ಭಾರತ್ ಜೋಡೋ ಯಾತ್ರೆ | ಭಾರತವನ್ನು ಜೋಡಿಸಿ ಕೂಡಿಸುವ ಮಹಾನಡಿಗೆ

jodo kerala

ರಾಹುಲ್ ಗಾಂಧಿಯವರ ಬಳಿಗೆ ಧಾವಿಸಿ ಬಂದು ಕಣ್ಣೀರು ಹಾಕುವ ತಾಯಂದಿರು,  ಯುವಕರು, ಜನಸಾಮಾನ್ಯರು ಈ ದೇಶ ಯಾವುದಕ್ಕೆ ಹಂಬಲಿಸುತ್ತಿದೆ ಎಂದು ತಮ್ಮ  ಭಾವೋದ್ವೇಗ ತುಂಬಿದ ಮುಖ ಪರಂಪರೆಯಲ್ಲಿ ತೋರುತ್ತಿದ್ದಾರೆ. ನಾಳೆ ಕರ್ನಾಟಕಕ್ಕೆ ಅಡಿ ಇಡಲಿರುವ ಮಹಾನಡಿಗೆಗೆ ನಮ್ಮ ಹೆಜ್ಜೆಗಳೂ ಸಹಜವಾಗಿ ಜೊತೆಗೂಡಬೇಕಾಗಿದೆ

ದೇಶದ ಜನ ಸಾಮಾನ್ಯನ ಅಂತರಂಗದಲ್ಲಿ ಒಂದು ತೀವ್ರವಾದ ಅಸ್ವಸ್ಥತೆ, ತಳಮಳ, ಅಸಹಾಯಕತೆ, ಏಕಾಕಿತನ, ಭೀತಿ, "ಮನೆಯೊಳಗೆ ಮನೆಯೊಡೆಯನಿದ್ದಾನೋ ಇಲ್ಲವೋ" ಎಂಬ ಯೋಜಿತ ಅರಾಜಕತೆ ಕಿಚ್ಚಿಲ್ಲದ ಬೇಗೆಯಂತೆ ಸುಡುತ್ತಿರುವಾಗ, ತಂಗಾಳಿಯಂತೆ ಸುಳಿದು ಬಂದದ್ದೇ ರಾಹುಲ್ ಗಾಂಧಿಯವರ ಭಾರತ್ ಜೋಡೋ‌ ಪಾದಯಾತ್ರೆ.

Eedina App

ಇದೀಗ ರಾಹುಲ್ ಗಾಂಧಿಯವರು ಕಾಂಗ್ರೆಸ್ ಪಕ್ಷದ ಮೂಲಕ ಕರೆಕೊಟ್ಟಿದ್ದರೂ, ಈ ಜಾಗೃತಿ‌ ಚಳವಳಿ  ಭಾರತದ ಆತ್ಮ ಸಾಕ್ಷಿಯನ್ನು ಎಚ್ಚರಿಸುತ್ತ ಎಲ್ಲರನ್ನೂ ಎಲ್ಲವನ್ನೂ ತನ್ನ ಪ್ರೀತಿ ವಾತ್ಸಲ್ಯ, ಭರವಸೆ, ಸಮೀಪೀಕರಣದ ತೆಕ್ಕೆಗೆ ತೆಗೆದುಕೊಳ್ಳುತ್ತಿದೆ‌‌.

