ರಾಜ್ಯದಲ್ಲಿ ಡೆಂಗಿ ಪ್ರಕರಣ ಹೆಚ್ಚಳ; ಲಕ್ಷಣಗಳೇನು, ಮುನ್ನೆಚ್ಚರಿಕೆ ಕ್ರಮಗಳೇನು?

ರಾಜ್ಯದಲ್ಲಿ ಡೆಂಗಿ ಸೋಂಕು ಹೆಚ್ಚಳ ಕಂಡಿದೆ. ಈ ಹಿನ್ನೆಲೆಯಲ್ಲಿ, ಡೆಂಗಿ ಹೇಗೆ ಹರಡುತ್ತದೆ, ರೋಗ ಲಕ್ಷಣಗಳೇನು, ತಡೆಯುವುದು ಹೇಗೆಂದು ಕಿಮ್ಸ್‌ನ ಸಹಾಯಕ ಪ್ರಾಧ್ಯಾಪಕ ಡಾ.ಗಿರಿಯಣ್ಣ ಗೌಡ ಮಾಹಿತಿ ನೀಡಿದ್ದಾರೆ
Dengi

ಅಧಿಕ ಮಳೆ ಮತ್ತು ಪ್ರವಾಹ ಪರಿಸ್ಥಿತಿಯಿಂದಾಗಿ ಸಾಂಕ್ರಾಮಿಕ ರೋಗಗಳು ಸುಲಭವಾಗಿ ಹಬ್ಬುತ್ತಿವೆ. ಕೋವಿಡ್ ಸೋಂಕು ಮತ್ತೆ ಉಲ್ಬಣಗೊಳ್ಳುವ ಸಾಧ್ಯತೆ ಇದೆ ಎಂದು ಇತ್ತೀಚೆಗಷ್ಟೇ ವಿಶ್ವಸಂಸ್ಥೆ ಹೇಳಿಕೆ ಬಿಡುಗಡೆ ಮಾಡಿದೆ. ಇತ್ತ ರಾಜ್ಯದಲ್ಲಿ ಡೆಂಗಿ ಪ್ರಕರಣಗಳು ನಿರಂತರ ಪತ್ತೆಯಾಗುತ್ತಿವೆ.

ಬಿಬಿಎಂಪಿ ಅಂಕಿ-ಅಂಶಗಳ ಪ್ರಕಾರ, 2022ರ ಆಗಸ್ಟ್‌ವರೆಗೆ ಬೆಂಗಳೂರೊಂದರಲ್ಲೇ 1,154 ಪ್ರಕರಣ ಪತ್ತೆಯಾಗಿವೆ. 2021ರಲ್ಲಿ 1,643, 2020ರಲ್ಲಿ 2,047 ಹಾಗೂ 2019ರಲ್ಲಿ 9,029 ಪ್ರಕರಣ ದಾಖಲಾಗಿದ್ದವು. ಆರೋಗ್ಯ ಇಲಾಖೆಯ ಅಂಕಿ-ಅಂಶಗಳ ಪ್ರಕಾರ, ರಾಜ್ಯದಲ್ಲಿ ಈ ವರ್ಷ ದೃಢಪಟ್ಟ ಡೆಂಗಿ ಪ್ರಕರಣಗಳು 5,656. ಸೋಂಕಿನಿಂದ ಮೃತಪಟ್ಟವರ ಸಂಖ್ಯೆ ನಾಲ್ಕು.

