ಒಂದು ನಿಮಿಷದ ಓದು | ಮಕ್ಕಳಿಗೆ ಲಸಿಕೆ ನೀಡುವಲ್ಲಿ ಹಿಂದುಳಿದ ಬೆಂಗಳೂರು ನಗರ ಜಿಲ್ಲೆ

school

ಬೆಂಗಳೂರು ನಗರದಲ್ಲಿ ಶಾಲಾ-ಕಾಲೇಜುಗಳು ಪುನಾರಂಭಗೊಂಡು ತಿಂಗಳು ಕಳೆದರೂ ಮಕ್ಕಳಿಗೆ ಶೇಕಡ 100ರಷ್ಟು ಕೋವಿಡ್‌ ಲಸಿಕೆ ಹಾಕುವಲ್ಲಿ ಬಿಬಿಎಂಪಿ ವಿಫಲವಾಗಿದೆ.

ರಾಜ್ಯ ಆರೋಗ್ಯ ಇಲಾಖೆಯ ಅಂಕಿ-ಅಂಶಗಳ ಪ್ರಕಾರ, ಬೆಂಗಳೂರು ನಗರ ಜಿಲ್ಲೆಯ ವ್ಯಾಪ್ತಿಯ 12ರಿಂದ 14 ವರ್ಷದೊಳಗಿನ ಬಹಳಷ್ಟು ಮಕ್ಕಳಿಗೆ ಲಸಿಕೆ ಹಾಕಲಾಗಿಲ್ಲ. ಮಕ್ಕಳಿಗೆ ಹಾಕಲಾದ ಲಸಿಕೆ ಪ್ರಮಾಣ ರಾಜ್ಯದ ಇತರೆ ಜಿಲ್ಲೆಗಳಲ್ಲಿ ಶೇಕಡ 100ರಷ್ಟಿದ್ದರೆ, ಬೆಂಗಳೂರು ನಗರದಲ್ಲಿ ಶೇಕಡ 54ರಷ್ಟಿದೆ.

“ರಾಜ್ಯದ ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಬೆಂಗಳೂರು ನಗರದ ಜನಸಂಖ್ಯೆ ರಚನೆ ವಿಭಿನ್ನವಾಗಿದ್ದು, ಲಸಿಕೆ ವಿತರಣೆಯಲ್ಲಿ ಬಿಬಿಎಂಪಿ ಅಧಿಕಾರಿಗಳಿಗೆ ಕಷ್ಟಕರವಾಗಿದೆ. ಕೆಲವು ಶಾಲೆಗಳು ಜೂನ್‌ನಲ್ಲಿ ಆರಂಭವಾಗಿದ್ದು, ಕಳೆದ ಮೂರು ವಾರಗಳಿಂದ ನಾವು ಲಸಿಕೆ ನೀಡುವುದನ್ನು ಚುರುಕುಗೊಳಿಸಿದ್ದೇವೆ. ಈ ಹಿಂದೆ, ಶೇಕಡ 50ರಷ್ಟು ಲಸಿಕೆ ನೀಡಲಾಗಿತ್ತು, ಇದೀಗ ಶೇಕಡ 97ರಷ್ಟು ಲಸಿಕೆ ನೀಡಲಾಗಿದೆ. ಇನ್ನು ಕೆಲವು ದಿನಗಳಲ್ಲಿ ಎಲ್ಲ ಮಕ್ಕಳಿಗೂ ಲಸಿಕೆ ನೀಡಲಾಗುವುದು,” ಎಂಬುದು, ಬಿಬಿಎಂಪಿ ವಿಶೇಷ ಆಯುಕ್ತ ತ್ರಿಲೋಕ್‌ ಚಂದ್ರ ಅವರ ವಿವರಣೆ.

"ಕೆಲವು ಪೋಷಕರು ಮಕ್ಕಳಿಗೆ ಲಸಿಕೆ ಹಾಕುವುದನ್ನು ನಿರಾಕರಿಸಿದ್ದಾರೆ. ಶಾಲೆಯಿಂದ ದೂರ ಉಳಿದ ಮಕ್ಕಳನ್ನು ಗುರುತಿಸಿ ಲಸಿಕೆ ತಲುಪಿಸುವುದು ಸಹ ಸವಾಲಿನ ಕೆಲಸವಾಗಿದೆ. ಶಾಲೆಗಳು ಮತ್ತೆ ಆರಂಭವಾಗಿವೆ. ಇದೇ ಸಂದರ್ಭದಲ್ಲಿ ಕೋವಿಡ್ ಸೋಂಕು ಹೆಚ್ಚುತ್ತಿದ್ದು, ಕೊರೊನಾ ಲಸಿಕೆಯನ್ನು ನೀಡುವ ಅಗತ್ಯ ಹೆಚ್ಚಾಗಿದೆ," ಎನ್ನುತ್ತಾರೆ ತಜ್ಞರು.

“ಪೋಷಕರಲ್ಲಿ ಲಸಿಕೆ ಬಗ್ಗೆ ಅನುಮಾನಗಳಿದ್ದು ವೈದ್ಯರು ಲಸಿಕೆಯನ್ನು ಶಿಫಾರಸು ಮಾಡಬೇಕು. ಬದಲಾಗುತ್ತಿರುವ ಹವಾಮಾನದಿಂದ ಮಕ್ಕಳಲ್ಲಿ ಶೀತ ಮತ್ತು ಜ್ವರ ಸಾಮಾನ್ಯವಾಗಿದೆ. ಈ ವೇಳೆ ಲಸಿಕೆ ಹಾಕಲಾಗುವುದಿಲ್ಲ. ಹಾಗಾಗಿ, ಲಸಿಕೆ ತಲುಪಿಸುವಲ್ಲಿ ವ್ಯತ್ಯಯ ಉಂಟಾಗಿದೆ,” ಎಂದಿದ್ದಾರೆ, ಕರ್ನಾಟಕ ಕೋವಿಡ್ ತಾಂತ್ರಿಕ ಕ್ರಿಯಾ ಸಮಿತಿ (ಟಿಎಸಿ) ಅಧ್ಯಕ್ಷ ಎಂ ಕೆ ಸುದರ್ಶನ್.

ಸುದ್ದಿ ಮೂಲ: ಬಿಬಿಎಂಪಿ
ನಿಮಗೆ ಏನು ಅನ್ನಿಸ್ತು?
1 ವೋಟ್
eedina app