ಆರೆಸ್ಸೆಸ್ ಆಳ-ಅಗಲ: ಒಬ್ಬ ಲೇಖಕ ಸಮಕಾಲೀನವಾಗುವ ಬಗೆ

RSS mahadeva

ಜನಸಾಮಾನ್ಯರು ಓದಬಹುದಾದ, ಓದಲೇಬೇಕಾದ ಕರಪತ್ರಗಳು, ಭಾಷಣಗಳು ಮತ್ತು ಲೇಖನಗಳ ಕುರಿತು ದೇವನೂರ ಮಹಾದೇವರ ಆಸಕ್ತಿ ಈ ಪರಿ ಇದೆ. ಅದರ ಮುಂದುವರೆದ ಭಾಗವೇ ʼಆರೆಸ್ಸೆಸ್ ಆಳ ಅಗಲʼ ಪುಸ್ತಕ. ಅದನ್ನು ಬರೆದದ್ದು, ಪ್ರಕಟಿಸಿದ್ದು ಕರ್ನಾಟಕದ ಹೊಸಕಾಲದ ಜಾಣಜಾಣೆಯರ ಎದೆಯೊಳಗೆ ಬೀಜವೊಂದನ್ನು ಬಿತ್ತುವ ಸಲುವಾಗಿ

ಸಾಹಿತ್ಯದಲ್ಲಿ ಬರೆಯಲು ಅತ್ಯಂತ ಕಠಿಣವಾದದ್ದು ಯಾವುದು ಎಂದು ಯಾರಾದರೂ ಕೇಳಿದರೆ ಅದಕ್ಕೆ ನನ್ನ ಉತ್ತರ ‘ಕರಪತ್ರ ಸಾಹಿತ್ಯ’. ಸಾಹಿತ್ಯಾಸಕ್ತರು ಖುಷಿ ಪಡುವಂತೆ, ವಿಮರ್ಶಕರು ಮೆಚ್ಚಿ ಅಹುದಹುದೆನ್ನುವಂತೆ ಬರೆಯುವುದು ಸುಲಭವೆಂದೋ, ಮಹತ್ವವಿಲ್ಲದ್ದು ಎಂದೋ ಇದರರ್ಥವಲ್ಲ. ಸರಳವಾಗಿ ಬರೆದದ್ದೆಲ್ಲಾ ಶ್ರೇಷ್ಠವೆಂದು ಹೇಳುವುದೂ ಉದ್ದೇಶವಲ್ಲ. ಆದರೆ ಕರಪತ್ರವೊಂದು ಸಾರ್ಥಕವಾಗುವುದು ಅದು ಯಾವ ಜನಸಾಮಾನ್ಯರನ್ನು ಉದ್ದೇಶಿಸಿ ಬರೆಯಲಾಗಿರುತ್ತದೋ ಅವರಿಗೆ ಹೇಳಬೇಕಾದ್ದನ್ನು, ಹೇಳಬೇಕಾದ ಸಂದರ್ಭದಲ್ಲೇ ಮುಟ್ಟಿಸುವುದರಿಂದ. ಬಹುತೇಕ ಸಾರಿ ಕರಪತ್ರಗಳು ತೀರಾ ಜನಸಾಮಾನ್ಯರನ್ನುದ್ದೇಶಿಸಿಯೇ ಬರೆಯಲಾಗಿರುತ್ತದೆ. ಆ ಜನರ ಸಮೂಹ ವಿವೇಕವು ಬಡಿದೇಳುವಂತೆ ಮಾಡುವುದು ಸುಲಭವಲ್ಲ. ಮೊದಲಿಗೆ ಆ ಸಮೂಹಕ್ಕಿರುವ ವಿವೇಕದ ಕುರಿತು ವಿಶ್ವಾಸ ಬೇಕು; ಈ ಹೊತ್ತಿನಲ್ಲಿ ಅದನ್ನು ಉದ್ದೀಪನಗೊಳಿಸಲು ಯಾವ ನಾಡಿಯನ್ನು ಮೀಟಬೇಕೆಂಬ ಕಲೆ ಕರಗತವಾಗಿರಬೇಕು. ಅದಿಲ್ಲದಿರೆ ಕರಪತ್ರವು ಒಣ ಅಥವಾ ಭಾರವಾಗಿ ಬಿಡುತ್ತದೆ. ಯಾರನ್ನು ಉದ್ದೇಶಿಸಿ ಬರೆಯಲಾಗಿರುತ್ತದೋ ಅವರು ಕಣ್ಣೆತ್ತಿಯೂ ನೋಡದಂತೆ ಕಸವಾಗಿಬಿಡುತ್ತದೆ.

