ಮನುಷ್ಯರ ಮೇಲೆ ದಾಳಿ ಮಾಡುವ ಎಲ್ಲ ಹುಲಿಗಳೂ ನರಭಕ್ಷಕಗಳೇ? ಅರಣ್ಯ ಇಲಾಖೆಯೇ ಹೊಣೆಯೇ?

ಜುಲೈ 29 ವಿಶ್ವ ಹುಲಿದಿನ. ಹುಲಿಗಳ ಸಂರಕ್ಷಣೆಗಾಗಿ ಜಗತ್ತಿನ ಜಾಗೃತವಾಗಿಡಲು ಜೀವಪ್ರೇಮಿಗಳು ಚಾಲ್ತಿಗೆ ತಂದಿರುವ ಒಂದು ಮಾನವೀಯ ಕಾಳಜಿಯ ಆಚರಣೆ. ಆದರೆ ಎರಡು ದಿನಗಳ ನಂತರ ಅದೇ ಹುಲಿಗಳಲ್ಲಿ ಒಂದು ಒಬ್ಬ ಮನುಷ್ಯನನ್ನು ಕೊಂದು ಹಾಕಿದರೆ?!
All attacking tigers are not Man-eaters: Bandipur National Park in Karnataka was killed by a tiger

ಜುಲೈ 31, ಚಾಮರಾಜನಗರ ಜಿಲ್ಲೆಯ ಬಂಡೀಪುರ ಹುಲಿ ಯೋಜನಾ ಪ್ರದೇಶದ ಹೊರವಲಯದಲ್ಲಿ ಇಂಥದ್ದೊಂದು ಘಟನೆ ಸಂಭವಿಸಿಬಿಡುತ್ತದೆ. ಅಲ್ಲಿನ ನಂಜುಂಡೇದೇವರ ಬೆಟ್ಟದ ಬದಿಯಲ್ಲಿ ತಮ್ಮ ಹೊಲದೊಳಗೆ ದನಗಳನ್ನು ಬಿಟ್ಟುಕೊಂಡು ಪುಟ್ಟಸ್ವಾಮಿ ಗೌಡ ಮತ್ತು ನೆರೆಯ ಜಮೀನಿನ ಸುನಿಲ್  ಕೃಷಿ ಕೆಲಸಗಳಲ್ಲಿ ನಿರತರಾಗಿರುತ್ತಾರೆ.  ಆಗ ಹಠಾತ್ತಾಗಿ ಕಾಡಿನೊಳಗಿಂದ ನುಗ್ಗಿ ಬಂದ ಹುಲಿಯೊಂದು ಹೊಲದ ಅಂಚಿನಲ್ಲಿದ್ದ ಒಂದು ಹಸುವಿನ ಮೇಲೆ ಆಕ್ರಮಣ ಮಾಡುತ್ತದೆ. ಇದನ್ನು ಕಂಡ ಪುಟ್ಟಸ್ವಾಮಿ ಗೌಡರು ಮತ್ತು ಸುನಿಲ್ ಹುಲಿಯನ್ನು ಹೆದರಿಸಿ, ಅದರ ಬಾಯಿಂದ ತಮ್ಮ ಹಸುವನ್ನು ಉಳಿಸಿಕೊಳ್ಳಲು ಮುಂದಾಗುತ್ತಾರೆ.  ಸಾಮಾನ್ಯವಾಗಿ ಎಲ್ಲರೂ ಮಾಡುವಂತೆ ಗದ್ದಲ ಮಾಡುತ್ತಾರೆ, ಕೂಗುತ್ತಾರೆ. ಕಿರಿಚಾಡುತ್ತಾರೆ. ಆಗ ತಾಳ್ಮೆ ಕಳೆದುಕೊಂಡ ಹುಲಿ, ತನ್ನ ಆಹಾರಕ್ಕೆ ಅಡ್ಡಿ ಬಂದ ಸುನಿಲ್ ಮೇಲೆ ಮೊದಲಿಗೆ ದಾಳಿ ಮಾಡುತ್ತದೆ. ಅದು ದಾಳಿ ಮಾಡುತ್ತಿದ್ದಂತೆ ಸುನೀಲ್ ಗುಂಡಿಯೊಂದಕ್ಕೆ ಉರುಳಿಕೊಂಡು ಹೋಗುತ್ತಾನೆ ಮತ್ತು ಹುಲಿಯ ಪಂಜದಿಂದ ಪಾರಾಗುತ್ತಾನೆ.

