ಮಾನ್ಯ ಮುಖ್ಯಮಂತ್ರಿಗಳೇ, ನೀವು ಕರ್ನಾಟಕದಲ್ಲಿ ಜಾರಿಗೆ ತರಬೇಕೆಂದಿರುವ ಯುಪಿ ಮಾಡೆಲ್‌ ಇದೇನಾ?

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಪ್ರವೀಣ್‌ ನೆಟ್ಟಾರು ಹತ್ಯೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಯುಪಿ ಮಾದರಿಯನ್ನು ಜಾರಿಗೆ ತರುವ ನಿಟ್ಟಿನಲ್ಲಿ ಸಮಾಲೋಚಿಸಲಾಗುವುದು ಎಂದು ಹೇಳಿಕೆ ಕೊಟ್ಟಿದ್ದಾರೆ! ಬೊಮ್ಮಾಯಿ ಈ ಹೇಳಿಕೆ ಕೊಡುವ ಮುನ್ನ, ಹಾಗೇ ಹೇಳುವುದು ತಮ್ಮದೇ ಸರ್ಕಾರದ ವೈಫಲ್ಯವನ್ನು ಘೋಷಿಸಿಕೊಂಡಂತೆ ಎಂದು ಯೋಚಿಸಿದಂತೆ ಕಾಣಲಿಲ್ಲ!
Basavaraja Bommai

ಒಂದು ವರ್ಷದ ಆಡಳಿತ ಸಂಭ್ರಮಾಚರಣೆ ಸಿದ್ಧವಾಗಿದ್ದ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರಕ್ಕೆ ಜುಲೈ 27ರಂದು ನಡೆದ ಘಟನೆಗಳು ತೀವ್ರ ಆಘಾತ ಉಂಟು ಮಾಡಿದವು. ತಮ್ಮದೇ ಪಕ್ಷದ ಕಾರ್ಯಕರ್ತರು ಮತ್ತು ಬಿಜೆಪಿ ಅಂಗ ಸಂಸ್ಥೆಗಳ ಕಾರ್ಯಕರ್ತರು ಬೀದಿಗಳಿಗಿಳಿದು ತಮ್ಮದೇ ನಾಯಕರ ವಿರುದ್ಧ ಕೋಪಾವೇಶ ಹೊರಹಾಕಿದರು.

ಸಂಭ್ರಮದ ಗುಂಗಿನಲ್ಲಿದ್ದ ಬಸವರಾಜ ಬೊಮ್ಮಾಯಿಯವರು ತಡರಾತ್ರಿ ಮಾಧ್ಯವನ್ನುದ್ದೇಶಿಸಿ, ʼದುಷ್ಕರ್ಮಿಗಳನ್ನು ಸದೆಬಡಿಯುತ್ತೇವೆ' ಎಂದು ರೋಷಾವೇಶದಿಂದ ಹೇಳಿಕೆ ನೀಡಿದರು. ಅದೇ ಹೊತ್ತಲ್ಲಿ ಜನೋತ್ಸವ ರದ್ದುಗೊಳಿಸುವುದಾಗಿಯು ಘೋಷಿಸಿದರು. ಆದರೆ ಇದಾಗಿ ಐದಾರು ಗಂಟೆಗಳಲ್ಲಿ ಪುನಃ ಪತ್ರಿಕಾಗೋಷ್ಠಿ ಕರೆದಿದ್ದ ಮುಖ್ಯಮಂತ್ರಿ ಬೊಮ್ಮಾಯಿಯವರು, 'ರಾಜ್ಯದಲ್ಲಿ ಅಪರಾಧಗಳನ್ನು ತಡೆಯಲು, ಉತ್ತರಪ್ರದೇಶದ ಯೋಗಿ ಆದಿತ್ಯನಾಥ್‌ ಅವರ ಮಾದರಿಯನ್ನು ಜಾರಿ ಮಾಡುತ್ತೇವೆ' ಎಂದು ಹೇಳಿದರು.

