ಮಳೆಗಾಲದಲ್ಲಿ ಮಕ್ಕಳನ್ನು ಕಾಡುವ ಡೆಂಗಿ ಜ್ವರ; ಮುನ್ನೆಚ್ಚರಿಕೆ ಕ್ರಮಗಳೇನು? | 10 ಮುಖ್ಯ ಅಂಶ

ಸತತ ಮಳೆಯಿಂದಾಗಿ ಸಾಂಕ್ರಾಮಿಕ ರೋಗಗಳ ಜೊತೆಗೆ ಡೆಂಗಿ ಹಾವಳಿಯೂ ಹೆಚ್ಚಿದೆ. ಈ ಸಂದರ್ಭದಲ್ಲಿ ಮಕ್ಕಳ ಕಾಳಜಿ ಹೇಗೆಂಬ ಕುರಿತು ಮಕ್ಕಳ ತಜ್ಞ ಡಾ.ಉಮಾಕಾಂತ ಅಡಿಗ ಮಾತನಾಡಿದ್ದಾರೆ. ಅವರ ಮಾತಿನ ಮುಖ್ಯಾಂಶ ಇಲ್ಲಿದೆ
Children
  • ʼಈಡೀಸ್ ಈಜಿಪ್ಟ್ʼ ಎಂಬ ಸೊಳ್ಳೆ ಕಚ್ಚುವುದರಿಂದ ಬರುವ ಕಾಯಿಲೆ ಡೆಂಗಿ. ವಿಪರೀತ ಜ್ವರ, ಅಂದರೆ, 103ರಿಂದ 104 ಡಿಗ್ರಿ ಸೆಲ್ಸಿಯಸ್‌ನಷ್ಟು ದೇಹದ ತಾಪಮಾನ ಇರುತ್ತದೆ. ವಿಪರೀತ ಮೈ-ಕೈ ನೋವು, ಮಕ್ಕಳಲ್ಲಿ ಕಣ್ಣುನೋವು, ಚರ್ಮದ ಮೇಲೆ ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ.
  • ಡೆಂಗಿ ಜ್ವರ ಮೂರು ಹಂತದಲ್ಲಿ ಕಾಣಿಸಿಕೊಳ್ಳುತ್ತದೆ. ಮೊದಲನೇ ಹಂತ ನಾಲ್ಕರಿಂದ ಐದು ದಿನಗಳವರೆಗೆ ಜ್ವರ, ಮೈ-ಕೈ ನೋವು ಇರುತ್ತದೆ. ನಾಲ್ಕು ದಿನಗಳ ನಂತರ ಜ್ವರ ಕಡಿಮೆಯಾಗಿ ಮತ್ತೆ ಇನ್ನೊಂದು ದಿನ ಬರಬಹುದು. ಇದನ್ನು 'ಬೈ ಫೇಸಿಕ್ ಫೀವರ್ʼ ಎಂದು ಕರೆಯಲಾಗುತ್ತದೆ. ಅಂದರೆ, ಎರಡು ಬಾರಿ ಜ್ವರ ಬರುವುದು ಎಂದರ್ಥ.
  • ಐದಾರು ದಿನಗಳ ನಂತರ ಎರಡನೇ ಹಂತದ ಜ್ವರ (ಕ್ರಿಟಿಕಲ್ ಫೇಸ್) ಕಾಣಿಸಿಕೊಳ್ಳುತ್ತದೆ. ಈ ಹಂತದಲ್ಲಿ ಮಕ್ಕಳು ಹೆಚ್ಚು ತೊಂದರೆಗಳಾಗುವ ಸಾಧ್ಯತೆ ಇರುತ್ತದೆ. ಜ್ವರ ಕಡಿಮೆ ಇರುತ್ತದೆ; ಆದರೆ, ಮಕ್ಕಳು ಚೇತರಿಸಿಕೊಳ್ಳುವುದಿಲ್ಲ. ಮಗುವಿನಲ್ಲಿ ನಿಶಕ್ತಿ, ಆಯಾಸ, ತಲೆ ಸುತ್ತುವುದು, ರಕ್ತದ ಒತ್ತಡ ಕಡಿಮೆಯಾಗುತ್ತದೆ, ಪ್ಲೇಟ್ಲೆಟ್‌ಗಳ ಸಂಖ್ಯೆ ಇಳಿಮುಖವಾಗುತ್ತದೆ.
