ಬಿ. ಬಸವಲಿಂಗಪ್ಪನವರಿಗೆ ನಮಸ್ಕಾರ... | ಕಣ್ಣು ತೆರೆಸಿದ ನಾಯಕನಿಗೆ ನೂರಾ ಒಂದನೇ ಹುಟ್ಟುಹಬ್ಬದ ನೆನಪು

ಕನ್ನಡ ಸಾಹಿತ್ಯವೂ ಬೂಸಾ ಸಾಹಿತ್ಯ; ಅಂಥ ಸಾಹಿತ್ಯಕ್ಕೆ, ಅಂಥ ಬೂಸಾ ಸಾಹಿತಿಗಳಿಗೆ ತಾನು ಯಾವ ಬೆಲೆಯನ್ನೂ ಕೊಡುವುದಿಲ್ಲ, ಲಕ್ಷ್ಯವನ್ನೂ ಕೊಡುವುದಿಲ್ಲ ಎಂದು ತೀಕ್ಷ್ಣ ಟೀಕೆ ಮಾಡಿದ್ದ ಸಂವೇದನೆಯ ರಾಜಕಾರಣಿ ಬಸವಲಿಂಗಪ್ಪನವ ಜನ್ಮದಿನವಿದು
B Basavalingappa

ನವೆಂಬರ್ 19, 1973, ಮೈಸೂರು ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ 'ಹೊಸ ಅಲೆಗಳು' ಎನ್ನುವ ವಿಚಾರ ಸಂಕಿರಣದಲ್ಲಿ ಮಾತನಾಡುತ್ತಾ ಕನ್ನಡ ಸಾಹಿತ್ಯದ ಬಗ್ಗೆ ಆಗಿನ ಸರ್ಕಾರದಲ್ಲಿ ಸಚಿವರಾಗಿದ್ದ ಬಿ.ಬಸವಲಿಂಗಪ್ಪನವರು ಆಡಿದರೆನ್ನಲಾದ ಮಾತು ಸೃಷ್ಟಿಸಿದ ವಿವಾದ ಮುಂದೆ ರಾಜ್ಯದಲ್ಲಿ ದಲಿತ ಚಳುವಳಿಯ ಹುಟ್ಟಿಗೆ ಕಾರಣವಾಗಿದ್ದು ಈಗ ಇತಿಹಾಸ.

ಆ ಸಭೆಯಲ್ಲಿ 'ಬೂಸಾ ಸಾಹಿತ್ಯ'ದ ಕುರಿತು ವಾಸ್ತವವಾಗಿ ಬಸವಲಿಂಗಪ್ಪನವರು ಏನು ಮಾತಾಡಿದ್ದರು ಅನ್ನುವುದನ್ನು ಹಿರಿಯ ವಿಮರ್ಶಕ ಜಿ.ಎಚ್.ನಾಯಕರು ತಮ್ಮ 'ಗುಣಗೌರವ' ಕೃತಿಯ ಲೇಖನವೊಂದರಲ್ಲಿ ಹೀಗೆ ಪ್ರಸ್ತಾಪಿಸಿದ್ದಾರೆ-
"ನಾನು ಬಸವಲಿಂಗಪ್ಪನವರು ಭಾಷಣ ಮಾಡಿದ ಸಭೆಯಲ್ಲಿದ್ದೆ. ಪತ್ರಿಕೆಗಳಲ್ಲಿ ಬಂದ ವರದಿ ಸರಿಯಾಗಿರಲಿಲ್ಲ. ಆ ಭಾಷಣದ ಹಿಂದಿನ ದಿನ ಶಿವಮೊಗ್ಗದಲ್ಲಿ ಹಿಂದೂ ಧರ್ಮ, ಪುರೋಹಿತಶಾಹಿ ಕುರಿತಂತೆ ಅವರು ಆಡಿದ ಮಾತುಗಳನ್ನು ವಿಕೃತಗೊಳಿಸಿ ಪತ್ರಿಕೆಯೊಂದು ವರದಿ ಮಾಡಿದೆಯೆಂದೂ, ಇಂಥ ಪತ್ರಿಕೆಗಳಲ್ಲಿ ಏನೇನೋ ಬರೆದು ಹೊಟ್ಟೆ ತುಂಬಿಸಿಕೊಳ್ಳುವ ಇಂಥ ಸಾಹಿತಿಗಳು ಬೂಸಾ ಸಾಹಿತಿಗಳು, ಅವರು ಬರೆಯುವ ಕನ್ನಡ ಸಾಹಿತ್ಯವೂ ಬೂಸಾ ಸಾಹಿತ್ಯ; ಅಂಥ ಸಾಹಿತ್ಯಕ್ಕೆ, ಅಂಥ ಬೂಸಾ ಸಾಹಿತಿಗಳಿಗೆ ತಾನು ಯಾವ ಬೆಲೆಯನ್ನೂ ಕೊಡುವುದಿಲ್ಲ, ಲಕ್ಷ್ಯವನ್ನೂ ಕೊಡುವುದಿಲ್ಲ ಎಂದು ಬಸವಲಿಂಗಪ್ಪನವರು ಏರಿದ ದನಿಯಲ್ಲಿ ವ್ಯಗ್ರವಾಗಿ ಹೇಳಿದ್ದರು."