ಬೊಮ್ಮಾಯಿಯವರು ಈ ಹೇಳಿಕೆ ನೀಡುವ ಮೊದಲು ಯೋಚಿಸಿದ್ದರೆ? ಅಭಿವೃದ್ಧಿ, ಪ್ರಗತಿಗೆ ಇನ್ನೊಂದು ಸರ್ಕಾರದ ಮಾದರಿಯನ್ನು ಅನುಸರಿಸುವುದು ಸಹಜ. ಆದರೆ ಕಾನೂನು ಸುವ್ಯವಸ್ಥೆಯ ವಿಷಯದಲ್ಲಿ ಇನ್ನೊಂದು ರಾಜ್ಯದ ಮಾದರಿ ಅನುಸರಿಸುತ್ತೇವೆ ಎನ್ನುವುದು, ಆ ವಿಷಯದಲ್ಲಿ ತಾವು ಸೋತಿದ್ದೇವೆ ಎಂದೇ ಘೋಷಿಸಿದಂತೆ!

ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಅಧಿಕಾರ ವಹಿಸಿಕೊಂಡಾಗಿನಿಂದ ಪೊಲೀಸ್ ಇಲಾಖೆಯನ್ನೇ ಅವಮಾನಿಸಿದರು, ಪಿಎಸ್‌ಐ ಹಗರಣ ಅವರ ಕೊರಳಿಗೆ ಸುತ್ತಿಕೊಂಡಿತು, ಕೋಮುಸಂಘರ್ಷಗಳ ಹೆಚ್ಚಾದವು. ಪ್ರತಿಬಾರಿಯೂ ಅಸಂಬದ್ಧ ಹೇಳಿಕೆಗಳನ್ನು ನೀಡಿ ನಗೆಪಾಟಲಿಗೆ ಈಡಾದರು. ಇವರಿಂದ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಸಾಧ್ಯವೆ ಎಂಬ ಪ್ರಶ್ನೆಗಳು ಕೇಳಿ ಬಂದವು.

ಈಗ ಮುಖ್ಯಮಂತ್ರಿಗಳ ಹೇಳಿಕೆ ಮೇಲಿನ ಆರೋಪಗಳನ್ನು ಸಾಬೀತು ಮಾಡುವಂತೆ ಯುಪಿ ಮಾದರಿಗೆ ಮೊರೆ ಹೋಗುವ ಮಾತು ಹೊರಬಿದ್ದಿದೆ. ಇದು ತಮ್ಮ ಸೋಲನ್ನು ಮುಚ್ಚಿಕೊಳ್ಳುವ ಮತ್ತು ಉನ್ನತ ನಾಯಕರ ಮೆಚ್ಚಿಸುವ ಎರಡು ಪ್ರಯತ್ನವಿರಬಹುದೆ? ಉತ್ತರವನ್ನು ಮುಂದಿನ ವಿದ್ಯಮಾನಗಳು ಬಿಚ್ಚಿಡಬಹುದು.

ಆದರೆ ಉತ್ತರಪ್ರದೇಶದ ಮಾದರಿ ನಿಜಕ್ಕೂ ಮಾದರಿಯೇ? ಕಾನೂನು ಸುವ್ಯವಸ್ಥೆ ಕಾಪಾಡುವ ವಿಷಯದಲ್ಲಿ ಉತ್ತರಪ್ರದೇಶ ಮಾದರಿಯ ಕೆಲಸ ಮಾಡಿದೆಯೇ? ಹಲವು ಜಿಜ್ಞಾಸೆಗಳು ನಡೆದಿವೆ. ಕಾನೂನನ್ನು ರಾಜಕೀಯವಾಗಿ ಬಳಸಿದ ಗಂಭೀರ ಆರೋಪ ಯೋಗಿ ಆದಿತ್ಯನಾಥ್‌ ಅವರ ನೇತೃತ್ವದ ಸರ್ಕಾರದ ಮೇಲಿದೆ. ಎರಡನೆಯ ಬಾರಿಗೆ ಮುಖ್ಯಮಂತ್ರಿ ಹುದ್ದೆ ಅಲಂಕರಿಸಿರುವ ಯೋಗಿ ಆದಿತ್ಯನಾಥ್‌ 2017ರಿಂದಲೂ ಅಧಿಕಾರದಲ್ಲಿದ್ದಾರೆ. ಈ ಅವಧಿಯಲ್ಲಿ ನಾಡಿನ ಸಂವಿಧಾನದ ಚೌಕಟ್ಟಿನಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಏನು ಕ್ರಮ ಕೈಗೊಂಡರು ಎಂಬುದನ್ನು ನೋಡಿದರೆ ಅಚ್ಚರಿಯಾಗುತ್ತದೆ.

