಒಬ್ಬನೇ ಮಗ. ಹಾಗಾಗಿ ಅವರಪ್ಪ ಮಗನನ್ನು ಅಗಾಧವಾಗಿ ಪ್ರೀತಿಸೋನು.‌‌ ಒಂದು ದಿ‌ನ ಹಾಗೇ ಸುತ್ತಾಡ್ತಾ ನಮ್ಮೂರಿನ ಕುರುಬರ ಬೀದಿಗೆ ಹೋಗಿದ್ದಾಗ ಅಲ್ಲಿ ಝಾಕೀರ ಯಾವುದೋ ಒಬ್ಬ ಹೆಂಗಸಿನ ತೊಡೆ ಮೇಲೆ ಕುಳಿತಿದ್ದ, ಆಕೆ ಅವನಿಗೆ ಅನ್ನ ತಿನ್ನಿಸ್ತಾ ಇದ್ರು‌. ಆ ಕುರುಬರ ಬೀದಿಯಲ್ಲಿ ನಾಲ್ಕೈದು ಮನೆಗಳಿದ್ದವು. ಅಲ್ಲಿಯೇ ನಮ್ಮ ಇಂಗ್ಲಿಷ್ ಮೇಷ್ಟ್ರು ಇಕ್ಬಾಲ್ ಪಾಷಾರವರ ಮನೆ ಕೂಡಾ ಇತ್ತು. ಅವರ ಕತೆ ಆಮೇಲೆ ಹೇಳುವೆ.

ಮರುದಿನ ಗೆಳೆಯ ರಫಿ ಬಳಿ ವಿಷಯ ಪ್ರಸ್ತಾಪಿಸಿದೆ. ʼಝಾಕೀರ್ ಗೆ ಅಮ್ಮ ಇಲ್ಲ ಅಂತಾ ಅಂದಿದ್ಯಲ್ಲ ! ಮತ್ತೆ ನೆನ್ನೆ ಅವರಮ್ಮನನ್ನು ನೋಡಿದೆʼ ಎಂದಾಗ‌‌‌, ʼಲೋ ಗಂಗಾಧರ... ಅವರಮ್ಮ ಸತ್ತು ಹೋಗಾರೆ. ಇದು ರಾಚಮ್ಮʼ ಎಂದ. ಈ ರಾಚಮ್ಮನೇ ಝಾಕೀರ್ ಸಾಕ್ತಾ ಇರೋದು‌.‌ ಕೆಲವು ದಿನಗಳ ಕಿರು ಸಂಶೋಧನೆಯಿಂದ ಗೊತ್ತಾದ ಸಂಗತಿಗಳೆಂದರೆ, ಈ ರಾಚಮ್ಮ, ಅದೇ ಊರಿನ ಉಪ್ಪಾರ ಹೆಂಗಸು. ಝಾಕೀರ್ ನ ಅಪ್ಪನ ಎರಡನೆಯ ಹೆಂಡತಿ. ಝಾಕೀರನ ಅಪ್ಪನ ಕಷ್ಟ ನೋಡಲಾಗದೇ, ಅವನ ಪ್ರೀತಿಗೆ ಮನಸೋತು ಬಂದು ಅವನ ಮನೆ ಸೇರಿದ್ದಳು.

