ಹಿಜಾಬ್‌ ಹೇರಿಕೆ / ನಿರ್ಬಂಧ | ಕೋಮು, ಧರ್ಮರಾಜಕಾರಣದಲ್ಲಿ ನಲುಗುತ್ತಿರುವವಳು ಮುಸ್ಲಿಂ ಮಹಿಳೆ

ಹಿಜಾಬ್‌ ವಿರೋಧಿ ಹೋರಾಟ -ಇರಾನ್‌

ಕರ್ನಾಟಕದಲ್ಲಿ ಹಿಜಾಬ್ ಹಾಕಿಕೊಳ್ಳದಂತೆ ಸರ್ಕಾರ ನಿರ್ಬಂಧಿಸಿದರೆ, ಇರಾನಿನ ಇಸ್ಲಾಮಿಕ್‌ ಸರ್ಕಾರ ಹಿಜಾಬ್ ಹಾಕಿಕೊಳ್ಳಲೇಬೇಕೆಂದು ಒತ್ತಾಯಿಸುತ್ತಿದೆ. ಇವೆರಡೂ ಮಹಿಳೆಯ ವಸ್ತ್ರ ಮತ್ತು ಕೋಮು ರಾಜಕಾರಣದ ನೆಲೆಗಳನ್ನು ಸೂಚಿಸುವುದಿಲ್ಲವೇ? ಇವರಿಬ್ಬರ ಕೋಮುರಾಜಕಾರಣ ಮತ್ತು ಧರ್ಮರಾಜಕಾರಣದಲ್ಲಿ ನಲುಗುತ್ತಿರುವುದು ಮಾತ್ರ ಮಹಿಳೆ

ಈ ವರ್ಷದ ಆರಂಭದಲ್ಲಿ ಉಡುಪಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಿಜಾಬ್ ಧರಿಸಿ ಬಂದ ಕಾರಣಕ್ಕೆ ಆರು ವಿದ್ಯಾರ್ಥಿನಿಯರನ್ನು ತರಗತಿಗಳಿಂದ ಹೊರಗಿಡಲಾಯಿತು. ಇದರ ಬೆನ್ನ ಹಿಂದೆಯೇ ಅನೇಕ ಕಡೆಗಳಲ್ಲಿ ಶಾಲಾ ಕಾಲೇಜುಗಳಲ್ಲಿ ಇದೇ ರೀತಿಯ ನಿರ್ಬಂಧಗಳನ್ನು ಹಾಕಲು ಆರಂಭಿಸಿದವು. ಹಿಜಾಬ್ ಧರಿಸುವ ಹಕ್ಕು ಮತ್ತು ಶಿಕ್ಷಣದ ಹಕ್ಕಿನಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಲು ಸರ್ಕಾರ ಸೂಚಿಸಿತು. ಕರ್ನಾಟಕದಲ್ಲಿ ಹಿಜಾಬ್ ಹಾಕಿಕೊಳ್ಳದಂತೆ ಸರ್ಕಾರ ನಿರ್ಬಂಧಿಸಿದರೆ, ಇರಾನಿನ ಇಸ್ಲಾಮಿಕ್‌ ಸರ್ಕಾರ ಹಿಜಾಬ್ ಹಾಕಿಕೊಳ್ಳಲೇಬೇಕೆಂದು ಒತ್ತಾಯಿಸುತ್ತಿದೆ. ಇವೆರಡೂ ಮಹಿಳೆಯ ವಸ್ತ್ರ ಮತ್ತು ಕೋಮು ರಾಜಕಾರಣದ ನೆಲೆಗಳನ್ನು ಸೂಚಿಸುವುದಿಲ್ಲವೇ? ಇವರಿಬ್ಬರ ಧರ್ಮರಾಜಕಾರಣದಲ್ಲಿ ನಲುಗುತ್ತಿರುವವಳು ಮಹಿಳೆಯಾಗಿದ್ದಾಳೆ.

