ವಲಸೆಯಿಂದಾಗಿ ಮಹಾರಾಷ್ಟ್ರದಲ್ಲಿ ಶೇಕಡ 15ರಷ್ಟು ಅಪೌಷ್ಟಿಕತೆ ಹೆಚ್ಚಳ | 10 ಮುಖ್ಯ ಅಂಶ

2020ರ ಲಾಕ್‌ಡೌನ್ ಸಮಯದಲ್ಲಿ ಮಹಾರಾಷ್ಟ್ರದಲ್ಲಿ ಅಪೌಷ್ಟಿಕತೆಯ ಪ್ರಕರಣಗಳು ಹೆಚ್ಚು ದಾಖಲಾಗಿದ್ದವು. ಆಹಾರ ವಿತರಣೆ ಯೋಜನೆಯ ಅಸಮರ್ಪಕ ನಿರ್ವಹಣೆ ಇದಕ್ಕೆ ಕಾರಣ ಎನ್ನಲಾಗುತ್ತಿದೆ. ಈಗ ಮತ್ತೆ ಈ ಪ್ರಮಾಣ ಏರಿಕೆಯಾಗಿದೆ
  • ವಲಸೆಯಿಂದಾಗಿ ನೂರಕ್ಕೆ 15ರಷ್ಟು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಎಂದು ಖುದ್ದು ಮಹಾರಾಷ್ಟ್ರ ಸರ್ಕಾರ ನೇಮಿಸಿದ ಸಮಿತಿಯ ವರದಿಯೊಂದು ಬಹಿರಂಗಪಡಿಸಿದೆ. ವರದಿಯ ಪ್ರಕಾರ, ಅಪೌಷ್ಟಿಕತೆ ಪ್ರಮಾಣ ಈ ವರ್ಷದ ಜೂನ್‌-ಜುಲೈನಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ.
  • ಈ ವರ್ಷ (2022) ಜೂನ್‌ ಮತ್ತು ಜುಲೈ ನಡುವೆ ಮಕ್ಕಳಲ್ಲಿ ಅಪೌಷ್ಟಿಕತೆಯ ಪರೀಕ್ಷೆ ನಡೆಸಲಾಗಿತ್ತು. ಈ ವೇಳೆ ಪರೀಕ್ಷಿಸಿದ ಮಾದರಿಗಳಲ್ಲಿ ಶೇಕಡ 15ರಷ್ಟು ಮಕ್ಕಳಲ್ಲಿ ಅಪೌಷ್ಟಿಕತೆ ಇರುವುದು ಪತ್ತೆಯಾಗಿದೆ.
  • ಬುಡಕಟ್ಟು ಜನರು ಹೆಚ್ಚು ವಾಸವಿರುವ ನಂದೂರ್‌ಬಾರ್‌ ಜಿಲ್ಲೆಯಲ್ಲಿ ಪೌಷ್ಟಿಕತೆ ಪರೀಕ್ಷೆ ನಡೆಸಿದಾಗ, ಆರು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಹೆಚ್ಚು ಅಪೌಷ್ಟಿಕತೆಯಿಂದ ಬಳಲುತ್ತಿರುವುದು ಕಂಡುಬಂದಿದೆ.
  • ಮಹಾರಾಷ್ಟ್ರ ಸರ್ಕಾರ ಅಪೌಷ್ಟಿಕತೆಯ ಸಮೀಕ್ಷೆಗಾಗಿ ಸಮಿತಿಯೊಂದನ್ನು ರಚಿಸಿತ್ತು. ಈ ಸಮಿತಿಗೆ ನಂದೂರ್‌ಬಾರ್‌ ಜಿಲ್ಲಾಧಿಕಾರಿ ಲಿಖಿತ ಉತ್ತರ ನೀಡಿದ್ದು, "ಮಳೆಗಾಲದಲ್ಲಿ ಹಲವು ಮಕ್ಕಳು ತಮ್ಮ ಕುಟುಂಬಗಳೊಂದಿಗೆ ಜಿಲ್ಲೆಯ ಹೊರಗಿನ ಪ್ರದೇಶಗಳಿಗೆ ವಲಸೆ ಹೋಗುತ್ತಾರೆ. ಇದು ಅವರ ಪೌಷ್ಟಿಕ ಆಹಾರ ಸೇವನೆಯ ಮೇಲೆ ಪರಿಣಾಮ ಬೀರುತ್ತದೆ," ಎಂದು ಉಲ್ಲೇಖಿಸಿದ್ದಾರೆ.
