
- ಮೊದಲ ಕೊರೊನಾ ಪರೀಕ್ಷೆ ವೇಳೆ ವ್ಯಕ್ತಿಯಲ್ಲಿ ಬಿ 1 ರೂಪಾಂತರ ತಳಿ ಪತ್ತೆ
- ಜರ್ನಲ್ ಕ್ಲಿನಿಕಲ್ ಇನ್ಫೆಕ್ಷಿಯಸ್ ಡಿಸೀಸ್ನಲ್ಲಿ ಸಂಶೋಧಕರ ಅಧ್ಯಯನ ಪ್ರಕಟ
ಸತತ 411 ದಿನಗಳ ಹೋರಾಟದ ನಂತರ ವ್ಯಕ್ತಿಯೊಬ್ಬರು ಕೋವಿಡ್ನಿಂದ ಗುಣಮುಖರಾಗಿದ್ದಾರೆ ಎಂದು ಬ್ರಿಟಿಷ್ ಸಂಶೋಧಕರು ಶುಕ್ರವಾರ (ನ. 4) ಪ್ರಕಟಿಸಿದ್ದಾರೆ.
ಕೋವಿಡ್ ಸೋಂಕಿಗೆ ಒಳಗಾದ ವ್ಯಕ್ತಿಗೆ ಸೂಕ್ತ ಚಿಕಿತ್ಸೆ ಕಂಡು ಹಿಡಿಯಲು ಸಂಶೋಧಕರು ಪ್ರಯತ್ನಿಸಿದ್ದಾರೆ. ವ್ಯಕ್ತಿಯ ನಿರ್ದಿಷ್ಟ ಕೋವಿಡ್ ವೈರಾಣುವಿನ ಆನುವಂಶಿಕತೆ ವಿಶ್ಲೇಷಿಸುವ ಮೂಲಕ ಚಿಕಿತ್ಸೆ ಕಂಡು ಹಿಡಿದು ವ್ಯಕ್ತಿಯ ಸೋಂಕು ಗುಣಪಡಿಸಲಾಗಿದೆ ಎಂದು ಬ್ರಿಟಿಷ್ ಸಂಶೋಧಕರು ಹೇಳಿದ್ದಾರೆ.
ವ್ಯಕ್ತಿಗೆ ಭಿನ್ನ ರೀತಿಯ ಕೋವಿಡ್ ಪಿಡುಗು ಉಂಟಾಗಿತ್ತು. ಇದು ದೀರ್ಘಾವಧಿಯ ಕೋವಿಡ್ ಆಗಿದೆ. ರೋಗ ನಿರೋಧಕ ಶಕ್ತಿ ಕಡಿಮೆ ಇರುವ ವಿರಳ ರೋಗಿಗಳಲ್ಲಿ ಕಂಡು ಬರುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.
"ಕಡಿಮೆ ನಿರೋಧಕ ಶಕ್ತಿ ಹೊಂದಿರುವ ರೋಗಿಗಳಲ್ಲಿ ಕೊರೊನಾ ಸೋಂಕು ತಿಂಗಳು ಅಥವಾ ವರ್ಷಗಳವರೆಗೆ ಇರುತ್ತದೆ. ಈ ದೀರ್ಘಾವಧಿಯ ಸೋಂಕುಗಳು ಗಂಭೀರ ಪರಿಣಾಮ ಉಂಟುಮಾಡಬಹುದು. ಏಕೆಂದರೆ ಸುಮಾರು ಅರ್ಧದಷ್ಟು ರೋಗಿಗಳು ಶ್ವಾಸಕೋಶದ ಉರಿಯೂತದಂತಹ ನಿರಂತರ ರೋಗಲಕ್ಷಣಗಳನ್ನು ಹೊಂದಿರುತ್ತಾರೆ" ಎಂದು ಗೈಸ್ ಮತ್ತು ಸೇಂಟ್ ಥಾಮಸ್ ಎನ್ಎಚ್ಎಸ್ ಫೌಂಡೇಶನ್ ಟ್ರಸ್ಟ್ನ ಸಾಂಕ್ರಾಮಿಕ ರೋಗಗಳ ಪರಿಣತ ವೈದ್ಯ ಲ್ಯೂಕ್ ಸ್ನೆಲ್ ಹೇಳಿದ್ದಾರೆ.
ಹೊಸ ಅಧ್ಯಯನದ ಬಗ್ಗೆ ಗೈಸ್ ಮತ್ತು ಸೇಂಟ್ ಥಾಮಸ್ ಎನ್ಎಚ್ಎಸ್ ಫೌಂಡೇಶನ್ ಟ್ರಸ್ಟ್ ಮತ್ತು ಕಿಂಗ್ಸ್ ಕಾಲೇಜ್ ಲಂಡನ್ನ ಸಂಶೋಧಕರ ತಂಡವು ಜರ್ನಲ್ ಕ್ಲಿನಿಕಲ್ ಇನ್ಫೆಕ್ಷಿಯಸ್ ಡಿಸೀಸ್ನಲ್ಲಿ ವರದಿ ಪ್ರಕಟಿಸಿದ್ದು, 59 ವರ್ಷದ ವ್ಯಕ್ತಿಯೊಬ್ಬರು 13 ತಿಂಗಳುಗಳಿಗಿಂತ ಹೆಚ್ಚು ಕೋವಿಡ್ನೊಂದಿಗೆ ಸೆಣಸಿ ಹೇಗೆ ಜಯಿಸಿದರು ಎಂಬುದನ್ನು ವಿವರಿಸಿದೆ.
