
18ರಿಂದ 59 ವರ್ಷದೊಳಗಿನವರಿಗೆ ಜುಲೈ 15ರಿಂದ 75 ದಿನಗಳ ಕಾಲ ಸರ್ಕಾರಿ ಲಸಿಕೆ ಕೇಂದ್ರಗಳಲ್ಲಿ ಉಚಿತ ಕೋವಿಡ್-19ರ ಬೂಸ್ಟರ್ ಡೋಸ್ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ.
"ಸ್ವಾತಂತ್ರ್ಯದ 75ನೇ ವಾರ್ಷಿಕೋತ್ಸವದ ಪ್ರಯುಕ್ತ ಉಚಿತ ಬೂಸ್ಟರ್ ಡೋಸ್ ನೀಡುವ ಲಸಿಕಾ ಅಭಿಯಾನ ಹಮ್ಮಿಕೊಳ್ಳಲಾಗಿದೆ,” ಎಂದಿದ್ದಾರೆ ಕೇಂದ್ರ ಸಚಿವ ಅನುರಾಗ್ ಠಾಕೂರ್.
ರಾಷ್ಟ್ರೀಯ ತಾಂತ್ರಿಕ ಸಲಹಾ ಸಮಿತಿ (ಎನ್ಟಿಜಿಐ) ಶಿಫಾರಸಿನ ಮೇರೆಗೆ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು, ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿದ್ದಾರೆ.
"ಎರಡನೇ ಲಸಿಕೆ ಪಡೆದು ಆರು ತಿಂಗಳು ಪೂರೈಸಿದ 60 ವರ್ಷ ಮೇಲ್ಪಟ್ಟವರು, ಆರೋಗ್ಯ ಕಾರ್ಯಕರ್ತರು ಹಾಗೂ ಕೋವಿಡ್ ಮುಂಚೂಣಿ ಕೆಲಸಗಾರರಿಗೆ ಮುಂದಿನ ದಿನಗಳಲ್ಲಿ ಉಚಿತ ಬೋಸ್ಟರ್ ಡೋಸ್ ಹಾಕಲಾಗುವುದು. ಸದ್ಯಕ್ಕೆ 75 ದಿನಗಳ ಕಾಲ 18ರಿಂದ 59 ವರ್ಷದೊಳಗಿನವರಿಗೆ ಮಾತ್ರ ಬೂಸ್ಟರ್ ಡೋಸ್ ನೀಡುವ ತೀರ್ಮಾನ ಮಾಡಲಾಗಿದೆ," ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಕೇಂದ್ರ ಆರೋಗ್ಯ ಸಚಿವಾಲಯವು ಕಳೆದ ವಾರ ಕೋವಿಡ್-19 ಲಸಿಕೆಯ ಎರಡನೇ ಮತ್ತು ಬೂಸ್ಟರ್ ಡೋಸ್ ನಡುವಿನ ಅಂತರವನ್ನು ಆರು ತಿಂಗಳಿಗೆ ಇಳಿಸಿತ್ತು. ಇದೀಗ, ಬೂಸ್ಟರ್ ಡೋಸ್ಗಳನ್ನು ವಿತರಿಸುವ ಪ್ರಮಾಣವನ್ನು ತ್ವರಿತಗೊಳಿಸಲು ಸರ್ಕಾರಿ ಲಸಿಕೆ ಕೇಂದ್ರಗಳಲ್ಲಿ ಉಚಿತವಾಗಿ ಡೋಸ್ ನೀಡುವ ಪ್ರಕ್ರಿಯೆಗೆ ಚಾಲನೆ ನೀಡಲಾಗುತ್ತಿದೆ.