ಒಂದು ಕಡೆ ತನ್ನ ಹಸು, ಇನ್ನೊಂದು ಕಡೆ ತನಗೆ ಸಹಾಯ ಮಾಡಲು ಬಂದವನ ಮೇಲೆ ದಾಳಿಮಾಡುತ್ತಿದ್ದ ಹುಲಿಯ ವಿರುದ್ಧ ಗೌಡರು ತನ್ನ ಶಬ್ದ ಯುದ್ದವನ್ನು ಮುಂದುವರಿಸಿಯೇ ಇರುತ್ತಾರೆ. ಆದರೆ, ಸಿಟ್ಟಿಗೆದ್ದಿದ್ದ ಹುಲಿ ಅಲ್ಲಿಗೇ ನಿಲ್ಲಿಸದೆ ಅದೂ ತನ್ನ ದಾಳಿಯನ್ನು ಮುಂದುವರೆಸುತ್ತದೆ. ಗೌಡರ ಮೇಲೆ ದಾಳಿ ಮಾಡುತ್ತದೆ. ಮುಖದ ಮೇಲೆ ಬಿದ್ದ ಹುಲಿ ಪಂಜದ ಒಂದೇ ಹೊಡೆತಕ್ಕೆ ಗೌಡರು ನೆಲಕ್ಕುರುಳುತ್ತಾರೆ. ಅಲ್ಲಿಯೇ ಗತಪ್ರಾಣರಾಗುತ್ತಾರೆ.

Eedina App

ಇದು ಹುಲಿಯ ಬಾಯಿಂದ ಬಚಾವಾದ ಕಣ್ಸಾಕ್ಷಿ ಸುನಿಲ್  ಹೇಳಿದ ವಿವರಗಳು. ದಾಳಿ ಮಾಡಿದ ಹುಲಿ ಕಾಡೊಳಗೆ ಮಾಯವಾಗುತ್ತದೆ. ಇಲಾಖೆಗೆ ಸುದ್ದಿ ಮುಟ್ಟುತ್ತದೆ. ಮಧ್ಯಾಹ್ನ 3.30ರ ಹೊತ್ತಿಗೆ ಅರಣ್ಯ ಇಲಾಖೆಯ ಸಿಬ್ಬಂದಿ  ಘಟನಾ ಸ್ಥಳಕ್ಕೆ ತಲುಪುತ್ತದೆ. ಅಲ್ಲಿಂದ ಮುಂದೆ ಸಹಜ ಮತ್ತು ಕಾನೂನಾತ್ಮಕ ವಿಚಾರಣೆ, ಮಹಜರು ಇತ್ಯಾದಿಗಳು ನಡೆಯುತ್ತವೆ. ಅರಣ್ಯ ಇಲಾಖೆಯ ವಕ್ತಾರರೇ ಹೇಳಿದಂತೆ ಸ್ಥಳದಲ್ಲಿಯೇ ಎರಡು ಲಕ್ಷ ರುಪಾಯಿ ಪರಿಹಾರ ಧನವನ್ನು ವಿತರಿಸಲಾಗುತ್ತದೆ. ಈ ಪರಿಹಾರ ಧನ ಒಟ್ಟು 7.5 ಲಕ್ಷ ರೂ.ಗಳು.