ಹರಿವ ನದಿಯಂತೆ ಅದು ಭಾರತದ ಭೂ ಶಿರವೆಂದೇ ಕರೆಯಕಾಗುವ ಕನ್ಯಾಕುಮಾರಿಯಲ್ಲಿ ಹುಟ್ಟಿ , ಮೈತುಂಬಿಕೊಂಡು ತುಂಬುತೊರೆಯಾಗಿ ಹರಿಯಲಾರಂಭಿಸಿದೆ. ರಾಹುಲ್ ಗಾಂಧಿಯವರ ಬಳಿಗೆ  ಧಾವಿಸಿ ಬಂದು ಕಣ್ಣೀರು ಹಾಕುವ ತಾಯಂದಿರು, ಹೆಣ್ಣು‌ಮಕ್ಕಳು, ಕಿಶೋರರು, ಯುವಕರು, ಕೂಲಿ ನಾಲಿ ಮಾಡಿ ಬದುಕುವ ಜನಸಾಮಾನ್ಯರು... ಈ ದೇಶ ಯಾವುದಕ್ಕೆ ಹಂಬಲಿಸುತ್ತಿದೆ ಎಂದು ತಮ್ಮ  ಭಾವೋದ್ವೇಗ ತುಂಬಿದ ಮುಖ ಪರಂಪರೆಯಲ್ಲಿ ತೋರುತ್ತಿದ್ದಾರೆ.‌

AV Eye Hospital ad

ಕೇವಲ ಕೋಮು ದ್ವೇಷ, ಸಂಖ್ಯೆ ಮತ್ತು ಶಕ್ತಿಯಲ್ಲಿ ದುರ್ಬಲವಾಗಿರುವ ಸಮುದಾಯಗಳಾದ ಮಹಿಳೆ, ದಲಿತ, ಲೇಖಕ ಬುದ್ಧಿಜೀವಿ, ವಿದ್ಯಾವಂತರ ಕೊಲೆ, ನಿಂದನೆ, ಅವಹೇಳ‌ನ, ಭೀತಿ ಸೃಷ್ಟಿ, ಬೆದರಿಕೆ, ಭ್ರಷ್ಟಾಚಾರಗಳನ್ನು ಬೆಂಬಲಿಸಿದ, ಕೈಹಿಡಿದ, ರಕ್ತಸಿಕ್ತ ಬಣ್ಣದಲ್ಲಿ ಓಕುಳಿಯಾಡಿದ ಭಾರತೀಯರು ಇಂತಹ ವಾತ್ಸಲ್ಯದ ಕೇಡಿಲ್ಲದ ಮನೋಲ್ಲಾಸಕ, ಬಣ್ಣ ಬಣ್ಣದ ನಗೆ ಬೀರಬಲ್ಲವೆಂದು ತೋರುತ್ತಿರುವುದೇ ನಮ್ಮ ಬಗ್ಗೆ ನಾವು ಹೆಮ್ಮೆ ಪಡುವ ಸಂಗತಿಯಾಗಿದೆ.‌

ಹೀಗಾಗಿಯೇ ಇದನ್ನರಿತ ಎಲ್ಲರೂ ಭಾರತ್ ಜೋಡೋ ಜತೆಗೆ ಹೆಜ್ಜೆ ಹಾಕುತ್ತಿದ್ದೇವೆ. ಕೆಲವರು ಭೌತಿಕವಾಗಿ ರಾಹುಲ್ ಗಾಂಧಿಯವರ ಜೊತೆ ರಸ್ತೆಗಳ‌ ಮೇಲಿದ್ದರೆ, ಹಲವರು ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ನತ್ತ ಒಲವು ತುಂಬಿ ಹೆಜ್ಜೆ ಹಾಕುತ್ತಿದ್ದೇವೆ.