  • ಎರಡನೇ ಹಂತದ ಜ್ವರ ಸಾಮಾನ್ಯವಾಗಿ 48 ಗಂಟೆಯಿಂದ 72 ಗಂಟೆಗಳವರೆಗೆ ಇರಬಹುದು. ಈ ಹಂತದಲ್ಲಿ ರೋಗಲಕ್ಷಣ ಕಂಡುಹಿಡಿದು ಚಿಕಿತ್ಸೆ ನೀಡಿದರೆ ಮಗು ಸಂಪೂರ್ಣ ಚೇತರಿಸಿಕೊಳ್ಳುತ್ತದೆ. ಈ ಹಂತದಲ್ಲಿ ಚಿಕಿತ್ಸೆ ನೀಡದೆ ಹೋದರೆ ಮಗುವಿಗೆ ಹೆಚ್ಚಿನ ತೊಂದರೆ ಆಗುವ ಸಾಧ್ಯತೆ ಹೆಚ್ಚು.
  • ಮೂರನೇ ಹಂತಕ್ಕೆ ʼರೆಸಲ್ಯೂಷನ್ʼ ಹಂತ ಎಂದು ಕರೆಯಲಾಗುತ್ತದೆ. ಅಂದರೆ, ಗುಣಮುಖವಾಗುವ ಹಂತ. ಈ ಹಂತದಲ್ಲಿ ಮಕ್ಕಳಲ್ಲಿ ಪ್ಲೇಟ್ಲೆಟ್‌ಗಳ ಸಂಖ್ಯೆ ಸಹಜ ಸ್ಥಿತಿಗೆ ಮರಳಲು ಆರಂಭಿಸುತ್ತದೆ. ಈ ಹಂತದಲ್ಲಿ ಮಕ್ಕಳು ಚೇತರಿಸಿಕೊಳ್ಳುತ್ತಾರೆ. ಬಿಪಿ ಸಾಮಾನ್ಯವಾಗುತ್ತದೆ. ಈ ಹಂತದಲ್ಲಿಯೂ ತೊಂದರೆಗಳಾಗುವ ಸಾಧ್ಯತೆಗಳಿವೆ.  
  • ಆಸ್ಪತ್ರೆಗೆ ಕರೆತರುವುದು ತಡವಾದರೆ ಡೆಂಗಿ ತಲೆಗೆ ಹಬ್ಬಬಹುದು, ಹೃದಯಕ್ಕೂ ತೊಂದರೆ ನೀಡಬಹುದು. ಕೆಲವೊಮ್ಮೆ ಬಿಪಿ ಮತ್ತು ಪ್ಲೇಟ್ಲೆಟ್‌ಗಳು ತುಂಬಾ ಕಡಿಮೆಯಾಗಿ ರಕ್ತಸ್ರಾವವಾಗಬಹುದು. ರಕ್ತಸ್ರಾವ ಹೆಚ್ಚಾದರೆ ಮಗು ಆಘಾತಕ್ಕೆ (ಶಾಕ್) ಒಳಗಾಗಬಹುದು. 
  • ಮೊದಲ ಹಂತದಲ್ಲಿ ಜ್ವರ ಕಾಣಿಸಿಕೊಂಡಾಗ ಕೇವಲ ಜ್ವರದ ಮಾತ್ರೆಗಳನ್ನು ಮಾತ್ರ ನೀಡಬೇಕು. ಯಾವುದೇ ಭಯವಿಲ್ಲದೆ ಪ್ಯಾರಾಸಿಟಮಲ್‌ ಮಾತ್ರೆ ತೆಗೆದುಕೊಳ್ಳಬಹುದು. ಆದರೆ, ವೈದ್ಯರ ಸಲಹೆ ಇಲ್ಲದೆ ಬೇರೆ ಮಾತ್ರೆಗಳನ್ನು ತೆಗೆದುಕೊಳ್ಳುವುದು ಅಪಾಯಕಾರಿ.
