ಒಂದು ನಿಮಿಷದ ಓದು | ಸಾಂಕ್ರಾಮಿಕವಲ್ಲದ ರೋಗಗಳಿಗೆ ಬಲಿಯಾಗುತ್ತಿರುವವರ ಸಂಖ್ಯೆ ಹೆಚ್ಚಳ: ವಿಶ್ವ ಆರೋಗ್ಯ ಸಂಸ್ಥೆ

Non Communicable

ವಿಶ್ವಾದ್ಯಂತ ಸಂಭವಿಸುವ ಸಾವುಗಳ ಬಹುಪಾಲು ಸಾಂಕ್ರಾಮಿಕವಲ್ಲದ ರೋಗಗಳಿಂದ ಸಂಭವಿಸುತ್ತವೆ ಎಂದಿದೆ ವಿಶ್ವ ಆರೋಗ್ಯ ಸಂಸ್ಥೆಯ ವರದಿ. 'ಇನ್‌ವಿಸಿಬಲ್‌ ನಂಬರ್ಸ್‌' (ಕಣ್ಣಿಗೆ ಕಾಣದ ಅಂಕಿ-ಸಂಖ್ಯೆಗಳು) ಎಂಬ ಶೀರ್ಷಿಕೆಯಡಿ ಅಮೆರಿಕದ ಜನರಲ್‌ ಅಸೆಂಬ್ಲಿಯಲ್ಲಿ ಈ ವರದಿಯನ್ನು ಮಂಡಿಸಲಾಗಿದೆ.

ವರದಿಯ ಪ್ರಕಾರ, ಸಾಂಕ್ರಾಮಿಕವಲ್ಲದ ಹೃದಯ ಸಂಬಂಧಿ ಕಾಯಿಲೆ, ಕ್ಯಾನ್ಸರ್‌, ಮಧುಮೇಹ ಹಾಗೂ ಉಸಿರಾಟ ಕಾಯಿಲೆಗಳಿಂದ ಪ್ರತಿ ವರ್ಷ 170 ಮಿಲಿಯನ್ (170 ಲಕ್ಷ) ಮಂದಿ 70 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಸಾವಿಗೀಡಾಗುತ್ತಿದ್ದಾರೆ.

"ಹೀಗೆ ಸಂಭವಿಸುವ ಸಾವುಗಳಲ್ಲಿ ಶೇಕಡ 86ರಷ್ಟು ಮಧ್ಯಮ ಪ್ರಮಾಣದ ಆದಾಯ ಮತ್ತು ಕಡಿಮೆ ಆದಾಯ ಇರುವ ದೇಶಗಳಲ್ಲಿ ಸಂಭವಿಸುತ್ತವೆ. ರೋಗ ತಡೆಗೆ ಕ್ರಮ, ಚಿಕಿತ್ಸೆ ಹಾಗೂ ಆರೋಗ್ಯ ಸೌಲಭ್ಯಗಳು ದೊರೆತರೆ ಈ ಸಾವುಗಳನ್ನು ತಪ್ಪಿಸಬಹುದು ಅಥವಾ ಸಾವನ್ನು ಮುಂದೂಡಬಹುದು," ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಸಾಂಕ್ರಾಮಿಕವಲ್ಲದ ರೋಗಗಳಿಗೆ ಬಲಿಯಾಗುತ್ತಿರುವವರ ಸಂಖ್ಯೆ ಅಪಾಯಕಾರಿ ಮಟ್ಟದಲ್ಲಿದ್ದು, ಇವುಗಳನ್ನು ತಡೆಯಲು ಕೆಲವೇ ದೇಶಗಳು ಪ್ರಯತ್ನಿಸುತ್ತಿವೆ. ಪ್ರತೀ ಎರಡು ಸೆಕೆಂಡ್‌ಗೆ 70 ವರ್ಷಕ್ಕಿಂತ ಕಡಿಮೆ ವಯಸ್ಸಿನ ಒಬ್ಬರು ಸಾಂಕ್ರಾಮಿಕವಲ್ಲದ ಕಾಯಿಲೆಗೆ ಬಲಿಯಾಗುತ್ತಿದ್ದಾರೆ ಎಂದು ವರದಿ ಆತಂಕ ವ್ಯಕ್ತಪಡಿಸಿದೆ.

ಸಾಂಕ್ರಾಮಿಕವಲ್ಲದ ರೋಗಗಳ ಪೈಕಿ ಹೃದಯ ರಕ್ತನಾಳ ಸಂಬಂಧಿ ಕಾಯಿಲೆಯಿಂದ ಹೆಚ್ಚಿನ ಸಾವುಗಳು ಸಂಭವಿಸುತ್ತಿವೆ. ವಾರ್ಷಿಕವಾಗಿ ಸರಾಸರಿ 17.9 ದಶಲಕ್ಷ ಜನ ಈ ಕಾಯಿಲೆಗೆ ಬಲಿಯಾಗುತ್ತಿದ್ದಾರೆ. 9.3 ದಶಲಕ್ಷ ಮಂದಿ ಕ್ಯಾನ್ಸರ್‌ನಿಂದ, ದೀರ್ಘಕಾಲದ ಉಸಿರಾಟ ತೊಂದರೆಯಿಂದ 4.1 ದಶಲಕ್ಷ ಹಾಗೂ ಮಧುಮೇಹದಿಂದ ಎರಡು ದಶಲಕ್ಷ ಮಂದಿ ಸಾವಿಗೀಡಾಗುತ್ತಿದ್ದಾರೆ. ತಂಬಾಕು ಸೇವನೆ, ದೈಹಿಕ ನಿಷ್ಕ್ರಿಯತೆ, ಅತಿಯಾದ ಮದ್ಯದ ಬಳಕೆ ಹಾಗೂ ಆರೋಗ್ಯಕರವಲ್ಲದ ಆಹಾರ ಸೇವನೆಯಿಂದ ಸಹ ಜನ ಸಾವಿಗೀಡಾಗುತ್ತಿದ್ದಾರೆ ಎಂಬುದು ವರದಿಯಿಂದ ಬೆಳಕಿಗೆ ಬಂದಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್