ಇದು 'ಭಾರತ್ ಜೋಡೋ' ... 'ಐಕ್ಯತಾ' ಎಂಬ ಸಂಸ್ಕೃತದ ಕೃತಕ ಪದ ಬಳಕೆಯಲ್ಲಿ ಕಟ್ಟಿದ ಸಡಿಲ ಆದರ್ಶದ ತೋರಿಕೆಯ ಪಯಣ ಅಲ್ಲ. ಸಾಮಾನ್ಯನ ಆತ್ಮದ ಹಂಬಲವೇ ಪದವಾಗಿ ಹೊಮ್ಮಿದ ಹಾಡು. ಆದ್ದರಿಂದ ಯಾರೂ ಇದನ್ನು ಕೃತಕವೂ ದುರ್ಬಲವೂ ತೋರಿಕೆಯದೂ ಆದ 'ಐಕ್ಯತಾ ಯಾತ್ರೆ'ಯನ್ನಾಗಿ‌ ಮಾಡದಿರಲಿ. ಕರ್ನಾಟಕದಲ್ಲಿ ಆ ಪ್ರಮಾದ ನಡೆಯುವಂತೆ ಕಾಣುತ್ತಿದೆ‌‌‌. ಜನ ಸಾಮಾನ್ಯರು ಅದನ್ನು ವಿಫಲಗೊಳಿಸಿ 'ದೇಶ ಜೋಡಣಾ ಪಯಣ‌' ಅಂತ ಕರೆಯುವಂತಾಗಲಿ.

jodo

2013ರಲ್ಲಿ ಬಿಜೆಪಿ ಗೆದ್ದ ದಿನದಿಂದಲೇ ಸಂಸತ್ತಿನಲ್ಲಿ ಚರ್ಚಿಸದೆ ಕ್ಯಾಬಿನೆಟ್ ನಲ್ಲಿ ಸಿರಿವಂತರಿಗೆ ಸಸ್ತಾ ಬೆಲೆಯಲ್ಲಿ ಸಾಗುವಳಿ ಭೂಮಿಯನ್ನು ಮಾರುವ ಪ್ರಸ್ತಾಪದ‌ ಬಿಲ್ ಅನ್ನು ಪಾಸು ಮಾಡಿಕೊಳ್ಳುವ ದುಸ್ಸಾಹಸ ಮತ್ತು ವಿಫಲ ಪ್ರಯತ್ನದೊಂದಿಗೆ ಭಾರತದ ಸಾಮಾನ್ಯನ ತಲೆಯ ಮೇಲೆ ತನ್ನ ಮೊದಲ ವಾಮನ ಹೆಜ್ಜೆ ಇಟ್ಟ ಬಿಜೆಪಿ, ಗಾಂಧಿ ಹತ್ಯೆಯ ಕಾರಣಕರ್ತ ಸಂಘಟನೆಯಾದ, ಸಮಾಜ ಮತ್ತು ರಾಷ್ಟ್ರ ವಿಭಜಕ ಶಕ್ತಿಯಾದ ಆರೆಸ್ಸಸ್ ಮತ್ತು ಅದರ ಸಮರ್ಥಕ ಪರಿವಾರವನ್ನು ಕೈಬಿಟ್ಟು ಪಿಎಫ್ಐ ಪರಿವಾರ ಸಂಘಟನೆಗಳನ್ನು ಏಕ ಪಕ್ಷೀಯವಾಗಿ ನಿಷೇಧಿಸುವವರೆಗೆ ವಿಧ್ವಂಸಕ ಭಂಗಿಯಲ್ಲೇ ನಡೆದುಕೊಳ್ಳುತ್ತ ಜನಾಂಗ ದ್ವೇಷವನ್ನು ಜೀವಂತವಾಗಿ ಇಡುತ್ತ ಹಿಂದೆಂದೂ ಕಂಡು‌ಕೇಳರಿಯದ ಭ್ರಷ್ಟಾಚಾರದ ತನ್ನ ದುರಾಡಳಿತವನ್ನು ನಡೆಸಿಕೊಂಡು ಬಂದಿದೆ.

