ನುಡಿನಮನ | ಗಂಗಾಧರಮೂರ್ತಿ ಮೇಷ್ಟ್ರು ಜನರ ಮನಸ್ಸಿನಲ್ಲಿ ಜೀವಂತ

gangadara-murthy

ಬೆಂಗಳೂರಿನಲ್ಲಿ ನರಸಿಂಹಯ್ಯನವರು ನ್ಯಾಷನಲ್ ಕಾಲೇಜಿನ ವಿದ್ಯಾರ್ಥಿಗಳಲ್ಲಿ ಮೂಡಿಸುತ್ತಿದ್ದ ಹೊಸ ವೈಚಾರಿಕ ಪ್ರಜ್ಞೆಯನ್ನು ಗೌರಿಬಿದನೂರಿನಲ್ಲಿ ಗಂಗಾಧರ ಮೂರ್ತಿ ಮತ್ತಿತರ ಮೇಷ್ಟ್ರುಗಳು ಮಾಡುತ್ತಿದ್ದರು. ಗೌರಿಬಿದನೂರಿನಂತಹ ತಾಲೂಕು ಕೇಂದ್ರದಲ್ಲಿ ಆಗುತ್ತಿದ್ದ ಹೊಸ ಬದಲಾವಣೆಯ ಸುದ್ದಿಗಳು ಪಿಸು ಮಾತುಗಳಂತೆ ನಮ್ಮಂಥವರ ಕಿವಿ ಮುಟ್ಟುತ್ತಿದ್ದವು

ಗೌರಿಬಿದನೂರು ಎಂದಾಕ್ಷಣ ನನಗೆ ಎರಡು ಮೂರು ಸಂಗತಿಗಳು ತಕ್ಷಣ ನೆನಪಾಗುತ್ತವೆ. ಪ್ರಾಯದ ದಿನಗಳಲ್ಲಿ ನನ್ನ ಸಹಪಾಠಿ ಬಸವರಾಜು ತನ್ನ ಅತ್ತೆಯ ಮನೆಗೆ ಕರೆದುಕೊಂಡು ಹೋಗಿದ್ದಲ್ಲದೆ, ಹತ್ತಿರದಲ್ಲೇ ಇದ್ದ ವಿದುರಾಶ್ವತ್ಥಕ್ಕೂ ಕರೆದುಕೊಂಡು ಹೋಗಿದ್ದರು. ವಿದುರಾಶ್ವತ್ಥ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಹುತಾತ್ಮರಾದ ಅನೇಕ ಸ್ವಾತಂತ್ರ್ಯ ಹೋರಾಟಗಾರರ ಸ್ಮರಣೆಯ ಸ್ಥಳ.

ಎರಡನೆಯದು ಹೆಚ್. ನರಸಿಂಹಯ್ಯ ಮತ್ತು ನ್ಯಾಷನಲ್ ಕಾಲೇಜು. ನರಸಿಂಹಯ್ಯನವರ ಹುಟ್ಟೂರು ಗೌರಿಬಿದನೂರು ತಾಲೂಕಿನ ಹೊಸೂರು ಎಂಬ ಪುಟ್ಟ ಗ್ರಾಮ. ಗೌರಿಬಿದನೂರಿನ ನ್ಯಾಷನಲ್ ಕಾಲೇಜು ಎಂದ ತಕ್ಷಣ ನೆನಪಾಗುವ ಮತ್ತೊಂದು ಹೆಸರೇ ಪ್ರೊ ಬಿ ಗಂಗಾಧರಮೂರ್ತಿ ಅವರದ್ದು.