ಆ ಕಾಲದ Living together ಸಂಬಂಧ ಇದು. ಮಂಡ್ಯ ಜಿಲ್ಲೆಯ ಮಳವಳ್ಳಿಯ ಪೂರಿಗಾಲಿ ಊರಿನಲ್ಲಿ ನೂರಕ್ಕೂ ಹೆಚ್ಚು ಉಪ್ಪಾರರ ಮನೆಗಳಿದ್ದರೂ ಇವರ ಪ್ರೀತಿಗೆ ಯಾರು ಅಡ್ಡ ಬಂದಿರಲಿಲ್ಲ. ಇದು ನಾನು 80ರ ದಶಕದಲ್ಲಿ ಹೈಯರ್ ಪ್ರೈಮರಿ ಸ್ಕೂಲ್ ಓದುವಾಗಿನ ಘಟನೆ. ಆಗ ಮುಸ್ಲಿಮರೆಂದರೆ ನಮಗೆ ಏನೇ ಕುತೂಹಲ, ಸದಾ ಊರೂರು ಸುತ್ತಿ ವ್ಯಾಪಾರ ಮಾಡುತ್ತಿದ್ದ ಅವರ ಬಳಿ ಏನಾದರೂ ವಿಶೇಷತೆ ಇರ್ತಾ ಇತ್ತು. ಆಗ ನಮ್ಮೂರಿಗೆ ಪಾತ್ರೆ ಕಲಾಯಿ ಮಾಡುವ ಸಾಬ್ರು ಬಂದು ವೀರಭದ್ರೇಶ್ವರ ಗುಡಿಯ ಬಳಿ ಟೆಂಟ್ ಹಾಕಿ ಕುಲುಮೆ ಮಾಡ್ತಾ ಇದ್ರು. ಒಮ್ಮೆ ಬಂದ್ರೆ ಎರಡು, ಮೂರು ತಿಂಗಳು ಇರ್ತಾ ಇದ್ರು‌. ಕೈಯಿಂದ ಸುತ್ತಿ ಗಾಳಿ ಬರಿಸಿ ಇದ್ದಿಲ ಬೆಂಕಿ ಹಾಕೋರು. ತಾಮ್ರದ ಪಾತ್ರೆಗಳಿಗೆ ಕಲಾಯಿ, ತೂತಾದ ಪಾತ್ರೆಗಳಿಗೆ ಪ್ಯಾಚು ಹಾಕೋದು, ತಾಮ್ರದ ಬಿಂದಿಗೆ ರಿಪೇರಿ ಮಾಡೋರು‌. ಮಧ್ಯಾಹ್ನ ಸಮಯ ಆ ಬೆಂಕಿಯ ಉರಿ ಮೇಲೆ ಅನ್ನ ಮಾಡೋರು‌.

ನಮಗೆಲ್ಲಾ ಶನಿವಾರ, ಭಾನುವಾರ ಅವರ ಕುಲುಮೆ ನೋಡೋದೆ ದೊಡ್ಡ ಮನರಂಜನೆ. ರಾತ್ರಿ ಆ ವೀರಭದ್ರೇಶ್ವರ ಗುಡಿಯ ಜಗುಲಿ ಮೇಲೆ ಚಾಪೆ ಹಾಸಿ ನಾಲ್ಕಾರು ಜನ ಮಲಗೋರು. ಆ ಕಲಾಯಿ ಸಾಬಿಗೆ ಆಗಲೇ ಅರವತ್ತರ ವಯಸ್ಸಿನ ಆಸುಪಾಸು. ನಮ್ಮ ಅಜ್ಜಿ, ಅಜ್ಜನಿಗೆ ಅವನೆಂದರೆ ಬಹಳ ಪ್ರೀತಿ. ಸಂಜೆ ಕುಲುಮೆ ಕೆಲಸ ಬೇಗ ಮುಗಿದರೆ ನಮ್ಮ ಮನೆಗೆ ಬಂದು ಕಷ್ಟ ಸುಖ ಮಾತನಾಡೋರು. ಒಮ್ಮೊಮ್ಮೆ ಅಜ್ಜಿ ಅವನಿಗೆ ಸಾಂಬಾರ್ ಅಥವಾ ಮಜ್ಜಿಗೆ ಕೊಟ್ಟು ಕಳುಹಿಸೋರು. ಆ ಕಲಾಯಿ ಸಾಬಿಯ ಒಬ್ಬ ಅಳಿಯ ಲಾಳದ ಸಾಬಿ, ಆರಡಿ ಎತ್ತರದ ಅಜಾನುಬಾಹು. ಇಡೀ ಹತ್ತಾರು ಊರುಗಳನ್ನು ಎತ್ತುಗಳಿಗೆ ಲಾಳ ಕಟ್ಟಲೂ ಅವನಿಗೆ ಕಾಯೋರು. ಎತ್ತಿನ ಹೊಟ್ಟೆಗೆ ಹಗ್ಗ ಕಟ್ಟಿ ಅದನ್ನು ನಿಧಾನಕ್ಕೆ ಕೆಳಗೆ ಬೀಳಿಸಿ, ಅವುಗಳ ಕಾಲುಗಳನ್ನು ಬಿಗಿಯಾಗಿ ಕಟ್ಟಿ, ಗೊರಸು ಹದವಾಗಿ ಕತ್ತರಿಸಿ ಲಾಳ ಕಟ್ಟೋನು. ಅದೊಂದು ತೀರಾ ಕಠಿಣವಾದ ಕೆಲಸ. ಆತನಿಗೆ ನಾನು ಪರಿಚಯ ಅನ್ನೋದೆ ನನಗೆ ಖುಷಿಯ ವಿಷಯವಾಗಿತ್ತು‌.