ಇವೆಲ್ಲಾ ಮುಗಿಯುವ ಹೊತ್ತಿಗೆ ಕತ್ತಲಾಗಿರುತ್ತದೆ. ಜೊತೆಗೆ ಮಳೆ. ಹುಲಿಯ ಬೆನ್ನು ಹತ್ತುವುದು ಅಷ್ಟು ಸುಲಭವಲ್ಲ. ಬೆಳಿಗ್ಗೆ, ಇಲಾಖೆಯ ತಂಡ ಅದರ ಹುಡುಕಾಟಕ್ಕೆ ಹೊರಡುತ್ತದೆ. ಇವೆಲ್ಲಾ ಯಾರದೇ ನಿಯಂತ್ರಣವಿಲ್ಲದೆ ನಡೆದ ಒಂದು ಘಟನೆಯ ನಂತರದ ವಿವರಗಳು. ಈ ಬರಹ ಪ್ರಕಟವಾಗುತ್ತಿರುವ ಈ ಹೊತ್ತಿನಲ್ಲಿ ಸಹ ಇನ್ನೂ ಹುಲಿ ಸೆರೆಯಾಗಿಲ್ಲ. 

AV Eye Hospital ad

ಆದರೆ ಈ ಸಂಗತಿ ಇಲ್ಲಿಗೇ ನಿಲ್ಲುವುದಿಲ್ಲ. ನೆರೆದಿದ್ದವರು, ಸ್ಥಳೀಯರು ಇದಕ್ಕೆ ಅರಣ್ಯ ಇಲಾಖೆಯನ್ನು ಹೊಣೆ ಮಾಡುತ್ತಾರೆ.  "ಹುಲಿಗಳ ನಿಯಂತ್ರಣದಲ್ಲಿ ಇಲಾಖೆ ವಿಫಲವಾಗಿದೆ" ಎಂದು ದೂರುತ್ತಾರೆ. "ಮನುಷ್ಯ-ಕಾಡುಪ್ರಾಣಿಗಳ ನಡುವಿನ ಸಂಘರ್ಷ ತಪ್ಪಿಸುವುದು ಇಲಾಖೆಯ ಕರ್ತವ್ಯ" ಎಂದೆಲ್ಲಾ ಹೆಳುತ್ತಾರೆ. ಇವೆಲ್ಲ ನೊಂದವರ ಮಾತುಗಳು. ಅಗತ್ಯ ಇರುವಷ್ಟು ಗಂಭೀರವಾಗಿ ಪರಿಗಣಿಸಿದರೆ ಸಾಕು. ಆದರೆ ಇಲ್ಲಿ ದಾಳಿ ಮಾಡಿರುವ ಹುಲಿ ನರಭಕ್ಷಕನಲ್ಲ ಎಂಬುದು ವಾಸ್ತವ. ಅದಕ್ಕೆ ವಯಸ್ಸಾಗಿದೆ ಎಂಬುದು ಮತ್ತು ಅದರ ನಡಿಗೆಯಲ್ಲಿ ಊನವಿದೆ ಎಂಬುದು ಸ್ವತಃ ಕಣ್ಸಾಕ್ಷಿಯ ಹೇಳಿಕೆ.

2019-21ರ ನಡುವೆ ಇದೇ ಬಂಡೀಪುರ ಹುಲಿ ಪ್ರದೇಶದಲ್ಲಿ ಒಂದು ಹುಲಿ ಐದು ಜನರನ್ನು ಕೊಂದು ಬಹುಪಾಲು “ನರಭಕ್ಷಕ” ಪಟ್ಟಕ್ಕೇರಿತ್ತು. ಅರವಳಿಕೆ ಮದ್ದು ಹೊಡೆದು ಅದನ್ನು ಹಿಡಿದು “ಪುನರ್ವಸತಿ” ಕೇಂದ್ರಕ್ಕೆ ಕಳುಹಿಸಲಾಗಿತ್ತು. ಆನಂತರದಲ್ಲಿ ಮನುಷ್ಯರ ಮೇಲೆ ದಾಳಿ ಮಾಡಿದ್ದ ಎರಡು ಹುಲಿಗಳನ್ನು ಅರವಳಿಕೆ ಮದ್ದು ಹೊಡೆದು, ಹಿಡಿದು “ಪುನರ್ವಸತಿ” ಕೇಂದ್ರಕ್ಕೆ ಕಳುಹಿಸಲಾಗಿತ್ತು. ಕಾಡು ಪ್ರಾಣಿಗಳು ಮತ್ತು ಮನುಷ್ಯರ ಸಹ ಜೀವನ ಇರುವಲ್ಲಿ ಈ ಸಂಘರ್ಷಗಳೂ ಸಾಮಾನ್ಯವಾಗಿರುತ್ತವೆ. ಹಾಗೆ ನೋಡಿದರೆ ಸುಂದರ್ ಬನ್, ರಣಥಂಬೂರ್, ಪನ್ನಾ ಹುಲಿ ಯೋಜನಾ ಪ್ರದೇಶಗಳಿಗೆ ಹೋಲಿಸಿದರೆ, ನಮ್ಮಲ್ಲಿ ಈ ಸಂಘರ್ಷ ಮತ್ತು ಸಾವುಗಳು ಅತ್ಯಂತ ಕಡಿಮೆ ಇವೆ.

