
ಭಾರತದ ಮೊದಲ ಮಂಕಿಪಾಕ್ಸ್ ಪ್ರಕರಣ ನೆರೆಯ ರಾಜ್ಯ ಕೇರಳದಲ್ಲಿ ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಕೂಡ ಮುನ್ನೆಚ್ಚರಿಕೆಯ ಕ್ರಮಗಳಿಗೆ ಮುಂದಾಗಿದೆ ಎಂದು ಆರೋಗ್ಯ ಇಲಾಖೆ ಆಯುಕ್ತ ಡಿ ರಂದೀಪ್ ಈ ದಿನ.ಕಾಮ್ಗೆ ಮಾಹಿತಿ ನೀಡಿದ್ದಾರೆ.
”ಮಂಕಿಪಾಕ್ಸ್ಗೆ ಸಂಬಂಧಪಟ್ಟಂತೆ ಇಂದು (ಜುಲೈ 15) ತಾಂತ್ರಿಕ ಸಲಹಾ ಸಮಿತಿ ಸಭೆ ನಡೆಯಲಿದೆ. ನಾಳೆಯೊಳಗೆ ಮಾರ್ಗಸೂಚಿ ಬಿಡುಗಡೆ ಮಾಡಲಾಗುವುದು. ಶಂಕಿತ ಸೋಂಕಿತರನ್ನು ಪ್ರತ್ಯೇಕವಾಗಿಡುವುದು (ಐಸೋಲೇಷನ್) ಹೇಗೆ, ಯಾವ ರೀತಿಯ ಪರೀಕ್ಷಾ ಕ್ರಮ ಅನುಸರಿಸಬೇಕು, ರಾಜ್ಯದ ಗಡಿಗಳಲ್ಲಿ ಮುನ್ನೆಚ್ಚರಿಕೆ ಕ್ರಮಗಳೇನು ಎಂಬ ಅಂಶಗಳು ಮಾರ್ಗಸೂಚಿಯಲ್ಲಿ ಇರಲಿವೆ,” ಎಂದು ಆಯುಕ್ತರು ತಿಳಿಸಿದ್ದಾರೆ.
ಕೊಲ್ಲಂ ವ್ಯಕ್ತಿಯಲ್ಲಿ ಸೋಂಕು ಪತ್ತೆ
ದೇಶದ ಮೊದಲ ಮಂಕಿಪಾಕ್ಸ್ ಪ್ರಕರಣ ಕೇರಳದಲ್ಲಿ ದೃಢಪಟ್ಟಿದ್ದು, ಸೋಂಕಿತ ವ್ಯಕ್ತಿ ಜುಲೈ 11ರಂದು ಯುನೈಟೆಡ್ ಅರಬ್ ಎಮಿರೇಟ್ಸ್ನಿಂದ (ಯುಎಇ) ಕೇರಳಕ್ಕೆ ಬಂದಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
“ಕೇರಳದ ಕೊಲ್ಲಂಗೆ ವಿದೇಶದಿಂದ ಬಂದ ವ್ಯಕ್ತಿಯಲ್ಲಿ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿದ್ದವು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಅವರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ,” ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿಕೆ ನೀಡಿದ್ದಾರೆ.
ಕೇಂದ್ರದಿಂದ ವಿಶೇಷ ತಂಡ
ಕೊಲ್ಲಂನಲ್ಲಿ ಮಂಕಿಪಾಕ್ಸ್ ಪ್ರಕರಣ ದೃಢಪಡುತ್ತಿದ್ದಂತೆ ಕೇಂದ್ರ ಆರೋಗ್ಯ ಸಚಿವಾಲಯ ಕೇರಳ ಸರ್ಕಾರದ ನೆರವಿಗೆ ಧಾವಿಸಲು ತಂಡವೊಂದನ್ನು ನಿಯೋಜಿಸಿದೆ. ಕೇಂದ್ರದ ತಂಡದಲ್ಲಿ ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರದ ತಜ್ಞರು, ಕೇರಳದ ಎಂ ಎಲ್ ಆಸ್ಪತ್ರೆ ಹಾಗೂ ಕುಟುಂಬ ಕಲ್ಯಾಣ ಇಲಾಖೆಯ ಪ್ರಾದೇಶಿಕ ಅಧಿಕಾರಿಗಳನ್ನು ಒಳಗೊಂಡಿದೆ.