ದುರದೃಷ್ಟವಶಾತ್ ದೇಶದ ಸಾಮಾಜಿಕ, ಧಾರ್ಮಿಕ ಸಾಮರಸ್ಯ ಹಾಗೂ ರಾಷ್ಟ್ರೀಯ ಏಕತೆಯನ್ನು ಪಣಕ್ಕಿಟ್ಟ ಈ ರಾಷ್ಟ್ರ ಘಾತುಕ ನೀತಿಗಳನ್ನು ಯಾವುದೇ ಎಗ್ಗಿಲ್ಲದೆ ಮಾಡಿಕೊಂಡು ಬರುತ್ತಿರುವ ಸಂಘ ಪರಿವಾರ, ರಾಹುಲ್ ಗಾಂಧಿಯವರು ಅನೇಕ ಸಲ ಎಚ್ಚರಿಸಿದಂತೆ ಎಲ್ಲ ಸಾಂವಿಧಾನಿಕ ಸಂಸ್ಥೆಗಳನ್ನು  ಕೆಡವಿ ಭಗ್ನಗೊಳಿಸುವ ಮೂಲಕ ಸಂವಿಧಾನವನ್ನು ನಿಸ್ಸತ್ವಗೊಳಿಸಿ ಬುಲ್ಡೋಜರ್ ನಿಲುವಿನಲ್ಲಿ ಮುನ್ನಡೆದಿದ್ದಾರೆ.

ಎಲ್ಲ ನೀತಿಗಳಿಗೂ ಇವರು ಬಳಸುತ್ತಿರುವುದೇ ಒಡೆದು ಆಳುವ ನೀತಿ‌. ಮುಸ್ಲಿಮರ ಕುರಿತು ಹಿಂದೂಗಳ ಮನಸ್ಸಲ್ಲಿರುವ ಭೇದ ಭಾವದ ಬೆಂಕಿಗೆ ಎಣ್ಣೆ ಸುರಿಯುತ್ತ ತಮ್ಮ ರಾಜಕೀಯ ಬಂಡವಾಳವನ್ನು ದಿನೇ ದಿನೇ ಬಲಿತು ಬಲಗೊಳ್ಳುತ್ತಿರುವ ಸಂಘ ಪರಿವಾರ ಇದಕ್ಕಾಗಿ ಪತ್ರಿಕೆಗಳು, ಟಿವಿ ಮಾಧ್ಯಮಗಳು, ಸೋಷಿಯಲ್ ಮೀಡಿಯಾದ ಸಮಸ್ತ ವೇದಿಕೆಗಳನ್ನು ಕೊಂಡುಕೊಂಡು ನಿರಂತರವಾಗಿ ಸುಳ್ಳುಗಳನ್ನು   ಬಿತ್ತಿ ಬೆಳೆ ತೆಗೆದಿದ್ದಾರೆ. ಮಹಾತ್ಮ ಗಾಂಧಿಯವರೇ ಈ ಪಾಪಿಗಳ ಕೈಯಲ್ಲಿ ನಿಂದನೆಗೊಳಗಾಗಿದ್ದಾರೆ   ಮಹಾತ್ಮನನ್ನು ಕೊಂದ ನೀಚ ಮನಸ್ಥಿತಿ ಮಹಾತ್ಮನ ವಿರುದ್ದ ನಿಂದನೆಗಿಳಿಯುವದರಲ್ಲಿ, ಅಪಪ್ರಚಾರ ಮಾಡುವುದರಲ್ಲಿ ಹಿಂದೆ ಸರಿಯುತ್ತದೆ ಎಂದು ನಿರೀಕ್ಷಿಸಲು ಹೇಗೆ ಸಾಧ್ಯ?