ಇದೆಲ್ಲ ಸರಿ, ಆದರೆ “ಅನಿಷ್ಟಕ್ಕೆಲ್ಲಾ ಶನೇಶ್ವರನೇ ಕಾರಣ” ಎಂಬಂತೆ ಅರಣ್ಯ ಪ್ರದೇಶದ ಸುತ್ತ ಮುತ್ತ ನಡೆಯುವ ಯಾವುದೇ ಘಟನೆಗೆ ಸಂಪೂರ್ಣವಾಗಿ ಇಲಾಖೆಯೇ ಕಾರಣ ಎಂದು ಹೇಳುವುದು ಸಹ ಅಷ್ಟು ಸಮಂಜಸವಲ್ಲ. ಇದು ನನ್ನ ಮಾತುಗಳಲ್ಲ. ಜಗತ್ತಿನ ಅತಿ ಪ್ರಸಿದ್ಧ ನರಭಕ್ಷಕಗಳ ಬೇಟೆಗಾರ, ಅಧ್ಯಯನಕಾರ, ಬರಹಗಾರನಾದ ಜಿಮ್ ಕಾರ್ಬೆಟ್ ಹೇಳುವ ಮಾತುಗಳು. ಆನಂತರವೂ ಕೇವಲ ಇಲಾಖೆಯೇ ಹೊಣೆ ಎನ್ನುವುದಾದರೆ, ಮೊದಲು ಕಾರ್ಬೆಟ್ ಹೇಳುವುದನ್ನು ಅವನ ಮಾತುಗಳಲ್ಲಿಯೇ ಕೇಳಿ.

“ಹುಟ್ಟಿನಿಂದ ಎಲ್ಲ ಹುಲಿಗಳೂ ಸಾಮಾನ್ಯ ಹುಲಿಗಳೇ ಆಗಿರುತ್ತದೆ. ಆದರೆ ಒಂದು ಹುಲಿಯ ನಿಯಂತ್ರಣದಾಚೆಯ ಸಾಂದರ್ಭಿಕ ಒತ್ತಡಗಳಿಂದಾಗಿ ಅದು ತನಗೆ ಅನ್ಯವಾದ ಆಹಾರವೊಂದನ್ನು ತನ್ನದಾಗಿಸಿಕೊಳ್ಳುತ್ತದೆ. ಇಂತಹ ಹತ್ತು ಪ್ರಕರಣಗಳಲ್ಲಿ ಒಂಭತ್ತು ಪ್ರಕರಣಗಳು ಗಾಯಗಳ ಕಾರಣದಿಂದ ಸಂಭವಿಸಿದರೆ ಇನ್ನೊಂದು ಪ್ರಕರಣ ಸಾಮಾನ್ಯವಾಗಿ ವೃದ್ಧಾಪ್ಯವಾಗಿರುತ್ತದೆ. ಹುಲಿಗಳು ಹೀಗೆ ಗಾಯಗೊಳ್ಳಲು ಮನುಷ್ಯರ ನಿರ್ಲಕ್ಷ್ಯದ ಶಿಕಾರಿ ಒಂದು ಪ್ರಮುಖ ಕಾರಣ. ಹುಲಿಯೊಂದಕ್ಕೆ ಬಂದೂಕದಿಂದ ಹೊಡೆದು, ಅದಕ್ಕೆ ಗುಂಡೇಟು ಬಿದ್ದಮೇಲೆ ಅದನ್ನು ಹಿಂಬಾಲಿಸಿ, ಹುಡುಕಿ ಹೊಡೆಯದೇ ಹೋಗುವ ಬೇಜವಾಬ್ದಾರಿತನದಿಂದ ಕ್ರಮೇಣ ಅವು ಅನಿವಾರ್ಯವಾಗಿ ನರಭಕ್ಷಕಗಳಾಗುತ್ತವೆ.  