Eedina App

ಈ ಹಿಂದೆ ಖೋಮೇನಿಯ ಆಡಳಿತಾವಧಿಯಲ್ಲಿ ಇರಾನಿನಲ್ಲಿ ಟಿ.ವಿಯಲ್ಲಿ ಸುದ್ದಿವಾಚಕಿಯರ ಧ್ವನಿ ಕೇಳಿ ಆ ಧ್ವನಿಗೆ ಪುರುಷರಿಗೆ ಉದ್ರೇಕವಾಗುತ್ತದೆ. ಆದ್ದರಿಂದ ಟಿ.ವಿಯಲ್ಲಿ ಮಹಿಳೆಯರನ್ನು ನೇಮಿಸಕೂಡದು ಎಂದು ಆದೇಶ ಹೊರಡಿಸಿದಾಗ ಸುಮಾರು 50,000 ಮಹಿಳೆಯರು ತೆಹೆರಾನಿನ ಬೀದಿ ಬೀದಿಗಳಲ್ಲಿ ಘೋಷಣೆ ಕೂಗಿ “ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆಯೇಕೆ?” ಎಂದು ಪ್ರಶ್ನಿಸಿ ಹೋರಾಟಕ್ಕಿಳಿದಾಗ ಖೋಮೇನಿ ತನ್ನ ಆದೇಶವನ್ನು ಹಿಂದಕ್ಕೆ ಪಡೆದಿರುವುದು ಈಗ ಇತಿಹಾಸ. ಇರಾನಿನಲ್ಲಿ 1979ರಲ್ಲಿ ನಡೆದ ಇಸ್ಲಾಮಿಕ್ ಕ್ರಾಂತಿಯ ನಂತರ ಅಲ್ಲಿ ಹಿಜಾಬನ್ನು ಮಹಿಳೆಯರು ಕಡ್ಡಾಯವಾಗಿ ಧರಿಸಲೇಬೇಕೆಂಬ ಡ್ರೇಸ್ ಕೋಡ್ ಜಾರಿಯಾಯಿತು.

ಹಿಜಾಬ್ ಸರಿಯಾಗಿ ಧರಿಸದ ಕಾರಣಕ್ಕೆ  ಇರಾನಿನ ಕುರ್ದಿಸ್ ಪ್ರದೇಶದ ಸಾಕ್ವಜ್ ನಗರದ 22 ವರ್ಷದ ಮಹ್ಸಾ ಅಮೀನಿಯನ್ನು ಪೊಲೀಸರು ಬಂಧಿಸಿದ್ದರು. ನಂತರ ಪೊಲೀಸ್ ಕಸ್ಟಡಿಯಲ್ಲಿಯೇ ಅವರ ಹೊಡೆತದ ಕಾರಣ ಮೂರು ದಿನ ಕೋಮಾನಲ್ಲಿದ್ದು ದಿನಾಂಕ 13-9-2022ರಂದು ಅವಳ ಸಾವಾಗುತ್ತದೆ. ಶತಶತಮಾನಗಳಿಂದ ನೊಂದಿರುವ ಇರಾನಿನ ಮಹಿಳೆಯರು ಈಗ ಮತ್ತೊಮ್ಮೆ  ಸಿಡಿದೆದ್ದಿದ್ದಾರೆ. ಕೇವಲ ಮಹಿಳೆಯರೇ ಅಲ್ಲ, ಬದಲಾಗಿ ಪುರುಷರೂ ಈ ಹೋರಾಟವನ್ನು ಬೆಂಬಲಿಸಿ ಬೀದಿಗಿಳಿಯುತ್ತಿದ್ದಾರೆ. ಇದರ ಪರಿಣಾಮವಾಗಿ ಸಾವಿರಾರು ಜನ ಬೀದಿಗಿಳಿದು ಹಿಜಾಬ್‌ಗಳನ್ನು ಸಾರ್ವಜನಿಕವಾಗಿ ಸುಡುವ ಮತ್ತು ತಮ್ಮ ಕೂದಲನ್ನು ಕತ್ತರಿಸಿ ಸುಡುವಂತಹ ಪ್ರತಿಭಟನೆಯನ್ನು ಮಾಡುತ್ತ ಸರ್ಕಾರದ ನಡೆಯನ್ನು ವಿರೋಧಿಸುತ್ತಿದ್ದಾರೆ.

AV Eye Hospital ad
ಹಿಜಾಬು ಕಡ್ಡಾಯ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಇರಾನ್‌ ಮಹಿಳೆಯರು
ಹಿಜಾಬ್‌ ಕಡ್ಡಾಯ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಇರಾನ್‌ ಮಹಿಳೆಯರು

ಅಮಿನಿಯ ಸಾವನ್ನು ಪ್ರತಿಭಟಿಸಿ ಪರ್ಶಿಯನ್ ಭಾಷೆ ಹ್ಯಾಷ್ ಟ್ಯಾಗ್‌ನಲ್ಲಿ “ಮಹ್ಸಾ ಅಮಿನಿ” ಎಂದು ಮಾಡಿರುವ ಟ್ವೀಟಗಳು 20 ಲಕ್ಷದಷ್ಟು ದಾಟಿರುವುದು ಗಮನ ಸೆಳೆಯುತ್ತದೆ. ಸರ್ಕಾರದ ವಿರುದ್ದ ಕಲ್ಲು ತೂರುತ್ತಿರುವ ಮಹಿಳೆಯರು “ಸರ್ವಾಧಿಕಾರಕ್ಕೆ ಸಾವು ಖಚಿತ” ಎಂದು ಘೋಷಣೆ ಕೂಗುತ್ತಿದ್ದಾರೆ. ಪ್ರತಿಭಟನಾಕಾರರ ಮೇಲೆ ಹಾರಿದ ಪೊಲೀಸರ ಗುಂಡಿನಿಂದ ಇಲ್ಲಿಯವರೆಗೆ 5೦ ಜನ ನಾಗರಿಕರ ಸಾವಾಗಿದೆ. 75 ಜನ ಪ್ರತಿಭಟಕಾರರು ಪೊಲೀಸರ ದಾಳಿಯಿಂದ ಗಾಯಗೊಂಡಿದ್ದಾರೆ. ಅಮಿನಿಯ ಊರಾದ ಕುರ್ದಿಸ್, ಸಾಕ್ವೇಜ್‌ನಲ್ಲಿ ಹೋರಾಟ ತೀವ್ರವಾಗುತ್ತಿದೆ. ಇಂಟರ್ನೆಟ್‌ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.

ಪುರುಷಾಧಿಪತ್ಯದ ಅತಿರೇಕ

ಕರ್ನಾಟಕ ಸರ್ಕಾರ ಈಗೀಗ ಶಿಕ್ಷಣಕ್ಕೆ ತೆರೆದುಕೊಳ್ಳುತ್ತಿರುವಂತಹ ಮುಸ್ಲಿಂ ಸಮುದಾಯದ ಹೆಣ್ಣು ಮಕ್ಕಳ ಶೈಕ್ಷಣಿಕ ಹಿನ್ನಡೆಗೆ ಕಾರಣವಾಗಲಿಲ್ಲವೇ? ಇಲ್ಲಿ ಹೀಗಾದರೆ, ಇರಾನಿನಲ್ಲಿ ಮಹಿಳೆಯರು ಕೂದಲು ಕಾಣದಂತೆ ಹಿಜಾಬ್ ಧರಿಸಬೇಕು. ಇತ್ತೀಚೆಗೆ ಅಲ್ಲಿ ಕೇವಲ 13 ವರ್ಷದ ಹೆಣ್ಣು ಮಗುವಿಗೆ ಮದುವೆ ಮಾಡಲಾಗುತ್ತಿದೆ. ಕುರಾನಿನ ಪ್ರಕಾರವೇ ಮಹಿಳೆಗೆ ತನಗೆ ಬೇಡವಾದ ಗಂಡನನ್ನು ಬಿಡುವ ʼಖುಲಾʼ ಎಂಬ ಅಧಿಕಾರವನ್ನೂ ಕಿತ್ತುಕೊಳ್ಳಲಾಗಿದೆ. ಇದು ಗಂಡಸಿನ ಪುರುಷಾಧಿಪತ್ಯದ ಅತಿರೇಕವಲ್ಲವೇ?

