ಸುದ್ದಿ ವಿವರ | ಭಾರತೀಯರನ್ನು ಕಾಡುತ್ತಿದೆ ಕೋವಿಡ್ ಖಿನ್ನತೆ; ಪರಿಹಾರವೇನು?

Covid

“ಆಸ್ಪತ್ರೆಗಳ ಹೊರರೋಗಿಗಳ ವಿಭಾಗದಿಂದ ಮೊದಲು ಶೇಕಡ 10-15ರಷ್ಟು ಖಿನ್ನತೆ ಪ್ರಕರಣಗಳು ಬರುತ್ತಿದ್ದವು. ಕೋವಿಡ್‌-19ರ ನಂತರ ಈ ಪ್ರಮಾಣ ಶೇಕಡ 40 ದಾಟಿತ್ತು. ರೋಗಿಗಳಿಗೆ ಸಮಯ ನೀಡಲಾಗದಷ್ಟು, ವೈದ್ಯರ ವ್ಯವಸ್ಥೆ ಮಾಡಲಾಗದಷ್ಟು ಖಿನ್ನತೆಯ ಪ್ರಕರಣಗಳು ಹೆಚ್ಚಿದ್ದವು,” ಎನ್ನುತ್ತಾರೆ ಮನಶಾಸ್ತ್ರಜ್ಞ ಡಾ. ರಾಜಶೇಖರ್‌ ಹಿರೇಮಠ

ಕೋವಿಡ್‌ ಖಿನ್ನತೆ ಎಂದರೇನು?

Eedina App

ಸರಿಯಾಗಿ ನಿದ್ರೆ ಬಾರದಿರುವುದು, ವಿನಾಕಾರಣ ದುಃಖ, ಯಾವಾಗಲೂ ಋಣಾತ್ಮಕ ಯೋಚನೆ ಮಾಡುವುದು ಸಾಮಾನ್ಯ ಲಕ್ಷಣಗಳು. ಕೋವಿಡ್‌ ಸಮಯದಲ್ಲಿ ನನಗೂ ಸೋಂಕು ತಗುಲಿದರೆ ಹೇಗೆ ಎಂಬ ಆತಂಕ ಮತ್ತು ಕೋವಿಡ್‌ ಕುರಿತ ಋಣಾತ್ಮಕ ವಿಷಯಗಳ ಕುರಿತಷ್ಟೇ ಯೋಚಿಸುವುದು ಕೋವಿಡ್ ಖಿನ್ನತೆಯ ಲಕ್ಷಣ.

ಕೋವಿಡ್‌ ಸಮಯದಲ್ಲಿ ಖಿನ್ನತೆಗೆ ಕಾಣವಾದ ಅಂಶಗಳೇನು?

AV Eye Hospital ad

ಕೋವಿಡ್ ಮೊದಲ‌ ಅಲೆಯಲ್ಲಿ ದೂರದ ಊರುಗಳಿಂದ ಸಾವಿನ ಸುದ್ದಿಗಳು ಬರುತ್ತಿದ್ದವು. ಎಲ್ಲೋ ದೂರ ಎಂಬ ಭಾವನೆ ಜನರಲ್ಲಿ ಇತ್ತು. ಎರಡನೇ ಅಲೆಯಲ್ಲಿ ಹತ್ತಿರದ ಸಂಬಂಧಿಗಳಲ್ಲಿ ಸಾವಿನ ಸುದ್ದಿಗಳು ಹೆಚ್ಚುತ್ತ ಹೋದವು. ನಂತರ, ತೀರಾ ಹತ್ತಿರದವರು, ಮನೆಯಲ್ಲಿದ್ದವರು ಸೋಂಕಿಗೆ ತುತ್ತಾದರು. ಆ ವೇಳೆ ಜನರಲ್ಲಿ ಹೆಚ್ಚಿನ ಭಯ ಆವರಿಸಿತು. ಮಾನಸಿಕ ಖಿನ್ನತೆಗೊಳಗಾದವರ ಪ್ರಮಾಣ ಹೆಚ್ಚುತ್ತ ಹೋಯಿತು. ಸುದ್ದಿವಾಹಿನಿಗಳಲ್ಲಿ ಬಿತ್ತರವಾಗುತ್ತಿದ್ದ ಸಾವಿನ ಸುದ್ದಿಗಳು ಇವರನ್ನು ಇನ್ನಷ್ಟು ಖಿನ್ನತೆಗೆ ದೂಡಿದವು.