ಕನ್ನಡದ ಪ್ರಮುಖ ಲೇಖಕರು, ವಿಮರ್ಶಕರಲ್ಲೊಬ್ಬರಾದ ಪ್ರೊ.ರಾಜೇಂದ್ರ ಚೆನ್ನಿಯವರು 20 ವರ್ಷಗಳ ಹಿಂದೆ ಬರೆದ ಕರಪತ್ರವೊಂದು ಇಂದಿಗೂ ನೆನಪಿನಲ್ಲಿದೆ. ಸಾಮಾನ್ಯವಾಗಿ ಆತ್ಮೀಯರೇ, ಬಂಧುಗಳೇ, ನಾಡಬಂಧುಗಳೇ ಎಂದು ಸಂಬೋಧಿಸಿ ಕರಪತ್ರವನ್ನು ಸುರು ಮಾಡುವುದು ರೂಢಿ. ಚೆನ್ನಿಯವರು, ಅಂದಿನ ಸಂದರ್ಭಕ್ಕನುಗುಣವಾಗಿ ‘ಮನುಷ್ಯರನ್ನು ಪ್ರೀತಿಸುವ ಸರ್ವಧರ್ಮೀಯರೇ’ ಎಂದಾರಂಭಿಸಿದ್ದರು. ‘ಮಳೆ ಬಂದಾಗ ಓಡಿ ಸೂರೊಂದರ ಕೆಳಗೆ ನಿಂತಾಗ, ಪಕ್ಕದಲ್ಲಿ ನಿಂತ ವ್ಯಕ್ತಿಯ ಜಾತಿ, ಧರ್ಮ ಹೇಗೆ ಮುಖ್ಯವಾಗುವುದಿಲ್ಲವೋ...’ ಹೀಗೆ ಮುಂದುವರೆದ ಆ ಕರಪತ್ರವು ಅತ್ಯುತ್ತಮ ಸಾಹಿತ್ಯದ ಒಂದು ಉದಾಹರಣೆ ಎಂದೇ ನನಗನ್ನಿಸಿತ್ತು.

ದೇವನೂರ ಮಹಾದೇವ ಅವರ ಸಮಗ್ರ ಕೃತಿಯನ್ನು ಪ್ರಕಟಿಸಿದಾಗ, ಕನ್ನಡದ ಬಹುಮುಖ್ಯ ಬರಹಗಾರರಾದ ಪಿ.ಲಂಕೇಶರು ಬರೆದಿದ್ದ ಒಂದು ಮಾತಿನಿಂದ ನನಗೆ ಅಯೋಮಯವಾಗಿತ್ತು. ಉಳಿದ ಕತೆ, ನೀಳ್ಗತೆಗಳ ಬಗ್ಗೆ ಪ್ರಸ್ತಾಪಿಸಿದ್ದ ಅವರು, ‘ಕುಸುಮಬಾಲೆ ನನ್ನರಿವಿನ ಆಳಕ್ಕೆ ಇಳಿಯದೇ ಇರುವುದರಿಂದ ಅದರ ಕುರಿತು ಏನೂ ಹೇಳುತ್ತಿಲ್ಲ’ ಎಂಬ ಅರ್ಥದ ಮಾತುಗಳನ್ನು ಅಲ್ಲಿ ಹೇಳಿದ್ದರು. ಕುಸುಮಬಾಲೆ ಒಂದು ಮಾಯ್ಕಾರ ಕಥನಕಾವ್ಯ. ಅದನ್ನು ಕಾವ್ಯವೆಂದೇ ಬಗೆದು ಪ್ರೊ.ಎಲ್.ಬಸವರಾಜು ಅವರು ಪದ್ಯದ ರೂಪದಲ್ಲಿ ಮರುರಚಿಸಿದ ಚೋಜುಗವೂ ನಡೆದು ಹೋಯಿತು. ಆದರೂ ‘ಅವತ್ತು ಸ್ವಾಮಾರ, ಕವಲಂದೆ ಟೇಷನ್‌ನಲ್ಲಿ ರೈಲು ಬಂದು ಹೋಗೋ ವೊತ್ತಿನಾಗೆ ವುಟ್ಟಿದ ಮಾದೇವ’ರ ಕುಸುಮಬಾಲೆ ಕೃತಿಯನ್ನು ಅರಗಿಸಿಕೊಳ್ಳುವುದು ಎಲ್ಲರಿಗೂ ಸುಲಭವಾಗಿರಲಿಲ್ಲ. ನಿಧಾನಕ್ಕೆ ಕುಸುಮಬಾಲೆ ಕನ್ನಡ ಪ್ರಜ್ಞೆಯ ಆಳಕ್ಕೆ ಇಳಿದಳು. ಫ್ಯಾಂಟಸಿ, ಜನಪದ, ಪುರಾಣ, ಸ್ವಾತಂತ್ರ್ಯೋತ್ತರ ಚಳವಳಿಗಳ ಏಳು-ಬೀಳು, ಭಾರತದ ವಿಚಿತ್ರ ಸಾಮಾಜಿಕ ಪದರಗಳು ಎಲ್ಲವನ್ನೂ ಎರಕ ಹೊಯ್ದು ಕುಸುಮಬಾಲೆಯನ್ನು ಸೃಷ್ಟಿಸಲಾಗಿತ್ತು.

