ಒಂದು ನಿಮಿಷದ ಓದು | ಕರ್ನಾಟಕ ಸರ್ಕಾರದಿಂದ 15 ದಿನಗಳ ಆರೋಗ್ಯ ಅಭಿಯಾನಕ್ಕೆ ಚಾಲನೆ

Health Minister

ಸೆಪ್ಟೆಂಬರ್ 17ರಿಂದ ಅಕ್ಟೋಬರ್ 2ರವರೆಗೆ 15 ದಿನಗಳ ಕಾಲ ಆರೋಗ್ಯ ಅಭಿಯಾನ ನಡೆಸಲಾಗುವುದು ಎಂದು ಆರೋಗ್ಯ ಸಚಿವ ಕೆ ಸುಧಾಕರ್ ತಿಳಿಸಿದ್ದಾರೆ.

“ನರೇಂದ್ರ ಮೋದಿಯವರ ಹುಟ್ಟುಹಬ್ಬದ ದಿನದಿಂದ ಗಾಂಧಿ ಜಯಂತಿವರೆಗೆ ಈ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಮಕ್ಕಳಿಂದ ವಯಸ್ಸಾದವರವರೆಗೆ ಆಹಾರ ಮತ್ತು ಆರೋಗ್ಯ ಜಾಗೃತಿ ಮೂಡಿಸುವ ಗುರಿ ಇದೆ,” ಎಂದು ಸಚಿವರು ಹೇಳಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ನೇತೃತ್ವದಲ್ಲಿ ಬೆಂಗಳೂರಿನ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಅಭಿಯಾನಕ್ಕೆ ಸಂಬಂಧಿಸಿದಂತೆ ಎಲ್ಲ ಜಿಲ್ಲೆಗಳ ಆರೋಗ್ಯ ಅಧಿಕಾರಿಗಳ (ಡಿಎಚ್ಒ) ಜೊತೆ, ಆರೋಗ್ಯ ಮತ್ತು ಶಿಕ್ಷಣ ಇಲಾಖೆಯ ಉನ್ನತಾಧಿಕಾರಿಗಳ ಜೊತೆ ಆರೋಗ್ಯ ಸಚಿವರು ವಿಡಿಯೋ ಕಾನ್ಫರೆನ್ಸ್ ನಡೆಸಿ ಅಭಿಯಾನದ ಗುರಿಗಳನ್ನು ಚರ್ಚಿಸಿಯಾಗಿದೆ.

ಪ್ರಾಥಮಿಕ, ಉಪ ಆರೋಗ್ಯ ಕೇಂದ್ರಗಳಿಂದ ಹಿಡಿದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆವರೆಗೆ ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ಈ ಅಭಿಯಾನ ನಡೆಯಲಿದೆ. ರಕ್ತಹೀನತೆ, ಥೈರಾಯ್ಡ್, ಶ್ರವಣ ಪರೀಕ್ಷೆ (ಆಡಿಯೋಮೆಟ್ರಿ), ಕಣ್ಣಿನ ಪೊರೆ ಹಾಗೂ ಇತರ ಸಾಂಕ್ರಾಮಿಕವಲ್ಲದ ಕಾಯಿಲೆಗಳು ಸೇರಿದಂತೆ ವಿವಿಧ ರೋಗಗಳಿಗೆ ತಪಾಸಣೆ ಮಾಡಲಾಗುತ್ತದೆ.

ಮಕ್ಕಳಿಗೆ ಕೋವಿಡ್-19ರ ಬೂಸ್ಟರ್ ಡೋಸ್ ಹಾಕುವ ಕಾರ್ಯಕ್ರಮವನ್ನೂ ಈ ಅಭಿಯಾನದಡಿ ತರಲಾಗಿದೆ. ಈವರೆಗೆ ಕೇವಲ ಶೇಕಡ 20ರಷ್ಟು ಮಾತ್ರ ಲಸಿಕೆ ವಿತರಣೆಯಾಗಿದೆ. ರಕ್ತದಾನ, ಅಂಗಾಂಗ ದಾನ ಪ್ರತಿಜ್ಞೆಗಳಿಗೆ ಉತ್ತೇಜನ, ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಕಾರ್ಡ್ ವಿತರಣೆಯ ಜಾಗೃತಿಯ ಗುರಿ ಹೊಂದಿದೆ ರಾಜ್ಯ ಆರೋಗ್ಯ ಇಲಾಖೆ.

ನಿಮಗೆ ಏನು ಅನ್ನಿಸ್ತು?
1 ವೋಟ್