  • ಬುಡಕಟ್ಟು ಜನರಿರುವಲ್ಲಿ ಅಪೌಷ್ಟಿಕತೆಯ ಬಗ್ಗೆ ಕ್ರಮಕ್ಕೆ ಕಾರ್ಯಕರ್ತ ಬಂಡು ಸಂಪತ್‌ ರಾವ್‌ ಸಾನೆ ಎಂಬುವವರು ಮುಂಬೈ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ 2018ರಲ್ಲಿ ಮಹಾರಾಷ್ಟ್ರ ಸರ್ಕಾರ ಈ ಸಮಿತಿ ರಚಿಸಿತ್ತು.
  • ಅತಿ ಹೆಚ್ಚು ಬುಡಕಟ್ಟು ಜನರನ್ನು ಹೊಂದಿರುವ 16 ಜಿಲ್ಲೆಗಳಲ್ಲಿ ವಾರ್ಷಿಕವಾಗಿ ಮಕ್ಕಳು ಮತ್ತು ತಾಯಂದಿರ ಪೌಷ್ಟಿಕಾಂಶದ ಸಮಸ್ಯೆಗಳನ್ನು ಈ ಸಮಿತಿ ಅಧ್ಯಯನ ಮಾಡಿ, ಪರಿಹಾರ ಕ್ರಮಗಳ ಬಗ್ಗೆ ರಾಜ್ಯ ಸರ್ಕಾರಕ್ಕೆ ಸಲಹೆ ನೀಡುತ್ತದೆ.
  • ʼದಿ ಸಂಡೇ ಎಕ್ಸ್‌ಪ್ರೆಸ್ʼನ ಮಾಹಿತಿ ಪ್ರಕಾರ, ಮೇ ತಿಂಗಳಲ್ಲಿ ನಂದೂರ್‌ಬಾರ್‌ ಜಿಲ್ಲೆಯ ಆರು ಭಾಗಗಳಲ್ಲಿ ಪೌಷ್ಟಿಕಾಂಶ ಪರೀಕ್ಷೆ ನಡೆಸಲಾಗಿತ್ತು. ಆರು ವರ್ಷದ ಒಳಗಿನ ಒಟ್ಟು 1,76,393 ಮಕ್ಕಳನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಇದರಲ್ಲಿ 12,255 ಅಂದರೆ, ಒಟ್ಟು ಸಂಖ್ಯೆಯ ಶೇಕಡ 6.95ರಷ್ಟು ಮಕ್ಕಳಲ್ಲಿ ಅಪೌಷ್ಟಿಕತೆ ಇರುವುದು ಪತ್ತೆಯಾಗಿದೆ. 1,397 ಮಕ್ಕಳು ಅಂದರೆ, ಶೇಕಡ 0.79ರಷ್ಟು ಮಕ್ಕಳು ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿದ್ದರು. 10,858 ಮಕ್ಕಳು ಅಂದರೆ, ಶೇಕಡ 6.16ರಷ್ಟು ಮಕ್ಕಳು ಮಧ್ಯಮ ತೀವ್ರತೆಯ ಅಪೌಷ್ಟಿಕಾಂಶದಿಂದ ಬಳಲುತ್ತಿದ್ದರು ಎಂಬ ಸಂಗತಿ ಬೆಳಕಿಗೆ ಬಂದಿದೆ.