ಕೆಲವು ಸಾರಿ ಅವುಗಳ ಸ್ವಂತ ನಿರ್ಲಕ್ಷ್ಯದಿಂದಾಗಿಯೂ ಇದು ಸಂಭವಿಸುವುದುಂಟು. ಇದಕ್ಕೆ ಉತ್ತಮ ಉದಾಹರಣೆಯೆಂದರೆ ಹುಲಿಗಳು ಮುಳ್ಳುಹಂದಿಯಂತಹ ಅಪಾಯಕಾರಿ ಪ್ರಾಣಿಗಳನ್ನು ಶಿಕಾರಿ ಮಾಡಲು ಹೋಗಿ, ತಾಳ್ಮೆಗೆಟ್ಟು ಆಕ್ರಮಣ ಮಾಡಿ; ಅವುಗಳಿಂದ ಮುಳ್ಳುಗಳನ್ನು ಚುಚ್ಚಿಸಿಕೊಂಡು ಗಾಯಗೊಳ್ಳುತ್ತವೆ. ಹೇಗೆ ಯೋಚಿಸಿದರೂ ನೈಸರ್ಗಿಕ ನಿಯಮಗಳ ಪ್ರಕಾರ ಮನುಷ್ಯ ಹುಲಿಯ ಸಹಜ ಆಹಾರವಲ್ಲ. ಆದರೆ ಅಸಹಾಯಕ ಸ್ಥಿತಿಯಲ್ಲಿದ್ದ ಹುಲಿಯೊಂದು ಬದುಕಲೇಬೇಕಾದ ಒತ್ತಡದಿಂದಾಗಿ ಮನುಷ್ಯನನ್ನು ಹಿಡಿದು ತಿನ್ನಲು ಆರಂಭಿಸುತ್ತದೆ.

ಹುಲಿಯೊಂದು ತನ್ನ ಸಹಜ ಶಿಕಾರಿಯಲ್ಲಿ ಎರಡು ಮಾರ್ಗಗಳನ್ನು ಅನುಸರಿಸುತ್ತದೆ. ಒಂದು: ಶಿಕಾರಿಯ ಮೇಲೆ ನೇರವಾಗಿ ದಾಳಿಮಾಡಿ, ಬೆನ್ನಟ್ಟಿ ಕೊಲ್ಲುತ್ತದೆ. ಎರಡು: ಮರೆಯಲ್ಲಿ ಕೌಚಿ ಕುಳಿತು, ಹೊಂಚುಹಾಕಿ ಕಾದಿದ್ದು, ಸಮಯ ನೋಡಿ ಹಠಾತ್ತಾಗಿ ಮೇಲೆಬಿದ್ದು ದಕ್ಕಿಸಿಕೊಳ್ಳುತ್ತದೆ.

ಈ ಎರಡೂ ಸಂದರ್ಭಗಳಲ್ಲಿ ಅದರ ಶಿಕಾರಿಯ ಯಶಸ್ಸು ಬಹುಪಾಲು ಅದರ ಓಡುವ ವೇಗ ಮತ್ತು ಸಾಮರ್ಥ್ಯ ಹಾಗೂ ಅಷ್ಟೇ ಪ್ರಮಾಣದಲ್ಲಿ ಅದರ ಕೋರೆಹಲ್ಲು ಮತ್ತು ಪಂಜಗಳ ಸಾಮರ್ಥ್ಯ ಹಾಗೂ ದೃಢತೆಯನ್ನು ಅವಲಂಬಿಸಿರುತ್ತದೆ.