ಆದರೆ ಈ ಹೇಳಿಕೆಯನ್ನು ತಿರುಚಿದ ಪತ್ರಿಕೆಗಳು ಬಸವಲಿಂಗಪ್ಪ ಇಡೀ ಕನ್ನಡ ಸಾಹಿತ್ಯವನ್ನೆ ಬೂಸಾ ಎಂದಿದ್ದಾರೆ ಎಂದು ವರದಿ ಮಾಡಿದವು. ತಿರುಚಿ ಮಾಡಿದ ಈ ವರದಿಯಿಂದಾಗಿ ಬಸವಲಿಂಗಪ್ಪನವರ ವಿರುದ್ಧ ದೊಡ್ಡ ಮಟ್ಟದ ಹೋರಾಟ ಶುರುವಾಗಿ ಕೊನೆಗೆ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುವಂತಾಯಿತು. ಆ ಸಂದರ್ಭದಲ್ಲಿ ಬಸವಲಿಂಗಪ್ಪನವರ ಪರವಾಗಿ ದಲಿತ- ಹಿಂದುಳಿದ ಸಮುದಾಯಗಳಿಂದ ಬಂದಿದ್ದ ಯುವಕರು ಸ್ವಯಂಪ್ರೇರಿತರಾಗಿ ಬೀದಿಗಿಳಿದರು. ಮೇಲುಜಾತಿಗಳ ವಿದ್ಯಾರ್ಥಿಗಳು ಈ ದಲಿತ-ಹಿಂದುಳಿದ ವಿದ್ಯಾರ್ಥಿಗಳ ಮೇಲೆ ಸಿಕ್ಕಸಿಕ್ಕಲ್ಲಿ ಮಾರಣಾಂತಿಕ ಹಲ್ಲೆಗಳನ್ನು ಮಾಡಲು ಶುರುಮಾಡಿದರು. ಈ ಸಂಘರ್ಷ ಮುಂದೆ ರಾಜ್ಯದಲ್ಲಿ ಬೇರೆ ಬೇರೆ ತರದ ಬೆಳವಣಿಗೆಗಳಿಗೆ ಕಾರಣವಾಯಿತು.