ಡೆಂಗಿ ಸೋಂಕು ಹರಡುವ ಬಗೆ

 • ರಾಜ್ಯದಲ್ಲಿ ಸುರಿಯುತ್ತಿರುವ ಮಳೆ ಡೆಂಗಿ ಸೋಂಕು ವೇಗವಾಗಿ ಹರಡಲು ಮುಖ್ಯ ಕಾರಣ
 • ಈಡೀಸ್‌ ಈಜಿಪ್ಟ್‌ ಎಂಬ ಸೊಳ್ಳೆ ಕಚ್ಚುವುದರಿಂದ ಡೆಂಗಿ ಸೋಂಕು
 • ಸೋಂಕಿತ ವ್ಯಕ್ತಿಯನ್ನು ಕಚ್ಚಿದ ಸೊಳ್ಳೆ ಮತ್ತೊಬ್ಬರಿಗೆ ಕಚ್ಚಿದರೂ ಸೋಂಕು ಹರಡುವ ಸಾಧ್ಯತೆ
 • ಕೃತಕವಾಗಿ ಸಂಗ್ರಹವಾಗುವ ನೀರಿನ ಮೂಲಗಳೇ ಈ ಸೊಳ್ಳೆಗಳ ಆವಾಸ ಸ್ಥಾನ
 • ತೆಂಗಿನ ಚಿಪ್ಪು, ಹಳೆಯ ಟಯರ್‌ಗಳು, ಹಳೆಯ ಪ್ಲಾಸ್ಟಿಕ್‌ಗಳು... ಹೀಗೆ, ಬಳಕೆಯಾಗದ ವಸ್ತುಗಳಲ್ಲಿ ನಿಂತ ನೀರಿನಲ್ಲಿ ಸೊಳ್ಳೆಯ ಸಂತಾನೋತ್ಪತ್ತಿ
 • ಮನೆಯಲ್ಲಿರುವ ನೀರಿನ ಟ್ಯಾಂಕ್‌ಗಳು, ನೀರು ತುಂಬಿದ ಬಕೆಟ್, ನೀರಿನ ಸೊಂಪುಗಳನ್ನು ತೆರೆದು ಇಡುವುದರಿಂದ ಸೊಳ್ಳೆಗಳ ಸಂಖ್ಯೆ ಹೆಚ್ಚಳ

ಡೆಂಗಿ ಸೋಂಕಿನ ಲಕ್ಷಣಗಳು

 • ಡೆಂಗಿ ಜ್ವರಕ್ಕೆ ತುತ್ತಾದವರಲ್ಲಿ ತೀವ್ರವಾದ ಜ್ವರ, ಆಯಾಸ, ಸುಸ್ತು, ತಲೆನೋವು ಮತ್ತು ತಲೆ ಭಾರ ಇರುತ್ತದೆ.
 • ರೋಗ ದೇಹದಲ್ಲಿ ವೇಗವಾಗಿ ಪ್ರಗತಿ ಹೊಂದುವುದರ ಪರಿಣಾಮ, ಪ್ಲೇಟ್ಲೆಟ್‌ಗಳ ಸಂಖ್ಯೆ‌ ಕಡಿಮೆಯಾಗುತ್ತದೆ. ಆ ಸಂದರ್ಭದಲ್ಲಿ ಮಾತ್ರೆಗಳ ಸೇವನೆಯಿಂದ ಜ್ವರ ಕಡಿಮೆಯಾಗುವುದಿಲ್ಲ.
 • ಸೋಂಕಿನ ಪರಿಣಾಮ ಹೆಚ್ಚಾದಾಗ ಹೊಟ್ಟೆನೋವು ಮತ್ತು ಉಸಿರಾಟದ ತೊಂದರೆಗಳಾಗುವ ಸಾಧ್ಯತೆ ಇರುತ್ತದೆ.
 • ಎರಡು ದಿನಕ್ಕೂ ಹೆಚ್ಚು ಕಾಲ ಜ್ವರ ಇದ್ದರೆ ವೈದ್ಯರನ್ನು ಕಾಣುವುದು ಉತ್ತಮ. ವೈದ್ಯರ ಸಲಹೆ ಪಡೆದು ಡೆಂಗಿ ಪರೀಕ್ಷೆ ಮಾಡಿಸಿಕೊಳ್ಳಬೇಕು.
 • ಮಕ್ಕಳು ಮತ್ತು ವಯಸ್ಕರಲ್ಲಿ ಒಂದೇ ತರಹದ ಲಕ್ಷಣಗಳಿರುತ್ತವೆ. ಆದರೆ, ರೋಗದ ತೀವ್ರತೆ ಭಿನ್ನವಾಗಿರುತ್ತದೆ.