"ಮಾನಸಿಕ ಯಾತನೆ ಅಥವಾ ದುಃಖಕ್ಕೆ ಪ್ರಮುಖವಾಗಿ ಕಾರಣವಾಗಿದ್ದು ದೈಹಿಕ ಅಂತರ (ಸಾಮಾಜಿಕ ಅಂತರ). ಸೋಂಕಿತರು ಅಥವಾ ಸೋಂಕಿನ ಭಯಕ್ಕೆ ಇತರರೊಂದಿಗೆ ಬೆರೆಯದೆ ಇರುವುದು, ಇನ್ನೊಬ್ಬರ ಜೊತೆ ಮಾತನಾಡದೆ ಇದ್ದುದರಿಂದ ನೋವು, ದುಃಖವನ್ನು ಹಂಚಿಕೊಳ್ಳಲು ಅವಕಾಶ ಸಿಕ್ಕಿಲ್ಲ.

"ಒಂದು ವೇಳೆ ಮನೆಯ ಸದಸ್ಯರಿಗೇ ಸೋಂಕು ತಗುಲಿದರೆ, ಒಂದೇ ಮನೆಯಲ್ಲಿದ್ದರೂ ಪ್ರತ್ಯೇಕ ಕೋಣೆಯಲ್ಲಿ ಉಳಿಯುವ ಪರಿಸ್ಥಿತಿ. ಮನೆಯಲ್ಲಿ ಯಾರಿಗಾದರೂ ಸಾಮಾನ್ಯ ಕೆಮ್ಮು, ನೆಗಡಿಯ ಲಕ್ಷಣಗಳು ಕಂಡುಬಂದರೂ, ಕೊರೊನಾ ಸೋಂಕು ಎಂಬ ಭಯ. ಹೀಗೆ, ಕೊರೊನಾ ಲಕ್ಷಣಗಳಿಗಿಂತ ಕೊರೊನಾ ಭಯದ ಲಕ್ಷಣಗಳು ಜನರನ ಮನಸ್ಸನ್ನು ಹೆಚ್ಚು ಆವರಿಸಿಕೊಂಡವು," ಎನ್ನುತ್ತಾರೆ ಡಾ. ರಾಜಶೇಖರ್‌.

ಕೋವಿಡ್‌ ಖಿನ್ನತೆ ಹೆಚ್ಚು  ಕಾಡುತ್ತಿರುವುದು ಯಾರನ್ನು?

Covid

ಸೋಂಕು ಹೆಚ್ಚಿದಂತೆ ತೀರಾ ಹತ್ತಿರದ ಸಂಬಂಧಿಗಳನ್ನು ಕಳೆದುಕೊಂಡವರಲ್ಲಿ, ಮನೆಯ ಸದಸ್ಯರನ್ನು ಕಳೆದುಕೊಂಡವರಲ್ಲಿ ದುಃಖದ ಪ್ರಮಾಣ ಹೆಚ್ಚಾಗಿದೆ. ತಂದೆ-ತಾಯಿಯನ್ನು ಕಳೆದುಕೊಂಡ ಮಕ್ಕಳು, ಮಕ್ಕಳನ್ನು ಕಳೆದುಕೊಂಡ ತಂದೆ-ತಾಯಿ, ತೀರಾ ಹತ್ತಿರದ ಸ್ನೇಹಿತರನ್ನು ಕಳೆದುಕೊಂಡವರು, ಹತ್ತಿರದ ಸಂಬಂಧಿಕರನ್ನು ಕಳೆದುಕೊಂಡವರು ಹೆಚ್ಚು ತೊಂದರೆಗೆ ಒಳಗಾಗಿದ್ದಾರೆ. ಇವರುಗಳಲ್ಲಿ ಬಹುತೇಕರಿಗೆ ಅವರ ಆತ್ಮೀಯರನ್ನು ಕೊನೆಯ ಕ್ಷಣದಲ್ಲಿ ಭೇಟಿಯಾಗುವ ಅವಕಾಶ ಸಹ ಸಿಕ್ಕಿಲ್ಲ.