ನಮ್ಮ ಆಹಾರ, ಬಟ್ಟೆ, ಸಂಗಾತಿಗಳ ಆಯ್ಕೆ ಎಲ್ಲದರ ಮೇಲೆಯೂ ನಿರ್ಬಂಧ. ಮೋದಿಯ ಶಹಭಾಶಗಿರಿಗಾಗಿ ತರಾತುರಿಯಲ್ಲಿ ಕರ್ನಾಟಕ ಸರ್ಕಾರ ಹಿಜಾಬ್ ಕಾರಣ ನೀಡಿ ನಿರ್ಬಂಧ ಹೇರುತ್ತದೆ. ಕೋರ್ಟಿಗೆ ಹೋಗುತ್ತದೆ. ಗೋಹತ್ಯಾ ನಿಷೇಧ, ಮತಾಂತರ ನಿಷೇಧ, ಹಿಜಾಬ್, ಯು.ಎ.ಪಿ.ಎ. ಕಾಯ್ದೆ ಜಾರಿ. ಈ ಮೂಲಕ ನಿರಪರಾಧಿಗಳನ್ನು, ಅದರಲ್ಲೂ ಮುಸ್ಲಿಮರನ್ನು, ಸಾಹಿತಿ, ಬುದ್ಧಿಜೀವಿ, ಹೋರಾಟಗಾರರನ್ನು ಜೈಲಿಗೆ ತಳ್ಳುವ ಕುತಂತ್ರ ಮಾಡುತ್ತದೆ. ದುಷ್ಯಂತ ದುಬೆಯಂತಹ ವಕೀಲರು ʼಹುಡುಗಿಯರು ಹಿಜಾಬ್ ಹಾಕುವುದರಿಂದ ಅವರ ಘನತೆ ಹೆಚ್ಚುತ್ತದೆʼ ಎಂದು ಹೇಳುತ್ತಾರೆ.

ತರಗತಿಯಲ್ಲಿ ಹಿಜಾಬ್‌ ಧರಿಸಲು ಅವಕಾಶ ಕೋರಿ ಪ್ರತಿಭಟನೆ ಮಾಡಿದ್ದ ಉಡುಪಿಯ ವಿದ್ಯಾರ್ಥಿನಿಯರು
ತರಗತಿಯಲ್ಲಿ ಹಿಜಾಬ್‌ ಧರಿಸಲು ಅವಕಾಶ ಕೋರಿ ಪ್ರತಿಭಟನೆ ಮಾಡಿದ್ದ ಉಡುಪಿಯ ವಿದ್ಯಾರ್ಥಿನಿಯರು

ತೆಹರಾನಿನ ಮಹಿಳೆಯರು ಇಸ್ಲಾಮಿಕ ಕಪಿಮುಷ್ಟಿಯಿಂದ ಹೊರಬರಲು ತಮ್ಮ ಹಿಜಾಬುಗಳನ್ನು ಬೆಂಕಿಗೆ ಹಾಕಿ “ಸರ್ವಾಧಿಕಾರಿಕೋ ಮರಣದಂಡ ದೋ” ಎಂದು ಕೂಗುತ್ತಿದ್ದಾರೆ. 2014ರಲ್ಲಿ ಇರಾನಿನ ಮಹಿಳೆಯರು ಆನ್‌ಲೈನ್ ಮೂಲಕ ಹಿಜಾಬಿನ ವಿರುದ್ಧ ಫೋಟೋ, ವಿಡಿಯೋ ಅಭಿಯಾನ ನಡೆಸಿದರು. ಇದರಿಂದ ಅಲ್ಲಿ “ವೈಟ್ ಬುಧವಾರ” ಮತ್ತು "ಗರ್ಲ್ಸ್‌ ಆಫ್ ರೆವೆಲ್ಯೂಷನ್‌ ಸ್ಟ್ರೀಟ್” ನಂತಹ ಚಳವಳಿಗಳನ್ನು ಮಹಿಳೆಯರು ರೂಪಿಸಿದರು. ಇರಾನಿನ ಸಂಸದ ಜಲಾಲ್ ರಶೀದಿ “ಇದು ಇರಾನಿಗೆ ಬಹಳಷ್ಟು ನಷ್ಟವನ್ನುಂಟು ಮಾಡುತ್ತದೆ” ಎಂದು ಹೇಳುತ್ತಾರೆ.