ಒಂದು ಅಥವಾ ಅದಕ್ಕಿಂತ ಹೆಚ್ಚು ಮಾರಕವಾದ ವ್ರಣಗಳಿಂದ ನರಳುತ್ತಿರುವ ಹುಲಿಯೊಂದು ಸಹಜವಾಗಿಯೇ ತನ್ನ ಓಟದ ವೇಗ ಮತ್ತು ಸಾಮರ್ಥ್ಯದಲ್ಲಿ ಸ್ಥಿರತೆ ಕಾಪಾಡಿಕೊಳ್ಳಲಾಗುವುದಿಲ್ಲ. ಮುರಿದ ಕೋರೆಹಲ್ಲು ಹಾಗೂ ಸವೆದ ಪಂಜಗಳಿಂದ ಸಹಜ ಶಿಕಾರಿಯನ್ನು ಮಣಿಸಲಾಗುವುದಿಲ್ಲ. ಹಾಗಾಗಿ, ಇಂತಹ ಹೆಚ್ಚಿನ ಶ್ರಮವೇನೂ ಅಗತ್ಯವಿಲ್ಲದೆ ಮಣಿಸಬಹುದಾದ ಮನುಷ್ಯ ಪ್ರಾಣಿಯನ್ನು ತನ್ನ ಉಳಿವಿಗೆ ಆಹಾರ ಮಾಡಿಕೊಳ್ಳುತ್ತವೆ.

ಆದರೂ ಹುಲಿಯೊಂದು ತನ್ನ ನೈಸರ್ಗಿಕ ಆಹಾರ ಕ್ರಮದಿಂದ ಅನ್ಯ ಆಹಾರ ಕ್ರಮವೊಂದಕ್ಕೆ ದಾಟುವುದು ಕೇವಲ ಆಕಸ್ಮಿಕ ಮಾತ್ರ. ಇದಕ್ಕೆ ಅತ್ಯುತ್ತಮ ಉದಾಹರಣೆ ಎಂದರೆ ‘ಮುಕ್ತೇಸರದ ನರಭಕ್ಷಕ’ ಹುಲಿಯ ಕಥೆ. ಆಕಸ್ಮಿಕವಾಗಿ ಮುಳ್ಳುಹಂದಿಯೊಂದರಿಂದ ತೀವ್ರವಾಗಿ ಗಾಯಗೊಂಡ ಆರೋಗ್ಯವಂತ ಹುಲಿ, ಯಾತನಾಮಯವಾದ ತನ್ನ ವ್ರಣಗಳನ್ನು ನೆಕ್ಕಿಕೊಳ್ಳುತ್ತಾ ಯಾವುದೋ ಒಂದು ಮರೆಯಲ್ಲಿ ಮಲಗಿದ್ದಾಗ, ಆಕಸ್ಮಿಕ ಹುಲ್ಲು ಕೊಯ್ಯಲು ಅಲ್ಲಿಗೆ ಹೋದ ಹೆಂಗಸೊಬ್ಬಳು ಅದರ ಮೂಗಿನ ಮುಂದಿನ ಹುಲ್ಲನ್ನೇ ಕೊಯ್ದಾಗ ಹುಲಿ ಅವಳ ಮೇಲೆ ಆಕ್ರಮಣ ಮಾಡುತ್ತದೆ. ಆಕ್ರಮಣ ಎಂದರೆ: ಕೊಲ್ಲುವ ದುರುದ್ದೇಶವಿಲ್ಲದೆ ಸಂದರ್ಭಕ್ಕೆ ಪ್ರತಿಕ್ರಿಯೆಯಾಗಿ, ಸುಮ್ಮನೆ ಮುಂಗಾಲಿನ ಪಂಜವನ್ನು ಅವಳತ್ತ ಬೀಸುತ್ತದೆ. ಅಷ್ಟಕ್ಕೇ ಆಕೆ ದಿವಂಗತಳಾಗುತ್ತಾಳೆ. ಆದರೆ ಅದು ಅವಳನ್ನು ತಿನ್ನಲು ಹೋಗುವುದಿಲ್ಲ. ಹುಲಿ ಅಲ್ಲಿಂದ ಎದ್ದು ಓಡಿಹೋಗಿ ಬೇರೊಂದು ಕಡೆ ಆಶ್ರಯ ಪಡೆಯುತ್ತದೆ. ಅಲ್ಲಿಗೂ ಮತ್ತೆ ಆಕಸ್ಮಿಕವಾಗಿ ಬರುವ ಸೌದೆ ಕಡಿಯುವ ಒಬ್ಬನಿಗೆ ಮುಖಾಮುಖಿಯಾಗುತ್ತದೆ. ಇಲ್ಲಿಯೂ ಸಂದರ್ಭಕ್ಕೆ ಪ್ರತಿಕ್ರಿಯೆಯಾಗಿ ಹಾಗೂ ಆತ್ಮರಕ್ಷಣೆಯ ದೃಷ್ಟಿಯಿಂದ ಆಕ್ರಮಣ ಮಾಡುತ್ತದೆ. ಆ ದಾಳಿಯಲ್ಲಿ ಅವನು ಸಾಯುತ್ತಾನೆ. ಆದರೆ ಅದು ತಕ್ಷಣ ಅವನನ್ನು ತಿನ್ನುವುದಿಲ್ಲ. 