ಆಗ ಬಸವಲಿಂಗಪ್ಪನವರ ವಿರುದ್ಧ ಹೋರಾಟಕ್ಕಿಳಿದ ಮೇಲುಜಾತಿಗಳಿಗೆ ಮತ್ತು ಸಂಘ ಪರಿವಾರಕ್ಕೆ 'ಬೂಸಾ' ಹೇಳಿಕೆ ಒಂದು ನೆಪ‌ ಮಾತ್ರವಾಗಿತ್ತು. ಅಸ್ಪೃಶ್ಯ ಸಮುದಾಯದಿಂದ ಬಂದಿದ್ದ ಬಸವಲಿಂಗಪ್ಪ ಜಾತಿ ವ್ಯವಸ್ಥೆಯ ವಿರುದ್ಧ, ಹಿಂದೂ ಧರ್ಮದ ಸಾಂಪ್ರದಾಯಿಕತೆಯ ವಿರುದ್ಧ ಬಹಿರಂಗ ಸಭೆಗಳಲ್ಲಿ ನೀಡುತ್ತಿದ್ದ ಹೇಳಿಕೆಗಳು, ಹಿಂದೂ ದೇವತೆಗಳ ಪೋಟೋಗಳನ್ನು ಚರಂಡಿಗೆ ಎಸೆಯಿರಿ ಎನ್ನುವ ಕರೆಗಳು ಸನಾತನಿಗಳ ಕೆಂಗಣ್ಣಿಗೆ ಗುರಿಯಾಗಿದ್ದವು. ಸಚಿವರಾಗಿ ಅವರು ತರಲು ಪ್ರಯತ್ನಮಾಡಿದ ಕೆಲವು Radical ಆದ ಬದಲಾವಣೆಗಳು ಮೇಲುಜಾತಿಗಳ ಅಸಮಾಧಾನಕ್ಕೆ ಕಾರಣವಾಗಿದ್ದವು.

ಎಪ್ಪತ್ತರ ದಶಕ ಅಸ್ಪೃಶ್ಯ ಸಮುದಾಯಗಳ ಯುವಕರು ಕಾಲೇಜು, ವಿಶ್ವವಿದ್ಯಾಲಯಗಳಿಗೆ ಕಾಲಿಡತೊಡಗುತ್ತಿದ್ದ ಕಾಲ. ಅಲ್ಲಿಯವರೆಗೂ ಬಹುತೇಕ ಮೇಲುಜಾತಿಗಳೇ ತುಂಬಿ ತುಳುಕಾಡುತ್ತಿದ್ದ ಕಾಲೇಜು-ವಿಶ್ವವಿದ್ಯಾಲಯಗಳಿಗೆ ದಲಿತರು, ಹಿಂದುಳಿದವರ ಪ್ರವೇಶ ಮೇಲುಜಾತಿಗಳಿಗೆ ತಮ್ಮ ಪ್ರಾಬಲ್ಯವನ್ನು ಕಳೆದುಕೊಳ್ಳುವ ಭೀತಿಯನ್ನೂ, ಊರುಗಳಲ್ಲಿ ತಮ್ಮ ಅಧೀನರಾಗಿ ಬದುಕುತ್ತಿದ್ದವರು ಪಟ್ಟಣಗಳಲ್ಲಿ ತಮ್ಮ ಸಮಕ್ಕೆ ನಡೆಯುವಂತಾಗಿದ್ದನ್ನು ನೋಡಿ ಈ ಸಮುದಾಯಗಳ ಬಗ್ಗೆ ಅಸಹನೆಯನ್ನೂ ಉಂಟುಮಾಡತೊಡಗಿತ್ತು. ಇದಕ್ಕೆ ಪೂರಕವಾಗಿ ರಾಜ್ಯದ ಯಾವ ಪ್ರಬಲ ಸಮುದಾಯಕ್ಕೂ ಸೇರದ ದೇವರಾಜ ಅರಸು ರಾಜ್ಯದ ಮುಖ್ಯಮಂತ್ರಿಯಾಗಿ ಅದೃಶ್ಯ ಲೋಕದ ಯುವಕರನ್ನು ರಾಜಕೀಯಕ್ಕೆ ತಂದು ಅನೇಕ ತಳಸಮುದಾಯಗಳಿಗೆ ಶಕ್ತಿ ತುಂಬತೊಡಗಿದ್ದರು. ಇದು ರಾಜ್ಯದ ಪ್ರಬಲ ಸಮುದಾಯಗಳಾಗಿದ್ದ ಲಿಂಗಾಯತ, ಒಕ್ಕಲಿಗರ ಸಿಟ್ಟಿಗೆ ಕಾರಣವಾಗಿತ್ತು. ಒಟ್ಟಾರೆ ದಲಿತ ಸಮುದಾಯದಿಂದ ಬಂದ ಬಸವಲಿಂಗಪ್ಪ ಮತ್ತು ಹೊಸ ತಲೆಮಾರಿನ ಯುವಕರು ಸಾಂಪ್ರದಾಯಿಕ ಸಮಾಜ ದಲಿತರಿಂದ ಬಯಸುತ್ತಿದ್ದ ವಿಧೇಯತೆಯನ್ನು ಪ್ರದರ್ಶಿಸಲು ನಿರಾಕರಿಸತೊಡಗಿದ್ದು ಅಲ್ಲೊಲ ಕಲ್ಲೋಲ ಉಂಟು ಮಾಡತೊಡಗಿತು.

