
ಇಂಡಿಯಾದಲ್ಲಿ ಶೇ.50ರಿಂದ 60ರಷ್ಟು ಮಹಿಳೆಯರು ಮತ್ತು ಮಕ್ಕಳು ರಕ್ತಹೀನತೆಯಿಂದ ಬಳಲುತ್ತಿದ್ದಾರೆ ಎಂಬ ಅಂದಾಜಿದೆ. ತಾಯಂದಿರ ಮರಣಕ್ಕೆ ಇದೂ ಪ್ರಮುಖ ಕಾರಣ. ಹಾಗಾದರೆ, ರಕ್ತಹೀನತೆ ಎಂದರೇನು, ಆರೋಗ್ಯದ ಮೇಲೆ ಇದರ ಪರಿಣಾಮವೇನು, ಪರಿಹಾರವೇನು? ಮಾತನಾಡಿದ್ದಾರೆ - ಬೆಂಗಳೂರಿನ ಡಾಕ್ಟರ್ ಸಿಲ್ವಿಯಾ ಕರ್ಪಗಮ್
- ರಕ್ತದಲ್ಲಿ ಕೆಂಪು ರಕ್ತಕಣಗಳು ಅಥವಾ ಹಿಮೋಗ್ಲೋಬಿನ್ ಕೊರತೆ ಇರುವಾಗ ರಕ್ತಹೀನತೆ ಉಂಟಾಗುತ್ತದೆ. ರಕ್ತಹೀನತೆ ದೇಹದಲ್ಲಿ ಆಯಾಸ, ಕಿರಿಕಿರಿ, ಏಕಾಗ್ರತೆ ಕೊರತೆ, ನಿದ್ರಾಹೀನತೆ ಹಾಗೂ ಉಸಿರಾಟದಲ್ಲಿ ಸಮಸ್ಯೆಗೆ ಕಾರಣವಾಗುತ್ತದೆ.
- ಮಕ್ಕಳಲ್ಲಿ ದೈಹಿಕ ಮತ್ತು ಮಾನಸಿಕ ಅಡ್ಡ ಪರಿಣಾಮಕ್ಕೆ ಕಾರಣವಾಗುತ್ತದೆ. ರಕ್ತಿಹೀನತೆ ಅನುಭವಿಸುತ್ತಿರುವ ಮಕ್ಕಳು ಇತರೆ ಸೋಂಕುಗಳಿಗೆ ಬೇಗ ತುತ್ತಾಗುವ ಸಾಧ್ಯತೆಗಳಿವೆ.
- ರಕ್ತಹೀನತೆ ಹೆಚ್ಚಾಗಿ ಮಹಿಳೆಯರಲ್ಲಿ ಕಂಡುಬರುತ್ತದೆ. ಋತುಚಕ್ರದ ಸಮಯದಲ್ಲಿ ಮಹಿಳೆಯರು ರಕ್ತ ಕಳೆದುಕೊಳ್ಳುವುದು ಕೂಡ ಇದಕ್ಕೆ ಕಾರಣ. ರಕ್ತಹೀನತೆ ಇರುವ ಮಹಿಳೆಯರು ಹೆರಿಗೆ ಸಮಯದಲ್ಲಿ ಹೆಚ್ಚು ತೊಂದರೆ ಅನುಭವಿಸುತ್ತಾರೆ. ಮಗುವಿಗೆ ಜನ್ಮ ನೀಡುವ ವೇಳೆ ರಕ್ತದ ಕೊರತೆಯಿಂದ ತಾಯಿಯ ಮರಣ ಸಂಭವಿಸುವ ಸಾಧ್ಯತೆಗಳು ಹೆಚ್ಚು.
- ಕಬ್ಬಿಣ ಅಂಶದ ಕೊರತೆಯಿಂದ ಅಲ್ಸರ್, ಪೈಲ್ಸ್, ಜೀರ್ಣಾಂಗವ್ಯೂಹದ ಕಾಯಿಲೆಗಳು ಹಾಗೂ ಕ್ಯಾನ್ಸರ್ನಂತಹ ಕಾಯಿಲೆಗಳಿಂದಲೂ ರಕ್ತಹೀನತೆ ಉಂಟಾಗಬಹುದು. ಫೋಲಿಕ್ ಆಮ್ಲ ಮತ್ತು ವಿಟಮಿನ್ಗಳ ಕೊರತೆಯು ಗರ್ಭಿಣಿಯರಲ್ಲಿ ರಕ್ತಹೀನತೆಗೆ ಕಾರಣವಾಗುತ್ತದೆ. 65 ವರ್ಷ ವಯಸ್ಸಿನ ನಂತರ, ದೇಹದಲ್ಲಿ ರಕ್ತಹೀನತೆ ಉಂಟಾಗಬಹುದು.
- ಕೆಲವರಲ್ಲಿ ರಕ್ತಹೀನತೆಯ ಲಕ್ಷಣಗಳು ಕಾಣುವುದಿಲ್ಲ. ಮತ್ತೆ ಕೆಲವರಲ್ಲಿ ತಲೆ ಸುತ್ತುವುದು, ದೃಷ್ಟಿ ಮಂಜಾಗುವುದು, ತಲೆನೋವು, ಹೃದಯ ಬಡಿತ ಹೆಚ್ಚಾಗುವುದು, ಮೈ-ಕೈ ನೋವು ಮುಂತಾದ ಲಕ್ಷಣಗಳು ಕಂಡುಬರುತ್ತವೆ. ರಕ್ತಹೀನತೆ ಗಂಭೀರ ಉಸಿರಾಟದ ತೊಂದರೆಗೂ ಕಾರಣವಾಗುತ್ತದೆ.
- ಸಾಮಾನ್ಯವಾಗಿ ವೈದ್ಯರು ಕಬ್ಬಿಣ ಅಂಶಗಳಿರುವ (ಐರನ್) ಮಾತ್ರೆಗಳು ಮತ್ತು ಹಸಿ ತರಕಾರಿ ತಿನ್ನಲು ಸಲಹೆ ನೀಡುತ್ತಾರೆ. ಆದರೆ, ಇವುಗಳಿಂದಷ್ಟೇ ದೇಹದಲ್ಲಿ ಹಿಮೋಗ್ಲೋಬಿನ್ ಉತ್ಪತ್ತಿಯಾಗುವುದಿಲ್ಲ.
- ರಕ್ತಹೀನತೆ ನಿವಾರಣೆಗೆ ಪೌಷ್ಟಿಕ ಆಹಾರ ಸೇವಿಸಬೇಕು. ಮಿನರಲ್, ಪ್ರೊಟೀನ್, ವಿಟಮಿನ್, ಖನಿಜಗಳು ಬೇಕಾಗುತ್ತದೆ. ಮೊಟ್ಟೆ, ಮೀನು, ಮಾಂಸ ತಿನ್ನುವುದರಿಂದ ದೇಹಕ್ಕೆ ಬೇಕಾಗುವ ಪೌಷ್ಟಿಕ ಅಂಶಗಳು, ವಿಟಮಿನ್ ಬಿ, ಎ, ಬಿ2, ಬಿ6, ಬಿ11, ಸಿ, ವಿಟಮಿನ್ ಇ ಹಾಗೂ ಇತರ ಪೌಷ್ಟಿಕಾಂಶಗಳು.
- ಹಾಲು, ಹಣ್ಣು, ಒಣ ಹಣ್ಣುಗಳು, ಕಬ್ಬಿಣಾಂಶವಿರುವ ಪದಾರ್ಥಗಳು ಹಾಗೂ ವಿಟಮಿನ್-ಸಿ ಮತ್ತು ಫೋಲಿಕ್ ಆಮ್ಲ ಇರುವ ಆಹಾರ ಸೇವಿಸುವುದು ಉತ್ತಮ.
- ಊಟದ ಜೊತೆ ಟೀ, ಕಾಫಿ ಸೇವಿಸುವ ಅಭ್ಯಾಸ ಇದ್ದರೆ ಪೌಷ್ಟಿಕಾಂಶಗಳು ಕಡಿಮೆ ದೊರೆಯುವ ಸಂಭವ ಇರುತ್ತದೆ. ಆದ್ದರಿಂದ, ಊಟ ಮಾಡುವ ಆಸುಪಾಸಿನ ಸಮಯದಲ್ಲಿ ಟೀ, ಕಾಫಿ ಸೇವಿಸದಿದ್ದರೆ ಒಳ್ಳೆಯದು.
ಈ ಲೇಖನ ಓದಿದ್ದೀರಾ?: ಡಾಕ್ಟರ್ ಮಾತು | ಮೊಟ್ಟೆಯ ಹಳದಿ ಭಾಗ ತಿನ್ನುವುದು ಒಳ್ಳೆಯದೋ ಅಲ್ಲವೋ?