ಫ್ರಾನ್ಸ್‌ನ ಅಧ್ಯಕ್ಷರಾದ ಎಮ್ಯಾನುಯೆಲ್ ಮ್ಯಾಕ್ರಮ್‍ರವರು ಹೇಳುತ್ತಾರೆ, "ನಾವು ಮಹಿಳೆಯರ ಮಾನವೀಯ ಹಕ್ಕುಗಳನ್ನು ಬೆಂಬಲಿಸುತ್ತೇವೆ. ನಾವು ಮಹಿಳೆಯರ ಹಕ್ಕಿನ ಹೋರಾಟದ ಜೋತೆಗಿದ್ದೇವೆ. ಇದರಿಂದ ಇರಾನಿನ ವಿಶ್ವಾಸಾರ್ಹತೆಯೂ ಆತಂಕದಲ್ಲಿದೆ” ಎಂದು. ಇದೇ ಹಿಜಾಬಿನ ಕಾರಣಕ್ಕೆ ಕರ್ನಾಟಕ ಹಾಗೂ ಭಾರತದ ಗೌರವವೂ ಕುಸಿಯುತ್ತಲಿತ್ತು ಎಂಬುದನ್ನು ಗಮನಿಸಬೇಕಾಗಿದೆ.

ಅದು ಇರಾನೇ ಆಗಲಿ, ಭಾರತವೇ ಆಗಲಿ ಅದಕ್ಕೀಗ ವಸ್ತ್ರಸಂಹಿತೆ ಬೇಕಿಲ್ಲ. ಬದಲಾಗಿ ಬದಲಾಗುತ್ತಿರುವ ಪರಿಸರ, ಅತಿವೃಷ್ಟಿ ಅನಾವೃಷ್ಟಿ, ರೈತರ ಸಮಸ್ಯೆ, ಕುಸಿಯುತ್ತಿರುವ ರುಪಾಯಿ ಮೌಲ್ಯ, ಜಿ.ಡಿ.ಪಿ ಕುಸಿತ, ದಿನೇ ದಿನೇ ಹೆಚ್ಚುತ್ತಿರುವ ಬಡತನ, ನಿರುದ್ಯೋಗ, ಮಹಿಳೆಯರ ಮೇಲಿನ ದೌರ್ಜನ್ಯ ಜೊತೆಗೆ  ಖಾಸಗಿಯವರಿಗೆ ಮಾರಿಕೊಳ್ಳುತ್ತಿರುವ ಒಂದೊಂದೇ ಆಸ್ತಿಗಳ ಕುರಿತು ಚಿಂತಿಸಬೇಕಿದೆ. ಮಾರುತ್ತಿರುವ ಮೋದಿಯಿಂದ ನಮ್ಮ ಸ್ವತ್ತುಗಳ ರಕ್ಷಣೆ ಮತ್ತು ಯುವಜನರ ನಿರುದ್ಯೋಗ, ಬೆಲೆಯೇರಿಕೆಯನ್ನು ನಿಯಂತ್ರಿಸುವುದು ತುರ್ತು ಅಗತ್ಯವಾಗಿದೆ.

ನಿಮಗೆ ಏನು ಅನ್ನಿಸ್ತು?
2 ವೋಟ್
eedina app