ಸುದ್ದಿ ವಿವರ | 108 ಆ್ಯಂಬುಲೆನ್ಸ್‌ ಸೇವೆ ಸಿಗದೆ ಜನರ ಪರದಾಟ; ಇದುವರೆಗೆ ಆಗಿದ್ದೇನು, ಕೈಗೊಂಡ ಕ್ರಮಗಳೇನು?

Ambulance

ರಾಜ್ಯಾದ್ಯಂತ 108 ಆರೋಗ್ಯ ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆ. ತಾಂತ್ರಿಕ ಸಮಸ್ಯೆಯಿಂದಾಗಿ ಶನಿವಾರದಿಂದ ಆ್ಯಂಬುಲೆನ್ಸ್‌ ಸಿಬ್ಬಂದಿ ಸಂಪರ್ಕಕ್ಕೆ ಸಿಗುತ್ತಿಲ್ಲ. ಆಸ್ಪತ್ರೆಗೆ ತೆರಳಲು ಆ್ಯಂಬುಲೆನ್ಸ್‌ ಅಗತ್ಯವಿರುವ ರೋಗಿಗಳು ಪರದಾಡುವಂತಾಗಿದೆ. ಅಡಚಣೆಗಳನ್ನು ನಿವಾರಿಸುವ ಭರವಸೆ ನೀಡಿರುವ ಆರೋಗ್ಯ ಇಲಾಖೆ ಪರ್ಯಾಯ ವ್ಯವಸ್ಥೆಗೆ ಹೆಣಗುತ್ತಿದೆ. ಈ ಕುರಿತ ವಿವರ ಇಲ್ಲಿದೆ

ಸದ್ಯದ ಸಮಸ್ಯೆ ಏನು?

ತಾಂತ್ರಿಕ ಸಮಸ್ಯೆಯಿಂದಾಗಿ ಆರೋಗ್ಯ ಕವಚ ಯೋಜನೆಯಲ್ಲಿ ವ್ಯತ್ಯಯ ಉಂಟಾಗಿದ್ದು, 108 ಆ್ಯಂಬುಲೆನ್ಸ್ ಸೇವೆಯಲ್ಲಿ ಏರುಪೇರು ಉಂಟಾಗಿದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ತುರ್ತು ಸೇವಾ ವ್ಯವಸ್ಥೆ ಅಸ್ಥವ್ಯಸ್ಥವಾಗಿದೆ.

ಸಮಸ್ಯೆ ಉಂಟಾಗಿದ್ದು ಹೇಗೆ?

108 ತುರ್ತು ಕರೆ ವ್ಯವಸ್ಥೆಯಲ್ಲಿನ ಸರ್ವರ್ ಡೌನ್ ಆದ ಕಾರಣ ತಾಂತ್ರಿಕ ಸಮಸ್ಯೆಯುಂಟಾಗಿದೆ. ಹೀಗಾಗಿ, ಈ ಸಂಖ್ಯೆಗೆ ಕರೆ ಬಂದರೂ ಸ್ವೀಕರಿಸಲು ಸಾಧ್ಯವಾಗುತ್ತಿಲ್ಲ. ಅಂದರೆ, 108 ಸಂಖ್ಯೆಗೆ ಕರೆ ಮಾಡುವ ಇಂಟಿಗ್ರೇಟೆಡ್‌ ನಂಬರ್‌ನ ಸರ್ವರ್‌ ಸಮಸ್ಯೆಯಾಗಿದೆ. ಆದ್ದರಿಂದ, ಈ ಲೈನ್‌ಗೆ ಬರುತ್ತಿರುವ ಕರೆಗಳನ್ನು ಸಿಬ್ಬಂದಿ ಸ್ವೀಕರಿಸಲಾಗುತ್ತಿಲ್ಲ. ಇಡೀ ಸಮಸ್ಯೆಗೆ ಇದು ಮೂಲ ಕಾರಣ.

ಈ ಹಿಂದೆ ಇಂಥದ್ದೇ ಸಮಸ್ಯೆಯಾಗಿತ್ತೇ?

"108 ಸೇವೆ ಆರಂಭವಾದಾಗಿನಿಂದ ಮೊದಲ ಬಾರಿ ನಾವು ಈ ಸಮಸ್ಯೆ ಎದುರಿಸುತ್ತಿದ್ದೇವೆ. ಈ ಮೊದಲು ಯಾವತ್ತೂ ಈ ರೀತಿಯ ತಾಂತ್ರಿಕ ಸಮಸ್ಯೆ ಎದುರಾಗಿರಲಿಲ್ಲ," ಎನ್ನುತ್ತಾರೆ 108ನ ಜಿಲ್ಲಾ ಮ್ಯಾನೇಜರ್‌ ಗುರುರಾಜ್‌ ನಾಯಕ್‌.

ಈ ಸುದ್ದಿ ಓದಿದ್ದೀರಾ?: ಸುದ್ದಿ ವಿವರ | ಸಂತಾನಹರಣ ಶಸ್ತ್ರಚಿಕಿತ್ಸೆ; ಹಳೇ ಪದ್ಧತಿಗೆ ಜೋತುಬಿದ್ದು ಮಹಿಳೆಯರ ಪ್ರಾಣಕ್ಕೆ ಕುತ್ತು ತಂದ ತೆಲಂಗಾಣ

ಸದ್ಯ ಕೈಗೊಂಡಿರುವ ಕ್ರಮಗಳೇನು?