ಈ ಸುದ್ದಿ ಓದಿದ್ದೀರಾ?: ಮಳೆಗಾಲದಲ್ಲಿ ಮಕ್ಕಳನ್ನು ಕಾಡುವ ಡೆಂಗಿ ಜ್ವರ; ಮುನ್ನೆಚ್ಚರಿಕೆ ಕ್ರಮಗಳೇನು? | 10 ಮುಖ್ಯ ಅಂಶ

ಮುನ್ನೆಚ್ಚರಿಕೆ ಕ್ರಮಗಳು

 • ಸೊಳ್ಳೆ ಕಚ್ಚದಂತೆ ನೋಡಿಕೊಳ್ಳಬೇಕು. ಡೆಂಗಿ ಸೋಂಕು ಹರಡುವ ಸೊಳ್ಳೆಗಳು ಹಗಲಿನಲ್ಲಷ್ಟೇ ಕಚ್ಚುವುದರಿಂದ ಸೊಳ್ಳೆ ಕಚ್ಚದಂತೆ ನೋಡಿಕೊಳ್ಳುವುದು ಬಹುಶಃ ಸುಲಭ.
 • ಸೊಳ್ಳೆ ಹೆಚ್ಚಿರುವ ಪ್ರದೇಶಗಳಲ್ಲಿ ಮಕ್ಕಳು ಮತ್ತು ಮನೆಯಲ್ಲಿರುವವರು ಸಂಪೂರ್ಣ ದೇಹ ಮುಚ್ಚುವ ಹಾಗೆ ಬಟ್ಟೆ ಧರಿಸಬೇಕು. ಹಗಲು ಮಕ್ಕಳನ್ನು ಮಲಗಿಸುವಾಗ ಸೊಳ್ಳೆ ಪರದೆಗಳನ್ನು ಬಳಸುವುದು ಒಳ್ಳೆಯದು.
 • ಸೊಳ್ಳೆನಿರೋಧಕ ಔಷಧಗಳನ್ನು ಬಳಸಬಹುದು. ಇವು ಕೆಲವರಲ್ಲಿ ಅಲರ್ಜಿ ಉಂಟುಮಾಡುವ ಸಾಧ್ಯತೆ ಇದೆ. ಚರ್ಮಕ್ಕೆ ಆಗಿಬರುವವರು ಮಾತ್ರ ಬಳಸುವುದು ಉತ್ತಮ.
 • ಸೊಳ್ಳೆಬತ್ತಿಗಳು ಮತ್ತು ಲಿಕ್ವಿಡ್‌ಗಳನ್ನು ಬಳಸಲು ನಾವು ಸಲಹೆ ನೀಡುವುದಿಲ್ಲ. ಅವು ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಗಳಿವೆ.
 • ಸೊಳ್ಳೆಗಳು ಮನೆಯೊಳಗೆ ಬರದಿರುವಂತೆ ಮತ್ತು ಕಚ್ಚದಿರುವಂತೆ ಎಚ್ಚರಿಕೆ ವಹಿಸುವುದು ಅತ್ಯಂತ ಪರಿಣಾಮಕಾರಿ ಕ್ರಮ.
 • ಈ ಸೊಳ್ಳೆಗಳು 400 ಮೀಟರ್‌ಗಿಂತ ಹೆಚ್ಚು ದೂರ ಚಲಿಸಲಾರವು. ಹಾಗಾಗಿ, ಮನೆಯ ಸುತ್ತಮುತ್ತ ನೀರು ಸಂಗ್ರಹವಾಗದಂತೆ ನೋಡಿಕೊಳ್ಳುವುದು ಮುಖ್ಯ.
 • ಮನೆಯಲ್ಲಿ ಒಂದು ವಾರಕ್ಕೂ ಹೆಚ್ಚು ಕಾಲ ನೀರು ಸಂಗ್ರಹಿಸಿಡಬಾರದು. ನೀರು ತುಂಬುವ ವಸ್ತುಗಳನ್ನು ವಾರಕ್ಕೆ ಒಮ್ಮೆಯಾದರೂ ತೊಳೆದು ಒಣಗಿಸಿ ನೀರು ತುಂಬಿಡಬೇಕು.
ನಿಮಗೆ ಏನು ಅನ್ನಿಸ್ತು?
1 ವೋಟ್