ಸ್ವಾತಂತ್ರ್ಯ ಹೋರಾಟ ಮತ್ತು ರಾಷ್ಟ್ರ ನಿರ್ಮಾಣದ ಮಹತ್ವ ದ ಧ್ಯೇಯಗಳನ್ನು ಹೊಂದಿ ಹೋರಾಟಕ್ಕಿಳಿದಿದ್ದ ಗಾಂಧೀಜಿ, ನೆಹರೂ- ಲೋಹಿಯಾ- ಅಂಬೇಡ್ಕರ್ ಮುಂತಾದ ಸುಧಾರಕ ಚೇತನಗಳು ಜಾತಿ ಲಿಂಗ ಭೇದಗಳಲ್ಲಿ ಹೂತುಹೋಗಿರುವ ನಮ್ಮ ಸಮಾಜವನ್ನು ಈ ತ್ರಿವಳಿ ಭೇದಗಳಿಂದ ಹೊರತರುವ ಪ್ರಯಾಸಪೂರ್ಣ ಕೆಲಸವನ್ನು ಪೂಜ್ಯ ಕರ್ತವ್ಯವಾಗಿ ಸ್ವೀಕರಿಸಿದ್ದಾರೆ ಅರೆಸ್ಸೆಸ್ ಪರಿವಾರ. ಈ ಭೇದ ಅಥವಾ ಒಡಕಿನ ಬೆಂಕಿಗೆ ಎಣ್ಣೆ ಸುರಿಯುವುದನ್ನೇ ರಾಜಕೀಯವಾಗಿ‌ ಮಾಡಿಕೊಂಡು ‌ಕಳೆದ ಮುವ್ವತ್ತು ವರ್ಷಗಳ ಕಾಲ ಜನರ ಮನಸ್ಸನ್ನು ಒಡೆದ ಮನೆಯನ್ನಾಗಿ ಮಾಡಿದರು.

jodo 4

ಇದಕ್ಕಾಗಿ ಸಂಘ ಪರಿವಾರ ಮಾಡದ ಪಾಪ ಕಾರ್ಯವಿಲ್ಲ. ಹಿಡಿಯದ ಪಾಪದ ಹಾದಿಯಿಲ್ಲ. ಅದು ಜನ ಸಾಮಾನ್ಯನ ಕೀಲುಗಳನ್ನೂ ಮುರಿದು ಹಾಕಿದರೆ ಮಾತ್ರ ತಾನು ತನ್ನ ಗುರಿ ಮುಟ್ಟಬಹುದೆಂದು ಪ್ರತಿ‌ನಿತ್ಯವೂ ಜನ ವಿರೋಧಿಯಾಗಿ ನಡೆದುಕೊಂಡಿದೆ.

2002ರ ಗುಜರಾತ್ ಸಾಮೂಹಿಕ ಹತ್ಯೆಯಿಂದ ಆರಂಭಿಸಿ, ಬಾಬ್ರಿ‌ ಮಸೀದಿ ದ್ವಂಸದ ಬಳಿಕ ರಾಮ ಜನ್ಮ ಭೂಮಿಯನ್ನು ಕೋರ್ಟ್‌ ಮೂಲಕ ತನ್ನ ವಶಕ್ಕೆ ಪಡೆಯುವವರೆಗೆ, ಕಾಶ್ಮೀರದ ಸ್ವಾಯತ್ತತೆಯನ್ನು ಹರಿದು ಬಿಸುಡುವವರೆಗೆ, ಸಿಎಎ ಕಾಯ್ದೆಯಿಂದ ಪಿಎಫ್‌ಐ ನಿಷೇಧದವರೆಗೆ ಬಿಜೆಪಿ ಮುಸ್ಲಿಂ ವಿರೋಧದ ಕಾರ್ಯಾಚರಣೆ ನಡೆಸಿದೆ.

ಕಳೆದ ಇಪ್ಪತ್ತೇಳು ವರ್ಷಗಳಿಂದ ತಿಪ್ಪೆಯ ಪಾಲಾಗಿರುವ ಮಹಿಳಾ ಮೀಸಲು ಬಿಲ್ ಅನ್ನು ಕಳೆದ ಎಂಟು ವರ್ಷಗಳಲ್ಲಿ ಕಣ್ಣೆತ್ತಿಯೂ ನೋಡದೆ ಮಾತಿನಲ್ಲಿ ಮಾತ್ರ ಮಹಿಳೆಯರನ್ನು ಮಾತೆಯರೆನ್ನುವ ಪರಿವಾರ ಹೆಂಗಸರನ್ನು ಎಲ್ಲಿಡಬೇಕೆಂದುಕೊಂಡಿದೆಯೋ ಅಲ್ಲೇ ಇಟ್ಟಿದೆ.