"ಆರೋಗ್ಯ ಇಲಾಖೆಗೆ ಯಾವುದೇ ಕರೆ ಬಂದರೂ 108 ಸಿಬ್ಬಂದಿಗೆ ತಿಳಿಸಲು ಕೇಳಿಕೊಳ್ಳಲಾಗಿದೆ. 108ಗೆ ಸಂಬಂಧಿಸಿದ ಸಿಬ್ಬಂದಿ ಸಂಖ್ಯೆ ಹೊಂದಿರುವ ಎಲ್ಲ ಅಧಿಕಾರಿಗಳು, ವೈದ್ಯರು, ನರ್ಸ್‌ಗಳು ಹಾಗೂ ಆಶಾ ಕಾರ್ಯಕರ್ತರಿಗೆ ಸ್ಥಳೀಯರು ಕರೆ ಮಾಡಿ, ಅವರ ಸಹಾಯದಿಂದ ಆ್ಯಂಬುಲೆನ್ಸ್‌ ಸಂಪರ್ಕಿಸಬಹುದು. ಇಲ್ಲವೇ, ಇವರುಗಳಲ್ಲಿ ಯಾರಿಗೆ ಕರೆ ಮಾಡಿದರೂ ನಮ್ಮನ್ನು ಸಂಪರ್ಕಿಸುತ್ತಾರೆ. ನಾವು ಅಲ್ಲಿನ ಚಾಲಕರನ್ನು ಸಂಪರ್ಕಿಸಿ ಆ್ಯಂಬುಲೆನ್ಸ್‌ ವ್ಯವಸ್ಥೆ ಮಾಡಲಿದ್ದೇವೆ. ಯಾರೇ ನೇರವಾಗಿ 108 ಚಾಲಕರಿಗೆ ಕರೆ ಮಾಡಿದರೂ ಆಸ್ಪತ್ರೆಯವರು ಅಥವಾ ಆರೋಗ್ಯ ಸಿಬ್ಬಂದಿ ಸೇವೆ ಒದಗಿಸಲಿದ್ದಾರೆ. ಆದಷ್ಟು ಬೇಗ ವ್ಯವಸ್ಥೆಯನ್ನು ಸರಿಪಡಿಸಲಾಗುವುದು," ಎನ್ನುತ್ತಾರೆ ಗುರುರಾಜ್‌ ನಾಯಕ್‌. 

ಆರೋಗ್ಯ ಸಚಿವರು ಹೇಳಿದ್ದೇನು?

ರಾಜ್ಯಾದ್ಯಂತ ಉಂಟಾದ ಆ್ಯಂಬುಲೆನ್ಸ್‌ ವ್ಯತ್ಯಯಕ್ಕೆ ಸಂಬಂಧಿಸಿದಂತೆ ಟ್ವೀಟ್‌ನಲ್ಲಿ ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವ ಕೆ ಸುಧಾಕರ್‌, ಆದಷ್ಟು ಬೇಗ ಸಮಸ್ಯೆ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದ್ದಾರೆ. "ತಾಂತ್ರಿಕ ಸಮಸ್ಯೆಯಿಂದ 108 ಆರೋಗ್ಯ ಕವಚ ಆ್ಯಂಬುಲೆನ್ಸ್‌ ಸೇವೆಗಳಲ್ಲಿ ವ್ಯತ್ಯಯ ಉಂಟಾಗಿದ್ದು, ತಾಂತ್ರಿಕ ಅಡಚಣೆಗಳನ್ನು ನಿವಾರಿಸಲು, ತಾತ್ಕಾಲಿಕವಾಗಿ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಎಲ್ಲ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಆ್ಯಂಬುಲೆನ್ಸ್‌ ಡ್ರೈವರ್‌ಗಳಿಗೆ ತಮ್ಮ ಮೊಬೈಲ್ ಮೂಲಕ ಆಸ್ಪತ್ರೆಗಳಿಂದ ನೇರವಾಗಿ ಕರೆಗಳನ್ನು ಸ್ವೀಕರಿಸಲು ಸಹ ಸೂಚನೆ ನೀಡಲಾಗಿದೆ. 108, 112 ಕಾಲ್ ಸೆಂಟರ್‌ಗಳಲ್ಲಿ ಹೆಚ್ಚು ಕರೆ ಸ್ವೀಕರಿಸಲು ಅನುಕೂಲವಾಗುವಂತೆ ಪ್ರಸ್ತುತ ಇರುವ ಸಿಬ್ಬಂದಿ ಜೊತೆಗೆ ಹೆಚ್ಚುವರಿ ಸಿಬ್ಬಂದಿ ನಿಯೋಜಿಸಲು ಕ್ರಮ ಕೈಗೊಳ್ಳಲಾಗುತ್ತಿದೆ," ಎಂಬುದು ಆರೋಗ್ಯ ಸಚಿವರ ಟ್ವೀಟ್‌ ಸಾರ.

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180