Image
Bulldozer Baba

ಬಹಳ ಇತ್ತೀಚಿನ ಉದಾಹರಣೆಯನ್ನೇ ಗಮನಿಸೋಣ. 'ಬುಲ್ಡೋಜರ್‌' ಉತ್ತರ ಪ್ರದೇಶದ ಮಾದರಿಯ ಕಾನೂನು ಸುವ್ಯವಸ್ಥೆಯ ಕ್ರಮಗಳಲ್ಲಿ ಕೇಳಿಬಂದ ನುಡಿಗಟ್ಟು. ಅಷ್ಟೇ ಅಲ್ಲ, ಮೇ ತಿಂಗಳಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲೂ ಈ ಪದ ಸಾಕಷ್ಟು ಸದ್ದು ಮಾಡಿತು. ಅಕ್ರಮ ಕಟ್ಟಡಗಳನ್ನು ನೆಲಸಮ ಮಾಡುವುದಕ್ಕೆ ಅನುಸರಿಸಿದ ಈ ಕ್ರಮ ನ್ಯಾಯಾಂಗ ಚೌಕಟ್ಟು ಮೀರಿದ ಅಸ್ತ್ರ ಎಂಬ ಟೀಕೆ ಎದುರಿಸಿತು. ಅಷ್ಟೇ ಅಲ್ಲ, ಕೋಮುದ್ವೇಷದ ಕಾರಣಕ್ಕೆ, ಒಂದು ಸಮುದಾಯದ ಆರೋಪಿಗಳ ವಿರುದ್ಧವೇ ಈ ಕ್ರಮ ಬಳಸಲಾಯಿತು. ಕಾನೂನಿನ ಚೌಕಟ್ಟು ಮೀರಿದ ಈ ನ್ಯಾಯದ ಕ್ರಮ ತೀವ್ರ ಆಕ್ಷೇಪಕ್ಕೂ ಗುರಿಯಾಯಿತು.

ಸುಪ್ರೀಂಕೋರ್ಟ್‌ ಪ್ರತೀಕಾರದ ಅಕ್ರಮ ಕಟ್ಟಡಗಳ ನೆಲಸಮ ವಿಷಯದಲ್ಲಿ ಕಾನೂನು ನಿಯಮಗಳನ್ನು ಶಿಸ್ತಿನಿಂದ ಪಾಲಿಸುವಂತೆ ಎಚ್ಚರಿಸಿತ್ತು. ಪ್ರತೀಕಾರವಾಗಿ ನೆಲಸಮ ನಡೆಸಬಾರದು ಎಂದೂ ಎಚ್ಚರಿಸಿತ್ತು. ಅಂದರೆ ಉತ್ತರಪ್ರದೇಶ ತನ್ನ ನಿರ್ದಿಷ್ಟ ಉದ್ದೇಶ ಸಾಧನೆಗೆ ಕಾನೂನು ನಿಯಮಗಳನ್ನು ಉಲ್ಲಂಘಸಿತ್ತು ಎಂದರ್ಥವಲ್ಲವೆ? ಆದರೆ ಉತ್ತರಪ್ರದೇಶದ ಈ ಮಾದರಿ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಆಕರ್ಷಕ ಮಾದರಿಯಾಗಿ ಅನುಸರಿಸಲ್ಪಟ್ಟಿತು. ಮಧ್ಯಪ್ರದೇಶ,  ಉತ್ತರಾಖಂಡ, ರಾಜಸ್ಥಾನ, ಅಷ್ಟೇ ಏಕೆ ಕರ್ನಾಟಕದಲ್ಲೂ ಬುಲ್ಡೋಜರ್‌ ಸದ್ದು ಮಾಡಿತು. ದೆಹಲಿಯ ಜಹಂಗೀರ್‌ಪುರಿ ಕೋಮು ಹಿಂಸಾಚಾರದ ಸಂದರ್ಭದಲ್ಲಿ ಸುಪ್ರೀಂಕೋರ್ಟ್‌ ಎರಡು ಬಾರಿ ಆದೇಶ ನೀಡಬೇಕಾಗಿ ಬಂತು ಎಂದರೆ ಬುಲ್ಡೋಜರ್‌ ನ್ಯಾಯದ ಮಾದರಿ ಎಂತಹದ್ದು ಊಹಿಸಿಕೊಳ್ಳಬಹುದು.

