ದಲಿತ, ಮುಸ್ಲಿಮ್‌, ಆದಿವಾಸಿಗಳ ಆಯಸ್ಸು ಪ್ರಬಲ ಜಾತಿಯವರಿಗಿಂತ ಕಡಿಮೆ: ಅಧ್ಯಯನ ವರದಿ

DALIT BRAHMIN MUSLIM
  • ಜೀವಿತಾವಧಿಗೂ ಜಾತಿ ತಾರತಮ್ಯಕ್ಕೂ ಸಂಬಂಧವಿದೆ ಎನ್ನುವ ಅಧ್ಯಯನಗಳು
  • ಜಗತ್ತಿನಲ್ಲಿ ಅತಿ ಕಡಿಮೆ ಜೀವಿಸುವ ದಲಿತ ಮಹಿಳೆಯರು

ಪ್ರಬಲ ಜಾತಿ ಹಿಂದೂಗಳಿಗಿಂತ ಆದಿವಾಸಿಗಳು, ದಲಿತರು ಮತ್ತು ಮುಸ್ಲಿಮರ ಜೀವಿತಾವಧಿ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ ಎಂದು ಎರಡು ಹೊಸ ಅಧ್ಯಯನಗಳು ಬಹಿರಂಗ ಪಡಿಸಿವೆ.

''ಪ್ರೊಸೀಡಿಂಗ್ಸ್ ಆಫ್ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್‌'ನ ಸಂಗೀತ ವ್ಯಾಸ್‌, ಪಾಯಾಲ್‌ ಹತಿ ಮತ್ತು ಹಾಗೂ 'ಹಾರ್ವರ್ಡ್‌ ಸೆಂಟರ್‌ ಫಾರ್‌ ಪಾಪ್ಯುಲೇಷನ್‌ ಅಂಡ್‌ ಡೆವೆಲಪ್‌ಮೆಂಟ್‌ ಸ್ಟಡೀಸ್‌'ನ(ಪಿಎನ್‌ಎಎಸ್‌) ಆಶೀಶ್‌ ಗುಪ್ತಾ ಮತ್ತು ನಿಖಿಲ್‌ ಸುದರ್ಶನನ್‌ ಅವರ ಅಧ್ಯಯನಗಳು ವಿಶಿಷ್ಟವಾದ ಸಂಗತಿಗಳನ್ನು ಬೆಳಕಿಗೆ ತಂದಿವೆ.

ಒಂಬತ್ತು ರಾಜ್ಯಗಳ ಸುಮಾರು 2 ಕೋಟಿ ಜನರ ಆರೋಗ್ಯ ಸಮೀಕ್ಷೆಯ ಅಂಕಿ-ಅಂಶಗಳನ್ನು ಅಧ್ಯಯನ ಮಾಡಿರುವ ಪಿಎನ್‌ಎಎಸ್‌ ತಂಡವು ಜಾತಿ ತಾರತಮ್ಯ ಹೇಗೆ ಜೀವಿಸುವ ಅವಧಿಯನ್ನು ಕುಗ್ಗಿಸುತ್ತಿದೆ ಎಂಬ ಆಘಾತಕಾರಿ ಸಂಗತಿಯನ್ನು ಕಂಡುಕೊಂಡಿದೆ.

ಪ್ರಬಲ ಜಾತಿ ಹಿಂದೂಗಳಿಗೆ ಹೋಲಿಸಿದರೆ ಇತರ ಹಿಂದುಳಿದ ಜಾತಿ (ಒಬಿಸಿ), ಆದಿವಾಸಿಗಳು ನಾಲ್ಕು ವರ್ಷ, ದಲಿತರು ಮೂರು ಮತ್ತು  ಮುಸ್ಲಿಮರು ಒಂದು ವರ್ಷ ಮುಂಚಿತವಾಗಿ ಮರಣವನ್ನಪ್ಪುತ್ತಾರೆ ಎಂದು ಪಿಎನ್‌ಎಎಸ್ ಹೇಳುತ್ತದೆ.

ಇದನ್ನು ಓದಿದ್ದೀರಾ? | ತುಮಕೂರು ದಲಿತ ಯುವಕರ ಹತ್ಯೆ ಪ್ರಕರಣ| ಗೃಹ ಸಚಿವರ ರಾಜೀನಾಮೆಗೆ ಸಿದ್ದರಾಮಯ್ಯ ಆಗ್ರಹ

1997-2000 ಅವಧಿಯಲ್ಲಿ ಪ್ರಬಲ ಜಾತಿ ಹಿಂದೂಗಳಿಗೆ ಹೋಲಿಸಿದರೆ ಮುಸ್ಲಿಮರ ಜೀವಿತಾವಧಿಯ ಅಂತರವು ಮಹಿಳೆಯರಲ್ಲಿ 2.1 ವರ್ಷ ಮತ್ತು 0.3 ವರ್ಷದಷ್ಟು ಕಡಿಮೆಯಾಗಿದೆ ಎಂದು ಎರಡನೇ ಅಧ್ಯಯನದ ವರದಿ ಹೇಳಿದೆ. ಇದು 2013-16ರ ಅವಧಿಯಲ್ಲಿ  ಮಹಿಳೆಯರಲ್ಲಿ 2.8 ವರ್ಷ ಮತ್ತು ಪುರುಷರಲ್ಲಿ 2.6 ವರ್ಷ ಅಂತರ ಕಡಿಮೆಯಾಗಿದೆ.