ಕೋವಿಡ್ ಖಿನ್ನತೆ ಯಾವ ವಯೋಮಾನದವರನ್ನು ಹೆಚ್ಚಾಗಿ ಕಾಡುತ್ತಿದೆ?

ಮಾನಸಿಕ ಖಿನ್ನತೆಗೆ ಒಳಗಾದವರಲ್ಲಿ ಹೆಣ್ಣುಮಕ್ಕಳ ಸಂಖ್ಯೆ ಹೆಚ್ಚಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಸಮೀಕ್ಷೆಯೊಂದು ಹೇಳುತ್ತದೆ. ಈ ಮೊದಲು ಮನೋವೈದ್ಯರ ಬಳಿ ಬರುತ್ತಿದ್ದ ಪ್ರಕರಣಗಳು ಮನೋವ್ಯಾಧಿ (ಸ್ಕಿಝೊಫ್ರೀನಿಯಾ) ಸಮಸ್ಯೆಯವು. ಕೋವಿಡ್-19ರ ನಂತರ ಮಾನಸಿಕ ಖಿನ್ನತೆಯ ಪ್ರಕರಣಗಳು ಹೆಚ್ಚಾಗಿ ಬರುತ್ತಿವೆ.

"ನಮ್ಮ ಬಳಿ ಚಿಕಿತ್ಸೆಗೆ ಬಂದವರಲ್ಲಿ ಎಲ್ಲ ವಯೋಮಾನದವರೂ ಇದ್ದರು. ಆದರೆ, ಖಿನ್ನತೆಗೆ ಒಳಗಾದವರಲ್ಲಿ 20 ವರ್ಷದ ಮೇಲಿನವರ ಸಂಖ್ಯೆ ಹೆಚ್ಚಿದೆ. ಕಳೆದ ಐದಾರು ತಿಂಗಳಿಂದ 15ರಿಂದ 16 ವರ್ಷದ ಮಕ್ಕಳು ಚಿಕಿತ್ಸೆಗೆ ಬರುತ್ತಿದ್ದಾರೆ. ಸಾಂಕ್ರಾಮಿಕ ಸಮಯದಲ್ಲಿ ಮಕ್ಕಳು ಹೊರ ಹೋಗದೆ ಜನರ ಸಂಪರ್ಕದಿಂದ ದೂರವಾಗಿ ಮೊಬೈಲ್‌ಗಳ ಮೊರೆಹೋದರು. ಓದು, ಆಟಗಳಿಂದ ದೂರವಿದ್ದ ಮಕ್ಕಳಿಗೆ ಇದೀಗ ಶಾಲೆಗಳು ಆರಂಭವಾಗಿದ್ದು, ಈ ಮೊದಲಿನ ಸ್ಥಿತಿಯಿಂದ ಹೊರಬರಲು ಅವರಿಗೆ ಕಷ್ಟವಾಗುತ್ತಿದೆ. ಮನೆಯಲ್ಲಿ ಪಾಲಕರ ಒತ್ತಡ ಹೆಚ್ಚಾಗಿ ಮಕ್ಕಳಲ್ಲಿ ಈ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ ಎನ್ನುತ್ತಾರೆ,” ಎಂದು ವಿಶ್ಲೇಷಿಸುತ್ತಾರೆ ಡಾ.ರಾಜಶೇಖರ್‌.