ಉತ್ತರಪ್ರದೇಶ ನೆಲದ ಕಾನೂನನ್ನು ಸಾಧ್ಯವಾದಷ್ಟು ದುರುಪಯೋಗ ಪಡಿಸಿಕೊಂಡಿದೆ, ಇಲ್ಲವೇ ಉಲ್ಲಂಘಿಸಿದೆ ಎಂಬ ಅರೋಪವನ್ನು ರಾಜಕೀಯ ವಿರೋಧಿಗಳು, ಸಾಮಾಜಿಕ ಕಾರ್ಯಕರ್ತರು, ಹೋರಾಟಗಾರರು ಮಾಡುತ್ತಲೇ ಬಂದಿದ್ದಾರೆ. ಅವರೆಲ್ಲರ ಆರೋಪಕ್ಕೆ ಆಧಾರ ಸರ್ಕಾರಿ ಅಂಕಿ ಅಂಶಗಳೇ.

Image
UP Fake Encounter

ಉತ್ತರಪ್ರದೇಶದ ರಾಜ್ಯ ಮಾನವ ಹಕ್ಕುಗಳ ಆಯೋಗದ 2020ರ ಇಂಡಿಯಾ ಜಸ್ಟಿಸ್‌ ರಿಪೋರ್ಟ್ ಪ್ರಕಾರ, ಜೈಲುಗಳಲ್ಲಿ ಕೈದಿಗಳ ಸಂಖ್ಯೆ 168% ಹೆಚ್ಚಿದೆಯಂತೆ. ತಪ್ಪಿತಸ್ಥರನ್ನು ಜೈಲಿಗಟ್ಟಿದೆ ಎಂದು ಲೆಕ್ಕ ಹಾಕಬಹುದು. ಆದರೆ ಅದರಲ್ಲಿ ಎಷ್ಟು ಸುಳ್ಳು ಕೇಸುಗಳು ಎಂಬ ಪ್ರಶ್ನೆಗೆ ಉತ್ತರ ಸುಲಭವಾಗಿ ಸಿಕ್ಕುವುದಿಲ್ಲ. ಆರ್ಟಿಕಲ್‌-14 ಜಾಲತಾಣ ಕೆಲ ತಿಂಗಳ 2010ರಿಂದ 2020ರವರೆಗೆ ಭಾರತದಲ್ಲಿ ದಾಖಲಾದ ದೇಶದ್ರೋಹದ ಪ್ರಕರಣಗಳ ಒಂದು ಮಹತ್ವದ ಮಾಹಿತಿ ಸಂಗ್ರಹವನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಿತು.