ಇದನ್ನು ಓದಿದ್ದೀರಾ? | ಸುದ್ದಿ ವಿವರ | ಕೆ-ರೈಲು ವಿರೋಧಿಸಿ ಗುರುತು ಕಲ್ಲು ಕಿತ್ತೆಸೆದು ಪ್ರತಿಭಟಿಸಿದ ಕಾಂಗ್ರೆಸ್

ಮೇಲು ಜಾತಿಯ ರಾಜಕಾರಣಿಗಳ ಕೃಪಾಕಟಾಕ್ಷಕ್ಕಾಗಿ ಕಾಯದೆ ತನ್ನ ಯೋಗ್ಯತೆಗೆ ತಕ್ಕ ಸ್ಥಾನಮಾನ ನೀಡಿ ಎಂದು ಸಾರ್ವಜನಿಕವಾಗಿ ಆಗ್ರಹಿಸಬಲ್ಲ ಸ್ವಾಭಿಮಾನಿ ಬಸವಲಿಂಗಪ್ಪ ಮತ್ತು ಮೇಲು ಜಾತಿಯವರು ಏನು ಹೇಳಿದರೂ, ಏನು ಮಾಡಿದರೂ ಉಸಿರೆತ್ತದೆ ಸಹಿಸುತ್ತಿದ್ದ ದಲಿತ ಸಮುದಾಯ ಸಾಂಪ್ರದಾಯಿಕ ಸಮಾಜದ ಎಲ್ಲ ಕಟ್ಟಳೆಗಳನ್ನು ಮುರಿದು ಪ್ರಶ್ನಿಸತೊಡಗಿದ ಆಗಿನ ಯುವಕರು ಕರ್ನಾಟಕದ ದಲಿತ ಸಮುದಾಯಕ್ಕೆ ಹೊಸ ಪ್ರಜ್ಞೆಯನ್ನು ತಂದುಕೊಟ್ಟರು.

ಆದರೀಗ ದಲಿತ ರಾಜಕಾರಣಿಗಳು ಜಿ‌.ಎಚ್.ನಾಯಕರು ಒಂದು ಭಾಷಣದಲ್ಲಿ ಹೇಳಿರುವಂತೆ "ಐವತ್ತು ವರ್ಷಗಳ ಹಿಂದಿನ ಮಧ್ಯಮವರ್ಗದ ಮನೆತನದ ಸೊಸೆಯಂದಿರ ಥರ ಆಗಿದ್ದಾರೆ. ಅಥವಾ ಅವರನ್ನು ಹಾಗೆ ನಡೆಸಿಕೊಳ್ಳಲಾಗುತ್ತಿದೆ. ಮನೆತನದ ಮಕ್ಕಳ ತರ ಅವರೂ ಆಗಿಲ್ಲ, ಅಥವಾ ಅವರನ್ನು ಹಾಗೆ ನಡೆಸಿಕೊಳ್ಳುತ್ತಲೂ ಇಲ್ಲ. ಸೊಸೆಯಂದಿರು ವಂಶ ಬೆಳೆಸುವುದಕ್ಕೆ ಬೇಕು, ಆದರೆ ಆ ವಂಶ ಹೇಗಿರಬೇಕೆಂಬ ಬಗ್ಗೆ ನಿರ್ಧರಿಸುವುದರಲ್ಲಿ ಅವರ ಕ್ರಿಯಾಶೀಲ ಪಾತ್ರ ಇರುವುದಿಲ್ಲ; ಅಂಥ ಪಾತ್ರ ಅವರಿಗೆ ಕೊಡುವುದಿಲ್ಲ. ದಲಿತರು, ದಲಿತ ರಾಜಕಾರಣಿಗಳು ಪಕ್ಷ ಬೆಳೆಸುವುದಕ್ಕೆ ಬೇಕು; ಪಕ್ಷವು ಅಧಿಕಾರಗಳಿಸಿಕೊಳ್ಳಲು ಬೇಕು. ಆದರೆ ಮುಖ್ಯ ನೇತಾರತ್ವ ಸ್ಥಾನದಲ್ಲಿ ಇರುವುದಕ್ಕೆ ಅವರು ಬೇಕಾಗಿಲ್ಲ ಎಂಬಂಥ ಸ್ಥಿತಿ ಇದೆ." ಇನ್ನು  ದಲಿತ ಚಳುವಳಿಗಾರರೊ ಕೋಟಿಗಾನಹಳ್ಳಿ ರಾಮಯ್ಯನವರು ಕಥೆಯೊಂದರಲ್ಲಿ ಹೇಳಿರುವ "ಅಧಿಕಾರಶಾಹಿಯೆಂಬ ಸುಂದರಿಯ ಮುಂದೆ ಮುಂದೆ ಹಲ್ಲು-ಉಗುರು ಕಿತ್ತ ಸಿಂಹದಂತೆ" ಆಗಿದ್ದಾರೆ.