ಮೂತ್ರಪಿಂಡ ಕಸಿಯಿಂದಾಗಿ ದುರ್ಬಲಗೊಂಡ ರೋಗನಿರೋಧಕ ಶಕ್ತಿ ಹೊಂದಿರುವ ವ್ಯಕ್ತಿಯು 2020ರ ಡಿಸೆಂಬರ್ನಲ್ಲಿ ಕೊರೊನಾ ಸೋಂಕಿಗೆ ಒಳಗಾಗಿದ್ದರು. ಈ ವರ್ಷದ ಜನವರಿವರೆಗೆ ಅವರಿಗೆ ಸೋಂಕು ತಗುಲಿತ್ತು ಎಂದು ಅಧ್ಯಯನ ಹೇಳಿದೆ.
ವ್ಯಕ್ತಿಯು ಹಲವಾರು ಬಾರಿ ಕೋವಿಡ್ಗೆ ತುತ್ತಾಗಿದ್ದಾರೆಯೇ ಅಥವಾ ಅದು ಒಂದು ದೀರ್ಘಾವಧಿಯ ಸೋಂಕೇ ಎಂದು ಪತ್ತೆಹಚ್ಚಲು ಸಂಶೋಧಕರು ನ್ಯಾನೊಪೋರ್ ಸೀಕ್ವೆನ್ಸಿಂಗ್ ತಂತ್ರಜ್ಞಾನದೊಂದಿಗೆ ತ್ವರಿತ ಆನುವಂಶಿಕ ವಿಶ್ಲೇಷಣೆ ಬಳಸಿದ್ದಾರೆ ಎಂದು ಅಧ್ಯಯನ ಮಾಹಿತಿ ನೀಡಿದೆ.
ವ್ಯಕ್ತಿಗೆ ಮೊದಲು ಕೊರೊನಾ ಪರೀಕ್ಷೆ ನಡೆಸಿದಾಗ ಅವರಲ್ಲಿ ಬಿ1 ರೂಪಾಂತರ ತಳಿ ಪತ್ತೆಯಾಗಿತ್ತು. ಬಳಿಕ ಇತರ ಹೊಸ ತಳಿಗಳು ಪತ್ತೆಯಾದವು ಎಂದು ಅಧ್ಯಯನ ತಿಳಿಸಿದೆ.
ಈ ಸುದ್ದಿ ಓದಿದ್ದೀರಾ? ಪಾಕಿಸ್ತಾನದಲ್ಲಿರುವ ಚೀನಿಯರ ಸುರಕ್ಷತೆ ಬಗ್ಗೆ ಭರವಸೆ ನೀಡಿ : ಷರೀಫ್ಗೆ ಜಿನ್ಪಿಂಗ್ ಆದೇಶ
ವ್ಯಕ್ತಿಯು ಆರಂಭದಲ್ಲಿ ಬಿ1 ರೂಪಾಂತರ ಹೊಂದಿದ್ದರಿಂದ ಅವರಿಗೆ ರೆಜೆನೆರಾನ್ನಿಂದ ಕ್ಯಾಸಿರಿವಿಮಾಬ್ ಮತ್ತು ಇಮ್ಡೆವಿಮಾಬ್ ಮೊನೊಕ್ಲೋನಲ್ ಪ್ರತಿಕಾಯಗಳ ಸಂಯೋಜನೆ ನೀಡಿದ್ದರು. ಹೊಸ ಕೊರೊನಾ ರೂಪಾಂತರ ತಳಿ ವಿರುದ್ಧ ಈ ಪ್ರತಿಕಾಯಗಳು ಯಾವುದೇ ಪರಿಣಾಮ ಬೀರುವ ಸಾಮರ್ಥ್ಯ ಹೊಂದಿಲ್ಲ. ಆದರೆ ವ್ಯಕ್ತಿಗೆ ಮೊದಲು ಕಾಣಿಸಿಕೊಂಡ ರೂಪಾಂತರ ತಳಿಗಿಂತ ಭಿನ್ನವಾದ ಇತರ ತಳಿಗಳು ಕಾಣಿಸಿಕೊಂಡಿದ್ದರಿಂದ ಈ ಪ್ರತಿಕಾಯ ಸಂಯೋಜನೆಯು ಪರಿಣಾಮಕಾರಿಯಾಗಿ ಕೆಲಸ ಮಾಡಿತು. ಪರಿಣಾಮ ವ್ಯಕ್ತಿಯು ಗುಣಮುಖರಾಗಿದ್ದಾರೆ ಎಂದು ಅಧ್ಯಯನ ವಿವರಿಸಿದೆ.