ಈ ಸುದ್ದಿ ಓದಿದ್ದೀರಾ?: ಸುದ್ದಿ ವಿವರ | ಅಸ್ಸಾಂನಲ್ಲಿ ಜಪಾನೀಸ್ ಎನ್ಸೆಫಾಲಿಟಿಸ್ ವೈರಸ್ಗೆ 19 ಮಂದಿ ಬಲಿ
ರೋಗ ಲಕ್ಷಣಗಳಿರುವ ವ್ಯಕ್ತಿಯ ರಕ್ತದ ಮಾದರಿಯನ್ನು ಭಾರತೀಯ ವೈರಾಣು ಸಂಶೋಧನಾ ಸಂಸ್ಥೆಗೆ ವೈರಸ್ ದೃಢೀಕರಣ ಪರೀಕ್ಷೆಗಾಗಿ ಕಳುಹಿಸಲಾಗಿತ್ತು. ನಂತರ ಬಂದ ವರದಿಯಲ್ಲಿ ವ್ಯಕ್ತಿಗೆ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಕೊಲ್ಲಂನ ಈ ವ್ಯಕ್ತಿಯು ವಿದೇಶದಲ್ಲಿ ಸೋಂಕಿತ ವ್ಯಕ್ತಿಯೊಬ್ಬರ ನಿಕಟ ಸಂಪರ್ಕದಲ್ಲಿದ್ದರು ಎಂದು ತಿಳಿದುಬಂದಿದೆ.
"ರೋಗಿಯ ಸ್ಥಿತಿ ಸ್ಥಿರವಾಗಿದೆ. ಸೋಂಕುಪೀಡಿತನ ಸಂಪರ್ಕಕ್ಕೆ ಬಂದ ತಂದೆ-ತಾಯಿ, ಟ್ಯಾಕ್ಸಿ ಚಾಲಕ, ಆಟೋ ಚಾಲಕ ಹಾಗೂ ವಿಮಾನದಲ್ಲಿ ಈತನ ಜೊತೆಯಾಗಿ ಪ್ರಯಾಣಿಸಿದ 11 ಮಂದಿ ಸಹ ಪ್ರಯಾಣಿಕರನ್ನು ಗುರುತಿಸಲಾಗಿದೆ,” ಎಂದಿದ್ದಾರೆ ಆರೋಗ್ಯ ಸಚಿವೆ ವೀಣಾ.
ಕೇರಳ ಸರ್ಕಾರದ ಮಾರ್ಗಸೂಚಿ
ಮಂಕಿಪಾಕ್ಸ್ ಸೋಂಕು ಪತ್ತೆ ಹಿನ್ನೆಲೆಯಲ್ಲಿ ಕೇರಳ ಆರೋಗ್ಯ ಇಲಾಖೆಯು 'ಮಂಕಿಪಾಕ್ಸ್ ಮಾರ್ಗಸೂಚಿ' ಬಿಡುಗಡೆ ಮಾಡಿದೆ.
