ಕೋವಿಡ್‌ ಸುದ್ದಿ | ಸೋಂಕಿತರ ಚಿಕಿತ್ಸೆಗೆ ಆಸ್ಪತ್ರೆ ಸಜ್ಜುಗೊಳಿಸಲು ರಾಜ್ಯ ಆರೋಗ್ಯ ಇಲಾಖೆ ಸೂಚನೆ

Covid 19

ಬೆಂಗಳೂರಿನಲ್ಲಿ ಕೋವಿಡ್‌-19 ಸೋಂಕಿನ ಪ್ರಕರಣಗಳು ಏರಿಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ, ಮುನ್ನೆಚ್ಚರಿಕೆ ಕ್ರಮವಾಗಿ ನಗರದ ಎರಡು ಆಸ್ಪತ್ರೆಗಳಲ್ಲಿ ಕೊರೊನಾ ಸೋಂಕಿತರ ಚಿಕಿತ್ಸೆಗೆ ಸಕಲ ಸಿದ್ಧತೆ ಮಾಡಿಕೊಳ್ಳುವಂತೆ ರಾಜ್ಯ ಸರ್ಕಾರ ಸೂಚಿಸಿದೆ.

ಸಿ ವಿ ರಾಮನ್‌ ಜನರಲ್‌ ಆಸ್ಪತ್ರೆ ಮತ್ತು ಅಟಲ್‌ ಬಿಹಾರಿ ವಾಜಪೇಯಿ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಿಗೆ (ಬೌರಿಂಗ್‌ ಆಸ್ಪತ್ರೆ) ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಈ ನಿರ್ದೇಶನ ನೀಡಿದೆ.

ರಾಜ್ಯಾದ್ಯಂತ ಕೊರೊನಾ ಸಾವಿನ ಪ್ರಕರಣಗಳಲ್ಲಿ ಕಳೆದ ಕೆಲವು ದಿನಗಳಿಂದ ಏರಿಕೆ ನಿರಂತರವಾಗಿದೆ. ಕಳೆದ 24 ಗಂಟೆಯಲ್ಲಿ, ಶಿವಮೊಗ್ಗ, ಬಳ್ಳಾರಿ, ಕಲಬುರಗಿ ಜಿಲ್ಲೆಗಳಲ್ಲಿ ತಲಾ ಒಬ್ಬರು ಮತ್ತು ಧಾರವಾಡ ಜಿಲ್ಲೆಯಲ್ಲಿ ಇಬ್ಬರು ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಈ ಮೂಲಕ ಸಾವಿನ ಸಂಖ್ಯೆ 40,144ಕ್ಕೆ ಏರಿಕೆಯಾಗಿದೆ. ಕಳೆದೊಂದು ದಿನದಲ್ಲಿ ಪತ್ತೆಯಾದ ಸೋಂಕಿತರ ಸಂಖ್ಯೆ 1,329. ಸಕ್ರಿಯ ಪ್ರಕರಣಗಳು 10,105. ಸೋಂಕಿನಿಂದ ಹೊರಬಂದವರು 1,614 ಮಂದಿ. ಪ್ರಕರಣಗಳ ಏರಿಕೆ ಪ್ರಮಾಣ ಶೇಕಡ 4.26.

ಇನ್ನು, ದೇಶಾದ್ಯಂತ ಕಳೆದ ಒಂದು ದಿನದಲ್ಲಿ ಪತ್ತೆಯಾದ ಪ್ರಕರಣಗಳ ಸಂಖ್ಯೆ 14,092. ಸೋಂಕಿಗೆ ಬಲಿಯಾದವರು 41 ಮಂದಿ. ಒಟ್ಟು ಸಕ್ರಿಯ ಪ್ರಕರಣಗಳು 1,16,861. ಸೋಂಕಿನಿಂದ ಮುಕ್ತರಾದವರು 16,454 ಮಂದಿ. ಧನಾತ್ಮಕ ಪ್ರಕರಣಗಳ ಏರಿಕೆ ಪ್ರಮಾಣ ಶೇಕಡ 4.7.

ವಿಶ್ವಾದ್ಯಂತ ಕಳೆದ 24 ಗಂಟೆಯ ಅವಧಿಯಲ್ಲಿ ದಾಖಲಾಗಿರುವ ಸೋಂಕಿನ ಪ್ರಕರಣಗಳು 586,871. ಮೃತಪಟ್ಟವರು 1,365 ಮಂದಿ. ಸೋಂಕಿನಿಂದ ಗುಣಮುಖರಾದವರ ಸಂಖ್ಯೆ 8,65,487. ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 20,554,467. ಅಮೆರಿಕದಲ್ಲಿ ಸೋಂಕಿತರ ಸಂಖ್ಯೆ 12,123; ಪ್ರಾಣ ಬಿಟ್ಟವರು 31 ಮಂದಿ. ಬ್ರೆಜಿಲ್‌ನಲ್ಲಿ ಪತ್ತೆಯಾದ ಪ್ರಕರಣಗಳು 16,760; ಕೊರೊನಾಗೆ ಬಲಿಯಾದವರು 163 ಮಂದಿ.

ಸುದ್ದಿ ಮೂಲ: ಬಿಬಿಎಂಪಿ, ಕೇಂದ್ರ ಆರೋಗ್ಯ ಸಚಿವಾಲಯ, ವಿಶ್ವ ಆರೋಗ್ಯ ಸಂಸ್ಥೆ
ನಿಮಗೆ ಏನು ಅನ್ನಿಸ್ತು?
0 ವೋಟ್