ಪ್ರಬಲ ಜಾತಿಯ ಹಿಂದೂಗಳ ಜೀವಿತಾವಧಿ ಮತ್ತು ಆದಿವಾಸಿಗಳು, ದಲಿತರ ಜೀವಿತಾವಧಿಯ ನಡುವಿನ ವ್ಯತ್ಯಾಸಗಳು ಅಮೆರಿಕದಲ್ಲಿ ಕಪ್ಪು-ಬಿಳಿಯರ ನಡುವಿನ ತಾರತಮ್ಯಕ್ಕೆ ಹೋಲಿಸಬಹುದು ಎಂದು ಪಿಎನ್‌ಎಎಸ್‌ನ ಇನ್ನೊಂದು ವರದಿ ಹೇಳುತ್ತದೆ. ಏಪ್ರಿಲ್‌ ತಿಂಗಳಲ್ಲಿ ಪ್ರಕಟವಾದ ಈ ಅಧ್ಯಯನದಲ್ಲಿ ಭಾರತೀಯ ಮತ್ತು ಅಮೆರಿಕದ ತಲಾ ಇಬ್ಬರು ಸಂಶೋಧಕರು ಭಾಗಿಯಾಗಿದ್ದರು.

ಸಂಪತ್ತಿನ ಅಸಮಾನತೆ ಸೇರಿದಂತೆ ನಗರ-ಗ್ರಾಮೀಣ ವ್ಯತ್ಯಾಸಗಳು, ಪ್ರತ್ಯೇಕತೆ, ನಡವಳಿಕೆ, ಔದ್ಯೋಗಿಕ ಮಾನ್ಯತೆಗಳಂತಹ ಅಂಶಗಳು ಸಾವು ಮತ್ತು ಜೀವಿತಾವಧಿಯಲ್ಲಿನ ಅಸಮಾನತೆಯನ್ನು ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.

2010 ಮತ್ತು 2011ರ ನಡುವೆ ಒಂಬತ್ತು ರಾಜ್ಯಗಳಲ್ಲಿ ನಡೆಸಲಾದ ಭಾರತದ ವಾರ್ಷಿಕ ಆರೋಗ್ಯ ಸಮೀಕ್ಷೆಯನ್ನು (ಎಎಚ್ಎಸ್) ಆಧರಿಸಿ ಪಿಎನ್ಎಎಸ್‌ನ ವರದಿ ಪ್ರಕಟಿಸಿದೆ. ಭಾರತದ ಜನಸಂಖ್ಯೆಯ ಅರ್ಧದಷ್ಟು ಭಾಗವನ್ನು ಪ್ರತಿನಿಧಿಸುವ ಅಸ್ಸಾಂ, ಬಿಹಾರ, ಛತ್ತೀಸ್‌ಗಢ, ಜಾರ್ಖಂಡ್, ಮಧ್ಯಪ್ರದೇಶ, ಒಡಿಶಾ, ರಾಜಸ್ಥಾನ, ಉತ್ತರ ಪ್ರದೇಶ ಮತ್ತು ಉತ್ತರಾಖಂಡ ರಾಜ್ಯಗಳಲ್ಲಿನ ನಾಲ್ಕು ದಶಕೋಟಿಗಿಂತಲೂ ಹೆಚ್ಚು ಮನೆಗಳಿಗೆ ಭೇಟಿ ನೀಡಿ ಎಎಚ್ಎಸ್ ಸಮೀಕ್ಷೆ ನಡೆಸಿತ್ತು.

1998-99 ಮತ್ತು 2015-16ರ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ದತ್ತಾಂಶಗಳ ಪ್ರಕಾರ ಪರಿಶಿಷ್ಟ ಜಾತಿ (ಎಸ್ಸಿ) ಮತ್ತು ಪರಿಶಿಷ್ಟ ಪಂಗಡಗಳು (ಎಸ್ಟಿ) ಪ್ರಬಲ ಜಾತಿಯವರಿಗಿಂತ ಕಡಿಮೆ ಜೀವಿತಾವಧಿಯನ್ನು ಹೊಂದಿದ್ದಾರೆ ಎಂದು ಹೇಳಿತ್ತು. ಈ ವರದಿಯ ಪ್ರಕಾರ ಪ್ರಬಲ ಜಾತಿಗಳಿಗೆ ಹೋಲಿಸಿದರೆ ಎಸ್ಸಿ ಮತ್ತು ಎಸ್ಟಿ ಸಮುದಾಯದವರ ಜೀವಿತಾವಧಿಯ ಅಂತರವು ಮಹಿಳೆಯರಲ್ಲಿ 4.2 ರಿಂದ 4.4 ವರ್ಷಗಳು ಮತ್ತು ಪುರುಷರಲ್ಲಿ 6.1 ರಿಂದ 7 ವರ್ಷಗಳು ಕಡಿಮೆಯಾಗಿದೆ ಎಂದು ಮಾಹಿತಿ ನೀಡಿತ್ತು. ಈ  ವ್ಯತ್ಯಾಸವು ಕಳೆದ 20 ವರ್ಷಗಳಿಂದ ಗಣನೀಯವಾಗಿ ಹೆಚ್ಚಾಗಿದೆ.