ಈ ಸುದ್ದಿ ಓದಿದ್ದೀರಾ?: ಸುದ್ದಿ ವಿವರ | ಕೊರೊನಾ ಹಿಮ್ಮೆಟ್ಟಿಸುವಲ್ಲಿ ಶುದ್ಧ ಗಾಳಿಯ ಸಹಾಯ ಪಡೆಯಲು ಮರೆತೆವೇಕೆ?

ಖಿನ್ನತೆಗೊಳಗಾದವರ ಚಿಕಿತ್ಸೆ ಹೇಗೆ?

ಖಿನ್ನತೆಯಿಂದ ಬಳಲುತ್ತಿರುವವರಿಗೆ ಕೆಲವು ಔಷಧಿಗಳನ್ನು ನೀಡಲಾಗುತ್ತದೆ. ಇವುಗಳಿಂದ ಖಿನ್ನತೆಯ ಪ್ರಮಾಣವನ್ನು ನಿಯಂತ್ರಿಸಬಹುದಷ್ಟೇ. ಎಲ್ಲ ರೋಗಿಗಳಲ್ಲಿ ಒಂದೇ ಪ್ರಮಾಣದ ಖಿನ್ನತೆ ಕಂಡುಬರುವುದಿಲ್ಲ. ಕೆಲವರಿಗೆ ದುಃಖವಾದಾಗ ಸಾಕಷ್ಟು ಅತ್ತು ಆ ಮಾನಸಿಕ ಯಾತನೆಯಿಂದ ಹೊರಬರುತ್ತಾರೆ. ಆದರೆ, ಈ ಖಿನ್ನತೆ ನಾಲ್ಕರಿಂದ ಆರು ತಿಂಗಳವರೆಗೆ ಇದ್ದರೂ, ಅದರಿಂದ ಹೊರಬರಲಾಗದ ಸ್ಥಿತಿ ನಿರ್ಮಾಣವಾಗಿದ್ದರೆ ಅಂಥವರು ಕಡ್ಡಾಯವಾಗಿ ಮನೋವೈದ್ಯರನ್ನು ಕಾಣಬೇಕು.

ಮನೋವೈದ್ಯರು ವೈದ್ಯಕೀಯ ಪರಿಶೀಲನೆಗೆ ಒಳಪಡಿಸಿ, ರೋಗಿಯ ಖಿನ್ನತೆಯ ಹಂತಗಳಿಗೆ ತಕ್ಕಂತೆ ಸರಿಯಾದ ಸಲಹೆಗಳನ್ನು ಮತ್ತು ಚಿಕಿತ್ಸೆಯನ್ನು ನೀಡುತ್ತಾರೆ. ಇದು ಮೊದಲ ಹಂತದ ಚಿಕಿತ್ಸೆ. ಎರಡನೇ ಹಂತದಲ್ಲಿ ಅವರನ್ನು ಹೆಚ್ಚು ಮಾತನಾಡಿಸಬೇಕು. ಖಿನ್ನತೆಗೆ ಒಳಗಾದವರನ್ನು ಸಾಕಷ್ಟು ಮಾತನಾಡಲು ಬಿಡಬೇಕು. ನಿಮಗೇನಾಗುತ್ತಿದೆ, ನಿಮ್ಮ ಮನಸ್ಸಲ್ಲಿ ಏನು ನಡೆಯುತ್ತಿದೆ, ಯಾವ ವಿಷಯ ನಿಮಗೆ ಹೆಚ್ಚು ದುಃಖ ನೀಡುತ್ತದೆ, ಯಾವ-ಯಾವ ಸಂದರ್ಭದಲ್ಲಿ ದುಃಖವಾಗುತ್ತಿದೆ, ಏನನ್ನು ನೋಡಿದಾಗ ದುಃಖವಾಗುತ್ತದೆ ಎಂಬ ಪ್ರಶ್ನೆಗಳಿಂದ ರೋಗಿಯ ಮನಸ್ಥಿತಿ ತಿಳಿದುಕೊಂಡು ಚಿಕಿತ್ಸಾ ವಿಧಾನ ನಿರ್ಧರಿಸಲಾಗುತ್ತದೆ.