ಆನೇಕ ದಿನಗಳಿಂದ ಹಸಿದಿದ್ದ ಹುಲಿ ಅವನ ಹಿಂಬದಿಯ ಸ್ವಲ್ಪ ಭಾಗವನ್ನು ಮಾತ್ರ ತಿನ್ನುತ್ತದೆ. ಅಂದರೆ ಈ ಎರಡೂ ಸಾವುಗಳು ಹುಲಿಯ ಉದ್ದೇಶಪೂರ್ವಕ ಹತ್ಯೆಗಳಲ್ಲ. ಅನಿಶ್ಚಿತ ಸಂದರ್ಭದಲ್ಲಿ, ಹಸಿವಿನ ಒತ್ತಡದಿಂದಾಗಿ ಅದು ಆ ಮನುಷ್ಯನ ಸ್ವಲ್ಪ ಭಾಗವನ್ನು ಮಾತ್ರ ತಿನ್ನುತ್ತದೆ. ಪೂರ್ತಿಯಾಗಿ ತಿನ್ನುವುದಿಲ್ಲ ಎಂಬುದನ್ನು ಗಮನಿಸಬೇಕು. ಇದಾದ ನಂತರದಲ್ಲಿ ಕ್ರಮೇಣ ಅದು ಪೂರ್ಣಪ್ರಮಾಣದ ನರಭಕ್ಷಕವಾಗುತ್ತದೆ. 
ತನ್ನ ಸಹಜ ಶಿಕಾರಿಗೆ ಅಸಮರ್ಥವಾದ ಹುಲಿ ಯಾ ಚಿರತೆಯೊಂದು ನರಭಕ್ಷಕವಾಗುವುದರ ಹಿಂದಿರುವ ಕಾರಣ, ಅಂತಹ ಅಸಮರ್ಥ ಸ್ಥಿತಿಯಲ್ಲಿ ಹೆಚ್ಚು ಶ್ರಮವಿಲ್ಲದೆ, ಸಲೀಸಾಗಿ ಸಿಗುವ ಆಹಾರದ ‘ಲಭ್ಯತೆ’ಯೇ ಹೊರತು ಮಾಂಸದ ರುಚಿಗಳಲ್ಲಿರುವ ವ್ಯತ್ಯಾಸವಲ್ಲ. 