Image
RSS aala agala

ಅಂತಹ ಕುಸುಮಬಾಲೆಯನ್ನು ತಂದ ನಂತರ ದೇವನೂರರು ಏನನ್ನು ಬರೆದರು? ಅತ್ಯಂತ ಜನಸಾಮಾನ್ಯರಿಗೆ ಅರ್ಥವಾಗುವ, ಎದೆಗೆ ತಾಕುವ ಮಾತುಗಳನ್ನು ಆಡಿದರು; ಬರೆದರು. ಎದೆಗೆ ಬಿದ್ದ ಅಕ್ಷರ ಅವರು ಒಮ್ಮೆ ಕೂತು ಬರೆದ ಕೃತಿಯಲ್ಲ. ಕುಸುಮಬಾಲೆಗೂ, ಒಡಲಾಳಕ್ಕೂ, ಅಮಾಸನಿಗೂ ಮೊದಲಿಂದ ಆಡುತ್ತಾ, ಬರೆಯುತ್ತಾ ಬಂದ ಮಾತುಗಳನ್ನು ಒಟ್ಟುಕೂಡಿಸಿ ತಂದ ಸಂಗ್ರಹ ಎದೆಗೆ ಬಿದ್ದ ಅಕ್ಷರ. ಅದನ್ನು ಕನ್ನಡದ ಓದುಗರು ಬರಮಾಡಿಕೊಂಡ ರೀತಿ ವಿಶಿಷ್ಟವಾದುದಾಗಿತ್ತು. ನಿಜ ಹೇಳಬೇಕೆಂದರೆ ಅವರ ಈಚಿನ ಕೃತಿ ಆರೆಸ್ಸೆಸ್ ಆಳ-ಅಗಲಕ್ಕೂ ಎದೆಗೆ ಬಿದ್ದ ಅಕ್ಷರಕ್ಕೂ ಒಂದು ಸಮಾನ ಗುಣವಿದೆ. ಅಂದಂದಿನ ಸಂದರ್ಭಕ್ಕೆ ಅಗತ್ಯವಿದ್ದ ಮಾತುಗಳನ್ನು ಸೃಜನಶೀಲ ಲೇಖಕನೂ, ಆಕ್ಟಿವಿಸ್ಟೂ ಆಗಿರುವ ವ್ಯಕ್ತಿಯೊಬ್ಬರು ಹೇಳುತ್ತಾ ಬಂದಿರುವ ರೀತಿಯದು.