ಸಮಾಜ ನಾಚಿಕೆಯಿಂದ, ಪಾಪ ಪ್ರಜ್ಞೆಯಿಂದ ತಲೆತಗ್ಗಿಸಬೇಕಾದ ವೇಶ್ಯಾವಾಟಿಕೆಗಳನ್ನು ಮುಚ್ಚಿ   ಸಂತ್ರಸ್ತ ಮಹಿಳೆಯರಿಗೆ ಗೌರವಯುತ ಬದುಕನ್ನು ಕಲ್ಪಿಸಲು ಮುಂದಾಗದ ಅನಿವಾರ್ಯ ಪರಿಸ್ಥಿತಿ ನಿರ್ಮಿಸಿರುವ ಸರ್ಕಾರದಲ್ಲಿ ಕೋರ್ಟುಗಳು ಮಹಿಳೆಯರ ಲೈಂಗಿಕ ದಾಸ್ಯವನ್ನು ಗೌರವಾನ್ವಿತ ವೃತ್ತಿ  ಎಂದು ಪರಿಗಣಿಸಬೇಕೆಂದು ಕಾಯ್ದೆ ಮಾಡುವ ಪರಿಸ್ಥಿತಿ ಬಂದಿದೆ.

ದಲಿತ ನಾಯಕತ್ವವನ್ನು ಸಂಪೂರ್ಣವಾಗಿ‌ ಕಬ್ಜಾ ಮಾಡಿರುವ ಮೋದಿಯ ಬಿಜೆಪಿ ಆಡಳಿತ ಅವರನ್ನು ಸಂಪೂರ್ಣವಾಗಿ ಅಗ್ರಹಾರದ ಕಾವಲು ನಾಯಿಗಳನ್ನಾಗಿ‌ ಮಾಡಿಕೊಂಡಿದೆ. ಇವತ್ತು ಮೋದಿಯ‌ ಕೇಂದ್ರ ಸರ್ಕಾರದಲ್ಲಿ ಮೋದಿಗೆ ಬಲ ತಂದಿರುವುದೇ 77 ಜನ ಮೀಸಲು ಸಂಸದರು. ಮೋದಿ ಪ್ರಧಾನ ಮಂತ್ರಿತ್ವದ ಎರಡು ಅವಧಿಗಳಲ್ಲೂ ದಲಿತ ಸಮುದಾಯಗಳ ಹಿತಕ್ಕಾಗಿ ಶಾಸಕಾಂಗಗಳಲ್ಲಿ ಹೋರಾಡಲು ಅಂಬೇಡ್ಕರ್ ಅವರು ಅವಿರತ ಹೋರಾಟದಿಂದ ತಂದಿತ್ತ ಮೀಸಲು ರಾಜಕೀಯ ನಾಯಕತ್ವವನ್ನು ಅರೆಸ್ಸೆಸ್ ಪರಿವಾರದ ಪಾದ ಸೇವೆಗೆ ಅರ್ಪಿಸಿರುವ ಈ ಎಪ್ಪತ್ತೇಳು ಜನ ಪರಿಶಿಷ್ಟ ಮೀಸಲು ಸಂಸದರು ಮೋದಿ ಸರ್ಕಾರಕ್ಕೆ ಬೇಷರತ್ ಬೆಂಬಲ ಕೊಟ್ಟು ಕಲ್ಲಿನಂತೆ ನಿಂತಿದ್ದಾರೆ.

