
ಭಾರತದಲ್ಲಿ ಕ್ಷಯ (ಟಿ.ಬಿ) ರೋಗಿಗಳ ಸಂಖ್ಯೆ ಶೇಕಡ 18ರಷ್ಟು ಏರಿಕೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ವರದಿ ಹೇಳಿದೆ.
ಇತರ ದೇಶಗಳಿಗೆ ಹೋಲಿಸಿದರೆ, ಭಾರತ ಟಿ.ಬಿ ನಿಯಂತ್ರಿಸಲು ಉತ್ತಮ ಕ್ರಮ ಕೈಗೊಂಡಿದೆ ಎಂದಿರುವ ವರದಿ, 'ಪ್ರಧಾನಮಂತ್ರಿ ಟಿ.ಬಿ ಮುಕ್ತ ಭಾರತ ಅಭಿಯಾನ'ದಡಿ 40,000ಕ್ಕೂ ಹೆಚ್ಚು ಮಂದಿ ದೇಶಾದ್ಯಂತ 10.45 ಲಕ್ಷ ಕ್ಷಯರೋಗಿಗಳ ಚಿಕಿತ್ಸೆಗೆ ಸಹಕಾರ ನೀಡುತ್ತಿರುವುದನ್ನು ಉಲ್ಲೇಖಿಸಿದೆ. ಜಾಗತಿಕವಾಗಿ ಟಿ.ಬಿ ರೋಗಿಗಳ ಮೇಲೆ ಕೋವಿಡ್-19 ಸಾಂಕ್ರಾಮಿಕದ ಪರಿಣಾಮವನ್ನು ಕೂಡ ಈ ವರದಿ ಪಟ್ಟಿ ಮಾಡಿದೆ.
2021ರಲ್ಲಿ ಭಾರತದಲ್ಲಿ ಪ್ರತೀ ಒಂದು ಲಕ್ಷ ಜನರಲ್ಲಿ 210 ಮಂದಿಗೆ ಟಿ.ಬಿ ಇರುವುದು ಪತ್ತೆಯಾಗಿತ್ತು. 2015ರಲ್ಲಿ ಈ ಪ್ರಮಾಣ 256 ಇತ್ತು. 2015ಕ್ಕೆ ಹೋಲಿಸಿದರೆ ಶೇಕಡ 18ರಷ್ಟು ಸೋಂಕಿತರ ಪ್ರಮಾಣ ಇಳಿಕೆಯಾಗಿದೆ. ಜಾಗತಿಕ ಸರಾಸರಿ ಶೇಕಡ 11 ಇದ್ದು, ಭಾರತವು ಶೇಕಡ 7ರಷ್ಟು ಕಡಿಮೆ ಪ್ರಮಾಣ ಹೊಂದಿದೆ. ಇನ್ನು, ಭಾರತದಲ್ಲಿ ಟಿ.ಬಿ ರೋಗ ಜೀವಂತವಾಗಿರಲು ಅಪೌಷ್ಟಿಕತೆ ಸಹ ಒಂದು ಕಾರಣ ಎನ್ನುತ್ತದೆ ವಿಶ್ವ ಆರೋಗ್ಯ ಸಂಸ್ಥೆ.
ವಿಶ್ವ ಆರೋಗ್ಯ ಸಂಸ್ಥೆಯ ವರದಿಗೆ ಪ್ರತಿಕ್ರಿಯೆ ಎಂಬಂತೆ, ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪತ್ರಿಕಾ ಪ್ರಕಟಣೆ ಹೊರಡಿಸಿದೆ. ಇದರಲ್ಲಿ, "2021ರಲ್ಲಿ 21.4 ಲಕ್ಷ ಪ್ರಕರಣ ದಾಖಲಾಗಿದ್ದು, 2020ರ ಸಂಖ್ಯೆಗೆ ಹೋಲಿಸಿದರೆ ಸೋಂಕಿತರ ಪ್ರಮಾಣ ಶೇಕಡ 18ರಷ್ಟು ಏರಿಕೆಯಾಗಿತ್ತು. 2021ರಲ್ಲಿ ಟಿ.ಬಿ ಪತ್ತೆ ಮತ್ತು ಚಿಕಿತ್ಸೆಗಾಗಿ ದೇಶಾದ್ಯಂತ 22 ಕೋಟಿಗೂ ಅಧಿಕ ಜನರನ್ನು ಪರೀಕ್ಷೆಗೊಳಪಡಿಸಲಾಗಿತ್ತು," ಎಂದು ಕೇಂದ್ರ ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ.