ಸುದ್ದಿ ವಿವರ | ಮಕ್ಕಳನ್ನು ಕಾಡುವ ಟೊಮೇಟೊ ಜ್ವರ; ಲಕ್ಷಣಗಳೇನು, ಮುನ್ನೆಚ್ಚರಿಕೆ ಕ್ರಮಗಳೇನು?

Tomato Flue

ಕೇರಳದಲ್ಲಿ ಇದುವರೆಗೂ 82 ಟೊಮೇಟೊ ಜ್ವರದ ಪ್ರಕರಣಗಳು ಪತ್ತೆಯಾಗಿವೆ. 'ಲ್ಯಾನ್ಸೆಟ್' ಅಧ್ಯಯನದ ಪ್ರಕಾರ, ಸೋಂಕು ಒಂದರಿಂದ ಐದು ವರ್ಷ ವಯಸ್ಸಿನ ಮಕ್ಕಳು ಮತ್ತು ರೋಗನಿರೋಧಕ ಶಕ್ತಿ ಕಡಿಮೆ ಹೊಂದಿರುವ ವಯಸ್ಕರಿಗೆ ತಗುಲುವ ಸಾಧ್ಯತೆಗಳು ಹೆಚ್ಚು. ಇನ್ನೂ ಹೆಚ್ಚಿನ ಅಧ್ಯಯನ ಅಗತ್ಯವಿರುವ ಈ ಸೋಂಕಿನ ಕುರಿತ ಸಂಕ್ಷಿಪ್ತ ವಿವರ ಇಲ್ಲಿದೆ

ಏನಿದು ಟೊಮೇಟೊ ಜ್ವರ?

ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ಮೊದಲ ಸೋಂಕಿನ ಪ್ರಕರಣ ಪತ್ತೆಯಾಗಿತ್ತು. ಈ ಜ್ವರ ಕೋವಿಡ್-19ರ ಲಕ್ಷಣಗಳನ್ನೇ ಹೊಂದಿದೆ. ಆದರೆ, ಸೋಂಕಿಗೆ ಕಾರಣವಾದ ವೈರಸ್ 'ಸಾರ್ಸ್ ಕೋವಿಡ್-2' ಕುಟುಂಬಕ್ಕೆ ಸೇರಿದ್ದಲ್ಲ ಎನ್ನಲಾಗಿದೆ. ದೇಹದಲ್ಲಿ ಕೆಂಪು ಗುಳ್ಳೆಗಳು ಕಾಣಿಸಿಕೊಂಡು, ನವೆ ಮತ್ತು ನೋವು ಉಂಟುಮಾಡುತ್ತವೆ. ಇದರಿಂದ ಜ್ವರ ಕಾಣಿಸಿಕೊಳ್ಳುತ್ತದೆ.

ಟೊಮೇಟೊ ಜ್ವರದ ಲಕ್ಷಣಗಳೇನು?

AV Eye Hospital ad

ಇದುವರೆಗಿನ ಪ್ರಕರಣಗಳನ್ನು ಆಧರಿಸಿ ಹೇಳುವುದಾದರೆ, ಈ ಸೋಂಕು ಆದಾಗ ಮಕ್ಕಳಲ್ಲಿ ಕಾಣಿಸಿಕೊಳ್ಳುವ ಪ್ರಾಥಮಿಕ ಲಕ್ಷಣಗಳು - ಚಿಕೂನ್‌ಗುನ್ಯಾ ಅಥವಾ ಡೆಂಗಿಯ ಲಕ್ಷಣಗಳನ್ನು ಹೋಲುತ್ತವೆ. ತೀವ್ರವಾದ ಜ್ವರ, ಚರ್ಮದ ಮೇಲೆ ದದ್ದುಗಳು, ಕೀಲು ನೋವು, ಮೈ ನೋವು, ಆಯಾಸ ಹೀಗೆ... ಕೊರೊನಾ ಲಕ್ಷಣಗಳನ್ನೂ ಇದು ಹೋಲುವುದರಿಂದ ಗೊಂದಲ ಕೂಡ ಸೃಷ್ಟಿಯಾಗಿದೆ. ಕೆಮ್ಮು, ನೆಗಡಿ, ಹೊಟ್ಟೆ ನೋವು, ವಾಂತಿ ಅಥವಾ ಬೇಧಿ, ಕೈ ಮತ್ತು ಮಂಡಿಗಳಲ್ಲಿ ಬಣ್ಣ ಬದಲಾವಣೆ ಕೂಡ ಈ ಸೋಕಿನ ಲಕ್ಷಣ. ಮಕ್ಕಳಿಗೆ ತುರಿಕೆಯ ಲಕ್ಷಣಗಳು, ಗುಳ್ಳೆಗಳು ಕಾಣಿಸಿಕೊಂಡರೆ ತಕ್ಷಣ ವೈದ್ಯರನ್ನು ಭೇಟಿ ಮಾಡುವುದು ಒಳ್ಳೆಯದು.

ಸೋಂಕು ಪತ್ತೆಹಚ್ಚುವುದು ಹೇಗೆ?

ಪಟ್ಟಿ ಮಾಡಲಾಗಿರುವ ರೋಗ ಲಕ್ಷಣಗಳ ಆಧಾರದ ಮೇಲೆ ಚಿಕೂನ್‌ಗುನ್ಯಾ, ಝೀಕಾ ವೈರಸ್, ವರಿಸೆಲ್ಲಾ ಜೋಸ್ಟರ್ ಹಾಗೂ ಹರ್ಪಿಸ್ ಸೇರಿ ಎಲ್ಲ ವೈರಸ್‌ಗಳ ಪರೀಕ್ಷೆ ಮಾಡಲಾಗುತ್ತದೆ. ಈ ಯಾವುದೇ ವೈರಸ್ ದೃಢಪಡದಿದ್ದರೆ ಟೊಮೇಟೊ ವೈರಸ್ ಎಂದು ದೃಢಿಕರಿಸಲಾಗುತ್ತದೆ. ಈ ಬಗೆಗೆ ಹೆಚ್ಚಿನ ಅಧ್ಯಯನ ಸಾಧ್ಯವಾಗಿ ಫಲಿತಾಂಶ ಸಿಗುವವರೆಗೂ ಇದೇ ವಿಧಾನ ಚಾಲ್ತಿಯಲ್ಲಿ ಇರಲಿದೆ ಎನ್ನುತ್ತದೆ 'ಲಾನ್ಸೆಟ್' ವರದಿ.

ಈ ಸುದ್ದಿ ಓದಿದ್ದೀರಾ?: ಸುದ್ದಿ ವಿವರ | 'ಡೋಲೊ 650' ಲಂಚ ಪ್ರಕರಣ; ಇಲ್ಲಿಯವರೆಗೆ ಆಗಿದ್ದೇನು, ಸುಪ್ರೀಂ ಕೋರ್ಟ್‌ ಕಳವಳ ವ್ಯಕ್ತಪಡಿಸಿದ್ದೇಕೆ?

ಸೋಂಕು ತಗುಲಿದರೆ ಚಿಕಿತ್ಸೆ ಏನು?

ಈ ಜ್ವರಕ್ಕೆ ನಿರ್ದಿಷ್ಟವಾದ ಔಷಧಿ ಇಲ್ಲ. ಚಿಕೂನ್‌ಗುನ್ಯಾ, ಡೆಂಗಿ ಹಾಗೂ ಕೈ, ಕಾಲು, ಬಾಯಿರೋಗಕ್ಕೆ ನೀಡುವ ಚಿಕಿತ್ಸೆಯನ್ನು ಟೊಮೇಟೊ ಜ್ವರಕ್ಕೂ ನೀಡಲಾಗುತ್ತದೆ. ದದ್ದುಗಳಾಗಿದ್ದರೆ, ಅವರನ್ನು ಇತರರಿಂದ ಪ್ರತ್ಯೇಕವಾಗಿ ಇರಿಸಲಾಗುತ್ತದೆ. ಸೋಂಕಿಗೆ ತುತ್ತಾದವರು ಹೆಚ್ಚಿನ ವಿಶ್ರಾಂತಿ ತೆಗೆದುಕೊಳ್ಳಬೇಕು. ಹೆಚ್ಚಿನ ದ್ರವ ಆಹಾರ ಸೇವಿಸಿದರೆ ಒಳಿತು. ದದ್ದುಗಳ ಕಿರಿಕಿರಿಗೆ ಬಿಸಿ ನೀರಿನ ಸ್ಪಂಜನ್ನು ಶಿಫಾರಸು ಮಾಡಲಾಗುತ್ತದೆ. ಜ್ವರ ಮತ್ತು ಮೈ ನೋವಿಗೆ ಪ್ಯಾರಾಸಿಟಮಾಲ್ ನೀಡಲಾಗುತ್ತದೆ. ಸೂಕ್ತ ಆರೈಕೆ ಮತ್ತು ವಿಶ್ರಾಂತಿಯಿಂದ ರೋಗ ಗುಣಮುಖವಾಗುತ್ತದೆ. ಹಾಗಾಗಿ ಆತಂಕ ಬೇಡ ಎನ್ನುತ್ತಾರೆ ವೈದ್ಯರು.

ಸರ್ಕಾರಗಳು ಕೈಗೊಂಡ ಕ್ರಮಗಳೇನು?

ಕೇರಳದಲ್ಲಿ 82 ಜನರಲ್ಲಿ ಸೋಂಕು ಪತ್ತೆಯಾಗಿದ್ದು, ಕೇರಳದ ಗಡಿಗಳಲ್ಲಿ ಆರೋಗ್ಯ ತಪಾಸಣೆ ಚುರುಕುಗೊಳಿಸಲಾಗಿದೆ. ತಮಿಳುನಾಡು ವೈದ್ಯಕೀಯ ತಂಡವು ಕೇರಳ-ತಮಿಳುನಾಡು ಗಡಿಯಲ್ಲಿ ಬೀಡುಬಿಟ್ಟಿದ್ದು, ಜ್ವರ, ಚರ್ಮದ ಮೇಲೆ ಗುಳ್ಳೆ ಹಾಗೂ ಇತರೆ ಅನಾರೋಗ್ಯದ ಲಕ್ಷಣ ಇರುವವರನ್ನು ಪರಿಶೀಲಿಸುತ್ತಿದೆ. ಸೋಂಕಿಗೆ ಕಾರಣವಾಗಿರುವ ವೈರಸ್‌ ಬಗ್ಗೆ ಹೆಚ್ಚಿನ ಅಧ್ಯಯನಕ್ಕೆ ಈ ಎರಡೂ ರಾಜ್ಯಗಳ ಆರೋಗ್ಯ ಇಲಾಖೆಗಳು ಮುಂದಾಗಿವೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app