ಮುಸ್ಲಿಮರಿಗೆ ವ್ಯಾಪಾರ ನಿರಾಕರಣೆ; ಬೇಲೂರಿನಲ್ಲಿ ಪ್ರಗತಿಪರರಿಂದ ಪ್ರತಿಭಟನೆ

Hassan DC office
  • ಬೇಲೂರು ಚನ್ನಕೇಶವ ದೇವಾಲಯದ ಮುಂದೆ ಮುಸ್ಲಿಮರ ವ್ಯಾಪಾರಕ್ಕೆ ನಿರ್ಬಂಧ ಹೇರುವವರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ
  • ಹಾಸನ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರಗತಿಪರ ಸಂಘಟನೆಗಳಿಂದ ಪ್ರತಿಭಟನೆ

ಬೇಲೂರು ಜಾತ್ರೆಯಲ್ಲಿ ಮುಸ್ಲಿಮರು ವ್ಯಾಪಾರ ಮಾಡದಂತೆ ನಿರ್ಬಂಧ ಹೇರುತ್ತಿರುವುದನ್ನು ವಿರೋಧಿಸಿ ಹಾಸನ ಜಿಲ್ಲೆಯ ಜನಪರ ಮತ್ತು ಸಂವಿಧಾನಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಸೇರಿದ ಪ್ರತಿಭಟನಾಕಾರರು, ಬೇಲೂರಿನ ಚನ್ನಕೇಶವ ದೇವಾಲಯದ ಮುಂದಿರುವ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ ಹೇರಿರುವ ವಿಶ್ವ ಹಿಂದು ಪರಿಷತ್ ಸಂಘಟನೆಯ ನಡೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಘಟನೆ ನಾಗರಿಕ ಸಮಾಜದ ಅತ್ಯಂತ ನೀಚ ಕೃತ್ಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬೇಲೂರು ಜಾತ್ರೆ ವೇಳೆ ಮುಸ್ಲಿಮರಿಗೆ ವ್ಯಾಪಾರ ಮಾಡದಂತೆ ನಿರ್ಬಂಧ ಹೇರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ ಪ್ರತಿಭಟನಾಕಾರರು ಕೋಮುದ್ವೇಷ ಹರಡುತ್ತಿರುವ ಕೋಮುವಾದಿ ಸಂಘಟನೆಗಳ ಮೇಲೆ ನಿಯಂತ್ರಣ ಹಾಕಬೇಕು ಎಂದು ಒತ್ತಾಯಿಸಿದರು. ಅಲ್ಲದೆ, ಜಿಲ್ಲೆಯಲ್ಲಿ ಸಂವಿಧಾನ ಬದ್ಧವಾದ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಿ ಸಮಾಜದಲ್ಲಿ ಸಾಮರಸ್ಯ ಮತ್ತು ಸಹಬಾಳ್ವೆ ನೆಲೆಸುವಂತೆ ಮಾಡಬೇಕೆಂದು ಜಿಲ್ಲಾಧಿಕಾರಿ ಆರ್ ಗಿರೀಶ್ ಅವರಿಗೆ ಮನವಿ ಮಾಡಿದ್ದಾರೆ.

ಪ್ರತಿಭಟನೆ ವೇಳೆ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಧರ್ಮೇಶ್, "ಭಾರತದ ಸಂವಿಧಾನದ ಮೂಲ ಆಶಯ ಮತ್ತು ಮೌಲ್ಯಗಳ ಮೇಲೆ ದಾಳಿ ಆರಂಭವಾಗಿದೆ. ಆ ಮೂಲಕ ದೇಶದಲ್ಲಿ ಸಂವಿಧಾನದ ಆಡಳಿತವನ್ನು ಕೊನೆಗಾಣಿಸಿ ಮನುಸ್ಮೃತಿಯ ಆಡಳಿತವನ್ನು ಜಾರಿಗೆ ತರುವ ಹುನ್ನಾರ ನಡೆಯುತ್ತಿದೆ" ಎಂದು ಆರೋಪಿಸಿದ್ದಾರೆ.

ಅಲ್ಲದೆ, ದೇಶದಲ್ಲಿ ಇಂತಹ ವಿನಾಶಕಾರಿ ಪರಿಸ್ಥಿತಿಯನ್ನು ಸರಿಪಡಿಸಲು ಸಂವಿಧಾನಪರವಾದ ಜಾತ್ಯಾತೀತ ಪ್ರಜಾಸತ್ತಾತ್ಮಕ ಶಕ್ತಿಗಳು ಒಟ್ಟಾಗಿ ನಿಂತು ಜನಪರವಾಗಿ ಕೆಲಸ ಮಾಡುವುದು ಅನಿವಾರ್ಯ ಎಂದು ಹೇಳಿದ್ದಾರೆ.

Image
death

ಪ್ರತಿಭಟನೆಯಲ್ಲಿ ಹಿರಿಯ ದಲಿತ ಮುಖಂಡ ಎಚ್ ಕೆ ಸಂದೇಶ್, ರಾಜಶೇಖರ್, ದಲಿತ ಸಂಘರ್ಷ ಸಮಿತಿಯ ಸಂಚಾಲಕ ಕೃಷ್ಣದಾಸ್, ಚಿತ್ರಕಲಾವಿದ ಕೆ ಟಿ ಶಿವಪ್ರಸಾದ್, ಹಿರಿಯ ನಾಗರಿಕ ವೇದಿಕೆಯ ಬಿ ಕೆ ಮಂಜುನಾಥ್, ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಬ್ದುಲ್ ಸಮದ್, ಡಿವೈಎಫ್ಐ ಸಂಘಟನೆಯ ಕಾರ್ಯದರ್ಶಿ ಎಂ ಜಿ ಪೃಥ್ವಿ, ರೈತ ಸಂಘದ ಮುಖಂಡ ಎಚ್ ಆರ್ ನವೀನ್ ಕುಮಾರ್ ಸೇರಿದಂತೆ ಇತರರು ಇದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್