ಬೆಂಗಳೂರಿನಲ್ಲಿ ನರಸಿಂಹಯ್ಯನವರು ನ್ಯಾಷನಲ್ ಕಾಲೇಜಿನ ವಿದ್ಯಾರ್ಥಿಗಳಲ್ಲಿ ಮೂಡಿಸುತ್ತಿದ್ದ ಹೊಸ ವೈಚಾರಿಕ ಪ್ರಜ್ಞೆಯನ್ನು ಗೌರಿಬಿದನೂರಿನಲ್ಲಿ ಗಂಗಾಧರಮೂರ್ತಿ ಮತ್ತಿತರ ಮೇಷ್ಟ್ರುಗಳು ಮಾಡುತ್ತಿದ್ದರು. ಈಗಿನ ಕಾಲದಂತೆ ಆಗ ಟಿವಿ ಮಾಧ್ಯಮಗಳಾಗಲಿ, ಸಾಮಾಜಿಕ ಜಾಲತಾಣಗಳಾಗಲಿ ಇರಲಿಲ್ಲ. ಗೌರಿಬಿದನೂರಿನಂತಹ ತಾಲೂಕು ಕೇಂದ್ರದಲ್ಲಿ ಆಗುತ್ತಿದ್ದ ಹೊಸ ಬದಲಾವಣೆಯ ಸುದ್ದಿಗಳು ಪಿಸು ಮಾತುಗಳಂತೆ ನಮ್ಮಂಥವರ ಕಿವಿ ಮುಟ್ಟುತ್ತಿದ್ದವು. ಹೀಗೆ ಬರೀ ಕಿವಿಯಲ್ಲಿ ಕೇಳಿಸಿಕೊಂಡಿದ್ದ ಹೆಸರಿನ ವ್ಯಕ್ತಿ ಇದ್ದಕ್ಕಿದ್ದ ಹಾಗೆ ಎದುರಿಗೆ ನಿಂತಾಗ ಅದಕ್ಕಿಂತ ಸಂತೋಷ ಮತ್ತೇನಿರುತ್ತದೆ.

ಇಪ್ಪತ್ತು ವರ್ಷಗಳ ಹಿಂದೆ ನಾನು ಕರ್ನಾಟಕದ ವಿಧಾನ ಮಂಡಲದ ಗ್ರಂಥಾಲಯ ಸಮಿತಿ ಪ್ರಕಟ ಮಾಡುತ್ತಿದ್ದ  'ಪ್ರತಿಭಾವಂತ ಸಂಸದೀಯ ಪಟು ಪುಸ್ತಕ ಮಾಲಿಕೆಯ' ಸಂಪಾದಕನಾಗಿದ್ದೆ. ಆ ಮಾಲಿಕೆಯಲ್ಲಿ ಎಚ್. ನರಸಿಂಹಯ್ಯನವರ ಬಗ್ಗೆ ಒಂದು ಪುಸ್ತಕ ಬರೆಸಬೇಕಾಗಿತ್ತು. ಆ ಬರೆಯುವ ಹೊಣೆಗಾರಿಕೆಯನ್ನು ಗೌರಿಬಿದನೂರಿನ ಗಂಗಾಧರಮೂರ್ತಿ ಅವರಿಗೆ ವಹಿಸಬೇಕಾಗಿತ್ತು. ಅವರಿಗೆ ಪತ್ರ ಬರೆದು ಪುಸ್ತಕ ಬರೆದು ಕೊಡುವಂತೆ ಮನವಿ ಮಾಡಿದ್ದೆ. ಅವರಿಗೆ ವಿಧಿಸಿದ್ದ ಸಮಯಕ್ಕೆ ಸರಿಯಾಗಿ ಪುಸ್ತಕ ಬರೆದು ಗೌರಿಬಿದನೂರಿಂದ ಗಂಗಾಧರಮೂರ್ತಿಯವರು ನೇರವಾಗಿ ವಿಧಾನಸೌಧಕ್ಕೆ ಬಂದಿದ್ದರು. ವಿಧಾನಸೌಧದಲ್ಲಿದ್ದ ನನ್ನ ಕಚೇರಿಗೆ ಬಂದ ಅವರು ತಮ್ಮನ್ನು ತಾವು ಗಂಗಾಧರಮೂರ್ತಿ ಎಂದು ಪರಿಚಯಿಸಿಕೊಂಡರು.

ಅಲ್ಲಿಯವರಿಗೆ ಬರಿ ಕಿವಿಯಲ್ಲಿ ಕೇಳಿದ್ದ ಹೆಸರಿನ ವ್ಯಕ್ತಿ ಈಗ ಎದುರಿಗೆ ನಿಂತಿದ್ದರು. ನನಗೆ ನಿಜಕ್ಕೂ ಖುಷಿಯಾಯಿತು. ಅಪರೂಪದ ಬಂಧುವನ್ನು ಭೇಟಿಯಾದಂತಹ ಒಂದು ಉದಾತ್ತ ಭಾವ ಸೃಷ್ಟಿಯಾಯಿತು. ನರಸಿಂಹಯ್ಯನವರ ಬಗ್ಗೆ ಅವರು ಬರೆದ ಹಸ್ತಪ್ರತಿಯನ್ನು ಎಡಿಟ್ ಮಾಡುವ ಯಾವ ವಿಶೇಷ ಕೆಲಸವು ನನಗಿರಲಿಲ್ಲ. ಎಲ್ಲವನ್ನು ಅಚ್ಚುಕಟ್ಟಾಗಿ ಗಂಗಾಧರಮೂರ್ತಿಯವರೇ ಮಾಡಿದ್ದರು. ಕರ್ನಾಟಕ ವಿಧಾನ ಮಂಡಲದ ಗ್ರಂಥಾಲಯ ಸಮಿತಿ ವತಿಯಿಂದ ಅದು ಬೆಳಕು ಕಂಡಿತು.