2017ರಲ್ಲಿ ಅಧಿಕಾರಕ್ಕೆ ಬಂದ ಯೋಗಿ ಆದಿತ್ಯನಾಥ್‌ ಸರ್ಕಾರ 4 ವರ್ಷಗಳಲ್ಲಿ 100 ದೇಶದ್ರೋಹ ಪ್ರಕರಣ ದಾಖಲಿಸಿದೆ. ಈ ಪ್ರಕರಣಲ್ಲಿ 247 ಮಂದಿ ಗುರುತು ಇರುವ ಆರೋಪಿಗಳಾದರೆ, 802 ಮಂದಿ ಗುರುತಿಲ್ಲದ ಆರೋಪಿಗಳು! ಆದರೆ 2010ರಿಂದ 2021ರ ಅವಧಿಯಲ್ಲಿ ಕರ್ನಾಟಕದಲ್ಲಿ ದಾಖಲಾದ ಒಟ್ಟು ದೇಶದ್ರೋಹದ ಪ್ರಕರಣಗಳು 105!

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋದ ಅಂಕಿ- ಅಂಶಗಳನ್ನು ಬಿಚ್ಚಿಡುವ ಸತ್ಯ ಇನ್ನೂ ಆತಂಕಕಾರಿಯಾದ್ದು. ಐಪಿಸಿ ಮತ್ತು ವಿಶೇಷ ಮತ್ತು ಸ್ಥಳೀಯ ನಿಯಮಗಳಡಿ 2020ರಲ್ಲಿ ಅವಧಿಯಲ್ಲಿ ಉತ್ತರಪ್ರದೇಶದಲ್ಲಿ ದಾಖಲಾದ ಪ್ರಕರಣಗಳ ಸಂಖ್ಯೆ 6,57,925. ಮಾದಕ ವಸ್ತು ಮತ್ತು ಮಾನವ ಸಾಗಣೆಯ ಪ್ರಕರಣಗಳು 5889.

ಪೀಪಲ್ಸ್‌ ಯೂನಿಯನ್‌ ಫಾರ್‌ ಸಿವಿಲ್‌ ಲಿಬರ್ಟಿಸ್‌(ಪಿಯುಸಿಎಲ್) ಸಂಸ್ಥೆ ವರ್ಷದ ಆರಂಭದಲ್ಲಿ ಬಿಡುಗಡೆ ಮಾಡಿದ ವರದಿ ಉತ್ತರಪ್ರದೇಶದಲ್ಲಿ ನಡೆದಿರುವ ಮಾನವ ಹಕ್ಕುಗಳ ಉಲ್ಲಂಘಿಸುವ ಅಪರಾಧಗಳ ಆಘಾತಕಾರಿ ಅಂಶಗಳನ್ನೇ ಹೊರಹಾಕಿತು. 2021ರ ಹೊತ್ತಿಗೆ ಉತ್ತರಪ್ರದೇಶದಲ್ಲಿ ಮಹಿಳೆಯ ವಿರುದ್ಧ ನಡೆದ ಅಪರಾಧಗಳ ಪ್ರಮಾಣ 66.7%ನಷ್ಟಿದ್ದು ದೇಶದಲ್ಲೇ ಅಲ್ಲಿ ಅತ್ಯಧಿಕ ಪ್ರಕರಣಗಳು ಎಂದು ವರದಿ ದಾಖಲಿಸಿತು. 2020ರಲ್ಲಿ ಮುಸ್ಲಿಮರ ಮೇಲೆ 37% ನಷ್ಟು, 2020-21ರಲ್ಲಿ 443 ನ್ಯಾಯಾಂಗ ಬಂಧನದಲ್ಲಿ ಆದ ಸಾವುಗಳು ದಾಖಲಾಗಿವೆ. ಇದು ಉಳಿದೆಲ್ಲ ರಾಜ್ಯಗಳಿಗಿಂತ ಅಧಿಕ ಎಂಬುದನ್ನು ಗಮನಿಸಬೇಕು.