ಆತ ನಮ್ಮ‌ ಅಪ್ಪನ ವಾರಗೆಯವನು, ಅವರಿಬ್ಬರಿಗೂ ಚೆನ್ನಾಗಿ ಪರಿಚಯ ಇತ್ತು. ನಮ್ಮೂರಿಗೆ ಲಾಳ ಕಟ್ಟಲೂ ಬಂದಾಗ ನಮ್ಮ ಮನೆಯಲ್ಲಿಯೇ ಆತನಿಗೆ ಟೀ, ಊಟ ನಡೀತಾ ಇತ್ತು. ಒಮ್ಮೆ ಆತ ನಮ್ಮ ಎತ್ತುಗಳಿಗೆ ಲಾಳ ಕಟ್ಟುತ್ತಿದ್ದ ಸಮಯದಲ್ಲಿ, ಗದ್ದೆ ನೀರು ಕಟ್ಟುವ ವಿಷಯಕ್ಕೆ ನಮ್ಮ ಪಕ್ಕದ ಬೀದಿಯ ವ್ಯಕ್ತಿಗೂ, ನಮ್ಮ ತಂದೆಗೂ ಹೊಡೆದಾಟವಾದಾಗ ಈ ಲಾಳದ ಸಾಬಿ ನಮ್ಮ ತಂದೆ ಪರವಾಗಿ ನಿಂತು ಜಗಳ ಬಿಡಿಸಿದ್ದ. ಅದು ಪೊಲೀಸ್ ಕೇಸ್ ಆಗಿ ಕೋರ್ಟ್ ಮೆಟ್ಟಿಲೇರಿದಾಗ ಆತ ಬಂದು  ಸಾಕ್ಷಿ ಹೇಳಿದ್ದ.

ಇದನ್ನು ಓದಿದ್ದೀರಾ? ಚಿತ್ರಕ್ಕನ ಮನೆಯೂ, ರತ್ನಕ್ಕನ ಅಡುಗೆಯೂ ಮರೆಯುವುದುಂಟೇ?

ನಮ್ಮ ಝಾಕಿ ಮಹಾನ್ ಚಾಲಾಕಿ ಹುಡುಗ. ಆಗ ನಮ್ಮೂರಿನ‌ ಪುಟ್ಟಮಾದೇಗೌಡರು ದೊಡ್ಡ ತೋಟ ಮಾಡಿದ್ರು. ತರಕಾರಿ ಬೆಳೆದು ಅವರ ಮಡದಿ, ಮಕ್ಕಳು ಮನೆ ಮುಂದೆ ಮಾರೋರು. ಒಮ್ಮೆ ಪುಟ್ಟಮಾದೇಗೌಡರ ಹೆಂಡತಿ ಟೊಮ್ಯಾಟೊ ಮಾರ್ತಾ ಇದ್ದಾಗ, ಅವರ ಬಳಿ ಟೊಮ್ಯಾಟೊ ಖರೀದಿಗೆ ಹೋಗಿದ್ದ ಝಾಕಿ ತನ್ನ ಜೊತೆಗಿದ್ದ ಹುಡುಗನನ್ನು ತೋರಿಸಿ, ʼಅಕ್ಕ ನೋಡಿ ಈ ಹುಡ್ಗ ಮನೆಯವರ ಜೊತೆ ಜಗಳ ಮಾಡಿಕೊಂಡು ಕೊತ್ತಂಬರಿ ಗಿಡಕ್ಕೆ ನೇತುಹಾಕಿಕೊಂಡಿದ್ದʼ ಎಂದು ತಮಾಷೆ ಮಾಡಿದ್ದ.‌ ಆಗ ಪುಟ್ಟಮಾದೇ ಗೌಡರ ಹೆಂಡತಿ ಆ ಹುಡುಗನ ತಲೆ ಸವರಿ ಮನೆಯವರು ಬೈದ್ರೆ ಹಾಗೆಲ್ಲಾ ಮಾಡ್ಕೋಬಾರದು ಅಂತೇಳಿ ಪುಕ್ಕಟ್ಟೆಯಾಗಿ ಇಬ್ಬರಿಗೂ ಎರಡು ಕೆ ಜಿ ಟೊಮ್ಯಾಟೊ‌ ಕೊಟ್ಟು ಕಳಿಸಿದ್ರು. ಈಗ ಝಾಕಿ ಒಂದು ಲಾರಿಯ ಮಾಲೀಕ. ಅವನಿಗೆ ಒಬ್ಬಳೇ ಹೆಂಡತಿ, ಇಬ್ಬರು ಗಂಡು ಮಕ್ಕಳು. ಊರಿನಲ್ಲಿ ಒಂದು ಚಂದದ ಮನೆ ಕಟ್ಟಿದ್ದಾನೆ. ಅವರಪ್ಪ ಮತ್ತು ರಾಚಮ್ಮ ತೀರಿಕೊಂಡಿದ್ದಾರೆ.

