ಇತ್ತೀಚೆಗೆ ಮಕ್ಕಳು ಪದೇಪದೆ ಅನಾರೋಗ್ಯಕ್ಕೆ ತುತ್ತಾಗುತ್ತಿರುವುದು ಏಕೆ?; ಇಲ್ಲಿದೆ ಕಾರಣ ಮತ್ತು ಪರಿಹಾರ

Children

ಕಳೆದ ಎರಡು ಮೂರು ತಿಂಗಳಿಂದ ವೈದ್ಯರ ಬಳಿ ಬರುತ್ತಿರುವ ಪೋಷಕರದು ಒಂದೇ ದೂರು - ಮಕ್ಕಳಲ್ಲಿ ಪದೇಪದೆ ಜ್ವರ ಕಾಣಿಸಿಕೊಳ್ಳುತ್ತಿದೆ...

ಇದಕ್ಕೆ ಮಳೆಗಾಲವೂ ಕಾರಣ ಎಂಬುದು ಸಹಜ ತಿಳಿವಳಿಕೆ. ಆದರೆ, ಈ ಬಾರಿ ಇಂತಹ ಅನಾರೋಗ್ಯ ತುಸು ಹೆಚ್ಚಾಗಿದೆ ಎಂಬುದು ಎಲ್ಲರ ಆತಂಕಕ್ಕೆ ಕಾರಣ. ಇಂತಹ ಸನ್ನಿವೇಶ ಈ ಮೊದಲೂ ಎದುರಾಗಿತ್ತೇ ಎಂದು ಕೇಳಿದರೆ, ಹೌದೆನ್ನುತ್ತಾರೆ ವೈದ್ಯರು.

"ಸಾಮಾನ್ಯವಾಗಿ ಮಕ್ಕಳು ಹುಟ್ಟಿದಾಗಿನಿಂದ ಒಂದು ಅಥವಾ ಎರಡು ವರ್ಷಗಳವರೆಗೆ ಮನೆಯಿಂದ ಹೊರಗಿನ ಪ್ರಪಂಚಕ್ಕೆ ತೆರೆದುಕೊಂಡಿರುವುದಿಲ್ಲ. ಮನೆಯಲ್ಲಿರುವ ತಂದೆ-ತಾಯಿ, ಅಜ್ಜ-ಅಜ್ಜಿಯರ ಸುರಕ್ಷಿತ ವಾತಾವರಣದಲ್ಲಿ ಬೆಳೆಯುತ್ತಾರೆ. ಈ ವೇಳೆ ಅವರಿಗೆ ಯಾವುದೇ ರೀತಿಯ ವೈರಾಣು, ಬ್ಯಾಕ್ಟೀರಿಯಾಗಳಿಂದ ದೂರವಿರುತ್ತಾರೆ. ಮಕ್ಕಳಿಗೆ ಎರಡು ವರ್ಷಗಳು ತುಂಬಿದ ನಂತರ ಹೊರಗಿನ ಪರಿಸರಕ್ಕೆ ತೆರೆದುಕೊಳ್ಳುತ್ತಾರೆ. ಅಂದರೆ, ಮಕ್ಕಳನ್ನು ಪ್ಲೇ ಸ್ಕೂಲ್‌ಗಳಿಗೆ, ಡೇ ಕೇರ್‌ಗಳಿಗೆ ಸೇರಿಸಿದಾಗ ಉಳಿದ ಮಕ್ಕಳ ಜೊತೆ ಬೆರೆಯುತ್ತಾರೆ. ಇದರಿಂದ ಮಕ್ಕಳಲ್ಲಿ ಸೋಂಕು ಹರಡುತ್ತದೆ," ಎನ್ನುತ್ತಾರೆ, ಬೆಂಗಳೂರಿನ ಸಾಗರ ಆಸ್ಪತ್ರೆಯ ಮಕ್ಕಳ ತಜ್ಞ ಡಾ.ಉಮಾಕಾಂತ್‌ ಅಡಿಗ.

"ಆಚೆಯ ಪರಿಸರಕ್ಕೆ ತೆರೆದುಕೊಳ್ಳುವ ಮೊದಲು ಮಕ್ಕಳಲ್ಲಿನ ರೋಗ ನಿರೋಧಕ ಶಕ್ತಿ ಇಂತಹ ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳನ್ನು ಎದುರಿಸಿರುವುದಿಲ್ಲ. ಹಾಗಾಗಿ, ಮಗುವಿನ ರೋಗನಿರೋಧಕ ಶಕ್ತಿಗೆ ಹೊಸ-ಹೊಸ ಸವಾಲು ಎದುರಾಗುತ್ತವೆ. ಮಕ್ಕಳಲ್ಲಿನ ರೋಗನಿರೋಧಕ ಶಕ್ತಿ ಇನ್ನೂ ಬೆಳವಣಿಗೆಯ ಹಂತದಲ್ಲಿರುತ್ತದೆ, ಪಕ್ವವಾಗಿರುವುದಿಲ್ಲ. ಹಾಗಾಗಿ ತಕ್ಷಣವೇ ಜ್ವರದಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ," ಎನ್ನುತ್ತಾರೆ ಡಾ.ಉಮಾಕಾಂತ್‌.