  • ಹೆಚ್ಚು-ಹೆಚ್ಚು ದ್ರವ ಪದಾರ್ಥ ಸೇವಿಸಬೇಕು. ಮಕ್ಕಳಲ್ಲಿ ಡೆಂಗಿ ಲಕ್ಷಣಗಳನ್ನು ಪೋಷಕರು ಗುರುತಿಸಬೇಕು. ಜ್ವರ ಕಾಣಿಸಿದ ನಾಲ್ಕರಿಂದ ಐದು ದಿನಗಳ ನಂತರ ಮಗುವಿಗೆ ಪದೇಪದೆ ವಾಂತಿ, ಹೊಟ್ಟೆಯ ಬಲ ಮೇಲ್ಭಾಗದಲ್ಲಿ ವಿಪರೀತ ನೋವು, ತಲೆ ಸುತ್ತುವುದು, ಆಹಾರ ಸೇವಿಸದೆ ಇರುವುದು, 12 ಗಂಟೆಗಳ ಕಾಲ ಮಗು ಮೂತ್ರ ವಿಸರ್ಜನೆ ಮಾಡದಿರುವುದು, ಚರ್ಮದ ಮೇಲೆ ಕೆಂಪು ಗುಳ್ಳೆಗಳು ಕಾಣಿಸಿಕೊಂಡರೆ ವೈದ್ಯರನ್ನು ಕಾಣುವುದು ಒಳ್ಳೆಯದು.
  • ಡೆಂಗಿ ಇಂದ ತಪ್ಪಿಸಿಕೊಳ್ಳಲು ಮನೆ ಸುತ್ತಮುತ್ತ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು ಸುಲಭ ಉಪಾಯ. ಹಗಲು ಹೊತ್ತಿನಲ್ಲಿ ಸೊಳ್ಳೆಗಳು ಕಚ್ಚದಂತೆ ಸಂಪೂರ್ಣ ದೇಹ ಮುಚ್ಚುವ ಹಾಗೆ ಬಟ್ಟೆ ಧರಿಸುವುದು, ಸೊಳ್ಳೆ ನಿರೋಧಕ ಔಷಧಿಯನ್ನು ಮಕ್ಕಳಿಗೆ ಲೇಪಿಸುವುದು ಅವಶ್ಯ.
  • ಒಮ್ಮೆ ಡೆಂಗಿ ಬಂದರೆ ಮತ್ತೆ ಬರುವುದಿಲ್ಲ ಎಂದಲ್ಲ. ಡೆಂಗಿಯಲ್ಲಿ ನಾಲ್ಕು ತಳಿಗಳಿದ್ದು, ಮೊದಲ ಹಂತದಲ್ಲಿ ಬರುವ ಡೆಂಗಿ ಶೇಕಡ 80ರಷ್ಟು ಮಂದಿಯಲ್ಲಿ ಅಪಾಯವನ್ನುಂಟು ಮಾಡುವುದಿಲ್ಲ. ಆದರೆ, ಎರಡನೇ ಬಾರಿ ತಗುಲುವ ಸೋಂಕು ಶೇಕಡ 20ರಿಂದ 25ರಷ್ಟು ಜನರಲ್ಲಿ ತೀವ್ರ ಅನಾರೋಗ್ಯಕ್ಕೆ ಕಾರಣವಾಗುತ್ತದೆ.

ಈ ಸುದ್ದಿ ಓದಿದ್ದೀರಾ?: ನಾಯಿ ಕಡಿತ ಪ್ರಕರಣ ಹೆಚ್ಚಳ; ದೆಹಲಿ ಮತ್ತು ಕೇರಳದಲ್ಲಿ ವಿಭಿನ್ನ ಕ್ರಮ | 10 ಮುಖ್ಯ ಅಂಶ

ನಿಮಗೆ ಏನು ಅನ್ನಿಸ್ತು?
2 ವೋಟ್
eedina app