bharath jodo kerala

ಇವರ ಸಮ್ಮತಿಯಿಂದಲೇ ಸಂವಿಧಾನ ವಿರೋಧಿಯಾದ ಆರ್ಥಿಕ ಹಿಂದುಳಿದಿರುವಿಕೆಗೆ ಮೀಸಲಾತಿ ನೀಡುವ ಕಾಯ್ದೆ ಮಾಡಲಾಗಿದೆ. ಬ್ರಾಹ್ಮಣ ಮತ್ತು ಠಾಕೂರ್ ಸಮುದಾಯಗಳಂತಹ ಬಲಿಷ್ಟ ಮೇಲ್ಜಾತಿಗಳು ಆರ್ಥಿಕವಾಗಿ ಹಿಂದುಳಿದಿದ್ದೇವೆಂದು ಮೀಸಲಾತಿ ಹೊಡೆದುಕೊಂಡಿದ್ದಾರೆ. ಪರಿಶಿಷ್ಟ ಜಾತಿ‌ ಮತ್ತು ಬುಡಕಟ್ಟುಗಳ ಸಮ್ಮತಿಯಿಂದಲೇ ಈ ಸರ್ಕಾರ ನೋಟ್ ಬ್ಯಾನ್ ಮಾಡಿ ಬಡವರನ್ನು ಬೀದಿಯಲ್ಲಿ‌ ನಿಲ್ಲಿಸಿತು.

ಇಂತಹ ಸಂದರ್ಭದಲ್ಲಿಯೂ ತನಗಾದ ಹಾನಿಯನ್ನು ನೋಡಿಕೊಂಡು ಗೋಳಿಡುವ, ಸಂಕಟದಿಂದ  ತಳಮಳಿಸುವ, ಜಿದ್ದಿನಿಂದ ಬಂಡೇಳುವ ಆಶಯ, ಭರವಸೆಯ ಸಂಕೇತವಾಗಿ ರಾಹುಲ್ ಅವರ ನಗೆ ಮೊಗದ ಭಾರತ್ ಜೋಡೋ ಕಾಣುತ್ತಿದೆ‌.

ಇದನ್ನು ಓದಿದ್ದೀರಾ? ಭಾರತ್‌ ಜೋಡೋ ಯಾತ್ರೆ | ಜೋಡಿಸುವ ಕೆಲಸವೆಂದರೆ ಪ್ರಶ್ನೆ -ಉತ್ತರಗಳನ್ನು ಜೋಡಿಸುವುದು

ಹೀಗಾಗಿ ನಾಳೆ ಕರ್ನಾಟಕಕ್ಕೆ ಅಡಿ ಇಡಲಿರುವ ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ಮತ್ತು ಸಹ ಮನಸ್ಕ ರಾಜಕೀಯ ಪಕ್ಷಗಳು, ಜನ ಸಂಘಟನೆಗಳು ಮತ್ತು ಜನ ಸಾಮಾನ್ಯರ 'ಭಾರತ್ ಜೋಡೋ' ಮಹಾನಡಿಗೆಯ ಕೊರತೆಗೆ ನಮ್ಮ ಹೆಜ್ಜೆಗಳೂ ಸಹಜವಾಗಿ ಜೊತೆಗೂಡಬೇಕಾಗಿದೆ. ಕನಿಷ್ಠಪಕ್ಷ ಮಾನಸಿಕವಾಗಿಯಾದರೂ ನಾವು ಈ ಮಹಾನಡಿಗೆಯ ಅರ್ಥಪೂರ್ಣತೆಯನ್ನೂ, ಅನಿವಾರ್ಯತೆಯನ್ನೂ ಮನಗಾಣಬೇಕಾಗಿದೆ. ಯಾಕೆಂದರೆ ಇದು ಭಾರತ ಪ್ರಜಾಪ್ರಭುತ್ವವಾಗಿ ಉಳಿಯಲು ಇರುವ ಅಪತ್ಕಾಲದ ನಡಿಗೆಯಾಗಿದೆ. ಯಾವುದೇ ಬಗೆಯ‌ ಸಿನಿಕತನಕ್ಕೆ ಇದು‌ ಕಾಲವಲ್ಲ‌ ಎಂಬ ವಿವೇಕ ನಮ್ಮನ್ನು ಕಾಪಾಡಲಿ.

ನಿಮಗೆ ಏನು ಅನ್ನಿಸ್ತು?
5 ವೋಟ್
eedina app