
ಕೇಂದ್ರ ಸರ್ಕಾರವು 18ರಿಂದ 59 ವರ್ಷದವರಿಗೆ ನೀಡಲಾಗುವ ಎರಡನೇ ಮತ್ತು ಮುನ್ನೆಚ್ಚರಿಕೆಯ (ಬೂಸ್ಟರ್ ಡೋಸ್) ಲಸಿಕೆ ಪಡೆಯುವ ಅಂತರವನ್ನು ಒಂಬತ್ತು ತಿಂಗಳಿನಿಂದ ಆರು ತಿಂಗಳಿಗೆ ಇಳಿಸಿ ಆದೇಶ ಹೊರಡಿಸಿದೆ.
ತಜ್ಞರ ಸಮಿತಿಯ ಶಿಫಾರಸು ಆಧರಿಸಿ ಈ ನಿರ್ಧಾರ ಹೊರಬಿದ್ದಿದೆ. ಹೊಸ ಆದೇಶದ ಪ್ರಕಾರ, ಎರಡನೇ ಡೋಸ್ ಪಡೆದ ಆರು ತಿಂಗಳು ಅಥವಾ 26 ವಾರಗಳ ಬಳಿಕ ಬೂಸ್ಟರ್ ಡೋಸ್ ಪಡೆಯಬಹುದು.
ಈ ಬಗ್ಗೆ ರಾಜ್ಯ ಸರ್ಕಾರಗಳಿಗೆ ಪತ್ರ ಬರೆದಿರುವ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್, "ಲಸಿಕೆಗೆ ಸಂಬಂಧಿಸಿದ ರಾಷ್ಟ್ರೀಯ ತಾಂತ್ರಿಕ ಸಲಹಾ ಸಮಿತಿಯ ತಾಂತ್ರಿಕ ಉಪ ಸ್ಥಾಯಿ ಸಮಿತಿಯು, ಎರಡನೇ ಡೋಸ್ ಮತ್ತು ಮುನ್ನೆಚ್ಚರಿಕೆ ಡೋಸ್ ನಡುವಿನ ಅಂತರವನ್ನು ಪರಿಷ್ಕರಿಸಲು ಶಿಫಾರಸು ಮಾಡಿದೆ. ಅದರಂತೆ, ಆರು ತಿಂಗಳು ಅಥವಾ 26 ವಾರಗಳ ನಂತರ ಬೂಸ್ಟರ್ ಡೋಸ್ ನೀಡುವಂತೆ ಆದೇಶ ಹೊರಡಿಸಲಾಗಿದೆ,” ಎಂದು ಉಲ್ಲೇಖಿಸಿದ್ದಾರೆ.
60 ವರ್ಷಕ್ಕೂ ಮೇಲ್ಪಟ್ಟ ವಯಸ್ಸಿನವರು, ಆರೋಗ್ಯ ಕಾರ್ಯಕರ್ತರಿಗೆ ಎರಡನೇ ಡೋಸ್ ಪಡೆದು ಆರು ತಿಂಗಳು ಕಳೆದಿದ್ದಲ್ಲಿ, ಸರ್ಕಾರಿ ಲಸಿಕಾ ಕೇಂದ್ರಗಳಲ್ಲಿ ಉಚಿತವಾಗಿ ಮುನ್ನೆಚ್ಚರಿಕೆ ಡೋಸ್ ಲಸಿಕೆ ಹಾಕಲಾಗುವುದು ಎಂದೂ ಪತ್ರಿಕೆಯಲ್ಲಿ ತಿಳಿಸಲಾಗಿದೆ.