
ನ್ಯಾ. ಎ.ಜೆ ಸದಾಶಿವ ಆಯೋಗದ ವರದಿ ಜಾರಿಯಾಗಬೇಕೆಂಬುದು ಮೂಲ ಅಸ್ಪೃಶ್ಯ ಪರಿಶಿಷ್ಟರ ನ್ಯಾಯಯುತ ಬೇಡಿಕೆಯಾಗಿದೆ. ಸದಾಶಿವ ಆಯೋಗದ ವರದಿ ಜಾರಿಗೆ ನನ್ನ ಸಂಪೂರ್ಣ ಸಹಮತ ಮತ್ತು ಬೆಂಬಲವಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.
ನ್ಯಾ. ಎ.ಜೆ ಸದಾಶಿವ ಆಯೋಗದ ವರದಿ ಜಾರಿಗೆ ಆಗ್ರಹಿಸಿ ಕಳೆದ 9 ದಿನದಿಂದ ಹುಬ್ಬಳ್ಳಿಯ ಮಿನಿ ವಿಧಾನಸೌಧದ ಮುಂಭಾಗ ನಡೆಯುತ್ತಿರುವ ಧರಣಿ ಸ್ಥಳಕ್ಕೆ ಭೇಟಿ ನೀಡಿ ಅವರು ಮಾತನಾಡಿದರು. "ಈ ಹಿಂದಿನಿಂದಲೂ ನ್ಯಾ. ಎ.ಜೆ ಸದಾಶಿವ ವರದಿ ಪರವಾಗಿಯೇ ಇದ್ದೇನೆ. ಮುಂಬರುವ ಅಧಿವೇಶನದಲ್ಲಿ ಈ ಕುರಿತ ಸೂಕ್ತ ಕ್ರಮಕ್ಕಾಗಿ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸುತ್ತೇನೆ" ಎಂದು ಭರವಸೆ ನೀಡಿದ್ದಾರೆ.
ಧರಣಿನಿರತ ಪರಿಶಿಷ್ಟ ಪಂಚಮ ಕುಲ ಬಾಂಧವರ ಒಕ್ಕೂಟದ ಮಂಜುನಾಥ ಕೊಂಡಪಲ್ಲಿ ಮಾತನಾಡಿ, “ಸದಾಶಿವ ಆಯೋಗದ ವರದಿಯನ್ನು ಸದನದಲ್ಲಿ ಬಹಿರಂಗ ಚರ್ಚೆಗೆ ಒಳಪಡಿಸಬೇಕು. ನಂತರ ವರದಿಯನ್ನು ಜಾರಿಗೆ ತರಲು ಕೇಂದ್ರಕ್ಕೆ ಶಿಫಾರಸು ಮಾಡಲು ನಮ್ಮೆಲ್ಲರ ಪ್ರತಿನಿಧಿಯಾಗಿ ಈ ಬಗ್ಗೆ ಸದನದಲ್ಲಿ ದನಿ ಎತ್ತಬೇಕು" ಎಂದು ಜಗದೀಶ್ ಶೆಟ್ಟರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸೂರ್ಯನಾರಾಯಣ ಕನಮಕ್ಕಲ್, ಗಂಗಾಧರ ಪೇರೂರ, ಲೋಕಮಾನ್ಯ ರಾಮದತ್ತ, ರಂಗನಾಯಕ ತಪೇಲ, ಲಕ್ಷ್ಮಣ ಬಕಾಯ, ಬಸಲಿಂಗಪ್ಪ ಛಲವಾದಿ, ಶಂಕರ ಅಜಮನಿ, ಇಂದುಮತಿ ಶಿರಗಾವಿ, ಭೀಮು ಹಲಗಿ, ಬಸವರಾಜ ಹೊಸಮನಿ, ಮೇಘರಾಜ ಹಿರೇಮನಿ, ಆನಂದ ಅರ್ಜುನಗಿ, ಸೋಮಶೇಖರ ಭಂಡಾರಿ, ಶಿವು ಅರ್ಜುನಗಿ, ಬಸಂತಕುಮಾರ ಅನಂತಪುರ, ದೊಡ್ಡರಾಮಪ್ಪ, ಶ್ರೀನಿವಾಸ ಭೂದೇಟಿ, ಮಾಲತೇಶ ಮೊರಬದ, ನಾಗೇಶ ಕತ್ರಿಮಾಲ, ಶ್ರೀಧರ ಕನಮಕ್ಕಲ, ಶ್ರೀ ಶ್ರೀನಿವಾಸ ರೆಟ್ಟಿ, ಪರಶುರಾಮ ಪೂಜಾರ, ಹನುಮಂತಪ್ಪ ಮಾಲಪಲ್ಲಿ,ವಿಜಯ ಕರ್ರ, ದೊಡ್ಡರಾಮಪ್ಪ ಸೇರಿದಂತೆ ನೂರಾರು ಹೋರಾಟಗಾರರು ಉಪಸ್ಥಿತರಿದ್ದರು.