
ಕೋವಿಡ್-19 ಪ್ರಪಂಚದಾದ್ಯಂತ ಕಡಿಮೆಯಾಗುತ್ತಿದ್ದರೂ, ಒಮಿಕ್ರಾನ್ ವೈರಸ್ನ ರೂಪಾಂತರಿಗಳು ಹಲವು ದೇಶಗಳಲ್ಲಿ ನಿರಂತರ ಹರಡುತ್ತಲೇ ಸಾಗಿವೆ.
ಅಮೆರಿಕದಲ್ಲಿ ಬಿ.ಎ 5 ವೈರಸ್ ಹೆಚ್ಚು ಪ್ರಬಲವಾಗಿದ್ದು, ಇದರ ರೂಪಾಂತರಿಗಳು ಸಹ ಪತ್ತೆಯಾಗಿವೆ. ಬಿ.ಕ್ಯೂ 1 ಮತ್ತು ಬಿ.ಕ್ಯೂ 1.1 ಎಂದು ಕರೆಯಲ್ಪಡುವ ವೈರಸ್ ಸೋಂಕಿಗೆ ಹೆಚ್ಚು ಮಂದಿ ತುತ್ತಾಗುತ್ತಿದ್ದಾರೆ. ಸಿಂಗಾಪುರದಲ್ಲಿ ಎಕ್ಸ್.ಬಿ.ಬಿ ರೂಪಾಂತರಿ ಪತ್ತೆಯಾಗಿತ್ತು. ಹಾಂಗ್ಕಾಂಗ್ನಲ್ಲಿ ಈ ವೈರಸ್ ಹೆಚ್ಚು ಹರಡುವ ಭೀತಿ ಇದೆ. ಆದರೆ, ಅಮೆರಿಕದಲ್ಲಿ ಈ ವೈರಸ್ನ ಯಾವುದೇ ಪ್ರಕರಣ ಪತ್ತೆಯಾಗಿಲ್ಲ. ಸದ್ಯ ಜನರು ತೆಗೆದುಕೊಂಡಿರುವ ಲಸಿಕೆ ವೈರಸ್ನಿಂದ ಆಗಬಹುದಾದ ಹೆಚ್ಚಿನ ಅನಾರೋಗ್ಯ ತಡೆಯುತ್ತದೆ ಎನ್ನುತ್ತಾರೆ ಆರೋಗ್ಯ ತಜ್ಞರು.
ಹಾಂಗ್ಕಾಂಗ್ನಲ್ಲಿ 140 ಎಕ್ಸ್.ಬಿ.ಬಿ ಸೋಂಕು, ಅಕ್ಟೋಬರ್ 10ರಂದು ವಿದೇಶ ಪ್ರಯಾಣ ಮಾಡಿದವರ ಮೂಲಕ ಹರಡಿರುವುದು ಪತ್ತೆಯಾಗಿತ್ತು. ಸದ್ಯ 'ಬಿ.ಎ.5'ನಂತಹ ವೈರಸ್ಗಳು ಹೆಚ್ಚು ಸೋಂಕಿಗೆ ಕಾರಣವಾಗುತ್ತಿವೆ. ಕಳೆದ ಎರಡು ವಾರಗಳಲ್ಲಿ ಶೇಕಡ 95.1ರಷ್ಟು ಬಿ.ಎ.5 ವೈರಸ್ ಪ್ರಕರಣ ದಾಖಲಾಗಿವೆ. ಶೇಕಡ 0.1ಕ್ಕಿಂತ ಕಡಿಮೆ ಎಕ್ಸ್.ಬಿ.ಬಿ ವೈರಸ್ ಸೋಂಕಿನ ಪ್ರಕರಣಗಳು ದಾಖಲಾಗಿವೆ. ಆದರೆ, ಇತರೆ ರೂಪಾಂತರಿಗಳಿಗಿಂತ ಎಕ್ಸ್.ಬಿ.ಬಿ ವೈರಸ್ ಹೆಚ್ಚು ಅಪಾಯಕಾರಿ ಎನ್ನುವುದಕ್ಕೆ ಯಾವುದೇ ಪುರಾವೆಗಳು ಇನ್ನೂ ಪತ್ತೆಯಾಗಿಲ್ಲ.
ಸಿಂಗಾಪುರದಲ್ಲಿ ಅಕ್ಟೋಬರ್ 17ಕ್ಕೆ ಕೊನೆಯಾದ ವಾರದಲ್ಲಿ 60,000 ಪ್ರಕರಣ ದಾಖಲಾಗಿದ್ದವು. ಈ ವಾರದ ಹಿಂದೆ 41,000 ಪ್ರಕರಣ ದಾಖಲಾಗಿದ್ದವು. ನವೆಂಬರ್ ಮಧ್ಯದ ವೇಳೆಗೆ ದೈನಂದಿನ ಸೋಂಕಿನ ಪ್ರಕರಣಗಳು 15,000ಕ್ಕೆ ತಲುಪುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಎಕ್ಸ್.ಬಿ.ಬಿ ವೈರಸ್ ಸಿಂಗಾಪುರದಲ್ಲಿ ಹೆಚ್ಚು ಹರಡುತ್ತಿದ್ದು, ಇಲ್ಲಿನ ಶೇಕಡ 54ರಷ್ಟು ಪ್ರಕರಣಗಳಿಗೆ ಇದೇ ವೈರಸ್ ಕಾರಣ ಎಂದು ಗುರುತಿಸಲಾಗಿದೆ. ಒಂದು ವಾರದಲ್ಲಿ ಶೇಕಡ 22ರಷ್ಟು ಪ್ರಕರಣಗಳು ಏರಿಕೆ ಕಂಡಿದೆ.
ಆಸ್ಟ್ರೇಲಿಯಾ, ಜಪಾನ್ ಹಾಗೂ ಡೆನ್ಮಾರ್ಕ್ ಸೇರಿದಂತೆ ಕನಿಷ್ಠ 17 ದೇಶಗಳಲ್ಲಿ ಹೊಸ ವೈರಸ್ ಪತ್ತೆಯಾಗಿದೆ. ಈ ದೇಶದ ಜನರಿಗೆ ಬೂಸ್ಟರ್ ಡೋಸ್ ಪಡೆಯಲು ಸಲಹೆ ನೀಡಲಾಗಿದೆ. ಇನ್ನು, ಭಾರತದಲ್ಲಿ ಅನೇಕ ರೂಪಾಂತರಿಗಳು ಪತ್ತೆಯಾಗಿದ್ದು, ಜನರಿಗೆ ಎಚ್ಚರಿಕೆಯಿಂದಿರಲು ಆರೋಗ್ಯ ತಜ್ಞರು ಸಲಹೆ ನೀಡಿದ್ದಾರೆ.