  • 2022ರ ಜೂನ್‌ನಿಂದ ಜುಲೈವರೆಗೆ ನಡೆಸಿದ ಸಮೀಕ್ಷೆಯಲ್ಲಿ ಪರೀಕ್ಷೆಗೊಳಪಡಿಸಿದ ಮಾದರಿಗಳ ಸಂಖ್ಯೆ ಕಡಿಮೆ ಇದ್ದರೂ, ಅಪೌಷ್ಟಿಕತೆಯ ಪ್ರಮಾಣ ಗಣನೀಯವಾಗಿ ಏರಿಕೆಯಾಗಿರುವುದು ಕಂಡುಬಂದಿದೆ. 1,60,504 ಮಕ್ಕಳನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ವೇಳೆ 23,515 ಮಕ್ಕಳಲ್ಲಿ ಅಂದರೆ, ಶೇಕಡ 14.65ರಷ್ಟು ಮಕ್ಕಳಲ್ಲಿ ಅಪೌಷ್ಟಿಕತೆ ಇರುವುದು ಪತ್ತೆಯಾಗಿದೆ. 3,554 ಮಕ್ಕಳಲ್ಲಿ ಅಂದರೆ, ಶೇಕಡ 2.21ರಷ್ಟು ಮಕ್ಕಳಲ್ಲಿ ಅಪೌಷ್ಟಿಕತೆ ಹೆಚ್ಚಳವಾಗಿದೆ. ಒಟ್ಟು 19,961 ಮಕ್ಕಳು ಅಂದರೆ, ಶೇಕಡ 12.4ರಷ್ಟು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿರುವುದು ಪತ್ತೆಯಾಗಿದೆ.
  • 1990ರ ದಶಕದಲ್ಲಿ ಇದೇ ನಂದೂರ್‌ಬಾರ್‌ ಜಿಲ್ಲೆಯಲ್ಲಿ ಅಪೌಷ್ಟಿಕತೆ ಮತ್ತು ಉದ್ಯೋಗ ಲಭ್ಯತೆಯ ಬಗ್ಗೆ ಅಧ್ಯಯನ ನಡೆಸಲಾಗಿತ್ತು. ಮನರೇಗಾ ಯೋಜನೆಯ ಕೆಲಸಕ್ಕೆ ಸೀಮಿತವಾಗಿರುವ ಪ್ರದೇಶಗಳಲ್ಲಿ ಅಪೌಷ್ಟಿಕತೆಯ ಪ್ರಮಾಣ ಹೆಚ್ಚಿದೆ ಎಂಬುದನ್ನು ಈ ಅಧ್ಯಯನದಲ್ಲಿ ಕಂಡುಕೊಳ್ಳಲಾಗಿತ್ತು.
  • “ಈ ಜಿಲ್ಲೆಯಲ್ಲಿರುವ ಜನ ಅತೀ ಕಡಿಮೆ ಕೃಷಿಭೂಮಿ ಹೊಂದಿದ್ದಾರೆ. ಇವರು ಮನರೇಗಾ ಯೋಜನೆಯಡಿ ಕೆಲಸ ಸಿಗದಿದ್ದರೆ ಬೇರೆ ಊರುಗಳಿಗೆ ವಲಸೆ ಹೋಗುತ್ತಾರೆ. ಈ ವೇಳೆ ಮಕ್ಕಳನ್ನು ತಮ್ಮ ಜೊತೆ ಕರೆದುಕೊಂಡು ಹೋಗುತ್ತಾರೆ ಮತ್ತು ಅವರು ಹಳ್ಳಿಗೆ ಮರಳಿದಾಗ ಮಕ್ಕಳು ಕೂಡ ಮರಳುತ್ತಾರೆ. ಈ ವೇಳೆ ಮಕ್ಕಳು ಸೇವಿಸುವ ಆಹಾರದಲ್ಲಿ ಉಂಟಾಗುವ ವ್ಯತ್ಯಾಸ ಅಪೌಷ್ಟಿಕತೆಗೆ ಕಾರಣವಾಗುತ್ತದೆ,” ಎನ್ನುತ್ತಾರೆ ಆರೋಗ್ಯ ಮತ್ತು ಹಣಕಾಸು ತಜ್ಞ ರವಿ ದುಗ್ಗಲ್.

ಈ ಸುದ್ದಿ ಓದಿದ್ದೀರಾ?ದೇಶಾದ್ಯಂತ ಹೆಚ್ಚುತ್ತಲೇ ಇದೆ ಡೆಂಗಿ ಮತ್ತು ಹಂದಿ ಜ್ವರ ಸೋಂಕಿತರ ಸಂಖ್ಯೆ | 10 ಮುಖ್ಯ ಅಂಶ

ಮುಖ್ಯಚಿತ್ರ ಕೃಪೆ: ಸುಚಿತ್ ನಂದಾ
ನಿಮಗೆ ಏನು ಅನ್ನಿಸ್ತು?
1 ವೋಟ್
eedina app