ಯಥಾ ಪ್ರಕಾರ ನಾನು ನನ್ನ ಇತರೆ ಕೆಲಸ ಕಾರ್ಯಗಳ ನಡುವೆ ಗಂಗಾಧರಮೂರ್ತಿಯವರನ್ನು ಮರೆತೆ ಬಿಟ್ಟಿದ್ದೆ. ತೀರ ಇತ್ತೀಚಿಗೆ ಅಂದರೆ ಹೆಚ್. ನರಸಿಂಹಯ್ಯನವರ ಜನ್ಮ ಶತಾಬ್ದಿ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ಶ್ರೀನಿವಾಸ್ ಜಿ. ಕಪ್ಪಣ್ಣ ಹಾಗೂ ಮೋಹನ್ ಕೊಂಡಜ್ಜಿ ಮತ್ತಿತರರು ಏರ್ಪಾಟು ಮಾಡಿದ್ದರು. ಅಲ್ಲಿಗೆ ನರಸಿಂಹಯ್ಯನವರನ್ನು ಕುರಿತು ಮಾತನಾಡಲು ಗಂಗಾಧರಮೂರ್ತಿ ಬಂದಿದ್ದರು. ಭಾಷಣದ ನಡುವೆ ನನ್ನ ಹೆಸರನ್ನು ಪ್ರಸ್ತಾಪಿಸಿ, "ನರಸಿಂಹಯ್ಯನವರ ಬಗ್ಗೆ ಪುಸ್ತಕ ಬರೆಯುವ ಹೊಣೆಗಾರಿಕೆಯನ್ನು ನನಗೆ ವಹಿಸಿದ್ದು ಮುಕುಂದರಾಜ್" ಎಂದಾಗ ನನಗೆ ಬಹಳ ಸಂತೋಷ ಕೊಟ್ಟಿತು.

ಒಂದೆರಡು ವರ್ಷಗಳ ಹಿಂದೆ ಗಂಗಾಧರಮೂರ್ತಿ ಅವರು ನನಗೆ ಫೋನ್ ಮಾಡಿದ್ದರು. ಸ್ವಾತಂತ್ರ ಹೋರಾಟ ಹಾಗೂ ಸ್ವಾತಂತ್ರ್ಯ ಹೋರಾಟಗಾರರ ಚರಿತ್ರೆಯನ್ನು ದಾಖಲಿಸುವ ಉದ್ದೇಶದಿಂದ ವಿದುರಾಶ್ವತ್ಥದಲ್ಲಿ ಮ್ಯೂಸಿಯಂ ಮಾಡಿರುವುದಾಗಿ ಹೇಳಿದರು. ಭಾರತದ ಸ್ವಾತಂತ್ರ್ಯ ಸಂಗ್ರಾಮವನ್ನು ಹಿನ್ನೆಲೆಯಾಗಿ ಇಟ್ಟುಕೊಂಡು ಬರೆದ ಪುಸ್ತಕಗಳನ್ನು ಅಲ್ಲಿ ಪ್ರದರ್ಶನಕ್ಕೆ ಇಡುವುದಾಗಿ ತಿಳಿಸಿದರು. ಸ್ವಾತಂತ್ರ್ಯೋತ್ತರ ಭಾರತದಲ್ಲಿ ನಮ್ಮ ಹಳ್ಳಿಗಳು ತಲುಪಿದ ದುರಂತವನ್ನು ಕೇಂದ್ರವಾಗಿಟ್ಟುಕೊಂಡು ನಾನು ರಚಿಸಿದ 'ಇಗೋ ಪಂಜರ ಅಗೋ ಮುಗಿಲು ಮತ್ತು ಕ್ರೈಸ್ತ ಸ್ವಾತಂತ್ರ್ಯ ಹೋರಾಟಗಾರನನ್ನು ನಾಯಕನನ್ನಾಗಿ ಇಟ್ಟುಕೊಂಡು ಬರೆದ 'ಮುಳ್ಳಿನ ಕಿರೀಟ' ನಾಟಕದ ಪುಸ್ತಕಗಳನ್ನು ಕೊಡುವಂತೆ ಕೇಳಿಕೊಂಡರು. ಆ ಪುಸ್ತಕಗಳನ್ನು ಮ್ಯೂಸಿಯಂನಲ್ಲಿ ಇಡಬೇಕೆಂಬುದು ಅವರ ಆಸೆಯಾಗಿತ್ತು. ನನ್ನ ಶಿಷ್ಯ ವೆಂಕಟರಾಜುಗೆ ಈ ವಿಷಯ ತಿಳಿಸಿ ಪುಸ್ತಕ ತಲುಪಿಸುವಂತೆ ಸೂಚನೆ ಕೊಟ್ಟಿದ್ದೆ. ಅವನು ತಲುಪಿಸಿದನೋ ಇಲ್ಲವೋ ನನಗೆ ಗೊತ್ತಿಲ್ಲ. ಬೆಂಗಳೂರಿನ ನಾಗರಬಾವಿಯಲ್ಲಿರುವ ಒಂದು ಶಾಲೆಯ ರಾಜ್ಯೋತ್ಸವ ಕಾರ್ಯಕ್ರಮಕ್ಕಾಗಿ ಹೋಗಿದ್ದಾಗ ಗಂಗಾಧರಮೂರ್ತಿ ಅವರ ಪುತ್ರ ಚಿದಾನಂದಮೂರ್ತಿ ಅವರ ಪರಿಚಯ ಆಯಿತು. ಆ ವಿಷಯವನ್ನು ನಾನು ಗಂಗಾಧರಮೂರ್ತಿ ಅವರಿಗೆ ಫೋನ್ ಮಾಡಿ ತಿಳಿಸಿದಾಗ ಅವರು ಸಂತೋಷಪಟ್ಟರು.