ಹಾಗೆಯೇ ತನ್ನ ತಾಜಾ ಶಿಕಾರಿಯ ಬಳಿ ಇರುವ ಹುಲಿ, ಗಾಯಗೊಂಡ ಹುಲಿ ಹಾಗೂ ಮರಿಗಳೊಂದಿಗಿರುವ ತಾಯಿ ಹುಲಿಗಳೂ ಅಪರೂಪಕ್ಕೆ ಅವುಗಳ ಸಹಜ ನಡೆಗೆ ಅಡ್ಡಿಯಾದ ಮನುಷ್ಯರನ್ನು ಕೊಲ್ಲುವುದುಂಟು. ಆದರೆ ಯಾವ ನೆಲೆಯಿಂದ ಕಲ್ಪಿಸಿದರೂ ಇವುಗಳನ್ನು ನರಭಕ್ಷಕ ಹುಲಿಗಳ ಪಟ್ಟಿಗೆ ಸೇರಿಸಲಾಗುವುದಿಲ್ಲ. ಆದರೂ ಅನೇಕ ಬಾರಿ ಅವು ಹಾಗೆ ಕರೆಸಿಕೊಳ್ಳುವುದುಂಟು.

ಯಾವುದೇ ನಿರ್ಧಾರಕ್ಕೆ ಬರುವ ಮುನ್ನ ಮೃತರ ಶವಪರೀಕ್ಷೆಯಾಗಬೇಕು. ಮನುಷ್ಯನೊಂದಿಗಿನ ಅನಿರೀಕ್ಷಿತ ಮುಖಾಮುಖಿಯಲ್ಲಿ ಆತಂಕಕ್ಕೀಡಾಗುವ ಹುಲಿ, ಚಿರತೆ ಅಥವಾ ಬಯಲು ಸೀಮೆಯ ಕಾಡುಗಳಲ್ಲಿನ ತೋಳ, ಸೀಳು ನಾಯಿಗಳು ಆತ್ಮರಕ್ಷಣೆಗಾಗಿ ಮಾಡುವ ದಾಳಿಯಲ್ಲೂ ಒಬ್ಬ ಮನುಷ್ಯ ಸಾಯುವುದನ್ನು ತಪ್ಪಾಗಿ ವ್ಯಾಖ್ಯಾನ ಮಾಡಿ, ಆ ಪ್ರಾಣಿಗಳನ್ನು ನರಭಕ್ಷಕಗಳ ಪಟ್ಟಿಗೆ ಸೇರಿಸಿರುವ ಅನೇಕ ಉದಾಹರಣೆಗಳನ್ನು ನಾನು ಕಂಡಿದ್ದೇನೆ. ಜನರೇ ಕೆಲವನ್ನು ಕೊಂದಿದ್ದನ್ನೂ ಸಹ. ಆದರೆ ಹೀಗಾಗುವುದು ಸರಿ ಅಲ್ಲ". (ಮೂಲ: Man-eaters of Kumaon & More Man-eaters of Kumaon, Jim Corbett. ಕನ್ನಡ ರೂಪ: ಹಿಮಾಲಯದ ನರಭಕ್ಷಕಗಳು. ಅನುವಾದ: ಡಾ. ಟಿ.ಎಸ್.‌ ವಿವೇಕಾನಂದ)

ಈಗ ಹೇಳಿ, ಇವು ಸಾಮಾನ್ಯ ಘಟನೆಗಳೋ ಅಥವ ಅಸಾಮಾನ್ಯ ಘಟನೆಗಳೋ? ಇವು ಉದ್ದೇಶಪೂರ್ವಕವಾಗಿ ಸಂಭವಿಸಿದವೋ? ಇಲ್ಲಾ ಅಸಹಾಯಕ ಹುಲಿಯೊಂದರ ಉಳಿಯುವ ಪ್ರಯತ್ನವೋ? ಇದಕ್ಕೆ ಅರಣ್ಯ ಇಲಾಖೆ ಮಾತ್ರ ಕಾರಣವೇ? ಪುಟ್ಟಸ್ವಾಮಿ ಗೌಡರ ಸಾವಿಗೆ ಯಾರು ಹೊಣೆ? ಇಲ್ಲಿ ನಮ್ಮದೇನೂ ಪಾತ್ರ ಇಲ್ಲವೇ?
 

ನಿಮಗೆ ಏನು ಅನ್ನಿಸ್ತು?
0 ವೋಟ್
eedina app