ಈ ಸುದ್ದಿ ಓದಿದ್ದೀರಾ?: ಒಂದು ನಿಮಿಷದ ಓದು | ರಾಜ್ಯಾದ್ಯಂತ ಎರಡನೇ ಬೂಸ್ಟರ್‌ ಡೋಸ್‌ ಲಸಿಕೆ ಆರಂಭ

"ನೂರಾರು ವೈರಸ್‌ಗಳು, ಬ್ಯಾಕ್ಟೀರಿಯಾಗಳು ಪರಿಸರದಲ್ಲಿರುವ ಕಾರಣ ಮಕ್ಕಳಲ್ಲಿ ಅವು ಪದೇಪದೆ ಸೋಂಕು ಉಂಟುಮಾಡುತ್ತವೆ. ಇದರಿಂದಾಗಿ 10ರಿಂದ 15 ದಿನಗಳ ಅವಧಿಯಲ್ಲಿ ಮಕ್ಕಳು ಅನಾರೋಗ್ಯಕ್ಕೆ ತುತ್ತಾಗುತ್ತಾರೆ. ಇದರಿಂದ ಮಕ್ಕಳ ರೋಗನಿರೋಧಕ ಶಕ್ತಿ ಪಕ್ವವಾಗುತ್ತ ಸಾಗುತ್ತದೆ. ಈ ರೀತಿಯ ಅನಾರೋಗ್ಯ ಸಮಸ್ಯೆ ಎರಡರಿಂದ ಮೂರು ವರ್ಷದ ಮಕ್ಕಳಲ್ಲಿ ಕಂಡುಬರುತ್ತಿತ್ತು. ಆದರೆ, ಇದೀಗ ಐದಾರು ವರ್ಷದ ಮಕ್ಕಳಿಂದ ಹಿಡಿದು 10 ಮತ್ತು 15 ವರ್ಷದ ಮಕ್ಕಳಿಗೂ ಅನಾರೋಗ್ಯದ ಸಮಸ್ಯೆ ಕಾಡುತ್ತಿದೆ," ಎಂಬುದು ವೈದ್ಯರ ಟಿಪ್ಪಣಿ.

ಕೋವಿಡ್-19 ಸಾಂಕ್ರಾಮಿಕದ ಅವಧಿಯಲ್ಲಿ ಲಾಕ್‌ಡೌನ್‌ನಿಂದಾಗಿ ಮಕ್ಕಳು ಹೊರಗಿನ ಪ್ರಪಂಚದಿಂದ ದೂರ ಉಳಿದರು. ಆತಂಕದಲ್ಲಿದ್ದ ಪೋಷಕರು ಮಕ್ಕಳನ್ನು ಹೊರಗೆ ಬಿಡದೆ ತಡೆದರು. ಇದರಿಂದಾಗಿ ಮಕ್ಕಳಲ್ಲಿನ ರೋಗನಿರೋಧಕ ಶಕ್ತಿ ಕುಂಠಿತವಾಗಿದೆ. ಜೂನ್‌ನಿಂದ ಶಾಲೆಗಳು ಆರಂಭವಾಗುವ ಜೊತೆಗೆ ಮಳೆಗಾಲವೂ ಶುರುವಾಗಿದ್ದು ಸಮಸ್ಯೆಗೆ ಕಾರಣ. ಮಳೆಗಾಲದಲ್ಲಿ ವೈರಸ್‌ ಸೋಂಕು ಸಾಮಾನ್ಯವಾಗಿರುವುದರಿಂದ ಹೆಚ್ಚು ಮಕ್ಕಳು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. " ಎನ್ನುವುದು ವೈದ್ಯರ ಅಭಿಪ್ರಾಯ. 

ಪರಿಹಾರವೇನು?

ಸ್ವಲ್ಪ ಮಟ್ಟಿಗೆ ನಾವು ಈ ಸಮಸ್ಯೆಯನ್ನು ತಡೆಯಬಹುದು ಎಂಬುದು ವೈದ್ಯರ ಭರವಸೆ. ಅವರು ಹೇಳುವ ಮುನ್ನೆಚ್ಚರಿಕೆ ಕ್ರಮಗಳು ಇಲ್ಲಿವೆ: ಮಕ್ಕಳಿಗೆ ಕೈಗಳ ಸ್ವಚ್ಛತೆ ಹೇಳಿಕೊಡುವುದು ಮುಖ್ಯ. ಹೊರಗಿನಿಂದ ಬಂದ ನಂತರ ಕೈಗಳನ್ನು ಸೋಪ್‌ನಿಂದ ಚೆನ್ನಾಗಿ ತೊಳೆಯಬೇಕು. ಮಕ್ಕಳು ಆಗಾಗ ಕಣ್ಣು, ಮೂಗು ಮುಟ್ಟುವ ಅಭ್ಯಾಸವನ್ನು ತಪ್ಪಿಸಬೇಕು. ಇದರಿಂದ ವೈರಸ್‌ ಸೋಂಕು ತಗುಲುವುದು ಕಡಿಮೆಯಾಗುತ್ತದೆ. ಮಗು ಅನಾರೋಗ್ಯಕ್ಕೆ ತುತ್ತಾದಾಗ ಅಂದರೆ, ನೆಗಡಿ ಇದ್ದು ಕೆಮ್ಮಿದಾಗ ಇತರರಿಂದ ದೂರವಿರುವಂತೆ ತಿಳಿಸಬೇಕು. ಇದರಿಂದ ವೈರಸ್‌ ವಾತಾವರಣ ಸೇರುವುದನ್ನು ತಡೆಯಬಹುದು.

ನಿಮಗೆ ಏನು ಅನ್ನಿಸ್ತು?
3 ವೋಟ್