
ಕೋವಿಡ್ 19 ಪ್ರಕರಣಗಳು ಏರಿಕೆಯಾಗುತ್ತಿದ್ದು, ಬೆಂಗಳೂರಿನಲ್ಲಿ ಆಸ್ಪತ್ರೆಗಳಿಗೆ ಭೇಟಿ ನೀಡುವ ರೋಗಿಗಳ ಸಂಖ್ಯೆ ಶೇಕಡ 15ರಿಂದ 25ರಷ್ಟು ಏರಿಕೆಯಾಗಿದೆ. ಶೀತ, ಕೆಮ್ಮು ಹಾಗೂ ವೈರಾಣು ಜ್ವರ, ಉಸಿರಾಟಕ್ಕೆ ಸಂಬಂಧಿಸಿದ ಸೋಂಕು ಹೆಚ್ಚಾಗಿವೆ. ಕೊರೊನಾ ಮತ್ತು ಡೆಂಗಿ ಹೋಲುವ ಲಕ್ಷಣಗಳಿಂದಾಗಿ ಜನ ಆತಂಕಕ್ಕೊಳಗಾಗಿದ್ದಾರೆ. ಈ ಬೆಳವಣಿಗೆ ಕುರಿತ ವಿವರ ಇಲ್ಲಿದೆ
ವೈರಾಣು ಜ್ವರ ಹೆಚ್ಚಳಕ್ಕೆ ಕಾರಣ?
ಹವಾಮಾನದಲ್ಲಿ ಆಗುತ್ತಿರುವ ಬದಲಾವಣೆ ಮತ್ತು ಆಗಾಗ ಬರುವ ಮಳೆಯಿಂದಾಗಿ ಶೀತ ಮತ್ತು ಕೆಮ್ಮಿನ ಲಕ್ಷಣಗಳು ಜನರಲ್ಲಿ ಕಾಣಿಸುತ್ತಿವೆ. ಕೋವಿಡ್ ಮೊದಲ ಮತ್ತು ಎರಡನೇ ಅಲೆಯಲ್ಲಿ ಈ ಸಾಮಾನ್ಯ ಶೀತದ ಲಕ್ಷಣಗಳು ಕಡಿಮೆಯಾಗಿದ್ದವು. ಈ ವೇಳೆ ಜನ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ, ಕೈಗಳ ಸ್ವಚ್ಛತೆ ಬಗ್ಗೆ ಹೆಚ್ಚಿನ ಗಮನ ಹರಿಸಿದ್ದರು. ಆದರೆ, ಇದೀಗ ಈ ಎಲ್ಲ ನಿಯಮಗಳನ್ನು ಮರೆತು ಕೋವಿಡ್ಗೂ ಮೊದಲಿದ್ದ ಸ್ಥಿತಿಗೆ ತಲುಪಿದ್ದಾರೆ.
ಸೋಂಕು ಹೆಚ್ಚುತ್ತಿರುವುದು ಏಕೆ?
"ಜೂನ್ ಮತ್ತು ಜುಲೈನಲ್ಲಿ ವೈರಾಣು ಜ್ವರ ಮತ್ತು ಉಸಿರಾಟದ ಸೋಂಕುಗಳು ಸಾಮಾನ್ಯವಾಗಿರುತ್ತವೆ. ಕಳೆದ ಎರಡು ವರ್ಷಗಳಿಂದ ಶಾಲೆಗಳು ಮುಚ್ಚಿದ್ದವು, ಜನ ಮನೆಯಿಂದಲೇ ಕೆಲಸ ಮಾಡುತ್ತಿದ್ದರು. ಹೀಗಾಗಿ, ಸೋಂಕಿನಿಂದ ರಕ್ಷಣೆ ಇತ್ತು. ಈಗ ಜನಜೀವನ ಮೊದಲಿನಂತೆ ನಡೆಯುತ್ತಿದ್ದು, ಶಾಲಾ ಮಕ್ಕಳಲ್ಲಿ ವೈರಾಣು ಜ್ವರ ಸೋಂಕು ಹೆಚ್ಚಾಗಿ ಕಾಣಿಸುತ್ತಿದೆ ಮತ್ತು ಹರಡುತ್ತಿದೆ. ಎರಡು-ಮೂರು ದಿನಗಳಲ್ಲಿ ಪೋಷಕರಿಗೂ ಈ ಸೋಂಕು ತಗುಲುತ್ತಿದೆ," ಎಂಬುದು ವೈದ್ಯರ ಟಿಪ್ಪಣಿ
ಈ ಸುದ್ದಿ ಓದಿದ್ದೀರಾ?: ಕೋವಿಡ್ ಸುದ್ದಿ | 18 ಸಾವಿರ ಗಡಿ ದಾಟಿದ ಕೊರೊನಾ ಪ್ರಕರಣಗಳು
ಜನರ ಆತಂಕಕ್ಕೆ ಕಾರಣವೇನು?