ವಿದೇಶದಿಂದ ಬರುವವರ ಮೇಲೆ ಹೆಚ್ಚಿನ ನಿಗಾ ವಹಿಸಬೇಕು; ಸೋಂಕಿತ ವ್ಯಕ್ತಿ ಆಸ್ಪತ್ರೆಗೆ ಬಂದಲ್ಲಿ ಪ್ರತ್ಯೇಕ ಚಿಕಿತ್ಸೆ ವ್ಯವಸ್ಥೆ ಮಾಡಬೇಕು ಮತ್ತು ಸೋಂಕಿತರ ಸಂಪರ್ಕಕ್ಕೆ ಬಂದವರ ಪತ್ತೆ ಮಾಡಬೇಕು; ಸೋಂಕಿನ ಶಂಕೆ ಇದ್ದವರ ಮಾದರಿ ಸಂಗ್ರಹಿಸಿ ಭಾರತೀಯ ವೈರಾಣು ಸಂಶೋಧನಾ ಸಂಸ್ಥೆಗೆ ರವಾನಿಸಬೇಕು; ಸೋಂಕಿತರನ್ನು ಇತರರಿಂದ ಪ್ರತ್ಯೇಕವಾಗಿಡುವ (ಕ್ವಾರಂಟೈನ್) ಕ್ರಮ ಪಾಲನೆ; ರೋಗಿ ಬಳಸಿದ ಹಾಸಿಗೆ ಸೇರಿದಂತೆ ಯಾವುದೇ ವಸ್ತುಗಳು ಇತರರ ಸಂಪರ್ಕಕ್ಕೆ ಬರದಂತೆ ಮುನ್ನೆಚ್ಚರಿಕೆ ವಹಿಸಬೇಕು; ಸೋಂಕಿತರ ಸಂಪರ್ಕವಾದಲ್ಲಿ ಸಾಬೂನು ಅಥವಾ ಸ್ಯಾನಿಟೈಜರ್ ಬಳಸಿ ಕೈ ತೊಳೆಯಬೇಕು; ಸೋಂಕಿತರಿಗೆ ಚಿಕಿತ್ಸೆ ನೀಡುವ ಆಸ್ಪತ್ರೆ ಸಿಬ್ಬಂದಿಗೆ ಕೈಗವಸು ಮತ್ತು ಮಾಸ್ಕ್ ಬಳಕೆ ಕಡ್ಡಾಯ - ಇವು ಮಾರ್ಗಸೂಚಿಯಲ್ಲಿರುವ ಮುಖ್ಯಾಂಶಗಳು.
ಪಶ್ಚಿಮ ಬಂಗಾಳದ ಪ್ರಕರಣ ಬಾಕಿ
ಕೆಲವು ದಿನಗಳ ಹಿಂದೆ ಪಶ್ಚಿಮ ಬಂಗಾಳದಲ್ಲಿ ಮಂಕಿಪಾಕ್ಸ್ ಶಂಕೆಯ ಮೊದಲ ಪ್ರಕರಣ ದಾಖಲಾಗಿತ್ತು. ಪಶ್ಚಿಮ ಮಿಡ್ನಾಪುರದ ಯುವಕನೊಬ್ಬನಲ್ಲಿ ಸೋಂಕು ಇರುವ ಬಗ್ಗೆ ಸಂಶಯ ವ್ಯಕ್ತವಾಗಿತ್ತು.
"ಶಂಕಿತ ವ್ಯಕ್ತಿಯ ರಕ್ತದ ಮಾದರಿಯನ್ನು ಭಾರತೀಯ ವೈರಾಣು ಸಂಶೋಧನಾ ಸಂಸ್ಥೆಗೆ ಪರೀಕ್ಷೆಗಾಗಿ ಕಳುಹಿಸಲಾಗಿದ್ದು, ವರದಿಗಾಗಿ ಕಾಯಲಾಗುತ್ತಿದೆ. ಸದ್ಯ ಯುವಕನನ್ನು ಕ್ವಾರಂಟೈನ್ ಮಾಡಲಾಗಿದೆ. ಪರೀಕ್ಷಾ ವರದಿ ಬರುವವರೆಗೆ ಮನೆಯಿಂದ ಹೊರ ಹೋಗದಂತೆ ಮತ್ತು ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವಂತೆ ಆತನ ಕುಟುಂಬಕ್ಕೆ ತಿಳಿಸಲಾಗಿದೆ," ಎಂದಿದೆ ಅಸ್ಸಾಂ ಆರೋಗ್ಯ ಇಲಾಖೆ ಪ್ರಕಟಣೆ.