ಇದು ಇನ್ನಷ್ಟು ಸ್ಪಷ್ಟವಾಗಬೇಕೆಂದರೆ, ಆಳ ಅಗಲ ಪುಸ್ತಕದಲ್ಲಿ ದೇವನೂರರೇ ಕಾಣಿಸಿರುವ ಇನ್ನೂ ಕೆಲವು ಪುಸ್ತಕಗಳ ಪಟ್ಟಿಯನ್ನು ನೋಡಿ. ಆ ಪುಸ್ತಕಗಳಲ್ಲಿ ಕೆಲವು ಸ್ವತಃ ದೇವನೂರರು ಇತ್ತೀಚಿನ ದಿನಗಳಲ್ಲಿ ಬರೆದಿರುವ ನೀಳ್ಕರಪತ್ರಗಳು ಇವೆ. ಹಾಗೆಯೇ ರಾಜೀನಾಮೆ ನೀಡಿದ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್‌ರ ಭಾಷಣ, ವಾರ್ತಾಭಾರತಿ ಸಂಪಾದಕರಾದ ಅಬ್ದುಸ್ಸಲಾಂ ಪುತ್ತಿಗೆ ಮತ್ತು ರಹಮತ್ ತರೀಕೆರೆಯವರ ಲೇಖನಗಳೂ ಇವೆ. ಈ ಮೂವರ ಭಾಷಣ ಹಾಗೂ ಲೇಖನಗಳನ್ನು ಅಪಾರವಾಗಿ ಮೆಚ್ಚಿದ ದೇವನೂರರು ಅವು ತನ್ನದೇ ಪುಸ್ತಕವೇನೋ ಎಂಬಷ್ಟು ಆಸ್ಥೆಯಿಂದ ಪ್ರಿಂಟ್ ಹಾಕಿಸಿದರು.

ಸೆಂಥಿಲ್ ಪ್ರಕಾರ, ‘ಈ ಪುಸ್ತಕ ಮುದ್ರಣವಾದ ಮೇಲೆಯೇ ಗೊತ್ತಾಯಿತು. ನನ್ನ ತಮಿಳು ಭಾಷಣವೊಂದನ್ನು ಕನ್ನಡಕ್ಕೆ ಅನುವಾದಿಸಿ ಮುದ್ರಿಸಿ ಅದನ್ನು ಎಲ್ಲರಿಗೂ ಹಂಚಬೇಕೆಂದು ಅವರೇ ಮುತುವರ್ಜಿ ವಹಿಸಿದ್ದು ನೋಡಿ ಹೃದಯ ತುಂಬಿ ಬಂದಿತು’.

ಜನಸಾಮಾನ್ಯರು ಓದಬಹುದಾದ, ಓದಲೇಬೇಕಾದ ಕರಪತ್ರಗಳು, ಭಾಷಣಗಳು ಮತ್ತು ಲೇಖನಗಳ ಕುರಿತು ದೇವನೂರ ಮಹಾದೇವರ ಆಸಕ್ತಿ ಈ ಪರಿ ಇದೆ. ಅದರ ಮುಂದುವರೆದ ಭಾಗವೇ ಆರೆಸ್ಸೆಸ್ ಆಳ ಅಗಲ. ಅದನ್ನು ಬರೆದದ್ದು, ಪ್ರಕಟಿಸಿದ್ದು ಕರ್ನಾಟಕದ ಹೊಸಕಾಲದ ಜಾಣಜಾಣೆಯರ ಎದೆಯೊಳಗೆ ಬೀಜವೊಂದನ್ನು ಬಿತ್ತುವ ಸಲುವಾಗಿ. ಅಚ್ಚರಿಯಾಗುವ ಸಂಗತಿಯೇನೆಂದರೆ, ‘ಈ ಪುಸ್ತಕದಲ್ಲಿ ನಮಗೆ ಗೊತ್ತಿರದ ಯಾವ ಸಂಗತಿಯೂ ಇಲ್ಲ’ ಎಂದು ಹಲವರು ಹೇಳುತ್ತಿದ್ದಾರೆ. ನಿಜವೇ; ಆರೆಸ್ಸೆಸ್ ವಿಷಯದಲ್ಲಿ ದೇವನೂರರಿಗಿಂತಲೂ ಹೆಚ್ಚು ಓದಿ ತಿಳಿದುಕೊಂಡಿರುವವರು ಬೇಕಾದಷ್ಟು ಜನರಿರಬಹುದು. ಆದರೆ, ದೇವನೂರರ ಪುಸ್ತಕದ ವಿಶೇಷವೇನೆಂದರೆ ಅದು ಜನಸಾಮಾನ್ಯರಿಗೆ ತಿಳಿಸಲೇಬೇಕಾದ ಸಂಗತಿಗಳನ್ನು, ತಿಳಿಸಬೇಕಾದ ರೀತಿಯಲ್ಲಿ, ತಿಳಿಸಬೇಕಾದ ಕಾಲದಲ್ಲಿ ಬರೆಯಲಾದ ಪುಸ್ತಕವಾಗಿದೆ.