ದಲಿತ ರಾಜಕಾರಣಿಗಳು ಮತ್ತು ದಲಿತ ಚಳುವಳಿಗಾರರಲ್ಲಿ ಕೂಡ 'ಬೂಸಾ' ಹೆಚ್ಚಾಗಿದ್ದು ಅಂತವರನ್ನು ಗಾಳಿಗೆ ತೂರಿ ಸತ್ವ ಇರುವ ನಾಯಕರನ್ನು ಉಳಿಸಕೊಳ್ಳಬೇಕು. ದಲಿತರು ಅಧಿಕಾರಶಾಹಿಯ ಜೊತೆ ಕೇವಲ ಮಧುರ ಸಖ್ಯಕ್ಕಾಗಿ ಹಾತೊರೆಯದೆ ಸಮುದಾಯದ ಹಿತದ ಪ್ರಶ್ನೆ ಬಂದಾಗ ನಿಷ್ಠುರವಾಗಿ ಎದುರು ನಿಲ್ಲುವ ಧೈರ್ಯ ತೋರಿಸಬೇಕು. ಇದಾಗಬೇಕೆಂದರೆ ದಲಿತ ರಾಜಕಾರಣಿಗಳು, ಚಳುವಳಿಗಾರರು ಮತ್ತು ದಲಿತ ಸಮುದಾಯದ ಮಧ್ಯೆ ಸಾವಯವ ಸಂಬಂಧ ಏರ್ಪಡಬೇಕು. ಇಡೀ ಸಮುದಾಯದಲ್ಲಿ ಸ್ವಾಭಿಮಾನ ಮೂಡಿಸಲು ಎಲ್ಲರೂ ಮುಂದಾಗಬೇಕು. ಇದಕ್ಕೂ ಮುಂಚೆ ದಲಿತ ಸಮುದಾಯಗಳು ತಮ್ಮ ನಡುವಿನ ಎಲ್ಲ ಸಮಸ್ಯೆಗಳನ್ನು ಮುಕ್ತವಾಗಿ ಚರ್ಚಿಸಿ ಬಗೆಹರಿಸಿಕೊಳ್ಳಬೇಕು. ಇದಕ್ಕೆ ಎಲ್ಲರಿಗೂ ಬದ್ಧತೆ ಬೇಕು. ಅಂತಹ ಬದ್ಧತೆ ಬಸವಲಿಂಗಪ್ಪನವರಲ್ಲಿತ್ತು. ಅಂತಹ ದಿಟ್ಟ ನಾಯಕ ಹುಟ್ಟಿದ ನೂರಾ ಒಂದು ವರ್ಷಗಳ ನೆನಪು ದಲಿತರ ಸ್ವಾಭಿಮಾನವನ್ನು ಹೆಚ್ಚಿಸಿಕೊಳ್ಳುವ ಸ್ಫೂರ್ತಿಯನ್ನು ನೀಡಲಿ.

ನಿಮಗೆ ಏನು ಅನ್ನಿಸ್ತು?
2 ವೋಟ್