ಇನ್ನೂ ಇಕ್ಬಾಲ್ ಪಾಷಾ ಮಾಸ್ತರ್ ನನಗೆ ಆಸಕ್ತಿಯಿಂದ ಇಂಗ್ಲಿಷ್ ಕಲಿಸಿದ ಗುರು.‌ ನಾವು ಹತ್ತನೆಯ ತರಗತಿ ಓದುವಾಗ ಉಡುಪಿ, ಮಂಗಳೂರು, ಧರ್ಮಸ್ಥಳಕ್ಕೆ ಶಾಲಾ ಪ್ರವಾಸಕ್ಕೆಂದು ಹೋಗಿದ್ದಾಗ ಅವರೂ ಬಿಳಿ ಪಂಚೆಯುಟ್ಟು ಧರ್ಮಸ್ಥಳದ ಮಂಜುನಾಥನ ದರ್ಶನಕ್ಕೆ ಬಂದಿದ್ದರು. ಇತಿಹಾಸದ ಪಾಠ ಮಾಡುವಾಗ ಧರ್ಮಗಳ ಉಗಮದ ಬಗ್ಗೆ ಮಾತನಾಡುವಾಗ ಹಿಂದೂ ಸಿದ್ದಾಂತಗಳ ಬಗ್ಗೆ ಆಳವಾಗಿ ಅಧ್ಯಯನ ಮಾಡೋರು.

ಇಕ್ಬಾಲ್ ಪಾಷಾ ಅವರ ಅಣ್ಣ ಸುಬಾನ್ ಬತ್ತದ ವ್ಯಾಪಾರಿ. ಕಳೆದ ಐವತ್ತು ವರ್ಷಗಳಿಂದ ನಮ್ಮ ಅಕ್ಕ, ಪಕ್ಕದ ಹಳ್ಳಿಗಳಲ್ಲಿ ಬಹಳ ಪ್ರಸಿದ್ಧ ಮತ್ತು ನಂಬುಗೆಯ ವ್ಯಕ್ತಿ, ವ್ಯವಹಾರದಲ್ಲಿ ಇದುವರೆಗೂ ಒಂದು ರೂಪಾಯಿ ಮೋಸ ಮಾಡಿದ್ದ ಬಗ್ಗೆ ಯಾರು ಹೇಳಿಲ್ಲ‌. ಯಾವುದೇ ಮದುವೆ ಕಾರ್ಯಕ್ರಮ ಇದ್ದರೂ ಅವರಿಗೆ ಖಂಡಿತ ಆಹ್ವಾನ ಇರುತ್ತೆ. ಬಂದು ಶುಭಾಶಯ ಹೇಳಿ, ಊಟ ಮಾಡಿ ಹೋಗ್ತಾರೆ. ಇವರ್ಯಾರು ನಮಗೆಂದು ಪರಕೀಯರಂತೆ ಕಂಡಿಲ್ಲ. ಇನ್ನೂ ಕುರಿ, ಮೇಕೆ, ನಿಂಬೆಹಣ್ಣು, ಹುಣಿಸೆಹಣ್ಣು, ಬೇವಿನ‌ಬೀಜ ವ್ಯಾಪಾರ ಇವರನ್ನು ಬೇರೆ ಯಾರ ಜೊತೆಯೂ ಮಾಡಿಲ್ಲ‌‌‌. ಪ್ರತಿ ಹಳ್ಳಿಗಾಡಿನ ಬೇಸಾಯದ ಆರಂಭ ಇವರ ಕುಲ ಕಸುಬುಗಳೊಂದಿಗೆ ಆರಂಭವಾಗುತ್ತಿತ್ತು. ‌ಅವರನ್ನು ಮರೆತು ವ್ಯವಸಾಯ ನೆನೆಯುವುದು ಎಂದಿಗೂ ಸಾಧ್ಯವಿಲ್ಲ. 

ನಿಮಗೆ ಏನು ಅನ್ನಿಸ್ತು?
0 ವೋಟ್