ಇದನ್ನು ಓದಿದ್ದೀರಾ? ಸ್ಮರಣೆ | ʼರಾಚಯ್ಯನವರು ಮುಖ್ಯಮಂತ್ರಿಯಾಗಬೇಕೆಂದು ಲಂಕೇಶ್‌ ಬಯಸಿದ್ದರುʼ

ಕಳೆದ ವಾರ ಬೈಲುಕುಪ್ಪೆಯಲ್ಲಿ ಒಂದು ವಿಶೇಷ ಶಿಬಿರದಲ್ಲಿ ಭಾಗವಹಿಸಿದ್ದೆ. ಆ ಶಿಬಿರದಲ್ಲಿದ್ದ ಪ್ರಭಾ ಬೆಳವಂಗಲ ದುಗುಡದಲ್ಲೇ ನನ್ನ ಹತ್ತಿರ ಬಂದು ಗಂಗಾಧರಮೂರ್ತಿಯವರ ಅಗಲಿಕೆಯ ವಿಷಯವನ್ನು ತಿಳಿಸಿದರು. ನನ್ನ ಎದೆ ಹಿಂಡಿದಂತಾಯಿತು. ಗೌರಿಬಿದನೂರಿನಂತಹ ಗ್ರಾಮೀಣ ಪ್ರದೇಶದಲ್ಲಿ ಇದ್ದುಕೊಂಡು ತನ್ನ ವಿದ್ಯಾರ್ಥಿಗಳ ಬದುಕಿನಲ್ಲಿ ಬಹುದೊಡ್ಡ ಕನಸು ಕಟ್ಟಿಕೊಟ್ಟ ಪ್ರಾಮಾಣಿಕ ಪ್ರಾಧ್ಯಾಪಕನೊಬ್ಬನನ್ನು ನಾಡು ಕಳೆದುಕೊಂಡಿತ್ತು. ಆ ಸಭೆಯಲ್ಲಿ ಸೇರಿದ್ದ ನಾವೆಲ್ಲರೂ ಒಂದು ನಿಮಿಷ ಮೌನವಾಗಿ ಗಂಗಾಧರಮೂರ್ತಿಯವರ ಸ್ಮರಣೆ ಮಾಡಿದೆವು. ಪ್ರೊಫೆಸರ್ ಗಂಗಾಧರಮೂರ್ತಿ ಭೌತಿಕವಾಗಿ ನಮ್ಮಿಂದ ದೂರವಾಗಿರಬಹುದು. ಆದರೆ ಅವರು ಮಾಡಿರುವ ಹಲವಾರು ಕೆಲಸಗಳು ನಮ್ಮ ನಾಡಿನ ಜನತೆಯ ಮನಸ್ಸಿನಲ್ಲಿ ಸದಾ ಉಳಿಯುತ್ತವೆ.

ನಿಮಗೆ ಏನು ಅನ್ನಿಸ್ತು?
1 ವೋಟ್