ಆರೆಸ್ಸೆಸ್‌ ಪರ ಮಾತುಗಾರರ ಡಿಫೆನ್ಸ್ ತೋಪಾಗಿದೆ

ಕರ್ನಾಟಕದ ಬಹುದೊಡ್ಡ ಸೃಜನಶೀಲ ಬರಹಗಾರಲ್ಲಿ ಒಬ್ಬರಾದ ದೇವನೂರು ಕರಪತ್ರವನ್ನು ಬರೆಯಲು ಹಿಂಜರಿಯಲಿಲ್ಲ. ಬೇರೆಯವರ ಬರಹಗಳನ್ನು ಪುಸ್ತಕ ರೂಪದಲ್ಲಿ ತಾನೇ ಪ್ರಕಟಿಸಲು ಪ್ರೋತ್ಸಾಹಿಸಲು ಮುಂದಾದರು ಮತ್ತು ನಿರ್ಣಾಯಕ ಸಂದರ್ಭವೊಂದರಲ್ಲಿ ಆರೆಸ್ಸೆಸ್‌ನ ನಿಜ ಮುಖ ತಿಳಿಸಬೇಕೆಂದು ಸ್ವತಃ ತಾವೇ ‘ಪಂಡಿತರಿಗೆ ಇದುವರೆಗೆ ಗೊತ್ತಿದ್ದ’ ಸಂಗತಿಗಳನ್ನೇ ತಮ್ಮ ಶೈಲಿಯಲ್ಲಿ ಹೇಳಲು ಬಯಸಿ ಈ ಪುಸ್ತಕ ಬರೆದರು. ಪರಿಣಾಮ ಏನೆಂದು ಈಗಾಗಲೇ ನಿಚ್ಚಳವಾಗಿದೆ. ಆರೆಸ್ಸೆಸ್‌ನ ಪರವಾಗಿ ಫೀಲ್ಡಿಗಿಳಿಯುವ ಕೆಲವು ಮಾತುಗಾರರು ಈ ಸಂದರ್ಭದಲ್ಲಿ ಮುಂದಿಟ್ಟ ಡಿಫೆನ್ಸ್ ತೋಪಾಗಿದೆ. ಅವರ ವಾದವು ಪೇಲವವಾಗಿ ಕಾಣುತ್ತಿದೆ. ‘ಅಯ್ಯೋ ಈ ಮಾದೇವಪ್ಪನಿಗೆ ಆರೆಸ್ಸೆಸ್‌ನ ಆಳ-ಅಗಲ ಗೊತ್ತೇ ಆಗಿಲ್ಲ. ಅದರ ಆಳ ಇಷ್ಟೇ ಅಲ್ಲ’ ಎಂದವರು ಹೇಳುತ್ತಿದ್ದರೆ, ಪುಸ್ತಕವನ್ನು ಓದಿದವರು ಹಾಗಾದರೆ ಈ ಆರೆಸ್ಸೆಸ್ ಅಂದರೆ ಇನ್ನೂ ದೊಡ್ಡ ಡೇಂಜರ್ ಇರಬಹುದು ಎಂದುಕೊಳ್ಳುವ ಹಾಗಾಗಿದೆ. ಏಕೆಂದರೆ ಆರೆಸ್ಸೆಸ್ ಅಂದರೆ ಏನು ಅಪಾಯ ಎಂಬುದನ್ನು ಈ ಪುಸ್ತಕ ಸ್ಪಷ್ಟವಾಗಿ ಮಾತಾಡುತ್ತದೆ. ಇದುವರೆಗೆ ಈ ಪುಸ್ತಕವನ್ನು ವಿರೋಧಿಸಿ ಬರೆದ ಒಬ್ಬ ವ್ಯಕ್ತಿಯೂ, ಪುಸ್ತಕದಲ್ಲಿ ಇಂತಹ ಸುಳ್ಳಿದೆ ಎಂದು ಹೇಳಲಾಗಿಲ್ಲ. ಅವರು ಬರೆದಷ್ಟೂ ಜನರಿಗೆ ಆರೆಸ್ಸೆಸ್ ಕುರಿತ ಗುಮಾನಿ ಹೆಚ್ಚಾಗುತ್ತದೆ ಮತ್ತು ಪುಸ್ತಕದ ಕುರಿತ ಕುತೂಹಲವೂ ಹಿಗ್ಗುತ್ತದೆ.