ಈ ಸುದ್ದಿ ಓದಿದ್ದೀರಾ?: ಮಂಕಿಪಾಕ್ಸ್ ನಿಯಂತ್ರಣಕ್ಕೆ ಕೇರಳ ಸರ್ಕಾರ ಕೈಗೊಂಡ ಕ್ರಮಗಳೇನು? | 10 ಮುಖ್ಯ ಅಂಶ

"ಖಿನ್ನತೆ ಇರುವವರಿಗೆ ಬಹಳ ಮುಖ್ಯವಾಗಿ ಬೇಕಾಗಿರುವುದು ಸಮಾಲೋಚನೆ. ಈ ದುಃಖದಿಂದ ಹೊರಬರಲು ನಿಮ್ಮ ದೃಷ್ಟಿಯಲ್ಲಿ ಹೇಗೆ ಸಾಧ್ಯ, ನೀವು ಇದರಿಂದ ಹೊರಬರದಿದ್ದರೆ ಏನಾಗಲಿದೆ ಎಂಬ ಪ್ರಶ್ನೆಗಳನ್ನು ಕೇಳಬೇಕಾಗುತ್ತದೆ. ಇವು ರೋಗಿಯು ದುಃಖದಿಂದ ಹೊರಬರಲು ಸಹಕಾರಿ. ಈ ಚಿಕಿತ್ಸೆಯನ್ನು ಹಂತಹಂತವಾಗಿ ನೀಡುತ್ತ ಹೋಗಬೇಕಾಗುತ್ತದೆ. ಜೊತೆಗೆ, ಇವರುಗಳನ್ನು ಬೇರೆ-ಬೇರೆ ಕೆಲಸಗಳಲ್ಲಿ ವ್ಯಸ್ಥರಾಗಿಸಬೇಕು. ಯಾಕೆಂದರೆ, ಖಾಲಿ ಇರುವ ಮನಸ್ಸು ಕೆಟ್ಟ ವಿಚಾರಗಳನ್ನು ಮಾಡುವುದು ಸಾಮಾನ್ಯ. ಇವರನ್ನು ಯೋಗ, ವಿಶ್ರಾಂತಿ ಚಿಕಿತ್ಸೆ, ನಡಿಗೆ, ಗುಂಪು ಸಮಾಲೋಚನೆ, ಶುದ್ಧ ಗಾಳಿ ಮತ್ತು ಬೆಳಕಿನ ವ್ಯವಸ್ಥೆ, ಚಿಕಿತ್ಸೆಯ ಉಪಯೋಗದ ಬಗ್ಗೆ ಸಮಾಲೋಚನೆಗೆ ಒಳಪಡಿಸುವುದು ಹಾಗೂ ಒಳಾಂಗಣ ಮತ್ತು ಹೊರಾಂಗಣ ಆಟಗಳಲ್ಲಿ ವ್ಯಸ್ಥರಾಗಿಸುವುದು ಮುಂತಾದ ಕ್ರಮಗಳಿಂದ ಖಿನ್ನತೆಯಿಂದ ಆಚೆ ಕರೆತರಬಹುದು," ಎನ್ನುತ್ತಾರೆ ಡಾ.ರಾಜಶೇಖರ್‌ ಹಿರೇಮಠ.

ನಿಮಗೆ ಏನು ಅನ್ನಿಸ್ತು?
1 ವೋಟ್
eedina app