Image
Unnao rape case

ಇನ್ನು ಅಲ್ಪಸಂಖ್ಯಾತರ ವಿರುದ್ಧ 2020ರಲ್ಲಿ ಹೈಕೋರ್ಟ್‌ನಲ್ಲಿ ದಾಖಲಾದ ಪ್ರಕರಣಗಳ ಪೈಕಿ 41 ನಕಲಿ ಕೇಸುಗಳೆಂದು ಸಾಬೀತಾದವು. ಆಂಟಿ ರೋಮಿಯೋ ಪಡೆಯನ್ನು ಪರಿಚಯಿಸಿದ ಉತ್ತರಪ್ರದೇಶ ಸರ್ಕಾರ 2017ರಿಂದ 2022ರ ಅವಧಿಯಲ್ಲಿ 14,454 ಯುವಕರನ್ನು ಬಂಧಿಸಿತು. ಈ ಪಡೆಯೇ ಅಸಾಂವಿಧಾನಿಕ ಎಂದು ವಿರೋಧ ವ್ಯಕ್ತವಾಯಿತು. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ ಪ್ರಕಾರ 2017ರಲ್ಲಿ ಮಹಿಳೆಯ ವಿರುದ್ಧ ಪ್ರತಿ ದಿನ 153 ಪ್ರಕರಣ ದಾಖಲಾಗುತ್ತಿದ್ದರೆ, 2019ರ ಹೊತ್ತಿಗೆ ಇದು ದಿನಕ್ಕೆ 164ಕ್ಕೆ ಏರಿಕೆ ಕಂಡಿತ್ತು. ರಾಷ್ಟ್ರೀಯ ಮಹಿಳಾ ಆಯೋಗದ ಪ್ರಕಾರ 2021ರಲ್ಲಿ ದೇಶದಲ್ಲಿ ಮಹಿಳೆಯರ ಮೇಲಿನ ಅಪರಾಧಗಳ ಸಂಖ್ಯೆ ಶೇ.46ರಷ್ಟು ಹೆಚ್ಚಿದೆ. ಇದರಲ್ಲಿ ಅರ್ಧದಷ್ಟು ಉತ್ತರ ಪ್ರದೇಶದ ಕೊಡುಗೆ! ಎನ್‌ಸಿಆರ್‌ಬಿ ಅಂಕಿಗಳು 2019ರಲ್ಲಿ 59,583 ಪ್ರಕರಣಗಳು ದಾಖಲಾಗಿವೆ ಎನ್ನುತ್ತವೆ.

ಮತಾಂತರ ವಿರೋಧಿ ಕಾನೂನು ಜಾರಿಗೆ ತಂದು, ಸಾಕ್ಷಿಗಳಿಲ್ಲದೆ ಪ್ರಕರಣಗಳನ್ನು ದಾಖಲಿಸಿದ್ದು, ನಕಲಿ ಎನ್‌ಕೌಂಟರ್‌ಗಳನ್ನು ನಡೆಸಿದ್ದು ಹೀಗೆ ಉತ್ತರಪ್ರದೇಶದ ಸರ್ಕಾರ ಕಾನೂನನ್ನು ರಾಜಕೀಯ ಅಸ್ತ್ರವಾಗಿ ಬಳಸಿಕೊಂಡ ಮಾದರಿಯನ್ನು ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಸಮಿತಿ ಕೂಡ ಖಂಡಿಸಿದೆ.

ಸರ್ಕಾರವನ್ನು ಟೀಕಿಸಿದವರನ್ನು, ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ಬಿಜೆಪಿ ಸರ್ಕಾರ, ಕಾನೂನನ್ನು ದಾಳವಾಗಿ ಬಳಸಿಕೊಂಡ ನೂರಾರು ಉದಾಹರಣೆಗಳನ್ನು ಹೀಗೆ ಪಟ್ಟಿ ಮಾಡುತ್ತಲೇ ಹೋಗಬಹುದು. ತಪ್ಪಿತಸ್ಥರು ಎಂದು ಹಿಡಿದು ಜೈಲಿಗೆ ಹಾಕುವುದನ್ನೇ ಕಾನೂನು ಸುವ್ಯವಸ್ಥೆ ಕಾಪಾಡುವ ವಿಧಾನ ಎಂದು ಉತ್ತರಪ್ರದೇಶ ಪ್ರತಿಪಾದಿಸಿದಂತಿದೆ.