ಭಾರತದಲ್ಲಿ ದಲಿತರು, ಆದಿವಾಸಿಗಳು ಮತ್ತು ಮುಸ್ಲಿಮರ ಜನಸಂಖ್ಯೆ ಒಟ್ಟಾಗಿ 450 ದಶಲಕ್ಷಕ್ಕಿಂತಲೂ ಹೆಚ್ಚಿದೆ. ಇದು ಅಮೆರಿಕಗಿಂತ ಜನಸಂಖ್ಯೆಯನ್ನೂ ಮೀರಿಸಿದೆ. ಭಾರತದಲ್ಲಿ ಜನನ ಮತ್ತು ಮರಣಗಳನ್ನು ದಾಖಲಿಸಲು ನೋಂದಣಿ ವ್ಯವಸ್ಥೆಯನ್ನು ಅವಲಂಬಿತವಾಗಿದ್ದು, ಇದು ಅಪೂರ್ಣವಾಗಿದೆ. ಆದರೆ ಜಾತಿ ಮತ್ತು ಧರ್ಮದ ಈ ರೀತಿಯ ವಿಂಗಡಣೆಯ ದತ್ತಾಂಶಗಳು ಲಭ್ಯವಾಗಬೇಕಿದೆ ಎಂದು ಪಿಎನ್ಎಎಸ್‌ನ ವರದಿ ಹೇಳಿದೆ.

ಕಳೆದ ಇಪ್ಪತ್ತು ವರ್ಷಗಳಲ್ಲಿ ಮುಸ್ಲಿಮ್‌ ಪುರುಷರ ಜೀವಿತಾವಧಿಯಲ್ಲಿ ಆಗಿರುವ ಬದಲಾವಣೆ, ಆದಿವಾಸಿಗಳ ಜೀವಿತಾವಧಿಯಲ್ಲಿ ಆಗಿರುವ ಬದಲಾವಣೆಯನ್ನು ಆತಂಕ ಹುಟ್ಟಿಸುತ್ತದೆ. ಕೆಲವು ಸಮುದಾಯಗಳ ಜೀವಿತಾವಧಿ ಹೆಚ್ಚಿದ್ದರೆ, ತಾರತಮ್ಯ ಕೂಡ ಹಾಗೇ ಹೆಚ್ಚಿದೆ ಎಂಬ ಸಂಗತಿಯನ್ನು ಆಶೀಶ್‌ ಮತ್ತು ನಿಖಿಲ್‌ ಅವರ ಅಧ್ಯಯನ ಹೇಳುತ್ತದೆ.

ಆರ್ಥಿಕ ಸ್ಥಿತಿಗತಿ ಕೂಡ ತಾರತಮ್ಯ ಮತ್ತು ಬದುಕುಳಿಯುವ ಸಾಧ್ಯತೆಯನ್ನು ನಿರ್ಧರಿಸುತ್ತದೆ. ದಲಿತ, ಆದಿವಾಸಿ, ಮುಸ್ಲಿಮ್‌ ಸಮುದಾಯದವರ ಪೈಕಿ, ಮುಸ್ಲಿಮರಿಗೆ ಜೀವಿತಾವಧಿ ಹೆಚ್ಚು ಎನ್ನುತ್ತದೆ. ಅಂಚಿಗೆ ದೂಡಲ್ಪಟ್ಟ ಸಮುದಾಯಗಳು ಶಾಲೆ, ಸಾಮಾಜಿಕ ಸಂದರ್ಭಗಳು, ಸರಕಾರಿ ಕಚೇರಿಗಳಲ್ಲಿ ಎದುರಿಸುವ ಅವಮಾನ, ತಾರತಮ್ಯವು ಅವರ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹಾಗೇ ತಳ ಸಮುದಾಯಗಳು ನಿರ್ವಹಿಸುವ ಕೆಲಸಗಳು ಅವರ ಆರೋಗ್ಯದ ಮೇಲೆ ಪರಿಣಾಮ ಬೀರುವುದರಿಂದ ಜೀವನವೇ ಸವಾಲನ್ನು ಎದುರಿಸುವಂತಿರುತ್ತದೆ ಎಂದು ಅಶೀಶ್‌ ಮತ್ತು ನಿಖಿಲ್‌ ಅವರ ಅಧ್ಯಯನ ವರದಿ ವಿವರಿಸುತ್ತದೆ.

ನಿಮಗೆ ಏನು ಅನ್ನಿಸ್ತು?
3 ವೋಟ್