ಇದನ್ನು ಓದಿದ್ದೀರಾ? ಮೋದಿ ಪ್ರಭುತ್ವದಡಿ ನಲುಗುತ್ತಿದೆ ಅಭಿವ್ಯಕ್ತಿ ಸ್ವಾತಂತ್ರ್ಯ

ಒಂದು ಬಹುಮುಖ್ಯವಾದ ಪ್ರತಿಪಾದನೆ ಈ ಪುಸ್ತಕದಲ್ಲಿ ಬಂದಿದೆ. ಅದೂ ಹೊಸ ಪ್ರತಿಪಾದನೆಯೇನಲ್ಲ. ಆದರೆ, ಅದನ್ನು ನಿರೂಪಿಸಿರುವ ಹಾಗೂ ಸ್ಥಾಪಿಸಿರುವ ರೀತಿ ಪರಿಣಾಮಕಾರಿಯಾದುದು. ಆರೆಸ್ಸೆಸ್ ಹೇಳುವ ಹಿಂದುತ್ವ ಎಂದರೆ ಅದರ ಅರ್ಥ ಚಾತುರ್ವರ್ಣ ಎಂದಷ್ಟೇ ಎಂಬುದನ್ನು ಆರೆಸ್ಸೆಸ್ ಜನರ ಪುಸ್ತಕಗಳಿಂದಲೇ ಎತ್ತಿ ದೇವನೂರರು ಬಿಚ್ಚಿಟ್ಟಿದ್ದಾರೆ. ಬ್ರಾಹ್ಮಣರು ಹೇಳಿದಂತೆ ಮಿಕ್ಕವರೆಲ್ಲರೂ ಕೇಳಿಕೊಂಡು ಇರಬೇಕೆಂಬುದೇ ಅವರು ಹೇಳುತ್ತಿರುವ ಧರ್ಮ ಎಂಬುದೂ ಅದರಲ್ಲಿ ಸ್ಪಷ್ಟವಾಗಿ ಬಂದಿದೆ, ಪುರಾವೆಗಳ ಸಮೇತ. ಇದರಲ್ಲಿ ಹೊಸದೇನಿದೆ ಎಂದು ಕೇಳುವವರು, ಇದುವರೆಗೂ ಸಾಮಾನ್ಯ ಜನರಿಗೆ ಮನವರಿಕೆ ಆಗುವ ರೀತಿಯಲ್ಲಿ ಅದನ್ನು ಹೇಳಲಾಗಿರಲಿಲ್ಲ ಎಂಬುದನ್ನು ಗಮನಿಸಬೇಕು.

ಅಂದರೆ, ಈ ಪುಸ್ತಕದ ಮೂಲಕ ದೇವನೂರರ ಅರಿವಿನ ಆಳ-ಅಗಲ ಇನ್ನಷ್ಟು ಗೊತ್ತಾಗಿದೆ. ಸೃಜನಶೀಲ ಲೇಖಕರೊಬ್ಬರು ಸಮಕಾಲೀನ ವಿದ್ಯಮಾನಕ್ಕೆ ತೀವ್ರವಾಗಿ ಎದುರಾಗುವುದು ಎಂದರೆ ಅದು ಹೀಗೇ..

ನಿಮಗೆ ಏನು ಅನ್ನಿಸ್ತು?
39 ವೋಟ್