ವೈರಾಣು ಜ್ವರ ಮತ್ತು ಉಸಿರಾಟಕ್ಕೆ ಸಂಬಂಧಿಸಿದ ಸೋಂಕು, ಅಸ್ತಮಾ, ಗಂಟಲು ನೋವು, ಕೆಮ್ಮು, ಮೂಗು ಸ್ರವಿಸುವಿಕೆ ಹಾಗೂ ಕಿವಿ ಸೋಂಕಿನ ರೋಗಿಗಳು ಆಸ್ಪತ್ರೆಗೆ ಹೆಚ್ಚು ಭೇಟಿ ನೀಡುತ್ತಿದ್ದಾರೆ. ಈ ಎಲ್ಲ ಲಕ್ಷಣಗಳು ಕೋವಿಡ್ 19 ಮತ್ತು ಡೆಂಗಿಯ ಲಕ್ಷಣಕ್ಕೆ ಹೋಲುತ್ತಿದ್ದು, ಜನ ಇದು ಕೋವಿಡ್ ಇರಬಹುದಾ ಎಂಬ ಸಂಶಯಕ್ಕೀಡಾಗಿದ್ದಾರೆ. ಪ್ಲೇಟ್ಲೆಟ್ ಸಂಖ್ಯೆಯಲ್ಲಿ ಇಳಿಕೆ ಮತ್ತು ಇತರ ರೋಗ ಲಕ್ಷಣಗಳು ಕೊರೊನಾ ಮತ್ತು ಡೆಂಗಿ ಎರಡೂ ಸೋಂಕಿನಲ್ಲಿ ಸಾಮಾನ್ಯ. ಹಾಗಾಗಿ ಎಷ್ಟೋ ರೋಗಿಗಳು ಎರಡೂ ಸೋಂಕಿನ ಪರೀಕ್ಷೆ ಮಾಡಿಸುತ್ತಿದ್ದಾರೆ.
ವೈದ್ಯರು ಏನು ಹೇಳುತ್ತಾರೆ?
ಕೆಮ್ಮು ಮತ್ತು ಜ್ವರ ತೀವ್ರ ಎನಿಸಿದರೆ ಕೂಡಲೇ ವೈದ್ಯರನ್ನು ಕಾಣಬೇಕು. ಸಾಮಾನ್ಯ ಜ್ವರವೇ ಅಥವಾ ಕೊರೊನಾ ಸೋಂಕೇ ಎಂದು ವೈದ್ಯರು ತೀರ್ಮಾನಿಸಿದ ನಂತರವೇ ಮುಂದಿನ ಪರೀಕ್ಷೆಗೆ ಹೋಗಬೇಕು. ಜೊತೆಗೆ, ಯಾವುದೇ ಸೋಂಕಿನ ಲಕ್ಷಣಗಳು ಕಂಡುಬಂದಲ್ಲಿ ಸಾಮಾನ್ಯ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ. ಮಕ್ಕಳ ಮೇಲೆ ಹೆಚ್ಚಿನ ನಿಗಾ ಇರಲಿ.