ಉನ್ನಾವ್‌ ದಲಿತ ಯುವತಿ ಅತ್ಯಾಚಾರ ಪ್ರಕರಣದಿಂದ ಹಿಡಿದು ಲಖೀಂಪುರ್‌ಖೇರಿ ರೈತರ ಹತ್ಯೆ ಪ್ರಕರಣದವರೆಗೆ ದೇಶದ ಗಮನ ಸೆಳೆದ ಉತ್ತರಪ್ರದೇಶದಲ್ಲಿ ನಡೆದ ಘಟನೆಗಳು ಬಿಜೆಪಿ ಸರ್ಕಾರ ಮೇಲ್ಜಾತಿಯ ಅಹಂಕಾರವನ್ನು ಪೋಷಿಸುತ್ತಾ, ಕಾನೂನು ಅನುಕೂಲಕ್ಕೆ ತಕ್ಕಂತೆ ಬಳಸುವ ಧಾರ್ಷ್ಟ್ಯ ತೋರಿದ್ದಕ್ಕೆ ಉದಾಹರಣೆಗೆಯಾಗಿ ನಮ್ಮ ಮುಂದೆ ಇವೆ.

ದಲಿತ, ಶೋಷಿತ ಸಮುದಾಯಗಳು, ಮಹಿಳೆಯರು, ಸಾಮಾಜಿಕ ಕಾರ್ಯಕರ್ತರು, ಪತ್ರಕರ್ತರು, ವಕೀಲರು, ವಿದ್ವಾಂಸರು, ಬಡವರು ಅಸ್ತಿತ್ವಕ್ಕೆ ಪ್ರತಿದಿನ ಆತಂಕದಲ್ಲಿರುವಂತೆ ಮಾಡಿರುವ ಉತ್ತರಪ್ರದೇಶದ ಆಡಳಿತ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ವೈಖರಿ, ಕರ್ನಾಟಕಕ್ಕೆ ಯಾವ ರೀತಿಯಲ್ಲಿ ಮಾದರಿ ಎಂಬುದನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜ್ಯಕ್ಕೆ ವಿವರಿಸಬೇಕು.

ಫ್ಯಾಸಿಸ್ಟ್‌ ಮಾದರಿಯ ನಿರಂಕುಶ ಆಡಳಿತವನ್ನೇ ನಿಧಾನವಾಗಿ ಸ್ಥಾಪಿಸಲು ಯತ್ನಿಸುತ್ತಿರುವ ಉತ್ತರಪ್ರದೇಶದ ಮಾದರಿಯನ್ನು ದೇಶಕ್ಕೆ ಮಾದರಿ ಎಂಬಂತೆ ರಾಜಕೀಯ ಕಥನವಾಗಿ ನಂಬಿಸುತ್ತಾ ಬಂದಿರುವ ಬಿಜೆಪಿ, ಕೇರಳ, ತಮಿಳುನಾಡುಗಳಿಂದ ತಿರುಗೇಟು ತಿಂದು ಪಾಠ ಹೇಳಿಸಿಕೊಂಡಿವೆ. ಆದರೂ ಬೊಮ್ಮಾಯಿಯವರು ʼಯುಪಿ ಮಾದರಿʼ ಜಪ ಮಾಡಿರುವುದು ಅಚ್ಚರಿ ಮೂಡಿಸಿದೆ. ಕರ್ನಾಟಕಕ್ಕೆ ಬೇಕಿರುವುದು ಸದೆಬಡಿಯುವ ಸರ್ಕಾರವಲ್ಲ; ಸಹೃದಯ ಸರ್ಕಾರ ಎಂಬುದು ಅವರಿಗೆ ಮನವರಿಕೆಯಾಗಬೇಕಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್